17 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಬಾಯ್‌ಫ್ರೆಂಡ್ ಎದುರೇ ಮೂವರು ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಹೇಯ ಕೃತ್ಯ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ.
ಜೋಧ್‌ಪುರ: 17 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಬಾಯ್‌ಫ್ರೆಂಡ್ ಎದುರೇ ಮೂವರು ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಹೇಯ ಕೃತ್ಯ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ. ಯುವತಿಯ ಬಾಯ್‌ಫ್ರೆಂಡ್‌ಗೆ ಮೊದಲಿಗೆ ಸರಿಯಾಗಿ ಥಳಿಸಿದ ಮೂವರು ವಿದ್ಯಾರ್ಥಿಗಳು ಬಳಿಕ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಭಾನುವಾರ ಮುಂಜಾನೆ 4 ಗಂಟೆ ವೇಳೆ ಈ ಘಟನೆ ನಡೆದಿದೆ. ಅತ್ಯಾಚಾರವೆಸಗಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
17 ವರ್ಷದ ಹುಡುಗಿ ಅಜ್ಮೀರ್ ನಿವಾಸಿಯಾಗಿದ್ದು, ಅಪ್ರಾಪ್ತ ಗೆಳೆಯನ ಜೊತೆ ಭಾನುವಾರ ಮನೆಬಿಟ್ಟು ಓಡಿ ಬಂದಿದ್ದಳು. ಇಬ್ಬರು ಬಸ್‌ನಲ್ಲಿ ಅಜ್ಮೀರ್‌ನಿಂದ ಜೋಧ್‌ಪುರಕ್ಕೆ ಬಂದಿದ್ದು, ಉಳಿಯುವುದಕ್ಕಾಗಿ ಬಸ್ ನಿಲ್ದಾಣದ ಸಮೀಪ ಸ್ಥಳ ಹುಡುಕಾಡುತ್ತಿದ್ದಾಗ ಈ ದುರುಳರ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಇವರಿಗೆ ರಾತ್ರಿ ಉಳಿಯಲು ಸ್ಥಳ ಸಿಗದ ಹಿನ್ನೆಲೆಯಲ್ಲಿ ಪವಟ ಸರ್ಕಲ್ ಬಳಿ ಮಾರ್ಗದಲ್ಲಿ ಅಲೆದಾಡುತ್ತಿರಬೇಕಾದರೆ ಈ ಮೂವರು ಖದೀಮರು ಈ ಜೋಡಿಯನ್ನು ಗಮನಿಸಿ ಹತ್ತಿರ ಬಂದು ಸಹಾಯ ಮಾಡುವುದಾಗಿ ಹೇಳಿದ್ದಾರೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ಅಮ್ರಿತ್ ದುಹನ್ ಹೇಳಿದ್ದಾರೆ.
ಬಾಯ್‌ಫ್ರೆಂಡ್ ಜತೆಗಿದ್ದ ಯುವತಿಯ ವಿಡಿಯೋ ರೆಕಾರ್ಡ್: ಪೊಲೀಸ್ ಎಂದು ಬ್ಲ್ಯಾಕ್‌ಮೇಲ್ ಮಾಡಿ, ರೇಪ್ ಮಾಡಿದ ಪಾಪಿ!
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, 21 ವರ್ಷದ ಸಮಂದರ್ ಸಿಂಗ್ (Samandar Singh) 22 ವರ್ಷದ ಭಟ್ಟಂ ಸಿಂಗ್ (Bhattam Singh) ಹಾಗೂ 21 ವರ್ಷದ ಧರ್ಮಪಾಲ್ ಸಿಂಗ್ (Dharmpal Singh) ಎಂದು ಗುರುತಿಸಲಾಗಿದೆ. ಮನೆಬಿಟ್ಟು ಬಂದ ನವಪ್ರೇಮಿಗಳಿಗೆ ಆಹಾರ ನೀಡಿದ ಈ ಮೂವರು ಆಹಾರ ಸೇವನೆಯ ನಂತರ ರೈಲಿನಲ್ಲಿ ಪ್ರಯಾಣ ಮುಂದುವರೆಸಬಹುದು ಎಂದು ಈ ಯುವಪ್ರೇಮಿಗಳಿಗೆ ಸಲಹೆ ನೀಡಿದ್ದಾರೆ.
ಊಟದ ನಂತರ ಅಪ್ರಾಪ್ತರು ಪಾವಾಟಾ ವೃತ್ತದ (Pawata circle) ಬಳಿಯ ರೈಲು ಮಾರ್ಗಕ್ಕೆ ಹೋಗುತ್ತಿದ್ದರೆ ಅವರನ್ನು ಈ ದುರುಳರು ಹಿಂಬಾಲಿಸಿದ್ದಾರೆ. ರಾತ್ರಿಯೆಲ್ಲಾ ಈ ಐವರು ನಡೆಯಲು ಆರಂಭಿಸಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಒಡೆದ ಗೋಡೆಯ ಮೂಲಕ ಯುನಿವರ್ಸಿಟಿಯ ಕ್ಯಾಂಪಸ್‌ಗೆ ಈ ಐವರು ಬಂದಿದ್ದಾರೆ. ಅಲ್ಲಿ ಇಬ್ಬರು ಆರೋಪಿಗಳು ಅಪ್ರಾಪ್ತ ಬಾಲಕನನ್ನು ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ. ಬಳಿಕ ಆತನ ಗೆಳತಿ ಮೇಲೆಯೂ ಹಲ್ಲೆ ಮಾಡಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಮುಂಜಾನೆ 5 ಗಂಟೆಗೆ ಈ ಮೂವರು ಸ್ಥಳದಿಂದ ಎಸ್ಕೇಪ್ ಆಗಿದ್ದು, ನಂತರ ಈ ಅಪ್ರಾಪ್ತ ಬಾಲಕ ದಾರಿಯಲ್ಲಿ ನಡೆದು ಹೋಗುತ್ತಿದ್ದವರ ಸಹಾಯ ಕೇಳಿದ್ದಾನೆ. ಆ ದಾರಿಹೋಕ ಈ ಅಪ್ರಾಪ್ತ ಜೋಡಿಯನ್ನು ಜೆಎನ್‌ವಿಯು ಕ್ಯಾಂಪಸ್‌ನ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾನೆ. ವಿಚಾರ ತಿಳಿದು ಡಿಸಿಪಿ ದುಹಾನ್ ಹಾಗೂ ಪೊಲೀಸ್ ಕಮೀಷನರ್ ರವಿದತ್ ಗೌರ್ (police commissioner Ravidutt Gaur) ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದು, ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ಮಹಾತ್ಮಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಬಾಲಕಿಗೆ ಕೌನ್ಸೆಲಿಂಗ್ ಮಾಡಲಾಗಿದ್ದು, ಬಾಲಕನೂ ಕೂಡ ಪೊಲೀಸರ ರಕ್ಷಣೆಯಲ್ಲಿ ಇದ್ದಾನೆ ಎಂದು ಡಿಸಿಪಿ ಹೇಳಿದ್ದಾರೆ.
ಅಯ್ಯೋ ಪಾಪಿ: 5 ವರ್ಷದ ಬಾಲಕಿ ಮೇಲೆ 60 ವರ್ಷದ ಮುದುಕನಿಂದ ರೇಪ್; ಸಂತ್ರಸ್ತೆಗೆ ಬೆದರಿಕೆ
ಅಪ್ರಾಪ್ತರ ಕುಟುಂಬಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಜೋಧ್‌ಪುರಕ್ಕೆ ಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿ ನೀಡಿದ ದೂರಿನ ಮೇಲೆ ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಹಾಗೆಯೇ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಲು ಹೋಗಿದ್ದು, ಈ ವೇಳೆ ಪೊಲೀಸರಿಗೆ ಇತರ ಆರೋಪಿಗಳು ಕೂಡ ಸಿಕ್ಕಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ವಾರದೊಳಗೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.