
ನವದೆಹಲಿ (ಜು.26) ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗಿದೆ. ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿ ಮತ್ತೆ ಕಾರ್ಗಿಲ್ ವಶಪಡಿಸಿಕೊಂಡ ಭಾರತೀಯ ಸೇನೆಯ ಪರಾಕ್ರಮದ ದಿನ. ಈ ಯುದ್ಧದಲ್ಲಿ ಭಾರತದ ಹಲವು ವೀರ ಯೋಧರು ಹುತಾತ್ಮರಾಗಿದ್ದಾರೆ. ಅವರೆಲ್ಲನ್ನು ಸ್ಮರಿಸುತ್ತಾ, ಈ ವಿಜಯ್ ದಿವಸದ ಸಂಭ್ರಮದಲ್ಲಿ ಸ್ಪೂರ್ತಿಯ ಸೆಲೆಯಾಗಿರುವ ಕ್ಯಾಪ್ಟನ್ ಯಶಿಕಾ ಹತ್ವಾಲ್ ತ್ಯಾಗಿ ರೋಚಕ ಪಣಯ ಇಲ್ಲಿದೆ. ಗರ್ಭಿಣಿಯಾಗಿದ್ದ ಕ್ಯಾಪ್ಟನ್ ಯಶಿಕಾ, ತನ್ನ ಮೊದಲನೇ ಮಗುವನ್ನು ಎತ್ತಿಕೊಂಡು ಕಾರ್ಗಿಲ್ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ್ದ ಈ ಸೇನಾಧಿಕಾರಿ ಮಾದರಿಯಾಗಿದ್ದಾರೆ.
ಕಾರ್ಗಿಲ್ ಯುದ್ಧಭೂಮಿಯಲ್ಲಿ ಕ್ಯಾಪ್ಟನ್ ಯಶಿಕಾ
1999ರ ಬೇಸಿಗೆ ಕಾಲದಲ್ಲಿ ಕಾರ್ಗಿಲ್ ಆಕ್ರಮಣಕ್ಕೆ ಪಾಕಿಸ್ತಾನ ಪ್ಲಾನ್ ಮಾಡಿ ದಾಳಿ ಕಾರ್ಯಾಚರಣೆ ಆರಂಭಿಸಿತ್ತು. ಎರಡು ತಿಂಗಳ ಕಾಲ ನಡೆದ ರಣಭೀಕರ ಯುದ್ಧದಲ್ಲಿ ಭಾರತ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿ ಗೆಲುವು ಸಾಧಿಸಿತ್ತು. ಜುಲೈ 26ರಂದು ದ್ರಾಸ್, ಕಾರ್ಗಿಲ್ ಸೇರಿ ಪಾಕಿಸ್ತಾನ ಸೇನೆ ಕೈವಶ ಮಾಡಿದ್ದ ಪ್ರದೇಶಗಳನ್ನು ಮರುವಶಪಡಿಸಿ ತಿರಂಗ ಹಾರಿಸಿತ್ತು. ಈ ಕಾರ್ಗಿಲ್ ಯುದ್ದಭೂಮಿಯಲ್ಲಿ ಸೇವೆ ಸಲ್ಲಿಸಿದ ವೀರ ವನಿತೆ ಕ್ಯಾಪ್ಟನ್ ಯಶಿಕಾ ತ್ಯಾಗಿ.
ಭಾರತೀಯ ಸೇನೆಯ ಮೊದಲ ಮಹಿಳಾ ಲಾಜಿಸ್ಟಿಕ್ ಅಧಿಕಾರಿ
ಕ್ಯಾಪ್ಟನ್ ಯಶಿಕಾ ತ್ಯಾಗಿ ಭಾರತೀಯ ಸೇನೆಯ ಮೊದಲ ಮಹಿಳಾ ಲಾಜಿಸ್ಟಿಕ್ ಅಧಿಕಾರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾರ್ಗಿಲ್, ದ್ರಾಸ್ ಸೇರಿದಂತೆ 1999ರ ಯುದ್ಧ ಭೂಮಿ ಶೂನ್ಯ ಪರಿಸ್ಥಿತಿ ಪ್ರದೇಶಗಳು. ಭೌಗೋಳಿಕವಾಗಿ ಯುದ್ಧ ಮಾತ್ರವಲ್ಲ ವಿಶ್ರಾಂತಿ ಪಡೆಯುವುದು ಇಲ್ಲಿ ಸುಲಭವಲ್ಲ. ಆದರೆ ಯಶಿಕಾ ತ್ಯಾಗಿ ಗರ್ಭಿಣಿ. ತನ್ನ ಮೊದಲ ಮಗವಿಗೆ ವರ್ಷ ಉರುಳಿದೆ ಅಷ್ಟೇ. ಲಾಜಿಸ್ಟಿಕ್ ಅಧಿಕಾರಿಯಾಗಿದ್ದ ಕ್ಯಾಪ್ಟನ್ ಯಶಿಕಾ ರಜೆ ಪಡೆದುಕೊಳ್ಳದೆ, ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಸೇವೆ ಸಲ್ಲಿಸಿದ ಧೀರ ಮಹಿಳೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಾಗ ಡ್ಯೂಟಿ ಕರೆ
ಯಶಿಕಾ ತ್ಯಾಗಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಕೆಲ ತಿಂಗಳು ಮಾತ್ರ ಬಾಕಿ ಇತ್ತು. ಅಷ್ಟರಲ್ಲೇ ಭಾರತೀಯ ಸೇನೆಯಿಂದ ಕರೆ ಬಂದಿತ್ತು. ಕಾರ್ಗಿಲ್ ಯುದ್ಧ ಘೋಷಣೆಯಾಗಿತ್ತು. ತ್ಯಾಗಿ ತನ್ನ ಒಂದು ವರ್ಷದ ಮೊದಲ ಮಗುವಿನ ಜೊತೆಯಲ್ಲೇ ಕಾರ್ಗಿಲ್ ಯುದ್ದಭೂಮಿಗೆ ಕಾಲಿಟ್ಟಿದ್ದರು. ಭಾರತೀಯ ಸೇನೆಯ ಲಾಜಿಸ್ಟಿಕ್ ಅಂದರೆ ಶಸ್ತ್ರಾಸ್ತ್ರ ಪೂರೈಕೆ, ಸೈನಿಕರ ನಿಯೋಜನೆ, ವೈದ್ಯಕೀಯ ನೆರವು ಸೇರಿದಂತೆ ಎಲ್ಲಾ ಸೇವೆಗಳ ಲಾಜಿಸ್ಟಿಕ್ ಜವಾಬ್ದಾರಿಯನ್ನು ಯಶಿಕಾ ತ್ಯಾಗಿ ನಿರ್ವಹಿಸಿದ್ದರು. ಕಠಿಣ ಪರಿಸ್ಥಿತಿ, ತುಂಬು ಗರ್ಭಿಣಿ, ಕೈಯಲ್ಲಿ ಮೊದಲ ಮಗು ಹೀಗೆ ಹಲವು ಸವಾಲುಗಳನ್ನು ಯಶಿಕಾ ತ್ಯಾಗಿ ಎದುರಿಸಿದ್ದರು. ಎಲ್ಲವನ್ನು ಯಶಸ್ವಿಯಾಗಿ ಎದುರಿಸಿದ ಯಶಿಕಾ ತ್ಯಾಗಿ ಭಾರತೀಯ ಸೇನೆಯ ಪರಾಕ್ರಮ ಪದಕವನ್ನು ಪಡೆದುಕೊಂಡಿದ್ದಾರೆ.
ನಿವೃತ್ತಿ ಜೀವನದಲ್ಲಿ ಯಶಿಕಾ ತ್ಯಾಗಿ
ಸದ್ಯ 51 ವರ್ಷದ ಕ್ಯಾಪ್ಟನ್ ಯಶಿಕಾ ನಿವೃತ್ತಿಯಾಗಿ ವಿಶ್ರಾಂತಿ ಜೀವನದಲ್ಲಿದ್ದಾರೆ. ಇಬ್ಬರು ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಕ್ಯಾಪ್ಟನ್ ಯಶಿಕಾ ಹಲವು ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ