
ಬೆಂಗಳೂರು(ಸೆ.29): ಕೋವಿಡ್ ಲಸಿಕೆ(Covid 19 vaccine) ನೀಡಿಕೆಯಲ್ಲಿ ದಕ್ಷಿಣ ಭಾರತದ(South India) ರಾಜ್ಯಗಳಲ್ಲಿ ಕರ್ನಾಟಕ(karnataka) ಮುಂಚೂಣಿಯಲ್ಲಿದ್ದು, ಇದೇ ವೇಗವನ್ನು ಕಾಯ್ದುಕೊಂಡರೆ ಡಿಸೆಂಬರ್(December) ಅಂತ್ಯದೊಳಗೆ ರಾಜ್ಯದ ಎಲ್ಲರಿಗೂ ಮೊದಲ ಡೋಸ್, ಶೇ.75ಕ್ಕೂ ಹೆಚ್ಚು ಮಂದಿಗೆ ಎರಡನೇ ಡೋಸ್(Second Dose) ನೀಡುವ ವಿಶ್ವಾಸವನ್ನು ರಾಜ್ಯ ಆರೋಗ್ಯ ಇಲಾಖೆ ಹೊಂದಿದೆ.
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ4.97 ಕೋಟಿ ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈ ಪೈಕಿ 3.87 ಕೋಟಿ ಮಂದಿ (ಶೇ.78) ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನು 1.10 ಕೋಟಿ ಡೋಸ್ ಲಸಿಕೆ ನೀಡಿದರೆ ರಾಜ್ಯ ತನ್ನ ಗುರಿ ತಲುಪಲಿದೆ. ಪ್ರತಿದಿನ ಲಕ್ಷ ಮೀರಿ ಮೊದಲ ಡೋಸ್ ವಿತರಣೆಯಾದರೂ ರಾಜ್ಯ ತನ್ನ ಗುರಿ ತಲುಪಲಿದೆ.
ಈಗಾಗಲೇ ರಾಜ್ಯದ ಅರ್ಹ ಫಲಾನುಭವಿಗಳಲ್ಲಿ ಶೇ.78 ಮಂದಿಗೆ ಮೊದಲ ಡೋಸ್ ಲಸಿಕೆ ಹಾಗೂ ಶೇ.42 ಜನರಿಗೆ ಎರಡನೇ ಡೋಸ್ ಲಸಿಕೆ(Vaccine) ನೀಡಲಾಗಿದೆ. ತನ್ಮೂಲಕ ದಕ್ಷಿಣ ಭಾರತದಲ್ಲೇ(South India) ಅತಿ ಹೆಚ್ಚು ಕೋವಿಡ್ ಲಸಿಕೆ ನೀಡಿರುವ ರಾಜ್ಯವಾಗಿ ಕರ್ನಾಟಕ(Karnataka) ಹೊರ ಹೊಮ್ಮಿದೆ.
ಮಂಗಳವಾರ ಸಂಜೆ 4.30ರ ಹೊತ್ತಿಗೆ ಒಟ್ಟು 5.51 ಲಕ್ಷ ಡೋಸ್ ಲಸಿಕೆಯನ್ನು ಕರ್ನಾಟಕದಲ್ಲಿ ನೀಡಲಾಗಿದೆ. ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ (10.51 ಕೋಟಿ), ಮಹಾರಾಷ್ಟ್ರ (8 ಕೋಟಿ), ಮಧ್ಯಪ್ರದೇಶ (6.26 ಕೋಟಿ), ಗುಜರಾತ್ (6.03 ಕೋಟಿ), ಪಶ್ಚಿಮ ಬಂಗಾಳ (5.67 ಕೋಟಿ) ಮತ್ತು ರಾಜಸ್ಥಾನ (5.53 ಕೋಟಿ) ರಾಜ್ಯಕ್ಕಿಂತ ಹೆಚ್ಚು ಡೋಸ್ ನೀಡಲಾಗಿದೆ.
ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು(Tamil Nadu) (3.56 ಕೋಟಿ), ಆಂಧ್ರಪ್ರದೇಶ (2.68 ಕೋಟಿ), ಕೇರಳ (2.46 ಕೋಟಿ), ತೆಲಂಗಾಣ (1.82 ಕೋಟಿ) ಮೊದಲ ಡೋಸ್ ಲಸಿಕೆ ನೀಡಿದೆ.
ಎರಡನೇ ಡೋಸ್‌ನಲ್ಲೂ ನಂ.1:
ಎರಡನೇ ಡೋಸ್ ಲಸಿಕೆ ವಿತರಣೆಯಲ್ಲಿಯೂ ರಾಜ್ಯದ ಸಾಧನೆ ಉತ್ತಮವಾಗಿದೆ. 1.63 ಕೋಟಿ ಜನರಿಗೆ (ಶೇ.42) ಎರಡನೇ ಡೋಸ್ ನೀಡಲಾಗಿದ್ದು, ಅಂಧ್ರ ಪ್ರದೇಶ (1.3 ಕೋಟಿ), ತಮಿಳುನಾಡು (1.08 ಕೋಟಿ) ಮತ್ತು ಕೇರಳ (1.07 ಕೋಟಿ) ನಂತರದ ಸ್ಥಾನದಲ್ಲಿದೆ. ದೇಶದಲ್ಲಿ ಎರಡನೇ ಡೋಸ್ ನೀಡಿಕೆಯಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್ ಮತ್ತು ಪಶ್ಚಿಮ ಬಂಗಾಲ ಕರ್ನಾಟಕ ರಾಜ್ಯಕ್ಕಿಂತ ಮುಂದಿದೆ.
ಮೊದಲ ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರಲ್ಲಿ ಶೇ.85 ಮಂದಿ, ಮುಂಚೂಣಿ ಕಾರ್ಯಕರ್ತರಲ್ಲಿ ಶೇ.74, 45 ವರ್ಷ ಮೇಲ್ಪಟ್ಟವರಲ್ಲಿ ಶೇ.58 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 18ರಿಂದ 44 ವರ್ಷದೊಳಗಿನವರಲ್ಲಿ ಮೊದಲ ಡೋಸ್ ಪಡೆದ ಶೇ.27 ಮಂದಿ ಮಾತ್ರ ಈವರೆಗೆ ಎರಡನೇ ಡೋಸ್ ಪಡೆದಿದ್ದಾರೆ. ಈ ವರ್ಗದ ಹೆಚ್ಚಿನ ಮಂದಿ ಮುಂದಿನ ತಿಂಗಳಲ್ಲಿ ಎರಡನೇ ಡೋಸ್‌ಗೆ ಅರ್ಹರಾಗಲಿದ್ದಾರೆ. ಆಗ ಎರಡನೇ ಡೋಸ್ ನೀಡುವ ಪ್ರಮಾಣ ಇನ್ನಷ್ಟುಹೆಚ್ಚಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ನಿತ್ಯ 5 ಲಕ್ಷ ಡೋಸ್ ಲಸಿಕೆ ಗುರಿ:
ನಾವು ಪ್ರತಿದಿನ 5 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿದಿನ 1 ಲಕ್ಷ ಮೊದಲ ಡೋಸ್ ಮತ್ತು 2 ಲಕ್ಷ ಎರಡನೇ ಡೋಸ್ ನೀಡಲು ಸಾಧ್ಯವಾದರೂ ನಮ್ಮ ಗುರಿ ತಲುಪಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಲಸಿಕೆ ಪಡೆಯದಿರುವ 1 ಕೋಟಿ ಮಂದಿ ಮತ್ತು ಎರಡನೇ ಡೋಸ್‌ಗೆ ಅರ್ಹರಾಗುವ 2.20 ಕೋಟಿ ಮಂದಿಗೆ ಆದ್ಯತೆಯ ಮೇಲೆ ಲಸಿಕೆ ನೀಡುತ್ತೇವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಒಟ್ಟು 4.97 ಕೋಟಿ ಮಂದಿಗೆ ಲಸಿಕೆ ನೀಡಬೇಕಿದ್ದು, ಈಗಾಗಲೇ ಶೇ.80 ಮಂದಿಗೆ ಲಸಿಕೆ ನೀಡಿದ್ದೇವೆ. ಸಾಕಷ್ಟುಲಸಿಕೆ ದಾಸ್ತಾನು ಹೊಂದಿದ್ದೇವೆ. ಆದ್ದರಿಂದ ಡಿಸೆಂಬರ್ ಅಂತ್ಯದೊಳಗೆ ಫಲಾನುಭವಿಗಳಿಗೆ ಲಸಿಕೆ ನೀಡುವ ವಿಶ್ವಾಸವಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ