ಮುಂದಕ್ಕೋಡಿದ ರೈಲು ಹಿಂದಕ್ಕೆ ಚಲಿಸಿತು| ರೈಲಿನಲ್ಲಿದ್ದ ಪ್ರಯಾಣಿಕರು ಕಂಗಾಲು| ಹೀಗಾಗಲು ಕಾರಣವೇನು? ಇಲ್ಲಿದೆ ಮಾಹಿತಿ
ನವದೆಹಲಿ(ಮಾ.18): ಉತ್ತರಾಖಂಡ್‌ನ ಟಕನ್‌ಪುರ್‌ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ದೆಹಲಿಯಿಂದ ಟನಕ್‌ಪುರ್‌ಗೆ ತೆರಳುತ್ತಿದ್ದ ಪೂರ್ಣಾಗಿರಿ ಜನ್ ಶತಾಬ್ಧಿ ಎಕ್ಸ್‌ಪ್ರೆಸ್ ಬುಧವಾರ ಸುಮಾರು 35 ಕಿ. ಮೀಟರ್‌ನಷ್ಟು ದೂರ ಹಿಂದಕ್ಕೋಡಿದೆ. ಈ ರೈಲನ್ನು ಬಾಮುಷ್ಕಿಲ್ ಖಟೀಮಾದಲ್ಲಿ ತಡೆಯಲಾಗಿದೆ. ಇನ್ನು ಈ ರೈಲು ಟನಕ್‌ಪುರ ರೈಲು ನಿಲ್ದಾಣ ತಲುಪುವುದಕ್ಕೂ ಮುನ್ನ ದನವೊಂದು ರೈಲಿನೆದುರು ಬಂದಿದೆ. ಚಾಲಕ ರೈಲು ನಿಲ್ಲಿಸಿ ವ್ಯಾಕ್ಯುಮ್ ಹಾಕುತ್ತಿದ್ದಂತೆಯೇ ರೈಲು ವಿರುದ್ಧ ದಿಕ್ಕಿನಲ್ಲಿ ಓಡಲಾರಂಭಿಸಿದೆ.
ರೈಲು ಹಿಂದಕ್ಕೋಡುತ್ತಿದ್ದಂತೆಯೇ ರೈಲಿನಲ್ಲಿದ್ದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಆದರೆ ಖಟೀಮಾ ನಿಲ್ದಾಣದಲ್ಲಿ ಬಹಳ ಪ್ರಯಾಸಪಟ್ಟು ರೈಲನ್ನು ತಡೆಯಲಾಗಿದೆ. ಬಳಿಕ ಪ್ರಯಾಣಿಕರನ್ನು ಇಳಿಸಿ ಬಸ್‌ನಲ್ಲಿ ಕಳುಹಿಸಲಾಗಿದೆ.
ಚಂಪಾವತ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಲಂಕೇಶ್ವರ್ ಸಿಂಗ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಪ್ರಾಣಿಯನ್ನು ಉಳಿಸಲು ಚಾಲಕ ಬ್ರೇಕ್ ಹಾಕಿರಬೇಕು. ಇದರಿಂದ ರೈಲು ವಿರುದ್ಧ ದಿಕ್ಕಿನಲ್ಲಿ ಚಲಿಸಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದಿದ್ದಾರೆ.