* ಯುಪಿ ಮಾಜಿ ಸಿಎಂ ಕಲ್ಯಾಣ್‌ಸಿಂಗ್ ಇನ್ನಿಲ್ಲ
* ಹಿಂದುತ್ವದ ಪ್ರಖರ ಪ್ರತಿಪಾದಕ ಅನಾರೋಗ್ಯದಿಂದ ನಿಧನ
* ಬಾಬ್ರಿ ಮಸೀದಿ ಧ್ವಂಸದ ವೇಳೆ ಯುಪಿ ಸಿಎಂ ಆಗಿದ್ದ ಸಿಂಗ್
ಲಖನೌ(ಆ.22): ಹಿರಿಯ ಬಿಜೆಪಿ ನಾಯಕ, ಹಿಂದುತ್ವದ ಪ್ರಖರ ಪ್ರತಿಪಾದಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ (89) ಶನಿವಾರ ಇಲ್ಲಿ ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಯಾಣ್‌ಸಿಂಗ್ ಅವರನ್ನು ಇಲ್ಲಿನ ಎಸ್‌ಜಿಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಹು ಅಂಗಾಂಗ ವೈಫಲ್ಯದಿಂದ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದರು. ಕಲ್ಯಾಣ್‌ಸಿಂಗ್ ನಿಧನಕ್ಕೆ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ.
ಉತ್ತರಪ್ರದೇಶದ ಅಲಿಘಡ ಮೂಲದವರಾದ ಕಲ್ಯಾಣ್‌ಸಿಂಗ್ ಬಾಲ್ಯದಲ್ಲೇ ಹಿಂದುತ್ವದ ಚಿಂತನೆ ಬೆಳೆಸಿಕೊಂಡು ಆರ್‌ಎಸ್‌ಎಸ್ ಸೇರಿದ್ದರು. ನಂತರ ರಾಜಕೀಯ ಪ್ರವೇಶ ಮಾಡಿದ ಸಿಂಗ್ 1967ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿ ನಂತರ ಒಟ್ಟು 9 ಬಾರಿ ವಿಧಾನಸಭೆಯ ಮೆಟ್ಟಿಲೇರಿದ್ದರು. 1991 ಮತ್ತು 1997ರಲ್ಲಿ 2 ಬಾರಿ ಮುಖ್ಯಮಂತ್ರಿಯಾಗಿದ್ದರು. ಇದಲ್ಲದೆ 2 ಬಾರಿ ಲೋಕಸಭಾ ಸದಸ್ಯರಾಗಿ, 2014-19ರ ಅವಧಿಯಲ್ಲಿ ರಾಜಸ್ಥಾನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಬಿಜೆಪಿಯ ಮೊದಲ ಮುಖ್ಯಮಂತ್ರಿ ಎಂಬ ಹಿರಿಮೆಯೂ ಇವರದ್ದಾಗಿತ್ತು.
ಉತ್ತರ ಪ್ರದೇಶದ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಕಲ್ಯಾಣ್ ಸಿಂಗ್ ನಿಧನ
ಮಂಡಲ್ ರಾಜಕೀಯ 80ರ ದಶಕದಲ್ಲಿ ಪ್ರಮುಖವಾಗಿ ಸುದ್ದಿ ಮಾಡುತ್ತಿದ್ದ ವೇಳೆ, ಸಂಘ ಪರಿವಾರ ಇದನ್ನು ನಿಭಾಯಿಸಲು ಹಿಂದುಳಿದ ಸಮುದಾಯದ ನಾಯಕರಿಗಾಗಿ ಹುಡುಕಾಡುತ್ತಿತ್ತು. ಈ ವೇಳೆ ಒಬಿಸಿ ಸಮುದಾಯಕ್ಕೆ ಸೇರಿದ ಕಲ್ಯಾಣ್ ಅವರನ್ನು ಬಳಸಿಕೊಂಡ ಬಿಜೆಪಿ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದುತ್ವವನ್ನು ಪ್ರಸಾರ ಮಾಡುವಲ್ಲಿ ಯಶಸ್ವಿಯಾಯಿತು.
ತಮ್ಮ 5 ದಶಕದ ರಾಜಕೀಯ ಜೀವನದಲ್ಲಿ ಸಿಂಗ್ ಹಲವು ಬಾರಿ ಬಿಜೆಪಿಯಿಂದಲೂ ಹೊರನಡೆದಿದ್ದರು. 1999ರಲ್ಲಿ ಬಿಜೆಪಿ ತೊರೆದು ರಾಷ್ಟ್ರೀಯ ಕ್ರಾಂತಿ ಪಕ್ಷ ಕಟ್ಟಿದ್ದರು. 2004ರಲ್ಲಿ ಅಟಲ್ ಕೋರಿಕೆಯಂತೆ ಬಿಜೆಪಿಗೆ ಮರಳಿದ್ದರು. 2009ರಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿ, 2010ರಲ್ಲಿ ಆ ಪಕ್ಷವನ್ನೂ ಬಿಟ್ಟು ಜನಕ್ರಾಂತಿ ಪಕ್ಷ ಕಟ್ಟಿದರು. 2013ರಲ್ಲಿ ಮರಳಿ ಬಿಜೆಪಿ ಸೇರಿ, ರಾಜ್ಯಪಾಲರಾಗಿ ನಿಯುಕ್ತಿಗೊಂಡಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಸಿಂಗ್ ಪ್ರಮುಖವಾಗಿ ಗುರುತಿಸಿಕೊಂಡಿದ್ದರು.
ಬಾಬ್ರಿ ಮಸೀದಿ ಧ್ವಂಸ: 1991ರಲ್ಲಿ ಕಲ್ಯಾಣ್‌ಸಿಂಗ್ ಸಿಎಂ ಆಗಿದ್ದ ವೇಳೆ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಪಕ್ಕದ 2.77 ಎಕರೆ ಭೂಮಿ ಖರೀದಿಸಿದ್ದರು. ಮುಂದೆ ಅದು ಹಿಂದೂಗಳಿಗೆ ಪೂಜೆ ನೆರವೇರಿಸಲು ಅನುಕೂಲ ಕಲ್ಪಿಸಿಕೊಟ್ಟಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡಾಗ ಇವರೇ ಸಿಎಂ ಆಗಿದ್ದರು. ಘಟನೆ ಬಳಿಕ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.