
ನವದೆಹಲಿ(ಮಾ.22): 3 ದಶಕಗಳಿಂದ ಕುಟುಂಬಸ್ಥರಿಂದ ದೂರಾಗಿ, ಉತ್ತರಾಖಂಡದ ಚಲ್ಟಿಗ್ರಾಮದಲ್ಲಿ ಅನಾಥರಾಗಿದ್ದ ಕರ್ನಾಟಕದ 70 ವರ್ಷದ ವಯೋವೃದ್ಧ ಕೆಂಚಪ್ಪ ಅವರನ್ನು ಕುಟುಂಬಸ್ಥರೊಂದಿಗೆ ಮರಳಿ ಸೇರಿಸಿ, ಮಾನವೀಯತೆ ಮೆರೆದ ಮೂವರು ಕನ್ನಡಿಗ ಯೋಧರಿಗೆ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ ಅತ್ಯುನ್ನತ ಮಟ್ಟದ ಸನ್ಮಾನ ಮಾಡಿ ಗೌರವಿಸಿದೆ.
ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯ 36ನೇ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರೇಮಾನಂದ ಪೈ, ಶರಣ ಬಸವ ಮತ್ತು ರಿಯಾಜ್ ಸುಂಕದ್ ಮಾನವೀಯತೆ ಮೆರೆದ ಯೋಧರು. ಈ ಯೋಧರಿಗೆ ಡೈರೆಕ್ಟರ್ ಜನರಲ್ ಕಮೆಂಡೇಶನ್‌ಗೆ ಪದೋನ್ನತಿ ಹಾಗೂ ವಿಶಿಷ್ಟಚಿಹ್ನೆಯ ಬೆಳ್ಳಿಯ ಪದಕಗಳನ್ನು ನೀಡಿ ಸೇನೆ ಗೌರವಿಸಿದೆ.
ಧಾರವಾಡ ವಡ್ಡರ ಓಣಿ ನಿವಾಸಿ ಕೆಂಚಪ್ಪ ಗೋವಿಂದಪ್ಪ ಅವರು 1991ರಲ್ಲಿ ಉದ್ಯೋಗ ಅರಸಿ ರೈಲು ಹತ್ತಿದ್ದರು. ಅನಕ್ಷರಸ್ಥರಾಗಿದ್ದ ಅವರು ಗೊತ್ತು ಗುರಿ ಇಲ್ಲದೆ ಮಹಾರಾಷ್ಟ್ರ ತಲುಪಿ, ಅಲ್ಲಿಂದ ಉತ್ತರಾಖಂಡದ ಚಲ್ಟಿಗೆ ತೆರಳಿ ಅಲ್ಲಿನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದ ಕಾರಣ ಯಾರ ಸಂಪರ್ಕವೂ ಇರಲಿಲ್ಲ. ಹೋಟೆಲ್‌ನಲ್ಲಿ ಕೆಲಸ ಮಾಡಿ ರಾತ್ರಿ ಕೊರೆಯುವ ಚಳಿಯಲ್ಲೂ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದರು. ಅನಾಥ ಭಾವನೆಯಿಂದ ಮಾನಸಿಕವಾಗಿ ಜರ್ಜರಿತರಾಗಿದ್ದರು.
ಒಮ್ಮೆ ಹೋಟೆಲ್‌ಗೆ ಬಂದ ಈ ಮೂವರು ಯೋಧರು ಕನ್ನಡ ಮಾತನಾಡಿದ್ದನ್ನು ಕಂಡು ಕೆಂಚಪ್ಪ ಅವರು ಪರಿಚಯ ಮಾಡಿಕೊಂಡರು. ಬಳಿಕ ಕೆಂಚಪ್ಪ ಅವರ ದಯನೀಯ ಸ್ಥಿತಿ ಕಂಡು ವಿಡಿಯೋ ಮಾಡಿದ ಯೋಧರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಮೂಲಕ ಕುಟುಂಬಸ್ಥರನ್ನು ಪತ್ತೆ ಮಾಡಿ, ಕಳೆದ ಫೆಬ್ರವರಿಯಲ್ಲಿ ಚಲ್ಟಿಯಿಂದ ಧಾರವಾಡಕ್ಕೆ ಕೆಂಚಪ್ಪ ಅವರನ್ನು ಕರೆತಂದು ಕುಟುಂಬದವರೊಂದಿಗೆ ಸೇರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ