
ಕೋಲ್ಕತ್ತಾ (ಮೇ 4): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಜಂಗಲ್‌ಮಹಲ್ ಭಾಗದ ಜಾರ್‌ಗ್ರಾಮ್ ಜಿಲ್ಲೆಯಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಜಿಲ್ಲೆಯ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಮುನ್ನಡೆ ಕಾಯ್ದುಕೊಂಡಿದ್ದು, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಾರ್‌ಗ್ರಾಮ್ ಈ ಚುನಾವಣಾ ಪ್ರಚಾರದ ಸಮಯದಲ್ಲಿ ಇಡೀ ದೇಶದ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ನಡೆಸಿದ್ದ ಅನಿರೀಕ್ಷಿತ ಭೇಟಿ ಮತ್ತು ಅಲ್ಲಿನ ಫೇಮಸ್ ಸ್ನ್ಯಾಕ್ 'ಝಲ್ ಮುರಿ' ಸವಿದಿದ್ದು!
ಏಪ್ರಿಲ್ 19 ರಂದು ಚುನಾವಣಾ ಪ್ರಚಾರದ ವೇಳೆ ಜಾರ್‌ಗ್ರಾಮ್‌ನಲ್ಲಿ ಪ್ರಧಾನಿ ಮೋದಿ ಅವರು ಹಠಾತ್ ವಾಹನ ನಿಲ್ಲಿಸಿ, ರಸ್ತೆ ಬದಿಯ ವ್ಯಾಪಾರಿ ಬಿಕ್ರಮ್ ಸೌ ಎಂಬುವವರಿಂದ ಝಲ್ ಮುರಿ (ಚುರುಮುರಿ ಮಸಾಲೆ ಪುರಿ) ಖರೀದಿಸಿದ್ದರು.
ಝಲ್ ಮುರಿ ಸವಿದು ವ್ಯಾಪಾರಿಗೆ 10 ರೂಪಾಯಿ ಹಣ ನೀಡಿದ್ದ ಪ್ರಧಾನಿಯವರ ಈ ಸಾಧಾರಣ ನಡೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ 'ಝಲ್ ಮುರಿ ಮೊಮೆಂಟ್' ಈಗ ಮತಗಳಾಗಿ ಪರಿವರ್ತನೆಗೊಂಡಂತೆ ಕಾಣುತ್ತಿದೆ.
ಜಾರ್‌ಗ್ರಾಮ್ ಬೆಲ್ಟ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಪ್ರಧಾನಿಯವರ ಭೇಟಿ ಮತ್ತು ಸ್ಥಳೀಯರೊಂದಿಗಿನ ಅವರ ಒಡನಾಟ ಬಿಜೆಪಿಗೆ ಈ ಭಾಗದಲ್ಲಿ ದೊಡ್ಡ ಬಲ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಇದು ಕೇವಲ ಆರಂಭಿಕ ಹಂತದ ಎಣಿಕೆಯಾಗಿದ್ದು, ಮುಂದಿನ ಸುತ್ತಿನ ಮತ ಎಣಿಕೆಯಲ್ಲಿ ಫಲಿತಾಂಶದ ಚಿತ್ರಣ ಬದಲಾದರೂ ಆಗಬಹುದು. ಆದರೆ, ಒಟ್ಟಾರೆ ಲಕ್ಷಣದಲ್ಲಿ ಬಿಜೆಪಿ ಈ ನಾಲ್ಕೂ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದಲ್ಲಿ 72 ಸ್ಥಾನ ಗೆದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಬಿಜೆಪಿ ಈ ಬಾರಿ ಮಮತಾ ಬ್ಯಾನರ್ಜಿಯನ್ನು ಕೆಳಗಿಳಿಸಿ ಏಕಾಂಗಿಯಾಗಿ ಅಧಿಕಾರಕ್ಕೇರಲು ಸಜ್ಜಾಗಿದೆ. 294 ವಿಧಾನಸಭಾ ಕ್ಷೇತ್ರಗಳ ಪೈಕಿ 293 ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು 148 ಮ್ಯಾಜಿಕ್ ನಂಬರ್ ಆಗಿದೆ. ಬೆಳಗ್ಗೆ 10 ಗಂಟೆಯ ವೇಳೆಗೆ ಬಿಜೆಪಿ 168 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಟಿಎಂಸಿ 112, ಕಾಂಗ್ರೆಸ್ 3, ಎಡಪಕ್ಷ 2, ಇತರೇ 2 ಸ್ಥಾನಗಳಲ್ಲಿ ಮುನ್ನಡೆ ಕಂಡಿದ್ದು, ಇನ್ನೂ 7 ಕ್ಷೇತ್ರಗಳ ಟ್ರೆಂಡ್ ಇನ್ನಷ್ಟೇ ಬರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ