300 ಮೀ. ದೂರದಿಂದಲೇ ರೇವಂತ್ ಕರೆ ಆಲಿಸಲು ಇಸ್ರೇಲಿ ಉಪಕರಣ: ಫೋನ್‌ ಕದ್ದಾಲಿಕೆಯ ರಹಸ್ಯ ತಂತ್ರ ಬಯಲು

By Kannadaprabha NewsFirst Published Mar 27, 2024, 6:59 AM IST
Highlights

ಹಾಲಿ ಸಿಎಂ ರೇವಂತ್‌ ರೆಡ್ಡಿ ಅವರ ಫೋನ್‌ ಕದ್ದಾಲಿಕೆ ಮಾಡಲು, ಅವರ ಮನೆ ಸಮೀಪದಲ್ಲೇ ಕಚೇರಿಯೊಂದನ್ನು ತೆರೆಯಲಾಗಿತ್ತು. ಅಲ್ಲಿ ಇಸ್ರೇಲಿನಿಂದ ತಂದ ಉಪಕರಣ ಇರಿಸಿ ಫೋನ್‌ ಕದ್ದಾಲಿಸಲಾಗುತ್ತಿತ್ತು. ಈ ಉಪಕರಣ 300 ಮೀಟರ್‌ ವ್ಯಾಪ್ತಿಯ ಯಾವುದೇ ಕರೆ ಆಲಿಸುವ ಶಕ್ತಿ ಹೊಂದಿತ್ತು ಎಂದು ತಿಳಿಸಿದ ತನಿಖಾಧಿಕಾರಿಗಳು 

ಹೈದರಾಬಾದ್‌(ಮಾ.27): ತೆಲಂಗಾಣದಲ್ಲಿ ಹಿಂದಿನ ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ನಡೆಸಲಾದ ಫೋನ್‌ ಕದ್ದಾಲಿಕೆ ಹಗರಣದ ಮತ್ತಷ್ಟು ಸ್ಫೋಟಕ ವಿಷಯಗಳು ಹೊರಬಿದ್ದಿದೆ. ಆಗ ವಿಪಕ್ಷ ನಾಯಕರಾಗಿದ್ದ, ಹಾಲಿ ಸಿಎಂ ರೇವಂತ್‌ ರೆಡ್ಡಿ ಅವರ ಫೋನ್‌ ಕದ್ದಾಲಿಕೆ ಮಾಡಲು, ಅವರ ಮನೆ ಸಮೀಪದಲ್ಲೇ ಕಚೇರಿಯೊಂದನ್ನು ತೆರೆಯಲಾಗಿತ್ತು. ಅಲ್ಲಿ ಇಸ್ರೇಲಿನಿಂದ ತಂದ ಉಪಕರಣ ಇರಿಸಿ ಫೋನ್‌ ಕದ್ದಾಲಿಸಲಾಗುತ್ತಿತ್ತು. ಈ ಉಪಕರಣ 300 ಮೀಟರ್‌ ವ್ಯಾಪ್ತಿಯ ಯಾವುದೇ ಕರೆ ಆಲಿಸುವ ಶಕ್ತಿ ಹೊಂದಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಇಂಥ ಗೂಢಚರ್ಯ ಉಪಕರಣದ ತರಿಸಲು ಕೇಂದ್ರದ ಅನುಮತಿ ಕಡ್ಡಾಯ. ಆದರೆ ಸಾಫ್ಟ್‌ವೇರ್‌ ಕಂಪನಿಯ ಹೆಸರಲ್ಲಿ ಈ ಉಪಕರಣ ತರಿಸಲಾಗಿತ್ತು. ಇದನ್ನು ಬಳಸಿಕೊಂಡು ಕಾಂಗ್ರೆಸ್‌, ಬಿಜೆಪಿ ನಾಯಕರು, ಉದ್ಯಮಿಗಳು, ನಟ-ನಟಿಯರ ಫೋನ್‌ ಕದ್ದಾಲಿಕೆ ನಡೆಸಲಾಗುತ್ತಿತ್ತು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

ತೆಲಂಗಾಣ ಐಬಿ ಮುಖ್ಯಸ್ಥರೇ ಫೋನ್ ಕದ್ದಾಲಿಕೆ ಕಿಂಗ್‌ಪಿನ್

ಉದ್ಯಮಿಗಳ ಫೋನ್ ಕದ್ದಾಲಿಕೆ ಮಾಡಿ ಬಳಿಕ ಅದನ್ನು ಆಧರಿಸಿ ಅವರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿತ್ತು. ಅವರಿಂದ ಬಿಆರ್‌ಎಸ್‌ ಪಕ್ಷಕ್ಕೆ ಹೆಚ್ಚಿನ ನಿಧಿ ಸಂಗ್ರಹಿಸಲಾಗುತ್ತಿತ್ತು. ಈ ಫೋನ್‌ ಕದ್ದಾಲಿಕೆ ಪ್ರಕರಣದಿಂದಾಗಿ ಸೆಲೆಬ್ರಿಟಿ ದಂಪತಿಗಳು ವಿಚ್ಛೇದನ ಕೂಡಾ ಪಡೆಯುವಂತಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಈಗಾಗಲೇ ಮೂವರು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಲಾಗಿದೆ. ವಿದೇಶಕ್ಕೆ ಪರಾರಿಯಾಗಿರುವ ಕೆಲವರ ಪತ್ತೆಗೆ ಲುಕೌಟ್‌ ನೋಟಿಸ್‌ ಕೂಡಾ ಜಾರಿ ಮಾಡಲಾಗಿದೆ.

click me!