
ನವದೆಹಲಿ (ಆ.30): ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಅವರು ಕೇರಳದ ತಿರುವನಂತಪುರಂನಲ್ಲಿರುವ ಪೌರ್ಣಮಿಕಾವು ಭದ್ರಕಾಳಿ ದೇವಸ್ಥಾನಕ್ಕೆ ಕಳೆದ ಭಾನುವಾರ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜ್ಞಾನ ಮತ್ತು ಅಧ್ಯಾತ್ಮ ಎರಡು ವಿಭಿನ್ನ ಕ್ಷೇತ್ರಗಳಾಗಿದ್ದು, ಇವುಗಳನ್ನು ಜೊತೆಯಾಗಿ ಸೇರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಜುಲೈ 13 ರಂದು ಚಂದ್ರಯಾನ 3 ಉಡಾವಣೆಗೆ ಮುನ್ನ, ಎಸ್.ಸೋಮನಾಥ್, ತಿರುಪತಿಯ ಶ್ರೀ ಚೆಂಗಾಲಮ್ಮ ದೇವಸ್ಥಾನದಲ್ಲಿ ಯೋಜನೆ ಯಶಸ್ಸಿಗಾಗಿ ಪೂಜೆಯನ್ನು ಮಾಡಿಸಿದ್ದರು. ಸೋಮನಾಥ್ ಅವರ ಆಧ್ಯಾತ್ಮಿಕ ನಂಬಿಕೆಗಳ ಕಾರಣದಿಂದಾಗಿ ವಿಜ್ಞಾನದತ್ತ ಅವರ ಒಲವನ್ನು ದುರ್ಬಲಗೊಳಿಸಿದೆಯೇ ಎನ್ನುವ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತ್ತು.
ಇದರ ಬಗ್ಗೆ ಬಹಳ ಸ್ಪಷ್ಟವಾಗಿ ಮಾತನಾಡಿದ ಇಸ್ರೋ ಮುಖ್ಯಸ್ಥರು ಎರಡು ಅಂಶಗಳ ನಡುವೆ ಯಾವುದೇ ಅಂತರ್ಗತ ಸಂಘರ್ಷವಿಲ್ಲ ಎಂದು ಸ್ಪಷ್ಟಪಡಿಸಿದರು. "ನಾನೊಬ್ಬ ಪರಿಶೋಧಕ. ನಾನು ಚಂದ್ರನನ್ನೂ ಅನ್ವೇಷಣೆ ಮಾಡುತ್ತೇವೆ. ನನ್ನ ಅಂತರಾತ್ಮವನ್ನೂ ಅನ್ವೇಷಣೆ ಮಾಡುತ್ತೇನೆ. ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡನ್ನೂ ಅನ್ವೇಷಣೆ ಮಾಡುವುದು ನನ್ನ ಜೀವನದ ಒಂದು ಭಾಗವಾಗಿದೆ. ಹಾಗಾಗಿ ನಾನು ಅನೇಕ ದೇವಾಲಯಗಳಿಗೆ ಭೇಟಿ ನೀಡುತ್ತೇನೆ ಮತ್ತು ನಾನು ಅನೇಕ ಗ್ರಂಥಗಳನ್ನು ಓದುತ್ತೇನೆ. ಈ ಬ್ರಹ್ಮಾಂಡದಲ್ಲಿ ನಮ್ಮ ಅಸ್ತಿತ್ವ ಮತ್ತು ನಮ್ಮ ಪ್ರಯಾಣದ ಅರ್ಥ ಏನು ಅನ್ನೋದನ್ನು ನಾನು ಹುಡುಕಲು ಪ್ರಯತ್ನಿಸುತ್ತೇನೆ. ಇದು ಸಂಸ್ಕೃತಿಯ ಒಂದು ಭಾಗವಾಗಿದೆ, ನಾವೆಲ್ಲರೂ ಅನ್ವೇಷಿಸಲು, ಒಳಗಿನ ಆತ್ಮ ಮತ್ತು ಬಾಹ್ಯ ಆತ್ಮವನ್ನು ಕಂಡುಕೊಳ್ಳಲು ನಿರ್ಮಿಸಲಾಗಿದೆ. ಆದ್ದರಿಂದ ಬಾಹ್ಯಾಕಾಶದ ಪರಿಶೋಧನೆಗಾಗಿ ನಾನು ವಿಜ್ಞಾನವನ್ನು ಮತ್ತು ಅಂತರಂಗದ ಪರಿಶೋಧನೆಗಾಗಿ ನಾನು ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಚಂದ್ರಯಾನ-3 ರ ಲ್ಯಾಂಡಿಂಗ್ ಸೈಟ್‌ಗೆ 'ಶಿವ ಶಕ್ತಿ' ಎಂಬ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೆಸರಿನ ಮಹತ್ವದ ಬಗ್ಗೆ ಪ್ರಧಾನಿ ಮೋದಿಯವರ ವಿವರಣೆಯು ಎಲ್ಲರಿಗೂ ಅರ್ಥವಾಗುವಂತಿದೆ ಎಂದಿದ್ದಾರೆ.
"ಪ್ರಧಾನಿ ಅದರ ಅರ್ಥವನ್ನು ನಮಗೆಲ್ಲರಿಗೂ ಸರಿಹೊಂದುವ ರೀತಿಯಲ್ಲಿ ವಿವರಿಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಅವರು ತಿರಂಗಾ ಎನ್ನುವ ಹೆಸರನ್ನೂ ನೀಡಿದ್ದಾರೆ. ಎರಡೂ ಭಾರತೀಯ ಧ್ವನಿಯ ಹೆಸರುಗಳು. ನಾವು ಮಾಡುವ ಕೆಲಸಗಳಿಗೆ ದೇಶದ ಪ್ರಧಾನಿ ಒಂದು ಉತ್ತಮ ಹೆಸರಿಡುವ ವಿಶೇಷ ಅಧಿಕಾರವನ್ನು ಅವರು ಹೊಂದಿದ್ದಾರೆ," ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಸೋಮನಾಥ್ ಅವರು ಪ್ರಧಾನಿ ಮೋದಿಯವರ ದೂರದೃಷ್ಟಿಯ ಉದ್ದೇಶಗಳನ್ನು ಈಡೇರಿಸಲು ಇಸ್ರೋದ ಸಿದ್ಧತೆಯನ್ನು ಬಗ್ಗೆಯೂ ಮಾತನಾಡಿದ್ದಾರೆ "ಭಾರತವು ಚಂದ್ರ, ಮಂಗಳ ಮತ್ತು ಶುಕ್ರಕ್ಕೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ ಆದರೆ ನಾವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಾಗಿದೆ. ನಮಗೆ ಹೆಚ್ಚಿನ ಹೂಡಿಕೆಯ ಅಗತ್ಯವಿದೆ ಮತ್ತು ಬಾಹ್ಯಾಕಾಶ ಕ್ಷೇತ್ರವು ಅಭಿವೃದ್ಧಿ ಹೊಂದಬೇಕು ಮತ್ತು ಇದರಿಂದ ಇಡೀ ರಾಷ್ಟ್ರವು ಅಭಿವೃದ್ಧಿ ಹೊಂದಬೇಕು, ಅದು ನಮ್ಮ ಧ್ಯೇಯವಾಗಿದೆ. ನಾವು ಪ್ರಧಾನಿ ಮೋದಿಯವರು ನಮಗೆ ನೀಡಿದ ದೂರದೃಷ್ಟಿಯನ್ನು ಈಡೇರಿಸಲು ಸಿದ್ಧ," ಎಂದಿದ್ದಾರೆ.
ತಿಂಗಳಿಗೆ 2.5 ಲಕ್ಷ ವೇತನ ಪಡೆಯುವ ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಇರೋದು ಇನ್ನು ಒಂದೂವರೆ ವರ್ಷದ ಅಧಿಕಾರ!
ಐತಿಹಾಸಿಕ ಸಾಧನೆಯಲ್ಲಿ ಭಾರತ ಆಗಸ್ಟ್ 23 ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್‌ಅನ್ನು ಸಾಫ್ಟ್ ಲ್ಯಾಂಡ್ ಮಾಡಿಸಿತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿದ ವಿಶ್ವದ ಮೊದಲ ದೇಶ ಎನ್ನುವ ಕೀರ್ತಿಗೆ ಭಾರತ ಭಾಜನವಾಗಿದೆ. ಅದಲ್ಲದೆ, ಅಮೆರಿಕ, ರಷ್ಯಾ ಮತ್ತು ಚೀನಾ ಬಳಿಕ ಚಂದ್ರನ ನೆಲದ ಮೇಲೆ ನೌಕೆಯನ್ನು ಇಳಿಸಿದ ನಾಲ್ಕನೇ ದೇಶ ಎನ್ನುವ ಹೆಮ್ಮೆ ಭಾರತದ್ದಾಗಿದೆ. ಜುಲೈ 14 ರಂದು ಚಂದ್ರನತ್ತ ಉಡಾವಣೆಯಾಗಿದ್ದ ಚಂದ್ರಯಾನ-3 ನೌಕೆ 41 ದಿನಗಳ ಪ್ರಯಾಣದ ಬಳಿಕ ಆಗಸ್ಟ್ 23 ರಂದು ಚಂದ್ರನ ಮೇಲೆ ಲ್ಯಾಂಡ್ ಆಗಿತ್ತು.
'ವಿಜ್ಞಾನದ ತತ್ವಗಳ ಮೂಲ ವೇದಗಳು..', ಇಸ್ರೋ ಚೇರ್ಮನ್ ಎಸ್ ಸೋಮನಾಥ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ