
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ(Dharmendra Pradhan resignation) ನಂತರ ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಪ್ರತಿಭಟನೆಯನ್ನು ಹಿಂಪಡೆದಿದೆ. ಹೀಗಾಗಿ ಶನಿವಾರ ತಡರಾತ್ರಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಸಿಬ್ಬಂದಿ ಜಂತರ್ ಮಂತರ್‌ನಲ್ಲಿ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದ್ದಾರೆ. ಪ್ರತಿಭಟನಾಕಾರರು ಸ್ಥಳ ಖಾಲಿ ಮಾಡಿದ ಕೂಡಲೇ NDMC ಜಂತರ್ ಮಂತರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯರಾತ್ರಿ ದೊಡ್ಡ ಮಟ್ಟದ ಕ್ಲೀನಿಂಗ್ ಡ್ರೈವ್ ನಡೆಸಿತು.
ಸ್ವಚ್ಛತಾ ಕಾರ್ಮಿಕರು ಪ್ರತಿಭಟನಾ ಸ್ಥಳ ಮತ್ತು ಅಕ್ಕಪಕ್ಕದ ರಸ್ತೆಗಳಲ್ಲಿ ಕಸ ಗುಡಿಸಿ, ಸ್ವಚ್ಛಗೊಳಿಸಿದರು. ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ NDMC ಉಪಾಧ್ಯಕ್ಷ ಕುಲ್ಜೀತ್ ಸಿಂಗ್ ಚಾಹಲ್, 'ನಮ್ಮ ಎಲ್ಲಾ NDMC ಅಧಿಕಾರಿಗಳು ಮತ್ತು ಸ್ವಚ್ಛತಾ ತಂಡಗಳು ಬೀದಿಗಿಳಿದು ಕೆಲಸ ಮಾಡುತ್ತಿವೆ. ಪ್ರತಿಭಟನೆ ಮುಗಿದಿದ್ದು, ಜನರು ಬಹುತೇಕ ಸ್ಥಳ ಖಾಲಿ ಮಾಡಿದ್ದಾರೆ. ಬೆಳಗಾಗುವುದರೊಳಗೆ ನಾವು ಟಾಲ್‌ಸ್ಟಾಯ್ ಮಾರ್ಗ, ಜಂತರ್ ಮಂತರ್, ಸಂಸದ್ ಮಾರ್ಗ, ಜೈ ಸಿಂಗ್ ಮಾರ್ಗ ಮತ್ತು ಸಿಪಿ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಸಿದ್ದೇವೆ ಎಂದರು. ನಮ್ಮ ಬಳಿ ಸ್ವಚ್ಛತಾ ತಂಡ ಮತ್ತು ವಾಷಿಂಗ್ ತಂಡ ಎರಡೂ ಇವೆ. ನಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಾವು ಪ್ರಧಾನ ಮಂತ್ರಿಗಳಿಂದ ಕಲಿಯುತ್ತೇವೆ. ನಗರವನ್ನು ಸ್ವಚ್ಛ, ನೈರ್ಮಲ್ಯ ಮತ್ತು ಅಚ್ಚುಕಟ್ಟಾಗಿ ಇಡುವುದು ನಮ್ಮ ಜವಾಬ್ದಾರಿ. ಹೀಗಾಗಿ ನಾವೇ ಖುದ್ದು ಸ್ಥಳಕ್ಕೆ ಇಳಿದು ಎಲ್ಲವನ್ನೂ ಪರಿಶೀಲಿಸಿ, ಸರಿಪಡಿಸಬೇಕು ಎಂದು ಅವರು ಹೇಳಿದರು.
ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದಿಂದ ಭರವಸೆ ಸಿಕ್ಕ ನಂತರ, 'ಸದ್ಭಾವನೆ'ಯ ದೃಷ್ಟಿಯಿಂದ CJP ಶುಕ್ರವಾರ ಜಂತರ್ ಮಂತರ್‌ನಲ್ಲಿ ತನ್ನ ಪ್ರತಿಭಟನೆಯನ್ನು ಹಿಂಪಡೆಯಿತು.
CJPಯ ಜಂತರ್ ಮಂತರ್ ಪ್ರತಿಭಟನೆ ಮತ್ತು ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರ 26 ದಿನಗಳ ಉಪವಾಸ ಸತ್ಯಾಗ್ರಹ ಸೇರಿದಂತೆ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಗಳ ನಂತರ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನೀಟ್ ಪರೀಕ್ಷೆ ವಿಚಾರವಾಗಿ ಆತ್ಮ೧ಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದಾಗಿ ಮತ್ತು ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು CJP ಹೇಳಿದೆ.
ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆಗಳು ಮತ್ತು ಪ್ರತಿಭಟನೆಗೆ ಸಂಬಂಧಿಸಿದ ಇತರ ವಿಷಯಗಳ ಕುರಿತು ನಡೆದ ಮಾತುಕತೆಯ ವೇಳೆ ಎತ್ತಿದ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಿ ಒಪ್ಪಿಕೊಂಡಿದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಪರೀಕ್ಷಾ ಸುಧಾರಣೆಗಳ ಕುರಿತು ಸಂಘಟನೆಯ ಐದು ಅಂಶಗಳ ಬೇಡಿಕೆ ಪಟ್ಟಿಯನ್ನು ಸರ್ಕಾರ ಎಚ್ಚರಿಕೆಯಿಂದ ಪರಿಶೀಲಿಸಲಿದೆ ಮತ್ತು ಚರ್ಚೆಯ ನಂತರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.
ಹೊಸ ಶಿಕ್ಷಣ ಸಚಿವರ ನೇಮಕ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನಂತರ, ನೂತನವಾಗಿ ನೇಮಕಗೊಂಡ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು 'ಸಂಪೂರ್ಣ ವಿನಯ ಮತ್ತು ಜವಾಬ್ದಾರಿಯಿಂದ' ಈ ಹುದ್ದೆಯನ್ನು ನಿಭಾಯಿಸುವುದಾಗಿ ಹೇಳಿದ್ದಾರೆ. ಪ್ರಧಾನ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ ನಂತರ, ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.
ದೆಹಲಿ ಮೆಟ್ರೋ ಸೇವೆಗಳು ಸಹಜ ಸ್ಥಿತಿಗೆ
ಇದೇ ವೇಳೆ, CJP ತನ್ನ ಪ್ರತಿಭಟನೆಯನ್ನು ಹಿಂಪಡೆದ ನಂತರ ದೆಹಲಿ ಮೆಟ್ರೋ ನೆಟ್‌ವರ್ಕ್‌ನ ಎಲ್ಲಾ ನಿಲ್ದಾಣಗಳನ್ನು ಪ್ರಯಾಣಿಕರ ಸೇವೆಗಾಗಿ ತೆರೆಯಲಾಗಿದೆ. ಇದರಿಂದಾಗಿ ಮಧ್ಯ ದೆಹಲಿಯ 18 ಪ್ರಮುಖ ನಿಲ್ದಾಣಗಳಲ್ಲಿ ಹಲವು ದಿನಗಳಿಂದ ಜಾರಿಯಲ್ಲಿದ್ದ ಭದ್ರತಾ ನಿರ್ಬಂಧಗಳು ಮತ್ತು ಹಂತ ಹಂತದ ಮುಚ್ಚುವಿಕೆಗಳು ಕೊನೆಗೊಂಡಿವೆ. ದೆಹಲಿ ಮೆಟ್ರೋ ರೈಲು ನಿಗಮ (DMRC) ಎಲ್ಲಾ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದೆ.
(ಈ ಸುದ್ದಿಯ ಶೀರ್ಷಿಕೆ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ