
ನವದೆಹಲಿ (ಜು.24): ಕೇಂದ್ರದ ಎನ್‍ಡಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ವಿಶೇಷವೆಂದರೆ, ಇಲ್ಲಿ ಕೇವಲ ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಮಾತ್ರವಲ್ಲದೆ, ದೇಶದ ವಿವಿಧ ಮೂಲೆಗಳಿಂದ ಆಗಮಿಸಿರುವ ಅಪಾರ ಸಂಖ್ಯೆಯ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್, ಇನ್‌ಸ್ಟಾಗ್ರಾಮ್ ರೀಲ್ಸ್ ಕ್ರಿಯೇಟರ್ಸ್, ಯೂಟ್ಯೂಬರ್‌ಗಳು ನೆರೆದಿರುವುದರಿಂದ ಪ್ರತಿಭಟನಾ ಸ್ಥಳವು ಇವರಿಗೆ ಚಿನ್ನದ ಮೊಟ್ಟೆ ಇಡುವ ಕಂಟೆಂಟ್‌ಗಳ ಕ್ರಿಯೇಷನ್ ತಾಣವಾಗಿ ಮಾರ್ಪಟ್ಟಿದೆ.
ಮುಂಬೈನ ಅಖಿಲ್ ಅಹಮದ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ಗಾಗಿ ರಸ್ತೆಬದಿಯ ಸಂದರ್ಶನಗಳನ್ನು ರೆಕಾರ್ಡ್ ಮಾಡುತ್ತಿದ್ದರೆ, ಹರಿಯಾಣದ ಕಪಾಸೇರಾದ ಪ್ರಥಮ ವರ್ಷದ ವಿದ್ಯಾರ್ಥಿ ಅಭಿಷೇಕ್, ತನ್ನ ಸ್ವಂತ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಲು ಉತ್ಸಾಹದಿಂದ ವೀಡಿಯೊಗಳನ್ನು ಶೂಟ್ ಮಾಡುತ್ತಿರುವುದು ಕಂಡು ಬಂದಿದೆ.
ವಾರಾಣಸಿಯ ಅವಿನಾಶ್ ಎಂಬುವವರು 'ರಾಮರಾಜ್ಯ' ಎಂಬ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ಹಾಗೂ ಮೊಹಾಲಿಯ ಕುಲದೀಪ್ ಸಿಂಗ್ 'ರೋಜಾನಾ ಸ್ಪೋಕ್ಸ್ ಪರ್ಸನ್' ನ್ಯೂಸ್ ಅನಾಲಿಸಿಸ್ ಪೇಜ್‌ಗಾಗಿ ಕಳೆದ ಕೆಲವು ದಿನಗಳಿಂದ ಜಂತರ್ ಮಂತರ್‌ನಲ್ಲೇ ಮೊಕ್ಕಾಂ ಹೂಡಿದ್ದು, ಸ್ಥಳದಲ್ಲಿನ ರಿಯಲ್ ಟೈಮ್ ಎಮೋಷನ್‌ಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ನಿರಂತರವಾಗಿ ಅಪ್‌ಲೋಡ್ ಮಾಡುತ್ತಿದ್ದಾರೆ.
"ನನ್ನ ಇನ್‌ಸ್ಟಾಗ್ರಾಮ್ ಪೇಜ್ ಮತ್ತು ಯೂಟ್ಯೂಬ್ ಚಾನೆಲ್‌ಗೆ ಈ ಪ್ರತಿಭಟನೆ ಉತ್ತಮ ಕಂಟೆಂಟ್ ನೀಡಿದೆ. ಅದಕ್ಕಾಗಿಯೇ ನಾನು ಕಾನ್ಪುರದಿಂದ ಇಲ್ಲಿಗೆ ಬಂದಿದ್ದೇನೆ" ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಮುಂಬೈನ ಶರ್ಮಾ ಸಹೋದರಿಯರು ಸಾಂಪ್ರದಾಯಿಕ ಉಡುಪಿನಲ್ಲಿ ಕ್ಯಾಮೆರಾಗೆ ಪೋಸ್ ನೀಡಿ ಕಂಟೆಂಟ್ ಮಾಡಿದರೆ, ಕೋಲ್ಕತ್ತಾದ ಇತಿಹಾಸ ಪ್ರೇಮಿಯೊಬ್ಬರು ತಮ್ಮ ಶೈಕ್ಷಣಿಕ ರೀಲ್ಸ್‌ಗಾಗಿ ಸತತವಾಗಿ ಹಿಸ್ಟರಿಯ ವಿವರಗಳನ್ನು ನೀಡುತ್ತಿದ್ದಾರೆ.
"ನನ್ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಸಂಬಂಧಿತ ಕಿರು ವೀಡಿಯೊಗಳನ್ನು (Reels) ಅಪ್‌ಲೋಡ್ ಮಾಡಲು ಪ್ರಾರಂಭಿಸಿದ ನಂತರ ನನ್ನ ವೀಕ್ಷಕರ ಸಂಖ್ಯೆ (Viewership) ದಿಢೀರ್ ಹೆಚ್ಚಾಗಿದೆ" ಎಂದು ಉತ್ತರ ಪ್ರದೇಶದ ಸಹರಾನ್‌ಪುರದ ಅನುರಾಗ ಕುಮಾರಿ ಸಂತಸ ಹಂಚಿಕೊಂಡಿದ್ದಾರೆ.
ಪ್ರತಿಭಟನಾ ಸ್ಥಳದ ಸುತ್ತಮುತ್ತ ಪೊಲೀಸರು ತಾತ್ಕಾಲಿಕವಾಗಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರೂ ಸಹ, ಟ್ರೈಪಾಡ್‌ಗಳು ಮತ್ತು ಸೆಲ್ಫಿ ಸ್ಟಿಕ್‌ಗಳನ್ನು ಹಿಡಿದುಕೊಂಡು ಪ್ರತಿಭಟನಾಕಾರರ ನಡುವೆ ಸಂಚರಿಸುತ್ತಿರುವ ಕ್ರಿಯೇಟರ್ಸ್, ಜನರ ಆಕ್ರೋಶವನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದಾದ ವೀಡಿಯೊಗಳಾಗಿ ಪರಿವರ್ತಿಸುತ್ತಿದ್ದಾರೆ. ಮತ್ತೊಂದೆಡೆ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ತಾಣಗಳಲ್ಲಿ ಮೀಮ್ಸ್ ಹಾಗೂ ವ್ಯಂಗ್ಯದ ಪೋಸ್ಟ್‌ಗಳು ವೈರಲ್ ಆಗುತ್ತಿವೆ. 'ಉದ್ಯೋಗಾವಕಾಶಗಳು ಕಡಿಮೆಯಿರುವುದೇ ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ನೀಡದಿರಲು ಕಾರಣ' ಎಂದು ಯೂಸರ್ ಒಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇನ್‌ಫ್ಲುಯೆನ್ಸರ್‌ಗಳ ಭಾರಿ ಉಪಸ್ಥಿತಿಯಿಂದಾಗಿ ಪ್ರತಿಭಟನಾಕಾರರ ಸಂಖ್ಯೆ ಮತ್ತಷ್ಟು ದೊಡ್ಡದಾಗಿ ಕಾಣಿಸುತ್ತಿದ್ದು, ಇದು ಈ ಹೋರಾಟವನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪಿಸಲು ನೆರವಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಶಿಕ್ಷಣ ವ್ಯವಸ್ಥೆಯನ್ನು ಉಳಿಸುವ ಈ ಹೋರಾಟಕ್ಕಾಗಿ ಅಪಾಯವನ್ನು ಎದುರಿಸಲು ಸಿದ್ಧರಾಗಿರುವ ಹಲವು ವಿದ್ಯಾರ್ಥಿಗಳು, ತಾವು ಈ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿಷಯವನ್ನು ತಮ್ಮ ಕುಟುಂಬದವರಿಂದ ಮುಚ್ಚಿಟ್ಟಿದ್ದಾರೆ. ನಾಗರಿಕ ಸಮಾಜ, ಶಿಕ್ಷಕರು ಮತ್ತು ರಾಜಕೀಯ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದರೂ, ವಿದ್ಯಾರ್ಥಿಗಳೇ ಈ ಚಳವಳಿಯ ಕೇಂದ್ರಬಿಂದುವಾಗಿದ್ದಾರೆ.
ಬುಧವಾರ ತಡರಾತ್ರಿ ಜಂತರ್ ಮಂತರ್‌ನ 2,000 ಜನರ ಸಾಮರ್ಥ್ಯವನ್ನೂ ಮೀರಿ ಪ್ರತಿಭಟನಾ ಸ್ಥಳವು ಕಿಕ್ಕಿರಿದು ತುಂಬಿತ್ತು. ಬೀದಿ ದೀಪಗಳ ಬೆಳಕಿನಲ್ಲಿ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡವರಿಗೆ ಶೂಶ್ರೂಷೆ ಮಾಡಲಾಗುತ್ತಿತ್ತು ಮತ್ತು ಸ್ವಯಂಸೇವಕರು ಆಹಾರ ಹಾಗೂ ಔಷಧಿಗಳನ್ನು ವಿತರಿಸುತ್ತಿದ್ದರು.
ಈ ಎಲ್ಲಾ ಆಕ್ರೋಶ ಮತ್ತು ಹೋರಾಟದ ನಡುವೆ, ಆಗ್ರಾದಿಂದ ಬಂದಿದ್ದ ವಿದ್ಯಾರ್ಥಿಯೊಬ್ಬ 'ಸ್ಪೈಡರ್‌ಮ್ಯಾನ್' ಉಡುಪಿನಲ್ಲಿ ಆಗಮಿಸಿ ಗಮನ ಸೆಳೆದಿದ್ದಾನೆ. "ದೊಡ್ಡ ಅಧಿಕಾರದೊಂದಿಗೆ ದೊಡ್ಡ ಜವಾಬ್ದಾರಿಯೂ ಬರುತ್ತದೆ" ಎಂಬ ಪ್ರಸಿದ್ಧ ಸಾಲನ್ನು ಹೇಳುವ ಮೂಲಕ, ಸೂಪರ್ ಹೀರೊ ಎದುರಿಸುವ ಸವಾಲುಗಳು ಮತ್ತು ವಿದ್ಯಾರ್ಥಿಗಳು ನಡೆಸುತ್ತಿರುವ ಈ ಹೋರಾಟದ ನಡುವೆ ಹೋಲಿಕೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ