ಕಾಶ್ಮೀರದಲ್ಲಿ ಹೊರಗಿನವರಿಗಿಲ್ಲ ಉದ್ಯೋಗ ಅವಕಾಶ: ಆದೇಶ ಹಿಂಪಡೆದ ಕೋರ್ಟ್!

By Suvarna NewsFirst Published Jan 2, 2020, 4:44 PM IST
Highlights

ಹೊರಗಿನವರಿಗೆ ಉದ್ಯೋಗ: ವಿವಾದದ ಬಳಿಕ ಹಿಂದೆ ಸರಿದ ಜಮ್ಮು ಹೈ ಕೋರ್ಟ್‌| ಹೊರಗಿನವರಿಗಿಲ್ಲ ಅವಕಾಶ

ಜಮ್ಮು[ಜ.02]: ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ 33 ನಾನ್‌ ಗೆಜೆಟೆಡ್‌ ಹುದ್ದೆಗಳಿಗೆ ದೇಶಾದ್ಯಂತ ಅರ್ಜಿ ಆಹ್ವಾನಿಸಿದ್ದ ಜಾಹೀರಾತು ವಿರೋಧಕ್ಕೆ ಕಾರಣವಾಗುತ್ತಿದ್ದಂತೆ ಜಮ್ಮು ಕಾಶ್ಮೀರ ಹೈಕೋರ್ಟ್‌ ತಾನು ನೀಡಿದ್ದ ಜಾಹೀರಾತು ಹಿಂಪಡೆದಿದೆ. ಇದರಿಂದ ಸ್ಥಳೀಯರ ಉದ್ಯೋಗಕ್ಕೆ ಕುತ್ತು ಉಂಟಾಗುತ್ತದೆ ಎಂದು ಬಿಜೆಪಿ ಸಹಿತ ಹಲವು ಪಕ್ಷಗಳು ವಿರೋಧಿಸಿದ್ದವು.

ವಿರೋಧ ಹೆಚ್ಚಾಗುತ್ತಿದ್ದಂತೆ ಜಾಹೀರಾತನ್ನು ಹೈ ಕೋರ್ಟ್‌ ವಾಪಸ್‌ ಪಡೆದಿದ್ದು, 2019 ಡಿ.26ರಂದು ವಿವಿಧ ನಾನ್‌ ಗೆಜೆಟೆಡ್‌ ಹುದ್ದೆಗೆ ಆಹ್ವಾನಿಸಲಾಗಿದ್ದ ಅರ್ಜಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಅಧಿಸೂಚನೆ ಹೊರಡಿಸಿದೆ.

ಕಾಶ್ಮೀರದ ಸರ್ಕಾರಿ ಹುದ್ದೆಗೆ ಅರ್ಜಿ: ಎಲ್ಲರಿಗೂ ಅವಕಾಶ!

ಏನಿದು ವಿವಾದ?

ಜಮ್ಮು-ಕಾಶ್ಮೀರ ಹೈಕೋರ್ಟ್‌ನಲ್ಲಿ ಖಾಲಿಯಿರುವ ಗೆಜೆಟೆಡೇತರ 33 ಹುದ್ದೆಗಳ ಭರ್ತಿಗೆ ದೇಶಾದ್ಯಂತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಾಗೂ ದೇಶದ ಇತರೆ ಭಾಗದವರು ಕಾಶ್ಮೀರದಲ್ಲಿ ಆಸ್ತಿ ಖರೀದಿಸದಂತೆ ನಿರ್ಬಂಧಿಸಿದ್ದ ಸಂವಿಧಾನದ 370ನೇ ವಿಧಿ ಹಾಗೂ ಪರಿಚ್ಛೇದ 35(ಎ)ವನ್ನು ರದ್ದುಗೊಳಿಸಲಾದ ಬಳಿಕ ಮೊದಲ ಬಾರಿಗೆ, ದೇಶಾದ್ಯಂತ ಇರುವ ಎಲ್ಲಾ ಪ್ರಜೆಗಳು ಕಾಶ್ಮೀರದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಿತ್ತು.

ಹೈಕೋರ್ಟ್‌ ಹೊರಡಿಸಿದ ಅಧಿಸೂಚನೆ ಪ್ರಕಾರ ಖಾಲಿಯಿರುವ 33 ಹುದ್ದೆಗಳ ಪೈಕಿ 17 ಸ್ಥಾನಗಳಿಗೆ ಮೆರಿಟ್‌ ಆಧಾರದಲ್ಲಿ ದೇಶದ ಯಾವುದೇ ಭಾಗದ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಬಹುದಿತ್ತು. ಉಳಿದ 16 ಸ್ಥಾನಗಳಿಗೆ ಮೀಸಲಾತಿ ಇತ್ತು.

click me!