
ನವದೆಹಲಿ(ಆ.08): ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ದೇಶ, ಶನಿವಾರ ಮತ್ತೊಂದು ಆಶಾದಾಯಕ ಬೆಳವಣಿಗೆ ಕಂಡಿದೆ. ಶೇ.85ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿರುವ ಅಮೆರಿಕದ ಜಾನ್ಸನ್ ಆ್ಯಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆಯ ತುರ್ತುಬಳಕೆಗೆ ಶನಿವಾರ ಭಾರತ ಅನುಮೋದನೆ ನೀಡಿದೆ. ಇದರಿಂದಾಗಿ ದೇಶಕ್ಕೆ 5ನೇ ಲಸಿಕೆ ಪ್ರವೇಶಿಸಿದಂತಾಗಿದೆ.
ಶುಕ್ರವಾರ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ, ಭಾರತದ ಔಷಧ ನಿಯಂತ್ರಣ ಸಂಸ್ಥೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಈ ಕೋರಿಕೆಗೆ ಅದೇ ದಿನ ಆನುಮೋದನೆ ದೊರಕಿದೆ. 18 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆ ನೀಡಲಾಗುತ್ತದೆ.
ಜಾನ್ಸನ್ ಕಂಪನಿಯ ಲಸಿಕೆಯ, ಇತ್ತೀಚೆಗೆ ವಿಶ್ವದಾದ್ಯಂತ ಅತ್ಯಂತ ಮಾರಕ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಡೆಲ್ಟಾತಳಿಯ ವೈರಸ್‌ಗಳ ಮೇಲೂ ಪರಿಣಾಮಕಾರಿ ಎಂದು ಸಾಬೀತಾಗಿದೆ. ಜೊತೆಗೆ ಒಂದು ಡೋಸ್ ಲಸಿಕೆ ಕನಿಷ್ಠ 8 ತಿಂಗಳವರೆಗೆ ದೇಹಕ್ಕೆ ರಕ್ಷಣೆ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಹೊಸ ಲಸಿಕೆ:
‘ಭಾರತ ತನ್ನ ಲಸಿಕೆಯ ‘ಬಾಸ್ಕೆಟ್’ ವಿಸ್ತರಿಸಿಕೊಳ್ಳುತ್ತಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ’ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಪ್ರಕಟಿಸಿದ್ದಾರೆ. ಜಾನ್ಸನ್ ಕಂಪನಿ ಕೂಡ ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಕೋವಿಡ್ ನಿರ್ಮೂಲನೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದಂತಾಗಿದೆ ಎಂದಿದೆ.
ಈವರೆಗೆ ಭಾರತದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್, ಮಾಡೆರ್ನಾ ಲಸಿಕೆಗಳು ಲಭ್ಯ ಇದ್ದವು. ಇವುಗಳ ಸಾಲಿಗೆ ಈಗ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ ಕೂಡ ಸೇರಿಕೊಂಡಂತಾಗಿದೆ. ಈವರೆಗೆ ಭಾರತದಲ್ಲಿರುವ ಬಹುತೇಕ ಲಸಿಕೆಗಳು ಎರಡು ಡೋಸ್‌ನದ್ದಾಗಿದ್ದರೆ, ಜಾನ್ಸನ್ ಲಸಿಕೆ ಸಿಂಗಲ್ ಡೋಸ್‌ನದ್ದಾಗಿದೆ.
ಈ ಮುಂಚೆ ಜಾನ್ಸನ್ ಕಂಪನಿ 3ನೇ ಹಂತದ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ವಿದೇಶದಲ್ಲಿ ಅನುಮೋದನೆ ಪಡೆದ ಲಸಿಕೆಗಳ ಪ್ರಯೋಗ ಭಾರತದಲ್ಲಿ ಅಗತ್ಯವಿಲ್ಲ ಎಂದು ಮೋದಿ ಸರ್ಕಾರ ಇತ್ತೀಚೆಗೆ ನಿಯಮ ಬದಲಿಸಿತ್ತು. ಈ ಪ್ರಕಾರ ಪ್ರಯೋಗದ ಅರ್ಜಿ ಹಿಂಪಡೆದಿದ್ದ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ, ತುರ್ತು ಬಳಕೆಗೆ ಅನುಮೋದನೆ ನೀಡಿ ಎಂದು ಶುಕ್ರವಾರ ಅರ್ಜಿ ಸಲ್ಲಿಸಿತ್ತು. ವಿದೇಶಗಳಲ್ಲಿ ಈ ಲಸಿಕೆ ಶೇ.85ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ