
ನವದೆಹಲಿ (ಅ.16): ಅಸಮರ್ಪಕವಾಗಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಿದ ಪ್ರಕರಣ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು, ಕರ್ನಾಟಕ ಸರ್ಕಾರಕ್ಕೆ 2900 ಕೋಟಿ ರು. ದಂಡ ವಿಧಿಸಿದೆ. ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮೂಲಕ ಪರಿಸರ ಮತ್ತು ಜನರ ಆರೋಗ್ಯಕ್ಕೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಮಾರ್ಗಸೂಚಿ ಅನ್ವಯ ಈ ದಂಡ ವಿಧಿಸಲಾಗುತ್ತಿದೆ ಎಂದು ನ್ಯಾ.ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠ ಹೇಳಿದೆ.
ಪ್ರತಿನಿತ್ಯ 1427.4 ದಶಲಕ್ಷ ಲೀಟರ್ ದ್ರವತ್ಯಾಜ್ಯ ನಿರ್ವಹಣೆಯಲ್ಲಿ ತೋರಿದ ಲೋಪಕ್ಕೆ 2856 ಕೋಟಿ ರು. ಮತ್ತು 178.50 ಮೆಟ್ರಿಕ್ ಟನ್‌ಗಳನ್ನು ಘನತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡದ್ದಕ್ಕೆ 540 ಕೋಟಿ ರು. ದಂಡ ವಿಧಿಸಲಾಗುತ್ತಿದೆ. ಅಂದರೆ ಒಟ್ಟು 3400 ಕೋಟಿ ರು. ದಂಡ. ಈ ಪೈಕಿ 2022ರ ಅ.10ರಂದು ವಿಧಿಸಿದ್ದ 500 ಕೋಟಿ ದಂಡವನ್ನು ಕಡಿತ ಮಾಡಿ ಉಳಿದ 2900 ಕೋಟಿ ರು. ಕಟ್ಟುವಂತೆ ಸೂಚಿಸಲಾಗುತ್ತಿದೆ ಎಂದು ಹೇಳಿದೆ. ಇದೇ ವೇಳೆ ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ರೂಪಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಂದಿನ ಒಂದು ತಿಂಗಳಲ್ಲಿ ಸೂಕ್ತ ವ್ಯವಸ್ಥೆ ರೂಪಿಸಬೇಕು.
ಕೈಗಾ ಅಣು ವಿದ್ಯುತ್ ಸ್ಥಾವರ: 5 ಹಾಗೂ 6ನೇ ಘಟಕ ಸ್ಥಾಪನೆಗೆ ಎನ್‌ಜಿಟಿ ಬ್ರೇಕ್!
ಜೊತೆಗೆ ರಾಜ್ಯದಲ್ಲಿ ಮೊಟ್ಟಮೊದಲು ಆಗಬೇಕಿರುವ ಕೆಲಸವೆಂದರೆ, ರಾಜ್ಯಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯ ಕುರಿತ ಯೋಜನೆ ಸಂಪನ್ಮೂಲ ಸೃಷ್ಟಿಮತ್ತು ಮೇಲ್ವಿಚಾರಣೆಗೆ ಕೇಂದ್ರೀಕೃತ ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು. ಇದಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳು ವಿವಿಧ ಸಚಿವಾಲಯವನ್ನು ಪ್ರತಿನಿಧಿಸಬೇಕು ಎಂದು ಹೇಳಿದೆ. ಕಾನೂನು ಮತ್ತು ಜನರ ಆರೋಗ್ಯ ನಿರ್ವಹಣೆಯಲ್ಲಿ ತನ್ನ ಹೊಣೆಯನ್ನು ಅರಿತುಕೊಳ್ಳಲು ಮತ್ತು ಮುಂದಿನ ದಿನಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ರೂಪಿಸಲು ಸರ್ಕಾರಕ್ಕೆ ಇದು ಸಕಾಲ ಎಂದು ನ್ಯಾಯಾಧಿಕರಣ ಕಿವಿಮಾತು ಹೇಳಿದೆ.
ಚಂದ್ರಾಪುರ ಕೆರೆಯಲ್ಲಿ ತ್ಯಾಜ್ಯ-ಸರ್ಕಾರಕ್ಕೆ 500 ಕೋಟಿ ದಂಡ: ಆನೇಕಲ್ ತಾಲೂಕಿನ ಚಂದ್ರಾಪುರ ಕೆರೆಯನ್ನು ತ್ಯಾಜ್ಯದಿಂದ ರಕ್ಷಿಸಲು ವಿಫಲವಾಗಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ), ಈ ಸಂಬಂಧ ರಾಜ್ಯ ಸರ್ಕಾರಕ್ಕೆ .500 ಕೋಟಿ ದಂಡ ವಿಧಿಸಿದೆ. ಚಂದ್ರಾಪುರ ಕೆರೆಗೆ ಸುತ್ತಮುತ್ತಲಿನ ಕೈಗಾರಿಕಾ ತ್ಯಾಜ್ಯ ಹಾಗೂ ಚರಂಡಿ ನೀರು ಬಂದು ಸೇರುತ್ತಿದ್ದು, ಕೆರೆಯ ನೀರು ಕಲುಷಿತಗೊಂಡಿದೆ. ಕೆರೆಯಿಂದ ದುರ್ನಾತ ಹೊರಸೂಸುತ್ತಿದ್ದು, ಕೆರೆಯ ರಕ್ಷಣೆಗೆ ಸ್ಥಳಿಯಾಡಳಿತ ವಿಫಲಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಉಡುಪಿಯ ಯುಪಿಸಿಎಲ್‌ಗೆ 52 ಕೋಟಿ ರೂ. ದಂಡ ವಿಧಿಸಿದ ಹಸಿರು ಪೀಠ
ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ಬಫರ್ ಝೋನ್ ಹಾಗೂ ಘನ ತ್ಯಾಜ್ಯ ನಿರ್ವಹಣೆ ನಿಯಮಗಳ ಉಲ್ಲಂಘನೆ ಕುರಿತು ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ಆದೇಶಿಸಿ, 7 ಸದಸ್ಯರ ಜಂಟಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ವರದಿ ಆಧರಿಸಿ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ಅ.10ರಂದು ತೀರ್ಪು ನೀಡಿ, ಕೆರೆಯ ನೀರು ಕಲುಷಿತಗೊಂಡಿದೆ. ಅಲ್ಲದೆ, ಕೆರೆಯ ಪ್ರದೇಶವನ್ನು ಒತ್ತುವರಿ ಮಾಡಲಾಗಿದ್ದು, ಇದನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ಸಂಬಂಧ ರಾಜ್ಯ ಸರ್ಕಾರಕ್ಕೆ 500 ಕೋಟಿ ರು.ಗಳ ದಂಡ ವಿಧಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ