
ನವದೆಹಲಿ: ದುಬೈನಿಂದ ಭಾರತದ ಜೈಪುರಕ್ಕೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಪ್ರಯಾಣಿಕನೋರ್ವ ಮಹಿಳಾ ಕ್ಯಾಬಿನ್ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ದುಬೈ-ಜೈಪುರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್‌ನಲ್ಲಿ ಈ ಘಟನೆ ನಡೆದಿದೆ. ಫ್ಲೈಟ್‌ನಲ್ಲಿ ಕೊಟ್ಟ ಮದ್ಯ ಕುಡಿದ ಆತ ಬಳಿಕ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಏರ್ ಇಂಡಿಯಾ ದೂರು ದಾಖಲಿಸಿದೆ.
ರಾಜಸ್ಥಾನದ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ಕೂಡಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಬಗ್ಗೆ ಏರ್‌ಪೋರ್ಟ್ ಪ್ರಾಧಿಕಾರಕ್ಕೆ ವರದಿ ಮಾಡಿದ್ದು, ಕ್ಯಾಬಿನ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ಏರ್‌ಲೈನ್ಸ್ ಪ್ರಕರಣ ದಾಖಲಿಸಿದೆ. ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರವೂ ಈ ಬಗ್ಗೆ ತನಿಖೆ ಆರಂಭಿಸಿದೆ.
ಈ ಬಗ್ಗೆ ಏರ್‌ಲೈನ್ಸ್ ಔಪಾಚಾರಿಕವಾಗಿ ದೂರು ನೀಡಿದೆ. ಈ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಂಬಂಧಿತ ಮೂಲವೊಂದು ಹೇಳಿದೆ.
ಪ್ರಸ್ತುತ ತನಿಖೆ ನಡೆಯುತ್ತಿರುವುದರಿಂದ ಆರೋಪಿ ಪ್ರಯಾಣಿಕನ ಗುರುತು ಅಥವಾ ಆಪಾದಿತ ದುಷ್ಕೃತ್ಯದ ನಿಖರ ಸ್ವರೂಪದ ಬಗ್ಗೆ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಬಿಡುಗಡೆ ಮಾಡಲಾಗಿಲ್ಲ.
ಇಂತಹ ಪ್ರಕರಣಗಳು ಹೊಸದೇನಲ್ಲ, ನಿನ್ನೆಯಷ್ಟೇ ಪಂಜಾಬ್‌ನ ಅಮೃತಸರದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೋರ್ವ ಕ್ಯಾಬಿನ್ ಕ್ರಿವ್ ಜೊತೆ ಅಸಭ್ಯವಾಗಿ ವರ್ತಿಸಿದ್ದ, ಜೂನ್ 28ರಂದು ಏರ್ ಇಂಡಿಯಾ ವಿಮಾನ AI454 ರಲ್ಲಿ ಘಟನೆ ನಡೆದಿತ್ತು. ವಿಮಾನ ಲ್ಯಾಂಡ್ ಆಗುವ ವೇಳೆ ಈ ಘಟನೆ ನಡೆದಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ಪ್ರಕಟಣೆ ನೀಡಿತ್ತು. ಅದರಂತೆ ವಿಮಾನ ಇನ್ನೇನು ಲ್ಯಾಂಡ್ ಆಗುವ ಸ್ಥಿತಿಯಲ್ಲಿದ್ದಾಗ ಇಬ್ಬರು ಪ್ಯಾಸೆಂಜರ್‌ಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.ಅವರಲ್ಲೊಬ್ಬ ಪ್ರಯಾಣಿಕ ಮತ್ತೊಬ್ಬ ಪ್ರಯಾಣಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರಿದ್ದಾನೆ. ಹೀಗಾಗಿ ಕೂಡಲೇ ಅಲ್ಲಿ ವಿಮಾನದ ಸಿಬ್ಬಂದಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದಾರೆ.
ಇಳಿಯಲು ಕ್ಯಾಬಿನ್ ಸಿದ್ಧತೆ ನಡೆಸುತ್ತಿದ್ದಾಗ, ಪ್ರಯಾಣಿಕರೊಬ್ಬರು ಹಜಾರದಲ್ಲಿ ನಿಂತಿದ್ದನ್ನುನಮ್ಮ ಕ್ಯಾಬಿನ್ ಸಿಬ್ಬಂದಿಯೊಬ್ಬ ಗಮನಿಸಿದರು, ಆತ, ಮತ್ತೊಬ್ಬ ಪ್ರಯಾಣಿಕರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದರು. ಎರಡನೇ ಪ್ರಯಾಣಿಕನು ಕೂಡ ಆ ವ್ಯಕ್ತಿಯಿಂದ ನಿಂದನೆಗೊಳಗಾಗುತ್ತಿದ್ದಾನೆ ಎಂದು ಸಿಬ್ಬಂದಿಗೆ ವರದಿ ಮಾಡಿದನು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಕೂಡಲೇ ಮಧ್ಯಪ್ರವೇಶಿಸಿದರು ಹಾಗೂ ತೊಂದರೆಗೊಳಗಾದ ಪ್ರಯಾಣಿಕನನ್ನು ವಿಮಾನದ ಬಿಸಿನೆಸ್ ಕ್ಲಾಸ್ ಸೀಟಿಗೆ ಸ್ಥಳಾಂತರಿಸಿದರು. ನಂತರ ವಿಮಾನ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ವಿಮಾನದ ಪೈಲಟ್ ಈಗಾಗಲೇ ವಿಮಾನಯಾನ ಸಂಸ್ಥೆಯ ಭದ್ರತಾ ತಂಡಕ್ಕೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದರಿಂದ ಅಲ್ಲಿ ಸಮಸ್ಯೆ ಪರಿಹರಿಸಲು ಸನ್ನದ್ಧವಾಗಿತ್ತು. ಅವರಿಗೆ ವಿಮಾನದಲ್ಲಿ ಜಗಳ ಮಾಡಿದ ವ್ಯಕ್ತಿಯನ್ನು ಹಸ್ತಾಂತರಿಸಲಾಯ್ತು.
ನಮ್ಮ ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಎರಡನೇ ಪ್ರಯಾಣಿಕರನ್ನು ಲ್ಯಾಂಡಿಂಗ್ ಸಮಯದಲ್ಲಿ ಬಿಸಿನೆಸ್ ಕ್ಲಾಸ್ ಸೀಟಿನಲ್ಲಿ ಸ್ಥಳಾಂತರಿಸುವ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಎರಡನೇ ಪ್ರಯಾಣಿಕರ ದೂರಿನ ನಂತರ, ಪೈಲಟ್-ಇನ್-ಕಮಾಂಡ್ ವಿಮಾನ ದೆಹಲಿಗೆ ಆಗಮಿಸಿದಾಗ ಸ್ಥಳದಲ್ಲಿದ್ದ ನಮ್ಮ ಭದ್ರತಾ ತಂಡಕ್ಕೆ ಪರಿಸ್ಥಿತಿಯ ಬಗ್ಗೆ ತಿಳಿಸಿದರು. ಅಡ್ಡಿಪಡಿಸಿದ ಪ್ರಯಾಣಿಕನನ್ನು ಹೆಚ್ಚಿನ ತನಿಖೆಗಾಗಿ ವಿಮಾನ ನಿಲ್ದಾಣದ ಭದ್ರತೆಗೆ ಹಸ್ತಾಂತರಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನಗಳಲ್ಲಿ ಪ್ರಯಾಣಿಕರ ದುರ್ವರ್ತನೆಯ ಘಟನೆಗಳ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ. ವಿಮಾನಯಾನ ಸಂಸ್ಥೆಗಳು ಅಂತಹ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತವೆ ಮತ್ತು ವರದಿಯಾದ ಪ್ರತಿಯೊಂದು ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡಲು ಆಂತರಿಕ ಸಮಿತಿಯನ್ನು ರಚಿಸುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ