ಐಸಿಸ್‌ನ ಮೊದಲ ಭಾರತೀಯ ಬಾಂಬರ್‌ ಬೆಂಗಳೂರು ಟೆಕ್ಕಿ: ಇನ್ನೂ 100 ಜನ ಐಸಿಸ್‌ ಸೇರಿರುವ ಶಂಕೆ

Published : Aug 22, 2022, 09:20 AM ISTUpdated : Aug 22, 2022, 10:51 AM IST
ಐಸಿಸ್‌ನ ಮೊದಲ ಭಾರತೀಯ ಬಾಂಬರ್‌ ಬೆಂಗಳೂರು ಟೆಕ್ಕಿ: ಇನ್ನೂ 100 ಜನ ಐಸಿಸ್‌ ಸೇರಿರುವ ಶಂಕೆ

ಸಾರಾಂಶ

ಜಗತ್ತಿನಾದ್ಯಂತ ಭೀಕರ ದಾಳಿಗಳ ಮೂಲಕ ಭೀತಿ ಹುಟ್ಟಿಸಿರುವ ಐಸಿಸ್‌ ಸಂಘಟನೆಯಲ್ಲಿ ಭಾರತೀಯ ಮೂಲದ ಮೊದಲ ಆತ್ಮಾಹುತಿ ದಾಳಿಕೋರ ಎಂಬ ಕುಖ್ಯಾತಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳಿಗನೊಬ್ಬನದ್ದು ಎಂಬ ವಿಷಯ ಬೆಳಕಿಗೆ ಬಂದಿದೆ.

ತಿರುವನಂತಪುರಂ: ಜಗತ್ತಿನಾದ್ಯಂತ ಭೀಕರ ದಾಳಿಗಳ ಮೂಲಕ ಭೀತಿ ಹುಟ್ಟಿಸಿರುವ ಐಸಿಸ್‌ ಸಂಘಟನೆಯಲ್ಲಿ ಭಾರತೀಯ ಮೂಲದ ಮೊದಲ ಆತ್ಮಾಹುತಿ ದಾಳಿಕೋರ ಎಂಬ ಕುಖ್ಯಾತಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳಿಗನೊಬ್ಬನದ್ದು ಎಂಬ ವಿಷಯ ಬೆಳಕಿಗೆ ಬಂದಿದೆ. ಈತನನ್ನು ಹೊಗಳಿ ಐಸಿಸ್‌ನ ಖೊರಾಸನ್‌ ಘಟಕ ತನ್ನ ಮುಖವಾಣಿಯಾದ 'ವಾಯ್ಸ್ ಆಫ್‌ ಖೊರಾಸನ್‌'ನಲ್ಲಿ ಲೇಖನ ಬರೆದಿದೆ. ಅದರ ಸುಳಿವು ಹಿಡಿದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಆರಂಭಿಸಿದೆ. ಇನ್ನೂ ಆಘಾತಕಾರಿ ಸಂಗತಿ ಏನೆಂದರೆ, ಕೇರಳದಿಂದ 100ಕ್ಕೂ ಹೆಚ್ಚು ಯುವಕರು ಐಸಿಸ್‌ ಸೇರಲು ತೆರಳಿದ್ದಾರೆ ಎಂಬ ಮಾಹಿತಿ ದೊರಕಿದ್ದು, ಅವರ ಬಗ್ಗೆಯೂ ಎನ್‌ಐಎ ತನಿಖೆ ನಡೆಸುತ್ತಿದೆ.

ಜಿಹಾದ್‌ ನಡೆಸುವ ಭಯೋತ್ಪಾದಕ ಸಂಘಟನೆಗಳಲ್ಲಿ ಆತ್ಮಹತ್ಯಾ ಬಾಂಬರ್‌ಗಳನ್ನು ಅತ್ಯಂತ ಉಗ್ರ ವ್ಯಕ್ತಿಗಳೆಂದು ಹೇಳಲಾಗುತ್ತದೆ. ಕೇರಳದಿಂದ ತೆರಳಿದ್ದ ಯುವಕ ಹೀಗೆ ಆತ್ಮಹತ್ಯಾ ಬಾಂಬರ್‌ ಆದ ಮೊದಲ ಭಾರತೀಯ ಎಂದು ಖೊರಾಸನ್‌ ಪತ್ರಿಕೆ ಹೊಗಳಿದೆ. ಈ ವ್ಯಕ್ತಿ ಮೂಲತಃ ಕ್ರಿಶ್ಚಿಯನ್‌ ಆಗಿದ್ದು, ಬೆಂಗಳೂರಿನಲ್ಲಿ ಕೆಲ ಕಾಲ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದ. ಬಳಿಕ ದುಬೈಗೆ ತೆರಳಿ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿನ ಐಸಿಸ್‌ ಸ್ಲೀಪರ್‌ ಸೆಲ್‌ಗಳ ಸಂಪರ್ಕಕ್ಕೆ ಬಂದು ಭಯೋತ್ಪಾದಕನಾಗಿ ತರಬೇತಿ ಪಡೆದು, ಕೊನೆಗೆ 2015-16ರಲ್ಲಿ ಲಿಬಿಯಾದಲ್ಲಿ ಬಾಂಬ್‌ ಸ್ಫೋಟಿಸಿಕೊಂಡು ಹಲವರನ್ನು ಕೊಂದು ತಾನೂ ಸಾವನ್ನಪ್ಪಿದ್ದ. ಈತನಿಗೆ ಖೊರಾಸನ್‌ ಪತ್ರಿಕೆ ‘ಅಬೂಬಕ್ಕರ್‌ ಅಲ್‌-ಹಿಂದಿ’ ಎಂದು ಹೆಸರು ನೀಡಿದೆ. ಈತನ ಮೂಲ ಹೆಸರು ತಿಳಿದುಬಂದಿಲ್ಲ.

ಲಿಬಿಯಾದಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಸಿದ್ದು ಕೇರಳದ ಯುವಕ, ಐಸಿಸ್ ಮುಖವಾಣಿಯಲ್ಲಿ ಬಹಿರಂಗ!

ಮೆಮೋರೀಸ್‌ ಆಫ್‌ ಶುಹಾದಾ:

ಐಸಿಸ್‌ ಖೊರಾಸನ್‌ ತನ್ನ ಪತ್ರಿಕೆಯಲ್ಲಿ ‘ಮೆಮೋರೀಸ್‌ ಆಫ್‌ ಶುಹಾದಾ’ ಎಂಬ ಲೇಖನದಲ್ಲಿ ಕೇರಳದ ಆತ್ಮಹತ್ಯಾ ಬಾಂಬರ್‌ನನ್ನು ಸ್ಮರಿಸಿದೆ. ಈತ ಯುಎಇಯಲ್ಲಿ ಕೆಲಸ ಮಾಡುವಾಗ ಜಿಹಾದ್‌ಗೆ ಆಕರ್ಷಿತನಾಗಿ ಮತಾಂತರಗೊಂಡು ಐಸಿಸ್‌ ಸೇರಿದ್ದ. ಆರಂಭದಲ್ಲಿ ಯೆಮನ್‌ಗೆ ಹೋಗಿ ಹೆಚ್ಚಿನ ತರಬೇತಿ ಪಡೆಯುವ ಈತನ ಕನಸು ನನಸಾಗಿರಲಿಲ್ಲ. ಹೀಗಾಗಿ ಕೇರಳಕ್ಕೆ ಮರಳಿದ್ದ. ನಂತರ ಅವನಿಗೆ ಲಿಬಿಯಾದಲ್ಲಿ ತರಬೇತಿ ಪಡೆಯುವ ಅವಕಾಶದ ಬಗ್ಗೆ ಐಸಿಸ್‌ನಿಂದ ಸಂದೇಶ ಬಂದಿತ್ತು. ಆತ ಕ್ರೈಸ್ತನಾಗಿದ್ದ ಕಾರಣ, ಆತನ ಲಿಬಿಯಾ ಭೇಟಿ ಬಗ್ಗೆ ಯಾರಿಗೂ ಅನುಮಾನ ಇರಲಿಲ್ಲ. ಹೀಗೆ ಅಲ್ಲಿಗೆ ತೆರಳಿದ ಆತ 3 ತಿಂಗಳಲ್ಲೇ ಆತ್ಮಾಹುತಿ ದಾಳಿಯೊಂದನ್ನು ನಡೆಸಿ ಹಲವರನ್ನು ಹತ್ಯೆಗೈದಿದ್ದ ಎಂದು ತಿಳಿದುಬಂದಿದೆ.

ISIS terrorist: ಸ್ವಾತಂತ್ರ್ಯ ದಿನದಂದು ದಾಳಿ ಸಂಚು: ಐಸಿಸ್‌ ಉಗ್ರನ ಬಂಧನ

ಈತ ಮಾತ್ರವಲ್ಲದೆ ಕೇರಳದ ಕಾಸರಗೋಡು ಜಿಲ್ಲೆಯ ಮೊಹ್ಸೀನ್‌ ಎಂಬಾತ ಅಫ್ಘಾನಿಸ್ತಾನದ  ಕಾಬೂಲ್‌ನಲ್ಲಿ 2020ರಲ್ಲಿ ಐಸಿಸ್‌ನ ಆತ್ಮಹತ್ಯಾ ಬಾಂಬರ್‌ ಆಗಿ ದಾಳಿ ನಡೆಸಿ 25 ಜನರನ್ನು ಹತ್ಯೆಗೈದಿದ್ದ. ನಂತರ ಕಾಸರಗೋಡಿನ ಡಾ.ಏಜಾಸ್‌ ಎಂಬಾತ ಕಾಬೂಲ್‌ ಜೈಲಿನ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 39 ಜನರನ್ನು ಕೊಂದಿದ್ದ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌