ರಾಹುಲ್ ಗಾಂಧಿ ಸಿಬ್ಬಂದಿಗೆ ಹಸ್ತಲಾಘವ್ ಮಾಡಿ ನಂತರ ತಮ್ಮ ಪ್ಯಾಂಟ್‌ನಲ್ಲಿ ಕೈ ಒರೆಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ವಿಚಾರವೀಗ ತೀವ್ರ ಟೀಕೆಗೆ ಗುರಿಯಾಗಿದೆ.
ನವದೆಹಲಿ: ಮೋದಿ ಸರ್‌ನೇಮ್ ಹೊಂದಿರುವವರೆಲ್ಲಾ ಕಳ್ಳರೇ ಯಾಕಿರ್ತಾರೆ ಎಂದು ಹೇಳಿಕೆ ನೀಡಿ ತಮ್ಮ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಮ್ಮ ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ನೋಟೀಸ್ ನೀಡಲಾಗಿತ್ತು. ಈ ನೋಟಿಸ್‌ಗೆ ಒಂದು ತಿಂಗಳ ಕಾಲಾವಕಾಶ ಕೇಳಿದ್ದ ರಾಹುಲ್ ಗಾಂಧಿ, ಶನಿವಾರ ತುಘಲಕ್ ಲೇನ್ ರಸ್ತೆಯಲ್ಲಿದ್ದ ಸರ್ಕಾರಿ ಬಂಗಲೆಯನ್ನು ಅಧಿಕೃತವಾಗಿ ಖಾಲಿ ಮಾಡಿದ್ದರು. ಮನೆಯನ್ನು ಖಾಲಿ ಮಾಡಿ ಅಲ್ಲಿನ ಸಿಬ್ಬಂದಿಗೆ ಕೀಯನ್ನು ಹಸ್ತಾಂತರಿಸಿ ಹೊರ ಬಂದಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿಗೆ ರಾಹುಲ್ ಗಾಂಧಿ ಹಸ್ತಲಾಘವ ಮಾಡಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಆದರೆ ಈಗ ರಾಹುಲ್ ಗಾಂಧಿ ಸಿಬ್ಬಂದಿಗೆ ಹಸ್ತಲಾಘವ್ ಮಾಡಿ ನಂತರ ತಮ್ಮ ಪ್ಯಾಂಟ್‌ನಲ್ಲಿ ಕೈ ಒರೆಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ವಿಚಾರವೀಗ ತೀವ್ರ ಟೀಕೆಗೆ ಗುರಿಯಾಗಿದೆ.
ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹಣೆಬರಹ ಸಂಪೂರ್ಣ ಕೆಟ್ಟಂತೆ ಕಾಣುತ್ತಿದೆ. ಏನು ಮಾಡಿದರು ವಿರೋಧಿಗಳಿಗೆ ಅದರಲ್ಲೊಂದು ಕಾಣುತ್ತಿದೆ. ಅದೇ ರೀತಿ ಈಗ ರಾಹುಲ್ ಸರ್ಕಾರಿ ಬಂಗಲೆಯಿಂದ ಹೊರಟು ಬರುವ ವೇಳೆ ಸಿಬ್ಬಂದಿಯ ಹಸ್ತಲಾಘವ ಮಾಡಿ ಕೈ ಒರೆಸಿಕೊಂಡರು ಎಂದು ಬಿಜೆಪಿ ಆರೋಪಿಸಿದ್ದು, ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಆದರೆ ಬಿಜೆಪಿಯ ಈ ಆರೋಪ ಭಾರಿ ಟೀಕೆಗೆ ಗುರಿಯಾಗಿದೆ. ಬಿಜೆಪಿ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅನೇಕರು ಆರೋಪಿಸಿದ್ದಾರೆ. ಹಾಗಾದ್ರೆ ಆ ವೀಡಿಯೋದಲ್ಲಿರುವುದೇನೊ ಎಂಬುದನ್ನು ನೀವೆ ನೋಡಿ.
Rahul Gandhi wipes his hand (on pants) after shaking hands with his house staff. These men/women must have served him over the years. Such disdain… pic.twitter.com/tEPPkeCP1Y
— Amit Malviya (@amitmalviya)
ಬಿಜೆಪಿ ಐಟಿ ಸೆಲ್‌ನ (BJP IT cell) ಮುಖ್ಯಸ್ಥ ಅಮಿತ್ ಮಾಳವೀಯ (Amith Malaviya) ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 'ರಾಹುಲ್ ಗಾಂಧಿ ತಮ್ಮ ಸರ್ಕಾರಿ ಭವನದ ಸಿಬ್ಬಂದಿಯೊಂದಿಗೆ ಹಸ್ತಲಾಘವ್ ಮಾಡಿದ ನಂತರ ತಮ್ಮ ಕೈಯನ್ನು ಪ್ಯಾಂಟ್‌ಗೆ ಒರೆಸಿಕೊಂಡರು. ಈ ಸಿಬ್ಬಂದಿ ರಾಹುಲ್‌ಗೆ ಹಲವು ವರ್ಷಗಳ ಕಾಲ ಸೇವೆ ಮಾಡಿದ್ದರು. ಎಂತಹ ಕೀಳುಭಾವ' ಎಂದು ಅವರು ಟ್ವಿಟ್ ಮಾಡಿದ್ದಾರೆ.
ತುಘಲಕ್ ಲೇನ್ ಇನ್ಮುಂದೆ ರಾಹುಲ್ ಗಾಂಧಿ ವಿಳಾಸವಲ್ಲ, ಸರ್ಕಾರಿ ಬಂಗಲೆ ಖಾಲಿ ಮಾಡಿದ ಕಾಂಗ್ರೆಸ್ ನಾಯಕ!
ಆದರೆ ಈ ವಿಡಿಯೋಗೆ ಕೂಡಲೇ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, 'ಮುಂಜಾನೆ ಎದ್ದು ವಿಡಿಯೋವನ್ನು ಟ್ರಿಮ್ ಮಾಡಿ ನಂತರ ಕತ್ತರಿಸಿ ಅದನ್ನು ಇಡೀ ದಿನ ನಿಮ್ಮ ಬಾಸ್‌ನ್ನು ಮೆಚ್ಚಿಸಲು ಅದನ್ನು ಇಡೀ ದಿನ ಶೇರ್ ಮಾಡುತ್ತಿರುವ ನಿಮ್ಮ ಜೀವನ ನಿರಾರ್ತಕ ಎಂದು ಎನಿಸುತ್ತಿಲ್ಲವೇ? ' ಎಂದು ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ (Congress National Co-ordinators) ನಿತೀನ್ ಅಗರ್ವಾಲ್ (Nithin Agarwal) ಅವರು ತಿರುಗೇಟು ನೀಡಿದ್ದಾರೆ. ಈ ವಿಡಿಯೋವನ್ನು ಎರಡು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಅನೇಕರು ಈ ವಿಡಿಯೋಗೆ ಪ್ರತಿಯಾಗಿ ಬಿಜೆಪಿ ನಾಯಕ ಗೃಹ ಸಚಿವ ಅಮಿತ್ ಷಾ ಮೂಗಿಗೆ ಕೈ ಹಾಕುತ್ತಿರುವ ವೀಡಿಯೋವನ್ನು ಟ್ಯಾಗ್ ಮಾಡಿ ಇದೇನು ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಮಾಳವೀಯ ಅವರಿಗೆ ಬೇರೆನಾದರು ಕೆಲಸ ಇದ್ದರೆ ನೀಡಿ ಎಂದು ಒಬ್ಬರು ಬಳಕೆದಾರರು ಸಲಹೆ ನೀಡಿದ್ದಾರೆ.
2019ರಲ್ಲಿ ಕರ್ನಾಟಕದ ಚುನಾವಣಾ ಪ್ರಚಾರದ ವೇಳೆಭಾಷಣ ಮಾಡುತ್ತಾ ರಾಹುಲ್ ಗಾಂಧಿ, 'ಏಕೆ ಮೋದಿ ಸರ್‌ನೇಮ್ ಹೊಂದಿರುವವರೆಲ್ಲಾ ಕಳ್ಳರೇ ಯಾಕಿರ್ತಾರೆ ಎಂದು ಪ್ರಶ್ನಿಸಿದ್ದರು. ಇದರ ವಿರುದ್ಧ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸೂರತ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಸಂಸತ್ ಕಾರ್ಯಾಲಯವೂ ರಾಹುಲ್ ಸಂಸತ್ ಸ್ಥಾನವನ್ನು ಅನರ್ಹಗೊಳಿಸಿತ್ತು. ಅಲ್ಲದೇ ಸಂಸತ್ ಸ್ಥಾನ ಅನರ್ಹಗೊಂಡ ಬೆನ್ನಲೇ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟೀಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಶನಿವಾರ ರಾಹುಲ್ ಗಾಂಧಿ ದೆಹಲಿಯ ತುಘಲಕ್ ಲೇನ್‌ನಲ್ಲಿದ್ದ (Tughalak Lane) ಮನೆ ಖಾಲಿ ಮಾಡಿದ್ದಾರೆ. ಮನೆಯಲ್ಲಿದ್ದ ಸಾಮಾನು-ಸರಂಜಾಮುಗಳನ್ನು ಟ್ರಕ್‌ಗೆ ಹಾಕಿ ತಾಯಿ ಸೋನಿಯಾ ಗಾಂಧಿಯವರ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಾನು ಸರ್ಕಾರದ ಸತ್ಯವನ್ನು ಬಯಲು ಮಾಡಿದ್ದಕ್ಕಾಗಿ ಈ ಬೆಲೆಯನ್ನು ತೆರುತ್ತಿದ್ದೇನೆ ಎಂದು ಹೇಳಿದ್ದರು.