'ಮೋಸವೇ ನಮ್ಮನೆ ದೇವ್ರು..' ಕರ್ನಾಟಕ ಮಾತ್ರವಲ್ಲ ಅಮೆರಿಕದ 30 ನಗರಗಳಿಗೂ 'ಸಿಸ್ಟರ್‌ ಸಿಟಿ' ನಿತ್ಯಾನಂದನ ದೋಖಾ!

By Santosh NaikFirst Published Mar 18, 2023, 12:53 PM IST
Highlights

ಅತ್ಯಾಚಾರ, ವಂಚನೆ ಪ್ರಕರಣ ಎದುರಿಸುತ್ತಲೇ ಭಾರತದಿಂದ ಪರಾರಿಯಾಗಿರುವ ಬಿಡದಿಯ ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ಸಿಸ್ಟರ್‌ ಸಿಟಿ ಅಥವಾ ಸೋದರ ನಗರಿ ಹೆಸರಿನಲ್ಲಿ ಅಮೆರಿಕದಲ್ಲಿ ಬರೋಬ್ಬರಿ 30 ನಗರಗಳಿಗೆ ವಂಚನೆ ಮಾಡಿದ್ದಾರೆ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.

ಬೆಂಗಳೂರು (ಮಾ.18): ನಿತ್ಯಾನಂದ ಈಗ ಗ್ಲೋಬಲ್‌ ಸ್ಟಾರ್.‌ ಈವರೆಗೂ ನಿತ್ಯಾನಂದನ ಬಗ್ಗೆ ರಾಜ್ಯದ ಮಾಧ್ಯಮಗಳು ಹಾಗೂ ರಾಷ್ಟ್ರದ ಮಾಧ್ಯಮಗಳು ಸುದ್ದಿ ಮಾಡುತ್ತಿದ್ದವು. ಈಗ ನಿತ್ಯಾನಂದನ ಅಸಲಿ ಬಣ್ಣ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಬಿತ್ತರವಾಗಿದೆ. ರೇಪ್‌, ವಂಚನೆ ಕೇಸ್‌ನಲ್ಲಿ ಭಾರತದಿಂದ ಪರಾರಿಯಾಗಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಸಾಂಸ್ಕೃತಿಕ ಸಹಭಾಗಿತ್ವದ ಹೆಸರಿನಲ್ಲಿ ಅಮೆರಿಕದ 30 ನಗರಗಳಗೆ ಮೋಸ ಮಾಡಿದ್ದಾರೆ ಎಂದು ಫಾಕ್ಸ್‌ ನ್ಯೂಸ್‌ ಐದು ನಿಮಿಷದ ವರದಿ ಪ್ರಕಟಿಸಿದೆ. ಬಿಡದಿಯ ಆಶ್ರಮದಿಂದ ಪರಾರಿಯಾಗಿರುವ ನಿತ್ಯಾನಂದ ಕೈಲಾಸ ಎನ್ನುವ ಹೆಸರಿನಲ್ಲಿ ದೇಶವನ್ನು ಕಟ್ಟಿದ್ದಾನೆ. ತಮ್ಮ ಕೈಲಾಸ ದೇಶದಲ್ಲಿ ಅಮೆರಿಕದ ಪ್ರಮುಖ ನಗರಗಳು ಸಿಸ್ಟರ್‌ ಸಿಟಿ ಒಪ್ಪಂದ ಮಾಡಿಕೊಂಡಿವೆ ಎಂದು ವರದಿಯಾಗಿತ್ತು. ಸ್ವತಃ ಈ ಕುರಿತಾಗಿ ನಿತ್ಯಾನಂದ ಟ್ವಿಟರ್‌ನಲ್ಲಿ ಅಪ್‌ಡೇಟ್‌ ಕೂಡ ನೀಡುತ್ತಿದ್ದರು. ಆದರೆ, ಭಾರತದ ಮಾಧ್ಯಮಗಳಿಗೆ ನಿತ್ಯಾನಂದ ಪುಂಗಿ ಹೊಸದೇನಲ್ಲ. ಹಾಗಾಗಿ ಈ ಸುದ್ದಿಯನ್ನು ತಮಾಷೆಯಾಗಿಯೇ ಪ್ರಕಟ ಮಾಡಿದ್ದವು. ಆದರೆ, ನಿತ್ಯಾನಂದ ಇಂಥದ್ದೊಂದು ಒಪ್ಪಂದ ಮಾಡಿಕೊಂಡಿರುವುದು ನಿಜ. ಅಮೆರಿಕದ ನ್ಯೂಜೆರ್ಸಿ ರಾಜ್ಯದ ನೇವರ್ಕ್‌ ನಗರದೊಂದಿಗೆ ನಿತ್ಯಾನಂದ ಒಪ್ಪಂದ ಮಾಡಿಕೊಂಡಿದ್ದ. ಆದರೆ, ಇಂಥದ್ದೊಂದು ದೇಶವೇ ಇಲ್ಲ ಎಂದು ಗೊತ್ತಾದ ಬಳಿಕ ತಾವು ಮೋಸ ಹೋಗಿರುವುದು ಗೊತ್ತಾಗಿ ಒಪ್ಪಂದವನ್ನು ರದ್ದು ಮಾಡಿದೆ.

ನಿತ್ಯಾನಂದ ಮಾಡಿಕೊಂಡಿರುವ ಸಾಂಸ್ಕೃತಿಕ ಒಪ್ಪಂದದ ಅಡಿಯಲ್ಲಿ, ಈ ನಗರ ಮತ್ತು ಕೈಲಾಸ ಅಭಿವೃದ್ಧಿಯಲ್ಲಿ ಪರಸ್ಪರ ಸಹಾಯ ಮಾಡುತ್ತವೆ. ಇದರಲ್ಲಿ ವಂಚನೆ ಏನೆಂದರೆ ಜಗತ್ತಿನಲ್ಲಿ ಕೈಲಾಸ ಎಂಬ ಹೆಸರಿನ ದೇಶವೇ ಇಲ್ಲ.  ಅಮೆರಿಕದ ಫಾಕ್ಸ್ ನ್ಯೂಸ್ ಗುರುವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಓಹಿಯೋದ ಡೇಟನ್‌ನಿಂದ ವರ್ಜೀನಿಯಾದ ರಿಚ್‌ಮಂಡ್ ಮತ್ತು ಫ್ಲೋರಿಡಾದ ಬ್ಯೂನಾ ಪಾರ್ಕ್‌ವರೆಗಿನ ಹಲವು ನಗರಗಳ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ ಎಂದು ಹೇಳಿದೆ. ಈ ಎಲ್ಲಾ ನಗರಗಳೊಂದಿಗೆ ಮಾಡಿಕೊಂಡ ಒಪ್ಪಂದಗಳ ಬಗ್ಗೆ ಸ್ವತಃ ಕೈಲಾಸದ ವೆಬ್‌ಸೈಟ್ ಬರೆದಿದೆ. 2019ರಲ್ಲಿ ಕೈಲಾಸ ಎಂಬ ಹೆಸರಿನ ದೇಶವನ್ನು ಸ್ಥಾಪಿಸಿರುವುದಾಗಿ ನಿತ್ಯಾನಂದ ಹೇಳಿಕೊಂಡಿದ್ದಾನೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಮೋಸ ಹೋಗಿರುವುದನ್ನು ಒಪ್ಪಿಕೊಂಡ ಹಲವು ನಗರಗಳು: ನಕಲಿ ದೇವಮಾನವ ನಿತ್ಯಾನಂದ ಹಲವು ನಗರಗಳಿಗೆ ವಂಚಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಈ ಪೈಕಿ ಹಲವು ನಗರಗಳು ಕೈಲಾಸ ತಮಗೆ ಮೋಸ ಮಾಡಿದ್ದನ್ನು ಕೂಡ ಒಪ್ಪಿಕೊಂಡಿದ್ದಾರೆ. ನಾವು ಕೈಲಾಸದೊಂದಿಗೆ ಯಾವ ರೀತಿಯ ಒಪ್ಪಂದ ಮಾಡಿಕೊಂಡಿದ್ದೇವೆ ಎನ್ನುವವುದು ಈಗ ತಿಳಿಸುವ ವಿಚಾರವಲ್ಲ ಎಂದು ಉತ್ತರ ಕೆರೋಲಿನಾದ ಜಾಕ್ಸನ್‌ವಿಲ್ಲೆ ನಗರವು ಫಾಕ್ಸ್‌ನ್ಯೂಸ್‌ಗೆ ತಿಳಿಸಿದೆ. ಕೈಲಾಸ ದೇಶದ ಹೆಸರಿನಲ್ಲಿ ಕೆಲವು ದಿನಗಳ ಹಿಂದೆ ನಮಗೆ ಮನವಿ ಬಂದಿತ್ತು. ಅದಕ್ಕೆ ನಾವು ಸ್ಪಂದಿಸಿದ್ದೇವೆ. ಆದರೆ, ಅವರು ಮಾಡಿದ ವಿನಂತಿ ಏನೆಂದು ಈಗ ತಿಳಿಸಲು ಸಾಧ್ಯವಿಲ್ಲ. ಸರಿಯಾದ ಮಾಹಿತಿ ಸಂಗ್ರಹಣೆ ಮಾಡದೆ ಕೈಲಾಸದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ನಗರಗಳ ಅಧಿಕಾರಿಗಳ ತಪ್ಪು ಎಂದು ವರದಿಯಲ್ಲಿ ತಿಳಿಸಲಾಗಿದೆ.

A fake Indian guru scammed 30 American cities pic.twitter.com/Xhpc3XIzZO

— Jesse Watters Primetime (@jesseprimetime)


ಕೇವಲ ಮೇಯರ್‌ ಮಾತ್ರವಲ್ಲ ಅಮೆರಿಕದ ಪ್ರಮುಖ ನಗರಸಭೆಗಳೇ ಕೈಲಾಸದಿಂದ ಮೋಸ ಹೋದ ಪಟ್ಟಿಯಲ್ಲಿ ಸೇರಿದೆ. ಕೆಲವರು ಅಮೆರಿಕ ಸರ್ಕಾರದಲ್ಲಿಯೂ ಪ್ರಮುಖ ಪಾತ್ರದಲ್ಲಿದ್ದು, ಈ ಎಲ್ಲರಿಗೂ ನಿತ್ಯಾನಂದ ದೋಖಾ ಎಸಗಿದ್ದಾನೆ. ಕೈಲಾಸ ದೇಶದ ವೆಬ್‌ಸೈಟ್‌ ಪ್ರಕಾರ ಅಮೆರಿಕದ ಇಬ್ಬರು ಸೆನೆಟರ್‌ಗಳು ತಮ್ಮ ದೇಶದ ಬಗ್ಗೆ ಮಾತನಾಡಿದ್ದು, ವಿಶೇಷ ಸಂಸತ್ತಿನ ಮಾನ್ಯತೆಯನ್ನು ಕೈಲಾಸಕ್ಕೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ. 

ಅಮೆರಿಕಾಗೆ ಯಾಮಾರಿಸಿದ ನಿತ್ಯಾನಂದ, ಕೈಲಾಸ ದೇಶವೇ ಇಲ್ಲ ದ್ವಿಪಕ್ಷೀಯ ಒಪ್ಪಂದಕ್ಕೆ ಮೇಯರ್ ವಿಷಾದ!

ಅವರಲ್ಲಿ ಒಬ್ಬರು ಕ್ಯಾಲಿಫೋರ್ನಿಯಾದ ಕಾಂಗ್ರೆಸ್‌ ಮಹಿಳೆ ನೋರ್ಮಾ ಟೊರೆಸ್‌ ಆಗಿದ್ದು, ಹೌಸ್ ಅಪ್ರೂಪ್ರಿಯೇಷನ್ಸ್ ಕಮಿಟಿಯ ಭಾಗವಾಗಿದ್ದಾರೆ. ಅದೇ ಸಮಯದಲ್ಲಿ, ಓಹಿಯೋದ ರಿಪಬ್ಲಿಕನ್ ಪಕ್ಷದ ಟ್ರಾಯ್ ಬಾಲ್ಡರ್ಸನ್ ಅವರು ನಿತ್ಯಾನಂದಗೆ ಸಂಸದೀಯ ಮಾನ್ಯತೆಯನ್ನು ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸೀಲ್ಯಾಂಡ್‌, ಲೈಬರ್‌ ಲ್ಯಾಂಡ್‌..ನಿತ್ಯಾನಂದನ ಕೈಲಾಸದಂತೆ ಜಗತ್ತಿನಲ್ಲಿವೆ ಹಲವಾರು ಸ್ವಯಂಘೋಷಿತ ದೇಶಗಳು!

2019ರಲ್ಲಿ ಪರಾರಿಯಾಗಿದ್ದ ನಿತ್ಯಾನಂದ: ನಿತ್ಯಾನಂದ ಹುಟ್ಟಿದ್ದು ತಮಿಳುನಾಡಿನ ತಿರುವಣ್ಣಾಮಲೈ ನಗರದಲ್ಲಿ. ಅರುಣಾಚಲಂ ರಾಜಶೇಖರನ್ ಎನ್ನುವುದು ಮೂಲ ಹೆಸರು. ತಮ್ಮ 12ನೇ ವಯಸ್ಸಿನಲ್ಲಿ ಆಧ್ಯಾತ್ಮಿಕ ಅನುಭವಗಳನ್ನು ಹೊಂದಲು ಆರಂಭಿಸಿದ್ದ ಹಾಗೂ 22ನೇ ವಯಸ್ಸಿನಲ್ಲಿ ತಮಗೆ ಜ್ಞಾನೋದಯ ಪ್ರಾಪ್ತವಾಯಿತು ಎಂದು ಹೇಳಿಕೊಂಡಿದ್ದಾನೆ.  24ನೇ ವಯಸ್ಸಿನಲ್ಲಿ ನಿತ್ಯಾನಂದ ಎನ್ನವ ಹೆಸರಿನಲ್ಲಿ ಜನರಿಗೆ ಪ್ರವಚನಗಳನ್ನು ನೀಡಲು ಪ್ರಾರಂಭ ಮಾಡಿದ್ದ. 2003 ರಲ್ಲಿ ಅವರು ಕರ್ನಾಟಕದ ಬೆಂಗಳೂರಿನ ಬಳಿ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಆಶ್ರಮವನ್ನು ಪ್ರಾರಂಭಿಸಿದರು. 2010ರಲ್ಲಿ ನಿತ್ಯಾನಂದನ ಶಿಷ್ಯರೊಬ್ಬರು ಈತನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದರು. ತನಿಖೆಯ ಬಳಿಕ 2019ರಲ್ಲಿ ಗುಜರಾತ್ ಪೊಲೀಸರು ಈತನ ವಿರುದ್ಧ ಅಪಹರಣದ ಆರೋಪ ಹೊರಿಸಿದ್ದರು. ಈತನ ಆಶ್ರಮದ ಬಳಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದರು. ಆ ನಂತರ ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಡಿಸೆಂಬರ್ 2019 ರಲ್ಲಿ, ಅವರು ತಮ್ಮದೇ ಆದ ಕೈಲಾಸ ಎಂಬ ಹೊಸ ದೇಶ ಸ್ಥಾಪನೆ ಮಾಡಿದ್ದಾಗಿ ಹೇಳಿದ್ದರು. ಆದರೆ, ಇಲ್ಲಿಯವರೆಗೆ ಯಾರೊಬ್ಬರೂ ಕೂಡ ಆತನ ದೇಶವನ್ನು ಕಂಡುನಹಿಡಿದಿಲ್ಲ.

 

click me!