* ಧ್ವಂಸಗೊಳಿಸಿದ ದೇವಾಲಯ ಮರಳಿ ಪಡೆದುಕೊಳ್ಳುವ ಸಮಯ
* ಬಾಬ್ರಿ ರೀತಿ ಗ್ಯಾನವಾಪಿ ಮಸೀದಿ ಕೂಡ ಧ್ವಂಸ: ಬಿಜೆಪಿ ಶಾಸಕ ಎಚ್ಚರಿಕೆ
ಲಖನೌ(ಮೇ.11): ಬಾಬ್ರಿ ಮಸೀದಿಯ ರೀತಿಯಲ್ಲೇ ಗ್ಯಾನವಾಪಿ ಮಸೀದಿಯನ್ನು ಕೂಡಾ ಧ್ವಂಸ ಮಾಡುವುದಾಗಿ ಉತ್ತರ ಪ್ರದೇಶದ ವಿವಾದಿತ ಮಾಜಿ ಬಿಜೆಪಿ ಶಾಸಕ ಸಂಗೀತ್ ಸೋಮ್ ಎಚ್ಚರಿಕೆ ನೀಡಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ ಜನರು 1992ರಲ್ಲಿ ನಡೆದಿದ್ದನ್ನು (ಬಾಬ್ರಿ ಮಸೀದಿ ಧ್ವಂಸವಾದ ಘಟನೆಯನ್ನು) ನೆನಪಿಸಿಕೊಳ್ಳಬೇಕು. ಅದು 1992ರಲ್ಲಿ ನಡೆದಿದ್ದು, ಈಗ 2022, ಇಂದು ಯುವ ಸಮುದಾಯದ ಶಕ್ತಿಯು ದ್ವಿಗುಣವಾಗಿದೆ. ಇದೇ ಮಾದರಿಯ ಇನ್ನೊಂದು ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ’ ಎಂದು ಹೇಳಿದ್ದಾರೆ.
ಅಲ್ಲದೇ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿಯೂ ಕೂಡಾ ‘ಔರಂಗಜೇಬ್ ಗ್ಯಾನವಾಪಿ ಮಸೀದಿ ನಿರ್ಮಿಸಿದ್ದರು. 1992 ರ ಬಾಬ್ರಿ ನಂತರ ಈಗ 2022ರಲ್ಲಿ ಗ್ಯಾನವಾಪಿ ಸರದಿ ಬಂದಿದೆ. ಇದು ಮಸೀದಿಗಳನ್ನು ಕಟ್ಟಲು ಧ್ವಂಸಗೊಳಿಸಿದ ದೇವಾಲಯವನ್ನು ಮರಳಿ ಪಡೆದುಕೊಳ್ಳುವ ಸಮಯ’ ಎಂದು ಪೋಸ್ಟ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕಿಡಿಕಾರಿದ ಕಾಂಗ್ರೆಸ್ ವಕ್ತಾರ ಸುರೇಂದ್ರ ರಾಜಪೂತ್, ‘ದೇಶದಲ್ಲಿ ಗಲಭೆ ಸೃಷ್ಟಿಸಿ, ಸಮಾಜವನ್ನು ಧರ್ಮಾಧಾರಿತವಾಗಿ ವಿಭಜನೆ ಮಾಡುವುದು ಬಿಜೆಪಿಯ ಗೇಮ್‌ಪ್ಲಾನ್ ಆಗಿದೆ. ಇಂತಹ ಹೇಳಿಕೆ ಮೂಲಕ ಸಾಮಾಜಿಕ ಶಾಂತಿಗೆ ಆಗುವ ಧಕ್ಕೆಯ ಬಗ್ಗೆ ಬಿಜೆಪಿ ಗಮನ ಹರಿಸಬೇಕು. ಗ್ಯಾನಪಾವಿಯಂತೇ ತಾಜ್‌ಮಹಲ್ ವಿಚಾರವನ್ನು ಎತ್ತಲಾಗುತ್ತದೆ. ನಾವು ಅಪಾಯಕಾರಿ ಸಮಯದತ್ತ ಸಾಗುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಗ್ಯಾನವಾಪಿ ಮಸೀದಿ ಗೋಡೆ ಮೇಲೆ ‘ಸ್ವಸ್ತಿಕ್’ ಚಿಹ್ನೆ
ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಂತೆ ಇರುವ ಗ್ಯಾನವಾಪಿ ಮಸೀದಿ- ಶೃಂಗಾರ್ ಗೌರಿ ದೇಗುಲದ ಆವರಣದ ಗೋಡೆಯ ಮೇಲೆ 2 ಸ್ವಸ್ತಿಕ್ ಚಿಹ್ನೆಗಳು ಪತ್ತೆಯಾಗಿವೆ. ಇದರೊಂದಿಗೆ ಈಗ ಗ್ಯಾನ್‌ವಾಪಿ ಮಸೀದಿಯಾಗಿರುವ ಸ್ಥಳವು ಶತಮಾನಗಳ ಹಿಂದೆ ಹಿಂದೂ ದೇಗುಲವಾಗಿತ್ತು ಎಂಬುದಕ್ಕೆ ಮತ್ತಷ್ಟುಸಾಕ್ಷ್ಯಗಳು ಲಭಿಸಿದಂತಾಗಿದೆ ಎಂಬ ವಾದಗಳು ಕೇಳಿಬಂದಿವೆ.
ಕೋರ್ಚ್ ಸೂಚನೆ ಅನ್ವಯ ಮಸೀದಿ ಒಳಗೆ ಮತ್ತು ಹೊರಭಾಗದ ವಿಡಿಯೋ ಚಿತ್ರೀಕರಣಕ್ಕೆ ಆಗಮಿಸಿದ್ದ ತಜ್ಞರ ತಂಡದ ಸದಸ್ಯರೊಬ್ಬರು, ಈ ಸ್ವಸ್ತಿಕ್ ಚಿಹ್ನೆಗಳು ಕಂಡುಬಂದಿದೆ ಎಂದು ಹೇಳಿದ್ದಾರೆ. ಸ್ವಸ್ತಿಕ್ ಎಂಬು ಶುಭ ಚಿಹ್ನೆಯಾಗಿದ್ದು, ನೂರಾರು ಶತಮಾನಗಳ ಹಿಂದಿನಿಂದಲೂ ಈ ಚಿಹ್ನೆಯನ್ನು ಹಿಂದೂಗಳು, ಬೌದ್ಧರು ಮತ್ತು ಜೈನರು ಶುಭ ಸಂಕೇತವಾಗಿ ಬಳಸುತ್ತಿದ್ದರು.
ದೇಗುಲದ ಒಳಭಾಗದ ಗೋಡೆಯ ಮೇಲೆ ಗಣೇಶ ಸೇರಿ ಹಲವು ದೇವರನ್ನು ಕೆತ್ತಲಾಗಿದ್ದು, ನಿತ್ಯವೂ ಅದರ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ದೆಹಲಿ ಮೂಲದ ಕೆಲ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದೇವರ ಚಿತ್ರ ಇರುವುದನ್ನು ಖಚಿತಪಡಿಸಿಕೊಳ್ಳಲು ದೇಗುಲದ ಒಳಗೆ ಮತ್ತು ಹೊರಗೆ ಚಿತ್ರೀಕರಣ ಮಾಡುವಂತೆ ಕೋರ್ಚ್ ಸೂಚಿಸಿತ್ತು. ಆದರೆ ಚಿತ್ರೀಕರಣಕ್ಕೆ ತೆರಳಿದ್ದ ತಂಡಕ್ಕೆ ಮಸೀದಿ ಆಡಳಿತ ಮಂಡಳಿ ಸತತ 2 ದಿನಗಳ ಕಾಲ ಅಡ್ಡಿ ಮಾಡಿದೆ. ಜೊತೆಗೆ ಚಿತ್ರೀಕರಣಕ್ಕೆ ರಚಿಸಲಾದ ತಜ್ಞರ ಸಮಿತಿ ಬದಲಾವಣೆ ಕೋರಿ ಆಡಳಿತ ಮಂಡಳಿ ಕೋರ್ಚ್ ಮೊರೆ ಹೋಗಿದೆ. ಈ ಬಗ್ಗೆ ಕೋರ್ಚ್ ತೀರ್ಪಿನ ಬಳಿಕ ಮಸೀದಿಗೆ ಒಳಗೆ ವಿಡಿಯೋ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ.
ಈಗ ಗ್ಯಾನವಾಪಿ ಮಸೀದಿ ಆಗಿರುವ ಜಾಗ ಹಿಂದೆ ಕಾಶಿ ವಿಶ್ವನಾಥ ದೇಗುಲದ ಭಾಗವಾಗಿತ್ತು. 1669ರಲ್ಲಿ ಮೊಗಲ್ ದೊರೆ ಔರಂಗಾಜೇಬ್ ಅದನ್ನು ನಾಶಪಡಿಸಿ ಮಸೀದಿ ನಿರ್ಮಿಸಿದ ಎಂದ ಹಲವು ಸರ್ಕಾರಿ ದಾಖಲೆಗಳು ಹೇಳಿವೆ.