ಇವ್ರ ಒಪ್ಪಿಗೆ ಇಲ್ದೆ ಒಂದೇ ಒಂದು ಕೆಲ್ಸ ಮಾಡ್ತಿರಲಿಲ್ಲ ದಾವೂದ್‌ ಇಬ್ರಾಹಿಂ! ಯಾರು ಭೂಗತ ಪಾತಕಿ ನಂಬಿದ್ದ ಫಕೀರ?

Published : Nov 19, 2026, 07:45 PM IST
Dawood Ibrahim

ಸಾರಾಂಶ

ದಾವೂದ್ ಇಬ್ರಾಹಿಂ ತನ್ನ ಗುರು ಎಂದು ಪರಿಗಣಿಸಿದ್ದ ವ್ಯಕ್ತಿ ಯಾರು? ಅವರು ಎಲ್ಲಿದ್ದರು? ಅವರ ಒಪ್ಪಿಗೆ ಇಲ್ದೆ ಯಾವುದೇ ನಿರ್ಧಾರ ತೆಗೆದುಕೊಳ್ತಿರಲಿಲ್ಲವಾ ದಾವೂದ್‌ ಇಬ್ರಾಹಿಂ? ಈ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ.

ಭೂಗತ ಲೋಕದ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಮತ್ತೊಂದು ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಭೂಗತ ಜಗತ್ತಿನಲ್ಲಿ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದ ದಾವೂದ್ ಇಬ್ರಾಹಿಂ, ಒಬ್ಬ ಫಕೀರನ ಮಾತಿಗೆ ಹೆಚ್ಚಿನ ಗೌರವ ನೀಡುತ್ತಿದ್ದನಂತೆ. ಅಷ್ಟೇ ಅಲ್ಲ, ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರ ಅನುಮತಿ ಪಡೆಯುತ್ತಿದ್ದ ಎಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ಮಾಜಿ ಎಫ್ಬಿಐ ಏಜೆಂಟ್ ಕಮ್ರಾನ್ ಫರೀದಿ ಈ ಕುರಿತು ಕೆಲವು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಇಸ್ಲಾಂ ಬಾಬಾ ಎಂಬ ಹೆಸರಿನ ಫಕೀರನ ಮೇಲೆ ದಾವೂದ್ ಇಬ್ರಾಹಿಂ ಅಪಾರ ನಂಬಿಕೆ ಹೊಂದಿದ್ದ. ದಾವೂದ್ ಮಾತ್ರವಲ್ಲದೆ, ಆತನ ಡಿ-ಕಂಪನಿಯ ಸದಸ್ಯರು ಕೂಡ ಯಾವುದೇ ಪ್ರಮುಖ ಕಾರ್ಯಾಚರಣೆ ಆರಂಭಿಸುವ ಮೊದಲು ಇಸ್ಲಾಂ ಬಾಬಾ ಅವರ ಅನುಮತಿ ಪಡೆಯುತ್ತಿದ್ದರಂತೆ.

ಮುಂಬೈನ ಡೋಂಗ್ರಿಯಿಂದ ಪಾಕಿಸ್ತಾನಕ್ಕೆ ತೆರಳಿದ್ದ ಫಕೀರ

ಕಮ್ರಾನ್ ಫರೀದಿ ಹೇಳುವ ಪ್ರಕಾರ, ಇಸ್ಲಾಂ ಬಾಬಾ ಮೂಲತಃ ಮುಂಬೈನ ಡೋಂಗ್ರಿ ಪ್ರದೇಶದವ. ದಾವೂದ್ ಇಬ್ರಾಹಿಂ ಮತ್ತು ಆತನ ಡಿ-ಕಂಪನಿ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡ ನಂತರವೂ ಇಸ್ಲಾಂ ಬಾಬಾ ಜೊತೆಗಿನ ಸಂಪರ್ಕ ಮುಂದುವರಿದಿತ್ತು. ಬಳಿಕ ದಾವೂದ್ ಅವರನ್ನೇ ಪಾಕಿಸ್ತಾನಕ್ಕೆ ಕರೆಸಿಕೊಂಡು ತನ್ನ ಮನೆಯ ಸಮೀಪವೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದನಂತೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಲ್ಲಿ ಇಸ್ಲಾಂ ಬಾಬಾ ಸಾಕಷ್ಟು ಪ್ರಭಾವ ಹೊಂದಿದ್ದರು ಎಂದು ಫರೀದಿ ಹೇಳಿದ್ದಾರೆ. ಆದರೆ, ಕೆಲವು ಸಮಯದ ಹಿಂದೆ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಬಾಬಾ ಮಾತೇ ಅಂತಿಮ

ಇಸ್ಲಾಂ ಬಾಬಾ ಮೇಲೆ ದಾವೂದ್ ಇಬ್ರಾಹಿಂ ಎಷ್ಟರಮಟ್ಟಿಗೆ ನಂಬಿಕೆ ಇಟ್ಟಿದ್ದನೆಂದರೆ, ಅವರ ಮಾತನ್ನು ಕಣ್ಣುಮುಚ್ಚಿ ಪಾಲಿಸುತ್ತಿದ್ದನಂತೆ. ರಾತ್ರಿ ವೇಳೆ ಯಾವುದಾದರೂ ಕೆಲಸಕ್ಕೆ ಹೊರಡಬೇಕಿದ್ದರೂ ಮೊದಲು ಬಾಬಾ ಬಳಿ ಅನುಮತಿ ಕೇಳುತ್ತಿದ್ದ. ಬಾಬಾ ಹೋಗಬೇಡ ಎಂದು ಹೇಳಿದರೆ ದಾವೂದ್ ತನ್ನ ನಿರ್ಧಾರ ಬದಲಾಯಿಸುತ್ತಿದ್ದ ಎಂದು ಕಮ್ರಾನ್ ಫರೀದಿ ಹೇಳಿದ್ದಾರೆ.

ಡಿ-ಕಂಪನಿಯ ಇತರ ಸದಸ್ಯರೂ ಬಾಬಾ ಮಾತಿಗೆ ಅಷ್ಟೇ ಗೌರವ ನೀಡುತ್ತಿದ್ದರಂತೆ. ಉದಾಹರಣೆಗೆ, ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ತಿನ್ನಬಾರದು ಎಂದು ಬಾಬಾ ಯಾರಿಗಾದರೂ ಹೇಳಿದರೆ, ಅವರು ಮೊಟ್ಟೆಯನ್ನೂ ತಿನ್ನುತ್ತಿರಲಿಲ್ಲ ಎಂದು ಫರೀದಿ ಅಚ್ಚರಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ದಾವೂದ್ ಗ್ಯಾಂಗ್ಗೆ ನುಸುಳಿದ್ದ ಮಾಜಿ ಎಫ್ಬಿಐ ಏಜೆಂಟ್!

ಪಾಕಿಸ್ತಾನದಲ್ಲಿದ್ದ ದಾವೂದ್ ಇಬ್ರಾಹಿಂನ ಜಾಲದೊಳಗೆ ಪ್ರವೇಶಿಸಲು ತಾವು ರಹಸ್ಯ ಕಾರ್ಯಾಚರಣೆ ನಡೆಸಿದ್ದಾಗಿ ಕಮ್ರಾನ್ ಫರೀದಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ದಾವೂದ್ನನ್ನು ಹಲವು ಬಾರಿ ಭೇಟಿಯಾಗಿದ್ದಲ್ಲದೆ, ಆತನ ಪಾರ್ಟಿಗಳಲ್ಲಿಯೂ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ದಾವೂದ್ ಮತ್ತು ಆತನ ತಂಡದ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸುವ ಅವಕಾಶ ಸಿಕ್ಕಿತ್ತು ಎಂದು ಅವರು ಹೇಳಿದ್ದಾರೆ.

ದಾವೂದ್ ಇಬ್ರಾಹಿಂ ಮೇಲೆ ಪ್ರಭಾವ ಬೀರಲು ಇಸ್ಲಾಂ ಬಾಬಾ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾಗಿ ಫರೀದಿ ಬಹಿರಂಗಪಡಿಸಿದ್ದಾರೆ. ಬಾಬಾ ಅವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ದಾವೂದ್ ಮತ್ತು ಆತನ ಜಾಲದ ಮೇಲೆ ಒತ್ತಡ ಹೇರಬಹುದು ಎಂಬುದು ಅವರ ಯೋಜನೆಯಾಗಿತ್ತಂತೆ. ಆದರೆ, ಇಸ್ಲಾಂ ಬಾಬಾ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು ದಾವೂದ್ನ ಸೋದರಳಿಯ ಅನೀಸ್ನ ಮಗನ ಬಳಿಯೂ ಮುಂಬೈ ಸ್ಫೋಟಗಳಿಗೆ ಫತ್ವಾ ನೀಡಿದ್ದು ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದಾಗಿ ಫರೀದಿ ತಿಳಿಸಿದ್ದಾರೆ. ಡಿ-ಕಂಪನಿಯಲ್ಲಿ ದೊಡ್ಡ ಕಾರ್ಯಾಚರಣೆ ಅಥವಾ ಸ್ಫೋಟದಂತಹ ನಿರ್ಧಾರಗಳನ್ನು ಇಸ್ಲಾಂ ಬಾಬಾ ಅವರ ಅನುಮತಿ ಇಲ್ಲದೆ ತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ ಎಂದಿದ್ದಾರೆ. 1993ರ ಮುಂಬೈ ಸರಣಿ ಸ್ಫೋಟಗಳಿಗೂ ಇಸ್ಲಾಂ ಬಾಬಾ ಅವರ ಅನುಮತಿ ಇತ್ತು ಎಂದು ಹೇಳಲಾಗುತ್ತದೆ ಎಂಬ ಗಂಭೀರ ಆರೋಪವನ್ನೂ ಫರೀದಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಂಬಳ ಏರಿಸಿದ್ದೀರಾ? ಉದ್ಯೋಗ ಸೃಷ್ಟಿ ಮಾಡಿದ್ದೀರಾ? ಭಾರತದ ಕಂಪನಿಗಳಿಗೆ ಪ್ರಶ್ನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಈ ಊರಿನಲ್ಲಿ ಕೇವಲ 50 ರೂ.ಗೆ 1 ಕೆಜಿ ಗೋಡಂಬಿ; ಬ್ಯುಸಿನೆಸ್ ಮಾಡೋರು ರೈತರಿಂದ ನೇರವಾಗಿ ಖರೀದಿಸಿ!