‘ಶಾಂತಿ ಭಂಗ ಮಾಡೋರು ಹಿಂದೂಗಳಷ್ಟೇ, ಮುಸ್ಲಿಮರಲ್ಲ’| ಅಯೋಧ್ಯೆ ಕೇಸಿನ ಮುಸ್ಲಿಂ ಪರ ವಕೀಲ ಧವನ್ ವಿವಾದಿತ ಹೇಳಿಕೆ| ನಾನು ಹೇಳಿದ್ದು ಹಿಂದೂಗಳ ಬಗ್ಗೆ ಅಲ್ಲ, ಆರೆಸ್ಸೆಸ್ ಬಗ್ಗೆ: ಧವನ್ ಸ್ಪಷ್ಟನೆ
ನವದೆಹಲಿ[ನ.28]: ‘ದೇಶದಲ್ಲಿ ಶಾಂತಿ ಭಂಗ ಮಾಡುವವರು ಹಿಂದೂಗಳು ಮಾತ್ರ. ಮುಸ್ಲಿಮರು ಅಲ್ಲ’ ಎಂದು ಅಯೋಧ್ಯೆ ಪ್ರಕರಣದಲ್ಲಿ ಮುಸ್ಲಿಂ ದಾವೆದಾರರ ಪರ ವಕೀಲರಾಗಿದ್ದ ರಾಜೀವ್ ಧವನ್ ಅವರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ವಿವಾದ ಸೃಷ್ಟಿಯಾದ ಕೂಡಲೇ ಸ್ಪಷ್ಟನೆ ನೀಡಿರುವ ಅವರು, ‘ನಾನು ಹಿಂದೂ ಎಂಬ ಪದ ಬಳಸಿದ್ದು ಆರೆಸ್ಸೆಸ್ ಎಂಬ ಅರ್ಥದಲ್ಲಿ. ಇಡೀ ಹಿಂದೂ ಧರ್ಮದ ಬಗ್ಗೆ ಅಲ್ಲ’ ಎಂದು ಹೇಳಿದ್ದಾರೆ.
ಟೀವಿ ಚಾನೆಲ್ ಒಂದರ ಜತೆ ಮಾತನಾಡಿದ ಧವನ್, ‘ಮುಸ್ಲಿಮರು ಈ ದೇಶದ ಶಾಂತಿ ಭಂಗಕ್ಕೆ ಯಾವತ್ತೂ ಜವಾಬ್ದಾರರಲ್ಲ. ಕೇವಲ ಹಿಂದುಗಳು ಆ ಕೆಲಸ ಮಾಡುತ್ತಾರೆ. ಮುಸ್ಲಿಮರಿಗೆ ಅಯೋಧ್ಯೆ ವಿಷಯದಲ್ಲಿ ಅನ್ಯಾಯವಾಗಿದ್ದರೂ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ನೀಡಲಾಗುವ ಪರ್ಯಾಯ ಜಮೀನನ್ನು ಮುಸ್ಲಿಮರು ಸ್ವೀಕರಿಸಬಾರದು’ ಎಂದರು.
ಹಿಂದೂಗಳ ಬಗ್ಗೆ ತಾವು ಆಡಿದ ಮಾತುಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಧವನ್ ಅವರು, ‘ಹಿಂದೂ ಎಂದು ಹೇಳಿರುವುದು ಆರೆಸ್ಸೆಸ್ ಎಂಬ ಅರ್ಥದಲ್ಲಿ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಬಾಬ್ರಿ ಮಸೀದಿ ವಿಚಾರದಲ್ಲಿ ನಾನು ಮಾತನಾಡುವಾಗ ಆ ಮಾತು ಹೇಳಿದ್ದೆ. ಬಾಬ್ರಿ ಕೆಡವಿದವರು ಹಿಂದೂ ತಾಲಿಬಾನಿಗಳು ಎಂದೂ ಹೇಳಿದ್ದೆ. ನಾನು ಮಾತನಾಡಿದ್ದು ಸಂಘ ಪರಿವಾರದ ಒಂದು ವರ್ಗದ ಬಗ್ಗೆ. ಆ ವರ್ಗ ಯಾವತ್ತೂ ಹಿಂಸೆ, ಥಳಿತ, ಮಸೀದಿ ಒಡೆತ ಹಾಗೂ ಹತ್ಯೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದೆ’ ಎಂದು ಹೇಳಿದರು.