ರಾಜ್ಯದ ಅಭಿವೃದ್ಧಿಗಾಗಿ ಸಿಎಂ ಫುಲ್ ಆಕ್ಟಿವ್, ಸತತ ಮೂರನೇ ಬಾರಿಗೆ ಡಿಕೆಶಿ ದೆಹಲಿ ಭೇಟಿ!

Kannadaprabha News   | Kannada Prabha
Published : Jun 13, 2026, 05:24 AM IST
DK Shivakumar

ಸಾರಾಂಶ

ಮುಖ್ಯಮಂತ್ರಿಯಾದ ಬಳಿಕ ಮೊದಲ ದೆಹಲಿ ಪ್ರವಾಸದಲ್ಲಿ, ಡಿ.ಕೆ. ಶಿವಕುಮಾರ್(DK Shivakumar) ಅವರು ಕೇಂದ್ರ ಸಚಿವರನ್ನು ಭೇಟಿಯಾದರು. ಗೃಹ ಸಚಿವ ಅಮಿತ್ ಶಾ(Amit shah) ಬಳಿ ಭದ್ರತಾ ಮೂಲಸೌಕರ್ಯ ಹೆಚ್ಚಳಕ್ಕೆ ಮತ್ತು ಜಲಶಕ್ತಿ ಸಚಿವರ ಬಳಿ ಮೇಕೆದಾಟು, ಕೃಷ್ಣಾ ಮೇಲ್ದಂಡೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ನೆರವು ಕೋರಿದರು.

  •  ಅಮಿತ್‌ ಶಾ ಭೇಟಿ ಮಾಡಿ ಭದ್ರತಾ ಮೂಲಸೌಕರ್ಯ ಹೆಚ್ಚಳಕ್ಕೆ ಕೋರಿಕೆ
  •  ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಜಲಶಕ್ತಿ ಸಚಿವರಿಗೆ ಮನವಿ
  •  ರಾಷ್ಟ್ರಪತಿ ಮುರ್ಮು, ಉಪ ರಾಷ್ಟ್ರಪತಿಗಳ ಜತೆ ಸೌಜನ್ಯಯುತ ಭೇಟಿ

ನವದೆಹಲಿ (ಜೂ.13): ನೂತನ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM DK Shivakumar) ಅವರು ಸತತ 3ನೇ ದಿನವಾದ ಶುಕ್ರವಾರವೂ ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ನೆರವು ಕೋರಿದರು. ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು(President droupadi murmu) ಹಾಗೂ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌(CP Radhakrishnan) ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿಗೆ ಸಹಕಾರ ಕೋರಿದರು.

ಕೇಂದ್ರ ಸಚಿವರ ಪೈಕಿ ಮೊದಲು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ ಅವರನ್ನು ಭೇಟಿ ಮಾಡಿ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರದ ಅನುಮತಿ ಹಾಗೂ ಅನುದಾನ ಕೋರಿದರು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಡಿಕೆಶಿ, ರಾಜ್ಯದ ಭದ್ರತಾ ಮೂಲಸೌಕರ್ಯ ಹಾಗೂ ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ಕೇಂದ್ರದ ನೆರವು ಕೋರಿದರು.

ಜಲ ಸಚಿವರಿಗೆ ಬೇಡಿಕೆ ಪಟ್ಟಿ:

ಬಳಿಕ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಡಿಕೆಶಿ, ತುಂಗಭದ್ರಾ ಅಣೆಕಟ್ಟಿನ ನೂತನ ಗೇಟ್ ಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಹಾಗೂ ಮಹದಾಯಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನ ನೀಡುವಂತೆ ಮನವಿ ಮಾಡಿದರು. ಜೊತೆಗೆ, ನದಿ ಜೋಡಣೆ ಯೋಜನೆಯಡಿ ರಾಜ್ಯಕ್ಕೆ ನ್ಯಾಯಸಮ್ಮತ ಪಾಲಿಗೆ ಆಗ್ರಹಿಸಿದರು.

ಅಮಿತ್ ಶಾಗೂ ಬೇಡಿಕೆ:

ಬಳಿಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಡಿಕೆಶಿ, ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (ಐಆರ್‌ಬಿಎಸ್‌) ಸೃಷ್ಟಿ, ಪೊಲೀಸ್ ಇಲಾಖೆಯ ಚಟುವಟಿಕೆಗಳಿಗೆ ಸಿಎಸ್ಆರ್ ನಿಧಿ ಬಳಕೆ, ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮೇಲ್ದರ್ಜೀಕರಣ, ಕಾರಾಗೃಹಗಳ ಆಧುನೀಕರಣ ಸೇರಿದಂತೆ ರಾಜ್ಯದ ಭದ್ರತಾ ಮೂಲಸೌಕರ್ಯ ಮತ್ತು ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗಲು ಮನವಿ ಸಲ್ಲಿಸಿದರು.

3 ದಿನಗಳ ಯಶಸ್ವಿ ಪ್ರವಾಸ:

ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದ ಡಿಕೆಶಿ, ಮೊದಲ ದಿನ ಬುಧವಾರ, ಸೋನಿಯಾ ನಿವಾಸಕ್ಕೆ ತೆರಳಿ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿ, ಸಿಎಂ ಆಗಲು ಸಹಕರಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದರು. ಬಳಿಕ, ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಖಟ್ಟರ್‌ ಅವರನ್ನು ಭೇಟಿ ಮಾಡಿ, ಬೆಂಗಳೂರಿನ ಮೆಟ್ರೋ 3ನೇ ಹಂತದ ಯೋಜನೆಯಡಿ 44.65 ಕಿ.ಮೀ.ಉದ್ದದ ಡಬ್ಬಲ್‌ ಡೆಕ್ಕರ್‌ ಮೇಲ್ಸೇತುವೆ ನಿರ್ಮಾಣ ಹಾಗೂ ಮೆಟ್ರೋ ಎರಡನೇ ಹಂತದ ಪರಿಷ್ಕೃತ ಯೋಜನಾ ವೆಚ್ಚ ಕುರಿತು ಚರ್ಚೆ ನಡೆಸಿದ್ದರು. ಬಳಿಕ, ಹಿರಿಯ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಜೊತೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದರು.

ಎರಡನೇ ದಿನವಾದ ಗುರುವಾರ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು, ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ನೆರವು ಕೋರಿದ್ದರು. ಬಳಿಕ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸಿದ್ದರು. ಈ ವೇಳೆ ರಾಜ್ಯದ ಪರ 18 ಬೇಡಿಕೆಗಳನ್ನು ಮಂಡಿಸಿ, ಅಗತ್ಯ ಅನುದಾನ, ನೆರವು, ಅನುಮತಿ ನೀಡುವಂತೆ ಮನವಿ ಮಾಡಿದ್ದರು.

ಜಲ ಸಚಿವರ ಮುಂದೆ 6 ಬೇಡಿಕೆ

- ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌, ಜಲ ಆಯೋಗದ ಸೂಚನೆಯಂತೆ ಅನುಮತಿ ನೀಡಬೇಕು

- ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನ, ನಮ್ಮ ಪಾಲಿನ ನೀರು ಬಳಕೆಗೆ ಕೇಂದ್ರ ಬೆಂಬಲಿಸಲಿ

-.ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ನೆರವನ್ನು ಕೇಂದ್ರ ಸರ್ಕಾರ ಶೀಘ್ರ ಬಿಡುಗಡೆ ಮಾಡಬೇಕು

- ಉ.ಕರ್ನಾಟಕಕ್ಕೆ ನೀರು ಒದಗಿಸುವ ಕಳಸಾ-ಬಂಡೂರಿ ಯೋಜನೆಗಳಿಗೆಗೆ ಆದಷ್ಟು ಬೇಗ ಅನುಮತಿ ಕೊಡಿಸಿ

- ಉ. ಕರ್ನಾಟಕದ ಸೊಂತಿ, ಇಂಡಿ, ಮಲಪ್ರಭಾ, ಘಟಪ್ರಭಾ, ಬೆಣ್ಣೆಗಳ್ಳ, ತುಂಗಭದ್ರಾ ಸ್ಕೀಂಗೆ ನೆರವು ನೀಡಿ

- ಕೇಂದ್ರದ ನದಿ ಜೋಡಣೆ ಯೋಜನೆಗಳಡಿ ರಾಜ್ಯಕ್ಕೆ ನ್ಯಾಯಸಮ್ಮತವಾದ ಪಾಲನ್ನು ಹಂಚಿಕೆ ಮಾಡಬೇಕು

ಅಮಿತ್‌ ಶಾ ಮುಂದೆ ಬೇಡಿಕೆ

-ರಾಜ್ಯದ ಭದ್ರತಾ ಮೂಲಸೌಕರ್ಯ ಮತ್ತು ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ಕೇಂದ್ರ ನೆರವಾಗಬೇಕು

- ಪೊಲೀಸರಿಗೆ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿ ನೀಡುವ ಪ್ರಸ್ರಾವನೆಗೆ ಕೇಂದ್ರ ಸರ್ಕಾರ ಅನುಮೋದಿಸಬೇಕು

- ವಿಜಯನಗರ, ರಾಮನಗರ ಜಿಲ್ಲೆಗಳಲ್ಲಿ ಇನ್ನೂ 2 ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ ಬೇಕು,

- 4 ನಗರಗಳಲ್ಲಿ ಕಮಾಂಡ್-ಕಂಟ್ರೋಲ್ ಸೆಂಟರ್‌, ಸಂವಹನ ಉಪಕರಣ ಸ್ಥಾಪನೆಗೆ ₹280 ಕೋಟಿ ನೀಡಿ

- ಕಾರ್ಪೋರೆಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ಬಳಸಿಕೊಳ್ಳಲು ಅನುಕೂಲತೆ ಕಲ್ಪಿಸಿ

- ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್‌ ಯುನಿಟ್ ಸ್ಥಾಪನೆಯ ಯೋಜನಾ ವರದಿಗೆ ಅನುಮತಿ ನೀಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲಿನ ಮೂಳೆಯನ್ನೇ ಮುರಿದ ವೈದ್ಯರು?
Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ