ಭಾರತ ಸೇನೆ ನಂ.4 ಶಕ್ತಿಶಾಲಿ: ಜಗತ್ತಿನಲ್ಲಿ ಈಗ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಧ್ಯತೆ!

By Suvarna NewsFirst Published Mar 22, 2021, 9:57 AM IST
Highlights

ಭಾರತ ಸೇನೆ ನಂ.4 ಶಕ್ತಿಶಾಲಿ!| ಮಿಲಿಟರಿ ಬಲ| ಚೀನಾ, ಅಮೆರಿಕ, ರಷ್ಯಾ ಸೇನೆಗಳಿಗೆ ಮೊದಲ ಮೂರು ಸ್ಥಾನ: ಮಿಲಿಟರಿ ಡೈರೆಕ್ಟ್ ರಾರ‍ಯಂಕ್‌| ಜಗತ್ತಿನಲ್ಲಿ ಈಗ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಧ್ಯತೆ ಹೆಚ್ಚು| ಆಗಸದಲ್ಲಿ ಅಮೆರಿಕ ಪ್ರಬಲ

ನವದೆಹಲಿ(ಮಾ.22): ಭಾರತೀಯ ಸೇನೆ ವಿಶ್ವದ ಅತ್ಯಂತ ಪ್ರಬಲ ಸೇನೆಗಳ ಪೈಕಿ 4ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ತಿಳಿಸಿದೆ. ಮಿಲಿಟರಿ ಡೈರೆಕ್ಟ್ ಎಂಬ ವೆಬ್‌ಸೈಟ್‌ ಬಿಡುಗಡೆ ಮಾಡಿರುವ ವರದಿ ಅನ್ವಯ ಚೀನಾ, ಅಮೆರಿಕ ಮತ್ತು ರಷ್ಯಾ ದೇಶಗಳು ಮೊದಲು ಮೂರು ಸ್ಥಾನದಲ್ಲಿವೆ.

ವಿವಿಧ ದೇಶಗಳ ಮಿಲಿಟರಿ ಬಜೆಟ್‌, ಸಕ್ರಿಯ ಮತ್ತು ಮೀಸಲು ಸೇನಾ ಸಿಬ್ಬಂದಿ, ಭೂ, ವಾಯು, ಜಲ ಯುದ್ಧ ಸಂಪನ್ಮೂಲ, ಸರಾಸರಿ ವೇತನ ಮತ್ತು ಯುದ್ಧ ಸಾಮಗ್ರಿಗಳನ್ನು ಲೆಕ್ಕಹಾಕಿ ಈ ವರದಿ ಸಿದ್ಧಪಡಿಸಲಾಗಿದೆ. ಅದರನ್ವಯ 100ಕ್ಕೆ 82 ಅಂಕ ಪಡೆದ ಚೀನಾ ನಂ.1, 74 ಅಂಕ ಪಡೆದ ಅಮೆರಿಕ ನಂ.2, 69 ಅಂಕ ಪಡೆದ ರಷ್ಯಾ ನಂ.3, 61 ಅಂಕ ಪಡೆದ ಭಾರತ ನಂ.4, 58 ಅಂಕ ಪಡೆದ ಫ್ರಾನ್ಸ್‌ ನಂ.5ನೇ ಸ್ಥಾನದಲ್ಲಿವೆ.

ಯುದ್ಧ ನಡೆದರೆ ಯಾರಿಗೆ ಜಯ:

ಬಜೆಟ್‌ ಮೊತ್ತ, ನೌಕಾಪಡೆ ಬಲ, ಸಕ್ರಿಯ ಯೋಧರ ಸಂಖ್ಯೆಯನ್ನು ಲೆಕ್ಕಹಾಕಿದಾಗ ಒಂದು ವೇಳೆ ಈಗ ಜಗತ್ತಿನಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಕೇವಲ ಭೂಮಿಯ ಮೇಲೆ ಯುದ್ಧ ನಡೆದರೆ ರಷ್ಯಾ ಗೆಲುವು ಸಾಧಿಸುವ, ಆಗಸದಲ್ಲಿ ನಡೆದರೆ ಅಮೆರಿಕ ಗೆಲುವು ಸಾಧಿಸುವ, ಸಮುದ್ರದಲ್ಲಿ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ವರದಿ ತಿಳಿಸಿದೆ.

ಯೋಧರಿಗೆ ವೇತನ:

ಯೋಧರಿಗೆ ಉತ್ತಮ ವೇತನ ನೀಡುವಲ್ಲಿ ಕೆನಡಾ, ಫ್ರಾನ್ಸ್‌, ಬ್ರಿಟನ್‌ ಮೊದಲ 3 ಸ್ಥಾನದಲ್ಲಿದರೆ ಭಾರತ 11ನೇ ಸ್ಥಾನದಲ್ಲಿದೆ.

ಶಕ್ತಿಶಾಲಿ ಯೋಧರು:

ಯೋಧರು ಶಸ್ತ್ರಾಸ್ತ್ರ ಹೊತ್ತಯ್ಯಬಲ್ಲ ಸಾಮರ್ಥ್ಯ ಆಧರಿಸಿ ಶಕ್ತಿಶಾಲಿ ಯೋಧರ ಪಟ್ಟಿತಯಾರಿಸಲಾಗಿದ್ದು, ರಷ್ಯಾ (70 ಕೆಜಿ), ಬ್ರಿಟನ್‌ (64 ಕೆಜಿ), ಅಮೆರಿಕ (45 ಕೆಜಿ) ಮೊದಲು 3ಸ್ಥಾನ ಪಡೆದಿವೆ. ಭಾರತೀಯ ಯೋಧರಿಗೆ 8ನೇ ಸ್ಥಾನ ಸಿಕ್ಕಿದೆ (40 ಕೆ.ಜಿ).

ಏನು ಕಾರಣ?

ಅಮೆರಿಕದ ಬಳಿ 14141 ಯುದ್ಧ ವಿಮಾನ, ಶಸ್ತ್ರಾಸ್ತ್ರಗಳಿದ್ದರೆ, ರಷ್ಯಾ ಬಳಿ 4682, ಚೀನಾ ಬಳಿ 3587, ಭಾರತದ ಬಳಿ 2156 ಇವೆ. ರಷ್ಯಾ ಬಳಿ ಭೂಮಿ ಮೇಲೆ ಚಲಾಯಿಸಬಲ್ಲ 54866 ಯುದ್ಧ ವಾಹನ, ಶಸ್ತ್ರಾಸ್ತ್ರಗಳಿದ್ದರೆ, ಅಮೆರಿಕದ ಬಳಿ 50326, ಚೀನಾದ ಬಳಿ 41641, ಭಾರತದ ಬಳಿ 9255 ಇವೆ. ಚೀನಾ ಬಳಿ 406 ಯುದ್ಧನೌಕೆ, ರಷ್ಯಾ ಬಳಿ 278, ಅಮೆರಿಕ ಮತ್ತು ಭಾರತದ ಬಳಿ ತಲಾ 202 ಯುದ್ಧ ನೌಕೆಗಳಿವೆ. ರಷ್ಯಾದ ಬಳಿ 6375, ಅಮೆರಿಕದ ಬಳಿ 5800, ಚೀನಾ ಬಳಿ 320, ಭಾರತದ ಬಳಿ 150 ಅಣ್ವಸ್ತ್ರಗಳಿವೆ.

ಯಾರ ವರದಿ?

ಮಿಲಿಟರಿ ಡೈರೆಕ್ಟ್ ಎಂಬ ವೆಬ್‌ಸೈಟ್‌ ಬಿಡುಗಡೆ ಮಾಡಿರುವ ವರದಿಯಿದು. ಇದು ನಾನಾ ದೇಶಗಳ ಸೇನಾ ಸಾಮರ್ಥ್ಯದ ಮೇಲೆ ಕಣ್ಣಿಡುವ ಸಂಸ್ಥೆಯಾಗಿದೆ.

ಯಾರ ಮಿಲಿಟರಿ ಬಜೆಟ್‌ ಎಷ್ಟು?

ವೆಬ್‌ಸೈಟ್‌ ವರದಿ ಅನ್ವಯ ಅಮೆರಿಕದ ವಾರ್ಷಿಕ ರಕ್ಷಣಾ ಬಜೆಟ್‌ 54 ಲಕ್ಷ ಕೋಟಿ ರು., ಚೀನಾದ್ದು 19 ಲಕ್ಷ ಕೋಟಿ ರು., ರಷ್ಯಾದ್ದು 4.75 ಲಕ್ಷ ಕೋಟಿ ರು. ಮತ್ತು ಭಾರತದ್ದು 5 ಲಕ್ಷ ಕೋಟಿ ರು.ನಷ್ಟಿದೆ.

ಎಲ್ಲಿ ಯುದ್ಧ ನಡೆದರೆ ಯಾರಿಗೆ ಜಯ?

ಭೂಮಿ: ರಷ್ಯಾ

ಸಮುದ್ರ: ಚೀನಾ

ಆಕಾಶ: ಅಮೆರಿಕ

ಮಿಲಿಟರಿ ಬಲ

ದೇಶ ಬಜೆಟ್‌ ಭೂ ನೌಕಾ ವಾಯು ಅಣ್ವಸ್ತ್ರ

ಚೀನಾ 19 ಲಕ್ಷ ಕೋಟಿ ರು. 41641 406 3587 320

ಅಮೆರಿಕ 54 ಲಕ್ಷ ಕೋಟಿ ರು. 50326 202 14141 5800

ರಷ್ಯಾ 4.7 ಲಕ್ಷ ಕೋಟಿ ರು. 54866 278 4682 6375

ಭಾರತ 5 ಲಕ್ಷ ಕೋಟಿ ರು. 9255 202 2156 150

click me!