ಸಲಿಂಗ ವಿವಾಹವನ್ನು ನ್ಯಾಯಾಂಗದ ಮೂಲಕ ಒಪ್ಪಿಕೊಳ್ಳುವುದು ದುರಂತವಾಗಬಹುದು. ಆದರೆ ಶಾಸಕಾಂಗ ಜನರಿಗಾಗಿ ಕೆಲಸ ಮಾಡುವುದರಿಂದ, ಇಂತಹ ಸೂಕ್ಷ್ಮ ವಿಚಾರಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲದು ಎಂದು ಬಾರ್ ಕೌನ್ಸಿಲ್ ಹೇಳಿದೆ.
ನವದೆಹಲಿ (ಏಪ್ರಿಲ್ 24, 2023): ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಬಿಡಬೇಕು. ಈ ಕುರಿತ ನಿರ್ಧಾರವನ್ನು ಸಂಸತ್ತಿನ ವಿವೇಚನೆಗೆ ಬಿಡಬೇಕು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಭಾನುವಾರ ಮನವಿ ಮಾಡಿದೆ. ಸಲಿಂಗ ವಿವಾಹ ಎಂಬ ಪರಿಕಲ್ಪನೆ ಬಹಳ ಸೂಕ್ಷ್ಮವಾದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಒಳಗೊಂಡಿದೆ ಎಂದೂ ಬಾರ್ ಕೌನ್ಸಿಲ್ ಹೇಳಿದೆ.
ನಾಗರಿಕತೆ ಆರಂಭವಾದಾಗಿನಿಂದಲೂ ಪುರುಷ ಮತ್ತು ಮಹಿಳೆ ನಡುವಿನ ಮದುವೆಯನ್ನು ಒಪ್ಪಿಕೊಳ್ಳಲಾಗಿದೆ. ಸಂತಾನೋತ್ಪತ್ತಿಗಾಗಿಯೂ ಈ ರೀತಿಯ ಮದುವೆಯನ್ನು ಒಪ್ಪಿಕೊಳ್ಳಲಾಗಿದೆ. ಆದರೆ ಸಲಿಂಗ ವಿವಾಹವನ್ನು ನ್ಯಾಯಾಂಗದ ಮೂಲಕ ಒಪ್ಪಿಕೊಳ್ಳುವುದು ದುರಂತವಾಗಬಹುದು. ಆದರೆ ಶಾಸಕಾಂಗ ಜನರಿಗಾಗಿ ಕೆಲಸ ಮಾಡುವುದರಿಂದ, ಇಂತಹ ಸೂಕ್ಷ್ಮ ವಿಚಾರಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲದು ಎಂದು ಬಾರ್ ಕೌನ್ಸಿಲ್ ಹೇಳಿದೆ.
ಇದನ್ನು ಓದಿ: ಸಲಿಂಗ ಸಂಬಂಧ ಭಾವನಾತ್ಮಕ ಬಾಂಧವ್ಯ: ಸುಪ್ರೀಂ ಸಿಜೆಐ
ಸಲಿಂಗ ವಿವಾಹ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದ ಬಳಿಕ ದೇಶದ ಜನ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೊಂಡಿದ್ದಾರೆ. ಅಲ್ಲದೇ ಶೇ.99.9 ರಷ್ಟು ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸುಪ್ರೀಂಕೋರ್ಟ್ ಅರ್ಜಿದಾರರ ಪರವಾಗಿ ತೀರ್ಪು ನೀಡಿದರೆ ಅದು ದೇಶದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ರಚನೆ ಧಕ್ಕೆ ತರಬಹುದು ಎಂದು ಜನ ಭಾವಿಸಿದ್ದಾರೆ ಎಂದು ಬಾರ್ ಕೌನ್ಸಿಲ್ ತನ್ನ ಮನವಿಯಲ್ಲಿ ತಿಳಿಸಿದೆ.
‘ಸುಪ್ರೀಂ ಕೋರ್ಟು ತನ್ನ ಸಮಗ್ರ ಅಧಿಕಾರ, ಪ್ರತಿಷ್ಠೆ ಹಾಗೂ ನೈತಿಕ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮಾನ್ಯತೆ ದೊರಕಿಸಿಕೊಡಬೇಕು. ಈ ಮೂಲಕ ಸಲಿಂಗಿಗಳು ಸಮಾಜದಲ್ಲಿ ಗೌರವಯುತ ಬಾಳ್ವೆ ನಡೆಸುವಂತೆ ಮಾಡಬೇಕು’ ಎಂದು ನ್ಯಾಯಾಲಯಕ್ಕೆ ಬುಧವಾರ ಸಲಿಂಗಿಗಳ ಪರ ವಕೀಲರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಲಿಂಗಿಗಳ ಮದುವೆಗೆ ಕೇಂದ್ರ ಸರ್ಕಾರದ ತೀವ್ರ ವಿರೋಧ: ಇಂದು ಸುಪ್ರೀಂನಲ್ಲಿ ಮಹತ್ವದ ವಿಚಾರಣೆ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠದ ಮುಂದೆ ಸತತ 2ನೇ ದಿನ ವಾದ ಮಂಡಿಸಿದ ಸಲಿಂಗಿಗಳ ಪರ ವಕೀಲ ಮುಕುಲ್ ರೋಹಟಗಿ, ‘ಸರ್ಕಾರವು ತಾನಾಗಿಯೇ ಮುಂದೆ ಬಂದು ಸಲಿಂಗ ವಿವಾಹಕ್ಕೆ ಮನ್ನಣೆ ನೀಡಬೇಕು’ ಎಂದು ಕೋರಿದ್ದರು ಹಾಗೂ ಇದೇ ವೇಳೆ ವಿಧವಾ ವಿವಾಹಕ್ಕೆ ಸಿಕ್ಕ ಮನ್ನಣೆಯನ್ನು ಉದಾಹರಿಸಿದರು. ‘ಸಮಾಜವು ಹೇಗೆ ವಿಧವಾ ವಿವಾಹಕ್ಕೆ ಮಾನ್ಯತೆ ನೀಡಿದೆಯೋ ಅದೇ ರೀತಿ ಈಗಲೂ ಸಲಿಂಗ ವಿವಾಹವನ್ನು ಮಾನ್ಯ ಮಾಡಬೇಕು’ ಎಂದು ಮನವಿ ಮಾಡಿದ್ದರು.
‘ಸಂವಿಧಾನದ 142ನೇ ಪರಿಚ್ಛೇದದ ಪ್ರಕಾರ, ಸುಪ್ರೀಂ ಕೋರ್ಟಿಗೆ ನೈತಿಕ ಅಧಿಕಾರವಿದೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನೂ ಇದರ ಮೂಲಕ ಸಂಪಾದಿಸಬಹುದು. ಏಕೆಂದರೆ ಈ ಪರಿಚ್ಛೇದವು ಸುಪ್ರೀಂ ಕೋರ್ಟ್‌ಗೆ, ನ್ಯಾಯ ಒದಗಿಸಬಲ್ಲ ಯಾವುದೇ ಅಗತ್ಯ ಆದೇಶ ಹೊರಡಿಸುವ ಸಮಗ್ರ ಅಧಿಕಾರ ನೀಡುತ್ತದೆ. ಹೀಗಾಗಿ ನಾವು ಕೋರ್ಟಿನ ಪ್ರತಿಷ್ಠೆ ಹಾಗೂ ನೈತಿಕ ಅಧಿಕಾರದ ಮೇಲೆ ಅವಲಂಬಿತರಾಗಿದ್ದು, ಈ ಮೂಲಕ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.
ಇದನ್ನೂ ಓದಿ: ಸಮಗ್ರ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮನ್ನಣೆ ನೀಡಿ: ಸುಪ್ರೀಂಕೋರ್ಟ್‌ಗೆ ಸಲಿಂಗಿಗಳ ಪರ ವಕೀಲರ ಮನವಿ
ಎಲ್ಲ ರಾಜ್ಯಗಳೂ ಪಕ್ಷಗಾರರಾಗಲಿ - ಕೇಂದ್ರ
ಈ ನಡುವೆ, ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಎಲ್ಲ ರಾಜ್ಯಗಳನ್ನೂ ಈ ಪ್ರಕರಣದಲ್ಲಿ ಪಕ್ಷಗಾರ ಮಾಡಬೇಕು’ ಎಂಬ ಅರ್ಜಿ ಸಲ್ಲಿಸಿದ್ದರು ಏಪ್ರಿಲ್ 18ರಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ಸಲಿಂಗ ವಿವಾಹಕ್ಕೆ ಮನ್ನಣೆ ನೀಡುವ ಬೇಡಿಕೆ ಸಂಬಂಧ ಅಭಿಪ್ರಾಯ ಕೋರಲಾಗಿದೆ. ಹೀಗಾಗಿ ರಾಜ್ಯಗಳನ್ನೂ ಪಕ್ಷಗಾರರನ್ನಾಗಿ ಮಾಡಬೇಕು. ಆಗ ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ಬಳಿಕ ಸಮಗ್ರ ಅಭಿಪ್ರಾಯವನ್ನು ಕೋರ್ಟಿಗೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅಫಿಡವಿಟ್ ಮೂಲಕ ಮೆಹ್ತಾ ಕೋರಿದರು. ಆದರೆ ರಾಜ್ಯಗಳು ಪಕ್ಷಗಾರ ಆಗುವುದು ಅಗತ್ಯವಿಲ್ಲ ಎಂದು ಸಲಿಂಗಿಗಳ ಪರ ವಕೀಲ ರೋಹಟಗಿ ಆಕ್ಷೇಪಿಸಿದರು.
ಇದನ್ನೂ ಓದಿ: ಧರ್ಮಗಳ ವಿವಾಹ ಕಾಯ್ದೆ ಅನ್ವಯ ಸಲಿಂಗ ವಿವಾಹ ವಿಚಾರಣೆ ನಡೆಸಲ್ಲ: ಸುಪ್ರೀಂ