
ಬೆಂಗಳೂರು: ಕನ್ನಡಿಗ, ಸುಪ್ರೀಂಕೋರ್ಟ್‌ನ ನಿವೃತ್ತ ಜಸ್ಟೀಸ್ ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ. ಜನವರಿ 4 ರಂದು ನಿವೃತ್ತರಾಗಿದ್ದ ಅವರು ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನ ಭಾಗವಾಗಿದ್ದರು. ಸುಪ್ರೀಂಕೋರ್ಟ್ ನಲ್ಲಿ 2017 ರಿಂದ 2023 ರವವರೆಗೆ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿದ್ದ ನಜೀರ್ ಮೂಲತಃ ಕರ್ನಾಟಕದ ಮೂಡಬಿದಿರೆಯ ಬೆಳುವಾಯಿಯವರು.
1958 ಜನವರಿ 5 ರಂದು ಜನಿಸಿದ ನಜೀರ್ ಅವರು 1983 ರ ಫೆಬ್ರವರಿ 18 ರಂದು ವಕೀಲರಾಗಿ ನೋಂದಾಯಿಸಿಕೊಂಡು ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಅಭ್ಯಾಸ ಮಾಡಿದ್ದರು. ನಂತರ 2003 ಮೇ.12 ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಸುಪ್ರೀಂಕೋರ್ಟ್‌ನಿಂದ ನಜೀರ್ ಅವರನ್ನು ನಿವೃತ್ತಿ ನಂತರ ಬೀಳ್ಕೊಡುವ ಸಂದರ್ಭದಲ್ಲಿ, ಸಿಜೆಐ ಡಿವೈ ಚಂದ್ರಚೂಡ್ (CJI DY Chandrachud) ಅವರು, ನ್ಯಾಯಮೂರ್ತಿ ನಜೀರ್ ಅವರ ಸರಳತೆಯ ಬಗ್ಗೆ ಪ್ರಸ್ತಾಪಿಸಿದ್ದರು. ನ್ಯಾಯಾಧೀಶ ಅಬ್ದುಲ್ ನಜೀರ್ ಅವರು 2019 ರವರೆಗೆ ಪಾಸ್‌ಪೋರ್ಟ್ ಸಹ ಹೊಂದಿರಲಿಲ್ಲ. ಇತ್ತೀಚೆಗಷ್ಟೇ ಅವರು ಮೊದಲ ಬಾರಿ ವಿದೇಶಕ್ಕೆಂದು ಮಾಸ್ಕೋಗೆ ಹೋಗಿ ಬಂದಿದ್ದರು ಎಂದು ಹೇಳಿಕೊಂಡಿದ್ದರು.
ಅವರು ಅತ್ಯಂತ ಸರಳ ವ್ಯಕ್ತಿ. ಇತ್ತೀಚಿನವರೆಗೂ ಅವರ ಏಕೈಕ ಗುರುತಿನ ಚೀಟಿ ಡ್ರೈವಿಂಗ್ ಲೈಸೆನ್ಸ್ ಬಿಟ್ಟರೆ ನ್ಯಾಯಾಧೀಶರ ಐಡಿ ಆಗಿತ್ತು. ಅವರು ಪಾಸ್‌ಪೋರ್ಟ್ ಅನ್ನು 2019 ರಲ್ಲಿ ಮಾಡಿದ್ದರು ಮತ್ತು ಅವರು ಕೆಲವು ವಾರಗಳ ಹಿಂದೆ ಮಾಸ್ಕೋಗೆ ಪ್ರಯಾಣಿಸಿದಾಗ ಆ ಪಾಸ್‌ಪೋರ್ಟ್‌ನಲ್ಲಿ ಮೊದಲ ವಿದೇಶ ಪ್ರಯಾಣದ ಸ್ಟ್ಯಾಂಪ್ ಇತ್ತು ಎಂದು ಅವರು ಹೇಳಿದ್ದರು ಎಂದು ಚಂದ್ರಚೂಡ್ ಹೇಳಿದ್ದರು.
ಅಯೋಧ್ಯೆ ತೀರ್ಪು: ಪಂಚ ನ್ಯಾಯಾಧೀಶರಲ್ಲಿ ಒಬ್ಬರು ನಮ್ಮ ಕನ್ನಡಿಗರು!
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಬಳಿಯ ಬೆಳುವಾಯಿ ಎಂಬಲ್ಲಿ 1958 ಜನವರಿ 5ರಂದು ಜನಿಸಿದ ಅಬ್ದುಲ್ ನಜೀರ್ ಅವರ ತಂದೆ ಹೆಸರು ಫಕೀರ್ ಸಾಹೇಬ್. ಮೂಡಬಿದಿರೆಯ ಮಹಾವೀರ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಗಳಿಸಿದ ಅವರು, ಬಳಿಕ ಮಂಗಳೂರಿನ SDM ಕಾಲೇಜಿನಲ್ಲಿ ಕಾನೂನಿನಲ್ಲಿ ಪದವಿ ಪಡೆದರು. 1983ರಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ, ಅವರು 2003ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದರು.
ಕರ್ನಾಟಕ ಹೈ ಕೋರ್ಟಿನಲ್ಲಿ ಸುದೀರ್ಘ 14 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಇವರನ್ನು 2017ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲಾಯಿತು. ಹೈಕೋರ್ಟಿನ ಮುಖ್ಯನ್ಯಾಯಾಧೀಶರಾಗಿ ಸೇವೆ ಸಲ್ಲಿಸದೇ, ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ನೇಮಕವಾದವರು ಇವರು. ASI ನೀಡಿದ ವರದಿಯಂತೆ ಬಾಬರಿ ಮಸೀದಿ ಕೆಳಗೆ ರಾಮ ಮಂದಿರದ ಕುರುಹುಗಳಿದ್ದವು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದ ನ್ಯಾಯಾಧೀಶರಲ್ಲಿ ಇವರೂ ಒಬ್ಬರು. ಸಿಜೆಐ ಮಿಶ್ರಾ ಅಯೋಧ್ಯಾ ಪ್ರಕರಣ ಇತ್ಯರ್ಥಕ್ಕೆ ನೇಮಿಸಿದ ಮೂರು ನ್ಯಾಯಧೀಶರ ಪೀಠದಲ್ಲಿಯೂ ಇವರಿದ್ದರು.
2017ರಲ್ಲಿ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ನೀಡಿದ ತೀರ್ಪಿನಲ್ಲಿ ಅಲ್ಪಮತದ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಧೀಶರಲ್ಲಿ ಇವರೂ ಒಬ್ಬರು. ಆಧಾರ್ ಪ್ರೈವೇಸಿಗೆ ಸಂಬಂಧಿಸಿದಂತೆ ತೀರ್ಪು ನೀಡಿದ ಪೀಠದಲ್ಲಿ ಇವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ