
ಬೆಂಗಳೂರು : ಮಾನವರನ್ನು ಮೊದಲ ಬಾರಿ ಬಾಹ್ಯಾಕಾಶಕ್ಕೆ ಕಳಿಸುವ ಇಸ್ರೋದ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಯ ಭಾಗವಾಗಿ ಇದೇ ಮೊದಲ ಬಾರಿ ಸಂಯೋಜಿತ ಏರ್‌ಡ್ರಾಪ್ ಪರೀಕ್ಷೆ (ಐಎಡಿಟಿ-01)ಯನ್ನು ಶ್ರೀಹರಿಕೋಟಾದಲ್ಲಿ ನಡೆಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಪ್ಯಾರಾಚೂಟ್ ಆಧರಿತ ಪರೀಕ್ಷೆ ಇದಾಗಿದ್ದು, ಸಿಬ್ಬಂದಿಯ ಸುರಕ್ಷಿತ ಮರಳುವಿಕೆಗೆ ಇದು ಅಗತ್ಯವಾಗಿದೆ.
‘ಪ್ಯಾರಾಚೂಟ್ ಆಧರಿತ ವೇಗ ತಗ್ಗಿಸುವ ಪ್ರಕ್ರಿಯೆಯನ್ನು ಐಎಡಿಟಿ-01 ಮೂಲಕ ಸಂಪೂರ್ಣವಾಗಿ ಪರೀಕ್ಷಿಸಲಾಯಿತು. ಇದನ್ನು ಇಸ್ರೋ, ಭಾರತೀಯ ವಾಯುಪಡೆ, ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಡಿಆರ್‌ಡಿಒ ಒಟ್ಟಾಗಿ ನಡೆಸಿವೆ’ ಎಂದು ಇಸ್ರೋ ಹೇಳಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಎರಡನೇ ಪರೀಕ್ಷಾ ವಾಹನ ಪ್ರದರ್ಶನ ಮತ್ತು ಮಾನವರಹಿತ ಗಗನಯಾನ ಮಿಷನ್‌ಗಳನ್ನು ಕೈಗೊಳ್ಳಲಾಗುವುದು.
ಹಲವು ಮುಂದೂಡಿಕೆಗಳ ಬಳಿಕ..:
ಈ ಏರ್‌ಡ್ರಾಪ್ ಪರೀಕ್ಷೆಯನ್ನು 2024ರ ಮೇನಲ್ಲಿ ನಡೆಸಲು ನಿರ್ಧಾರವಾಗಿತ್ತು. ಆದರೆ ಇದರಲ್ಲಿ ಬಳಕೆಯಾಗಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು. ಆದ್ದರಿಂದ ಆ ಪರೀಕ್ಷೆ ಅಲ್ಲಿಗೇ ನಿಂತಿತ್ತು.
ಏನಿದು ಏರ್‌ಡ್ರಾಪ್ ಪರೀಕ್ಷೆ?:
ಗಗನಯಾನ ಮಿಷನ್ ಭಾಗವಾಗಿ ಬಾಹ್ಯಾಕಾಶಕ್ಕೆ ಹೋಗುವ ನೌಕೆಯ ಕ್ರೂ (ಸಿಬ್ಬಂದಿ ಇರುವ) ಮಾಡ್ಯೂಲ್, ಭೂಮಿಗೆ ಮರಳುವ ವೇಳೆ ಗರಿಷ್ಠ ವೇಗದಲ್ಲಿ ಬರುತ್ತಿರುತ್ತದೆ. ಅದು ಏಕಾಏಕಿ ನೆಲಕ್ಕಪ್ಪಳಿಸುವುದನ್ನು ತಡೆಯಲು, ವಾಯುಮಂಡಲ ಪ್ರವೇಶಿಸುತ್ತಿದ್ದಂತೆ ವೇಗ ತಗ್ಗಿಸುವಿಕೆ ಅಗತ್ಯ. ಇದಕ್ಕೆ ಪ್ಯಾರಾಚೂಟ್‌ಗಳನ್ನು ಬಳಸಲಾಗುತ್ತದೆ. ಇವು ಸಕಾಲದಲ್ಲಿ ತೆರೆದುಕೊಳ್ಳದಿದ್ದರೆ ಸಮಸ್ಯೆಯಾಗುತ್ತದೆ. ಹೀಗಾಗದಂತೆ ತಡೆಯಲು ಐಎಡಿಟಿ-01 ಪರೀಕ್ಷೆ ನಡೆಸಲಾಗಿದೆ.
ಮೊದಲು 2 ಪ್ಯಾರಾಚೂಟ್‌ಗಳು ತೆರೆದುಕೊಂಡು ಮಾಡ್ಯೂಲ್‌ನ ವೇಗವನ್ನು ಕೊಂಚಕೊಂಚವೇ ತಗ್ಗಿಸುತ್ತವೆ. ಬಳಿಕ ಪೈಟಲ್ ಪ್ಯಾರಾಚೂಟ್ ಮತ್ತು 3 ಮುಖ್ಯ ಪ್ಯಾರಾಚೂಟ್‌ಗಳು ತೆರೆದುಕೊಂಡು, ಕ್ರೂ ಮಾಡ್ಯೂಲ್ ಸುರಕ್ಷಿತವಾಗಿ ಕೆಳಗಿಳಿಯಲು ಅನುಕೂಲ ಮಾಡುತ್ತವೆ. ಈ ಎಲ್ಲಾ ಹಂತಗಳಲ್ಲಿ ಪ್ಯಾರಾಚೂಟ್‌ಗಳು ಸರಿಯಾಗಿ ತೆರೆದುಕೊಳ್ಳುತ್ತವೆಯೇ ಎಂಬುದನ್ನು ಇಸ್ರೋ ಪರೀಕ್ಷಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ