
ನವದೆಹಲಿ(ಮಾ.18) ದೆಹಲಿ ಅಬಕಾರಿ ಹಗರಣ ಸಂಕಷ್ಟ ಆಪ್ ಕೊರಳಿಗೆ ಬಿಗಿಯಾಗಿ ಸುತ್ತಿಕೊಳ್ಳುತ್ತಿದೆ. ಬಿಆರ್‌ಎಸ್ ನಾಯಕಿ, ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಕವಿತಾ ಬಂಧನ ಬೆನ್ನಲ್ಲೇ ಒಂದೊಂದೆ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ಕೆ ಕವಿತಾ ಬಂಧನದಿಂದ ಇದೀಗ ಆಪ್ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಅಬಕಾರಿ ನೀತಿ ಅಡಿಯಲ್ಲಿ ಲಭಾ ಮಾಡಿಕೊಳ್ಳಲು ಕೆ ಕವಿತಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಅಂದಿನ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ 100 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಅನ್ನೋ ಮಾಹಿತಿಯನ್ನು ಇಡಿ ಅಧಿಕಾರಿಗಳು ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ. ಈ ಕುರಿತು ಇಡಿ ಅಧಿಕಾರಿಗಳು ತಮ್ಮ ರಿಮ್ಯಾಂಡ್ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಪುತ್ರಿಯಾಗಿರುವ ಹಾಗೂ ಹಾಲಿ ತೆಲಂಗಾಣದ ವಿಧಾನಪರಿಷತ್ ಸದಸ್ಯೆಯಾಗಿರುವ ಕೆ. ಕವಿತಾ, ಇಡೀ ಹಗರಣದಲ್ಲಿ ಪ್ರಮುಖ ಕಿಂಗ್‌ಪಿನ್ ಹಾಗೂ ಮುಖ್ಯ ಸಂಚುಗಾರರಾಗಿದ್ದಾರೆ. ಅಬಕಾರಿ ಹಗರಣದ ಲಾಭಾರ್ಥಿಯಾಗಿದ್ದಾರೆ ಎಂದು ಇಡಿ ಅಧಿಕಾರಿಗಳ ರಿಮ್ಯಾಂಡ್ ಡೈರಿ ಹೇಳುತ್ತದೆ.
ಆಪ್ ಬಳಿಕ ಬಿಆರ್‌ಎಸ್‌ಗೆ ದೆಹಲಿ ಅಬಕಾರಿ ಅಕ್ರಮ ಸಂಕಷ್ಟ, ಇಡಿ ದಾಳಿ ಬೆನ್ನಲ್ಲೇ ಕೆ ಕವಿತಾ ಅರೆಸ್ಟ್ !
ದೆಹಲಿ ಅಬಕಾರಿ ನೀತಿಯ ನಿಯಮ ರಚನೆ ಹಾಗೂ ಅನುಷ್ಠಾನದ ವೇಳೆ ಪ್ರತಿಫಲಾಪೇಕ್ಷೆ ಬಯಸಿ ‘ಸೌತ್ ಗ್ರೂಪ್’ ಜತೆಗೂಡಿ 100 ಕೋಟಿ ರು. ಲಂಚವನ್ನು ಕವಿತಾ ನೀಡಿದ್ದರು ಎಂದು ಇ.ಡಿ. ದೂರಿದೆ. ಈ ಹಗರಣದಲ್ಲಿ ಸೌತ್ ಗ್ರೂಪ್‌ನ ಭಾಗವಾಗಿದ್ದ ‘ಆರೋಬಿಂದೋ’ ಶರತ್, ಮಾಗುಂಟಾ ರಾಘವರೆಡ್ಡಿ, ಮಾಗುಂಟಾ ಶ್ರೀನಿವಾಸುಲು ರೆಡ್ಡಿ ಹೆಸರು ಕೂಡ ಇದೆ.
ದೆಹಲಿ ಅಬಕಾರಿ ಹಗರಣ ಸಂಬಂದ ಇಡಿ ಅಧಿಕಾರಿಗಳು ಕೆ ಕವಿತಾ ಮನೆ ಮೇಲೆ ದಾಳಿ ಮಾಡಿದ್ದರು. ಬಳಿಕ ಕೆ ಕವಿತಾ ರೆಡ್ಡಿಯನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದರು. ಬಂಧನ ಬಳಿಕ ಕೆ. ಕವಿತಾರನ್ನು ಮಾರ್ಚ್ 23ರವರೆಗೆ ಇಡಿ ಕಸ್ಟಡಿಗೆ ನೀಡಿ ದೆಹಲಿ ವಿಶೇಷ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ. ಇಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಅವರು ಫೆಡರಲ್ ಆಂಟಿ ಮನಿ ಲಾಂಡರಿಂಗ್ ಏಜೆನ್ಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿ ಈ ಆದೇಶ ಹೊರಡಿಸಿದ್ದಾರೆ. ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ ರಾವ್ ಪುತ್ರಿ ಕವಿತಾರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಇಡಿ 10 ದಿನ ಕಸ್ಟಡಿಗೆ ನೀಡುವಂತೆ ಕೋರಿತ್ತು. ನ್ಯಾಯಾಲಯ ಮಾರ್ಚ್ 23ರವರೆಗೆ ಇಡಿ ವಶಕ್ಕೆ ನೀಡಿದೆ.
ತೆಲಂಗಾಣ ಸಿಎಂ ಪುತ್ರಿ ಕವಿತಾ ಇಡಿ ವಿಚಾರಣೆಗೆ ವಿರೋಧ: ಮೋದಿ ‘ರಾವಣ’ ಪೋಸ್ಟರ್ ಅಂಟಿಸಿ ಪ್ರತಿಭಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ