ನವದೆಹಲಿ(ನ.19); ಕಳೆದೊಂದು ವರ್ಷದಿಂದ ಸತತ ಹೋರಾಟ, ವಿಪಕ್ಷಗಳ ಆಗ್ರಹ, ಪ್ರತಿಭಟನೆ, ಬಂದ್, ರ್ಯಾಲಿ ಸೇರಿ ಹಲವು ರೀತಿಯ ರೈತರ ಪ್ರತಿಭಟನೆಗೆ ಜಗ್ಗದ ಕೇಂದ್ರ ಸರ್ಕಾರ ಇದೀಗ ದಿಢೀರ್ ಮೂರು ಕೃಷಿ ಮಸೂದೆಯನ್ನು(repeal of 3 farm laws) ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದು ರೈತರಿಗೆ, ವಿಪಕ್ಷಗಳಿಗೆ ಸಂದ ಜಯ ಎಂದೇ ಬಿಂಬಿಸಲಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಜಮ್ಮು ಮತ್ತು ಕಾಶ್ಮೀರದಿಂದ ಮತ್ತೊಂದು ಕೂಗೂ ಎದ್ದಿದೆ. ರದ್ದು ಮಾಡಿರುವ ಆರ್ಟಿಕಲ್ 370(Article 370) ಸ್ಥಾನಮಾನ ಮರುಸ್ಥಾಪಿಸಲು ಆಗ್ರಹ ಹೆಚ್ಚಾಗಿದೆ.
ಜಮ್ಮು ಮತ್ತು ಕಾಶ್ಮೀರ ನಾಯಕರಾದ ಮೆಹಬೂಬಾ ಮುಫ್ತಿ, ಫಾರುಖ್ ಅಬ್ದುಲ್ಲಾ ಸೇರಿದಂತೆ ಹಲವರು ಕಣಿವೆ ರಾಜ್ಯದಲ್ಲಿ(Jammu and Kashmir) ಆರ್ಟಿಕಲ್ 370 ಮರುಸ್ಥಾಪಿಸಲು ಮೋದಿಯನ್ನು(PM Narendra Modi) ಆಗ್ರಹಿಸಿದ್ದಾರೆ. ಕೃಷಿ ಮಸೂದೆ ಹಿಂಪಡೆದ ರೀತಿಯಲ್ಲೇ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಒತ್ತಾಯಿಸಿದ್ದಾರೆ.
undefined
ಸಾವರ್ಕರ್ ಮಾದರಿಯಲ್ಲಿ ಕ್ಷಮೆ ಕೇಳಿದ್ದಾರೆ: ಕೃಷಿ ಕಾಯ್ದೆ ಹಿಂಪಡೆದಿದ್ದಕ್ಕೆ ಹೀಗಿತ್ತು ನೆಟ್ಟಿಗರ ರಿಯಾಕ್ಷನ್!
ಈ ಕುರಿತು ಟ್ವೀಟ್ ಮಾಡಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಇದು ಚುನಾವಣೆ ಸೋಲು, ಮತದಾರರ ಒಲೈಕೆಯ ನಿರ್ಧಾರವಾಗಿದೆ ಎಂದಿದ್ದಾರೆ. ಕೃಷಿ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಹಾಗೂ ಕ್ಷಮೆಯಾಚನೆ ಸ್ವಾಗತಾರ್ಹ ನಿರ್ಧಾರವಾಗಿದೆ. ಚುನಾವಣೆಯಲ್ಲಿ ಸೋಲಿನ ಭಯದಿಂದ ಈ ನಿರ್ಧಾರ ತೆಗೆದುಕೊಂಡಿದೆ. ವಿಪರ್ಯಾಸವೆಂದರೆ ಇದೀಗ ದೇಶದ ಇತರ ಭಾಗದ ಜನರನ್ನು ಒಲೈಸುವ ತಂತ್ರಕ್ಕೆ ಬಿಜೆಪಿ(BJP) ಇಳಿಯಬೇಕಿದೆ. ಅದರಲ್ಲೂ ಜಮ್ಮು ಮತ್ತು ಕಾಶ್ಮೀರದ ಜನರನ್ನು ಅವಮಾನಿಸುವುದು ಹಾಗೂ ಶಿಕ್ಷಿಸುವುದು ಬಿಜೆಪಿ ಮತಬ್ಯಾಂಕ್ ತೃಪ್ತಿಪಡಿಸುತ್ತದೆ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
ಕೇವಲ ಟ್ವೀಟ್ ಮಾಡಿ ಮುಫ್ತಿ ಸುಮ್ಮನಾಗಿಲ್ಲ. ಕೇಂದ್ರದ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನ ಮರುಸ್ಥಾಪಿಸಲು ಇದು ಸಕಾಲ ಎಂದಿದ್ದಾರೆ. ಇತ್ತ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಮುಖ್ಯಸ್ಥ ಫಾರುಖ್ ಅಬ್ದುಲ್ಲಾ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂಪಡೆದಿದ್ದಾರೆ. ಅದೇ ರೀತಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ರದ್ದು ಮಾಡಿರುವ ಆರ್ಟಿಕಲ್ 370 ಹಾಗೂ 35A ಪುನರ್‌ಸ್ಥಾಪಿಸಬೇಕು ಎಂದು ಅಬ್ದುಲ್ಲಾ ಹೇಳಿದ್ದಾರೆ.
ನರೇಂದ್ರ ಮೋದಿ ಕೃಷಿ ಮಸೂದೆ ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ಅಧಿಕಾರಕ್ಕೇರಲು ಹಲವು ಘೋಷಣೆ, ಭರವಸೆ ನೀಡಿದ್ದಾರೆ. ಅದು ಯಾವುದನ್ನು ಈಡೇರಿಸಿಲ್ಲ. ಹೀಗಾಗಿ ರೈತರು ಪ್ರತಿಭಟನೆ ಮುಂದುವರಿಸಬೇಕು. ಸಂಸತ್ತಿನಲ್ಲಿ ಕೃಷಿ ಮಸೂದೆಯನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರಿಸಬೇಕು ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
Farmer Laws: 'ದೇಶದ ಮಣ್ಣಿನ ಮಕ್ಕಳ ಅಭೂತಪೂರ್ವ ಹೋರಾಟಕ್ಕೆ ಸಿಕ್ಕ ಜಯ'
ರೈತರು, ಆರ್ಥಿಕತ ತಜ್ಞರು, ಕೃಷಿ ತಜ್ಞರ ಸಲಹೆಯಂತೆ ನಾವು ಕೃಷಿ ಮಸೂದೆಯನ್ನು ಜಾರಿಗೆ ತಂದೆವು. ಇದರಿಂದ ಸಣ್ಣ ರೈತರಿಗೂ ನೆರವಾಗಲಿದೆ. ಆದರೆ ನಾವು ರೈತರಿಗೆ ಅರ್ಥಮಾಡಿಸುವಲ್ಲಿ, ಮನ ಒಲಿಸುವಲ್ಲಿ ಸೋತಿದ್ದೇವೆ. ಹೀಗಾಗಿ ಕೃಷಿ ಮಸೂದೆಯನ್ನು ಹಿಂಪಡೆಯುತ್ತಿದ್ದೇವೆ. ಪ್ರತಿಭಟನೆ ನಿರತ ರೈತರು ಪ್ರತಿಭಟನೆ ನಿಲ್ಲಿಸಿ ಮನೆಗೆ ತೆರಳಬೇಕು. ಮಸೂದೆ ಹಿಂಪಡೆಯುವ ಕಾನೂನು ಪ್ರಕ್ರಿಯೆಗಳು ಚಳಿಗಾಲದ ಅಧಿವೇಶನದಲ್ಲಿ ನಡೆಯಲಿದೆ. ಚಳಿಗಾಲದ ಅಧಿವೇಶನ ನವೆಂಬರ್ 29 ರಿಂದ ಆರಂಭವಾಗಲಿದೆ ಎಂದು ಮೋದಿ ಹೇಳಿದ್ದಾರೆ.