Belagavi Violence : ಮಹಾ ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಬೊಮ್ಮಾಯಿ ಹೇಳಿಕೆ,, ಪುಂಡರು ಮುಂಬೈಗೆ!

By Kannadaprabha NewsFirst Published Dec 25, 2021, 3:31 AM IST
Highlights

* ಮಹಾರಾಷ್ಟ್ರ ವಿಧಾನಸಭೆಯಲ್ಲಿ  ಬೊಮ್ಮಾಯಿ ಹೇಳಿಕೆ ಸಂಚಲನ

* ಮಹಾರಾಷ್ಟ್ರದ 40 ಹಳ್ಳಿ ಸೇರ್ಪಡೆಗೆ ಸಿದ್ಧ ಎಂದಿದ್ದ ಸಿಎಂ
* ಕಠಿಣ ಕ್ರಮಕ್ಕೆ ಹೆದರಿ ಮುಂಬೈಗೆ  ಧಾವಿಸಿದ ಎಂಇಎಸ್‌ ಪುಂಡರು

* ಪವಾರ್‌ ಸೇರಿ ಹಲವು ‘ಮಹಾ’ ಮುಖಂಡರ ಭೇಟಿ

ಮುಂಬೈ/ ಬೆಳಗಾವಿ(ಡಿ. 25)  ಮಹಾರಾಷ್ಟ್ರದ (Maharashtra) ಜತ್ತ ತಾಲೂಕಿನ 40 ಗ್ರಾಮ ಪಂಚಾಯಿತಿಗಳು ಕರ್ನಾಟಕ (Karnataka)  ಸೇರಲು ಬಯಸಿ ನಿರ್ಣಯ ಅಂಗೀಕರಿಸಿದರೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆ ಮಹಾರಾಷ್ಟ್ರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶುಕ್ರವಾರ ಕೆಲಹೊತ್ತು ಚರ್ಚೆಯೂ ಆಗಿದೆ.

ವಿಧಾನಸಭೆಯಲ್ಲಿ ಮಾತನಾಡಿದ ಸಾಂಗ್ಲಿ ಜಿಲ್ಲೆಯ ಜತ್ತ ಕ್ಷೇತ್ರದ ಶಾಸಕ ವಿಕ್ರಮಸಿಂಹ ಸಾವಂತ್‌ ಅವರು, ಬೊಮ್ಮಾಯಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರ ನೀಡಿದ ಕರ್ನಾಟಕದ ಮರಾಠಿ ಬಾಹುಳ್ಯದ ಗಡಿ ಪ್ರದೇಶಗಳ ಸಮನ್ವಯ ಸಚಿವ ಹಾಗೂ ಎನ್‌ಸಿಪಿ ನಾಯಕ ಛಗನ್‌ ಭುಜಬಲ್‌, ಕರ್ನಾಟಕ ಸಿಎಂ ಬೊಮ್ಮಾಯಿ ಅವರ ಹೇಳಿಕೆ ಎಂದಿಗೂ ಸಾಕಾರವಾಗದು ಎಂದು ತಿಳಿಸಿದರು.

Belagavi Riot: ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಹಾಕಿದ ಶಿವಸೇನೆ ನಾಯಕ

2011-12ರಿಂದಲೇ ಜತ್ತ ತಾಲೂಕಿನ 40 ಹಳ್ಳಿಗಳು ಪ್ರತಿಭಟನೆ ನಡೆಸುತ್ತಿವೆ. ಕುಡಿಯುವ ನೀರಿನಂತಹ ಕನಿಷ್ಠ ಮೂಲಸೌಕರ್ಯ ಒದಗಿಸದೇ ಹೋದಲ್ಲಿ ಕರ್ನಾಟಕ ಸೇರುವುದಾಗಿ ಬೆದರಿಕೆ ಹಾಕುತ್ತಿವೆ. ಆದರೆ ಈವರೆಗೂ ನಿರ್ಣಯ ಕೈಗೊಂಡಿಲ್ಲ ಎಂದು ಶಾಸಕ ಸಾವಂತ್‌ ಮಾಹಿತಿ ನೀಡಿದರು.

ಇದೇ ವೇಳೆ, ಕರ್ನಾಟಕ ಪೊಲೀಸರು ಹಲವು ಯುವಕರನ್ನು ಮನೆಯಿಂದ ವಶಕ್ಕೆ ಪಡೆದಿದ್ದಾರೆ ಎಂದು ಬೆಳಗಾವಿಯ ನಿಯೋಗವೊಂದು ತಮಗೆ ದೂರಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಎನ್‌ಸಿಪಿ ಶಾಸಕ ರೋಹಿತ್‌ ಪವಾರ್‌ ಆರೋಪಿಸಿದರು.

ಬೊಮ್ಮಾಯಿ ಹೇಳಿದ್ದೇನು?:
ಎಂಇಎಸ್‌ ಪುಂಡಾಟಿಕೆ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ್ದ ಬೊಮ್ಮಾಯಿ, ಬೆಳಗಾವಿಯ ಒಂದಿಂಚೂ ಜಾಗವನ್ನು ಬಿಡುವುದಿಲ್ಲ. ಜತ್ತ ತಾಲೂಕಿನ 40 ಗ್ರಾಮ ಪಂಚಾಯಿತಿಗಳು ನಿರ್ಣಯ ಅಂಗೀಕರಿಸಿದರೆ ಕರ್ನಾಟಕಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದರು.

ಕಠಿಣ ಕ್ರಮಕ್ಕೆ ಹೆದರಿ ಮುಂಬೈಗೆ  ಧಾವಿಸಿದ ಎಂಇಎಸ್‌ ಪುಂಡರು:  
ಡಿ ಜಿಲ್ಲೆ ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸಿದವರ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಸಂಪೂರ್ಣ ಕಂಗಾಲಾಗಿದೆ. ಮಾತ್ರವಲ್ಲ, ಮತ್ತೆ ತನ್ನ ಜೀವಂತಿಕೆಯನ್ನು ತೋರಿಸುವ ಸಂಬಂಧ ಮತ್ತೆ ನಾನಾ ತಂತ್ರಗಾರಿಕೆಗಳನ್ನು ಬಳಸಲು ಅದು ಮುಂದಾಗಿದೆ. ಹೀಗಾಗಿ ಎಂಇಎಸ್‌ ಪುಂಡರು ಮಾಜಿ ಮುಖ್ಯಮಂತ್ರಿ ಶರದ್‌ ಪವಾರ್‌ ಸೇರಿದಂತೆ ಮಹಾರಾಷ್ಟ್ರದಲ್ಲಿರುವ ಸಚಿವರು, ಶಿವಸೇನೆ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ.

ಶರದ ಪವಾರ್‌ ಅವರ ಮುಂಬೈ ನಿವಾಸಕ್ಕೆ ಭೇಟಿ ನೀಡಿರುವ ಎಂಇಎಸ್‌ ಮುಖಂಡರು ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಅಲ್ಲದೆ, ಮರಾಠಿ ಭಾಷಿಕ ಯುವಕರ ಮೇಲೆ ದೇಶದ್ರೋಹ ಕೇಸ್‌ ಕೂಡ ದಾಖಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಶರದ್‌ ಪವಾರ್‌ ಅವರು ಮಹಾರಾಷ್ಟ್ರ ಸಂಸದರ ನಿಯೋಗದಿಂದ ಕೇಂದ್ರ ಗೃಹಸಚಿವ ಅಮಿತ್‌ ಶಾ ಭೇಟಿ ಮಾಡುತ್ತೇವೆ ಎಂದು ಸಮಾಧಾನಪಡಿಸಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಶರದ್‌ ಪವಾರ್‌ ಭೇಟಿಗೂ ಮೊದಲು ಸಚಿವ ಏಕನಾಥ ಶಿಂಧೆ ಸೇರಿ ಹಲವು ಸಚಿವರನ್ನು ಭೇಟಿಯಾಗಿರುವ ಎಂಇಎಸ್‌ ಯುವಸಮಿತಿ ಚರ್ಚೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.

ಇದೇವೇಳೆ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ರಾಜ್ಯದ ಸಂಸದರು ಮೌನವಹಿಸಿರುವುದಕ್ಕೆ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ. ಎಂಇಎಸ್‌ ನಿಷೇಧಿಸುವಂತೆ ಪಕ್ಷಾತೀತವಾಗಿ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.

click me!