'ಸ್ಲಮ್‌ನಲ್ಲಿದ್ದ ನನ್ನನ್ನು ಸುಪ್ರೀಂ ಕೋರ್ಟ್‌ಗೆ ತಂದಿದ್ದು ಅಂಬೇಡ್ಕರ್‌ ಸಂವಿಧಾನ..' ಜಸ್ಟೀಸ್‌ ಬಿಆರ್‌ ಗವಾಯಿ ಮಾತು ವೈರಲ್‌!

Published : Apr 16, 2025, 03:45 PM ISTUpdated : Apr 16, 2025, 03:59 PM IST
'ಸ್ಲಮ್‌ನಲ್ಲಿದ್ದ ನನ್ನನ್ನು ಸುಪ್ರೀಂ ಕೋರ್ಟ್‌ಗೆ ತಂದಿದ್ದು ಅಂಬೇಡ್ಕರ್‌ ಸಂವಿಧಾನ..' ಜಸ್ಟೀಸ್‌ ಬಿಆರ್‌ ಗವಾಯಿ ಮಾತು ವೈರಲ್‌!

ಸಾರಾಂಶ

ನ್ಯಾ. ಭೂಷಣ್‌ ರಾಮಕೃಷ್ಣ ಗವಾಯಿ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡಲಾಗಿದೆ. ದಲಿತ ಸಮುದಾಯದಿಂದ ಸಿಜೆಐ ಹುದ್ದೆ ಅಲಂಕರಿಸುತ್ತಿರುವ ಎರಡನೇ ವ್ಯಕ್ತಿಯಾಗಲಿದ್ದಾರೆ. ಅಂಬೇಡ್ಕರ್ ಜಯಂತಿಯಂದು ಸಂವಿಧಾನ ಮತ್ತು ಅಂಬೇಡ್ಕರರ ಕೊಡುಗೆಯನ್ನು ಸ್ಮರಿಸಿ, ತಮ್ಮ ಬಡತನದ ಹಿನ್ನೆಲೆಯಿಂದ ಈ ಸ್ಥಾನ ತಲುಪಲು ಅಂಬೇಡ್ಕರರು ಕಾರಣ ಎಂದು ಭಾವುಕರಾಗಿ ನುಡಿದರು.

ನವದೆಹಲಿ (ಏ.16): ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಭೂಷಣ್‌ ರಾಮಕೃಷ್ಣ ಗವಾಯಿ ಹೆಸರನ್ನು ಹಾಲಿ ಸಿಜೆಐ ಸಂಜೀವ್‌ ಖನ್ನಾ ಕಾನೂನು ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಏಪ್ರಿಲ್‌ 14 ರಂದು ಅಂಬೇಡ್ಕರ್‌ ಜಯಂತಿಯಂದು ಅವರು ಆಡಿರುವ ಮಾತುಗಳು ವೈರಲ್‌ ಆಗಿವೆ.

ಅಂದಾಜು 18 ವರ್ಷಗಳ ಬಳಿಕ ಭಾರತ ಮುಖ್ಯ ನ್ಯಾಯಮೂರ್ತಿಯಾಗಿ ದಲಿತ ವ್ಯಕ್ತಿ ನೇಮಕಗೊಳ್ಳಲಿದ್ದಾರೆ. 2007ರಲ್ಲಿ ದೇಶದ ಉನ್ನತ ನ್ಯಾಯಾಂಗ ಹುದ್ದೆಗೆ ಬಡ್ತಿ ಪಡೆದ ನ್ಯಾಯಮೂರ್ತಿ ಕೆಜಿ.ಬಾಲಕೃಷ್ಣನ್‌ ಬಳಿಕ, ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ 2ನೇ ದಲಿತ ವ್ಯಕ್ತಿ ಇವರು ಎನಿಸಲಿದ್ದಾರೆ.

ಏ. 14 ರಂದು ಸುಪ್ರೀಂ ಕೋರ್ಟ್‌ ಆವರಣದಲ್ಲಿ ನಡೆದ ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಜಸ್ಟೀಸ್‌ ಬಿಆರ್‌ ಗವಾಯಿ,  ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಡಾ. ಅಂಬೇಡ್ಕರ್ ಅವರ ಮಹಾನ್ ಕೊಡುಗೆಗಳನ್ನು ಸ್ಮರಿಸಿ, ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಗವಾಯಿ, ಅಂಬೇಡ್ಕರ್ ಅವರ ಆಲೋಚನೆಗಳು ಮತ್ತು ನಾಯಕತ್ವವು ಭಾರತದ ಭವಿಷ್ಯವನ್ನು ರೂಪಿಸಲು ಮತ್ತು ಸಮಾಜದ ದುರ್ಬಲ ವರ್ಗಗಳ ಮೇಲೆತ್ತಲು ಹೇಗೆ ಸಹಾಯ ಮಾಡಿತು ಎಂಬುದನ್ನು ಅವರು ಹಂಚಿಕೊಂಡರು.

"ಡಾ. ಅಂಬೇಡ್ಕರ್ ಮತ್ತು ಅವರ ಸಹೋದ್ಯೋಗಿಗಳು ರಚಿಸಿದ ಸಂವಿಧಾನಕ್ಕಾಗಿ ರಾಷ್ಟ್ರವು ಯಾವಾಗಲೂ ಅವರಿಗೆ ಕೃತಜ್ಞರಾಗಿರಬೇಕು. ಭಾರತವು ಬಲಿಷ್ಠವಾಗಿದೆ, ಪ್ರಗತಿಪರವಾಗಿದೆ ಮತ್ತು ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಅವರ ತತ್ವಶಾಸ್ತ್ರ, ಸಿದ್ಧಾಂತ ಮತ್ತು ದೃಷ್ಟಿಕೋನವೇ ನಮ್ಮನ್ನು ಒಗ್ಗಟ್ಟಿನಿಂದ ಮತ್ತು ಬಲವಾಗಿರಿಸುತ್ತಿದೆ' ಎಂದು ಹೇಳಿದ್ದರು.

ಈ ವೇಳೆ ತಮ್ಮ ಜೀವನವನ್ನು ನೆನಪಿಸಿಕೊಂಡು ಭಾವುಕರಾದ ಅವರು, ಡಾ. ಅಂಬೇಡ್ಕರ್ ಅವರ ಸಮಾನತೆ ಮತ್ತು ನ್ಯಾಯಕ್ಕಾಗಿ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ ಈ ಉನ್ನತ ಹುದ್ದೆಯನ್ನು ತಲುಪಲು ನನಗೆ ಸಾಧ್ಯವಾಯಿತು ಎಂದಿದ್ದಾರೆ. 'ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಯತ್ನದಿಂದಲೇ ನನಗೆ ಈ ಸ್ಥಾನ ಸಿಗಲು ಸಾಧ್ಯವಾಯಿತು, ನಾನು ಪುರಸಭೆಯ ಶಾಲೆಯಲ್ಲಿ, ಕೊಳಚೆ ಪ್ರದೇಶದಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡಿದವನು' ಎಂದು ಹೇಳಿದ್ದಾರೆ.

ಡಾ. ಅಂಬೇಡ್ಕರ್ ಅವರ ದೃಷ್ಟಿಕೋನದ ಮೇಲೆ ನಿರ್ಮಿಸಲಾದ ಭಾರತೀಯ ಸಂವಿಧಾನವು ಅನೇಕ ಜನರ ಜೀವನವನ್ನು ಹೇಗೆ ಬದಲಾಯಿಸಿದೆ ಮತ್ತು ಸಮಾಜಕ್ಕೆ ನ್ಯಾಯವನ್ನು ತಂದಿದೆ ಎಂಬುದನ್ನು ಅವರು ವಿವರಿಸಿದರು. "ಭಾರತೀಯ ಸಂವಿಧಾನ ಮತ್ತು ಡಾ. ಅಂಬೇಡ್ಕರ್ ಅವರ ದೃಷ್ಟಿಕೋನದಿಂದಾಗಿ ನಾವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯದತ್ತ ಪ್ರಗತಿ ಸಾಧಿಸಿದ್ದೇವೆ." ಎಂದಿದ್ದರು. ನಿಜವಾದ ಸಮಾನತೆಯನ್ನು ಸಾಧಿಸಲು ಮೀಸಲಾತಿಗಳು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಸಂಪ್ರದಾಯದಂತೆ, ಮುಖ್ಯ ನ್ಯಾಯಮೂರ್ತಿಗಳು ಕೇಂದ್ರ ಕಾನೂನು ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದು, ನ್ಯಾಯಮೂರ್ತಿ ಗವಾಯಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಹೆಸರಿಸಿದ್ದಾರೆ. ಸಚಿವಾಲಯವು ಈ ಹಿಂದೆ ಮುಖ್ಯ ನ್ಯಾಯಮೂರ್ತಿಗಳಿಂದ ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವ ಪ್ರಸ್ತಾವನೆಯನ್ನು ಕೋರಿತ್ತು.

Breaking: ಜಸ್ಟೀಸ್‌ ಬಿಆರ್‌ ಗವಾಯಿ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ!

ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ, ನ್ಯಾಯಮೂರ್ತಿ ಗವಾಯಿ ಅವರು ಹಲವಾರು ಮಹತ್ವದ ತೀರ್ಪುಗಳ ಭಾಗವಾಗಿದ್ದಾರೆ. ಇವುಗಳಲ್ಲಿ ಕೇಂದ್ರದ 2016 ರ ನೋಟು ರದ್ದತಿ ನಿರ್ಧಾರವನ್ನು ಎತ್ತಿಹಿಡಿದ ತೀರ್ಪು ಮತ್ತು ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿದ ಸುಪ್ರೀಂ ಕೋರ್ಟ್ ತೀರ್ಪು ಸೇರಿವೆ.

ಟ್ರಾಮಾ ಸೆಂಟರ್‌ ಉದ್ಘಾಟನೆಯಾದ್ರೂ ಕಾರ್ಯಾರಂಭ ಇಲ್ಲ: ಗ್ಯಾರಂಟಿ ನಡುವೆ 1.5 ವರ್ಷದಿಂದ ಅನಾಥವಾಗಿದೆ ಕಟ್ಟಡ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌