ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯದಂತೆ ರೈಲ್ವೆ ಇಲಾಖೆಯನ್ನು ಜನಸ್ನೇಹಿಯಾಗಿಸುವ ಗುರಿಯೊಂದಿಗೆ ಹೆಜ್ಜೆ ಇಟ್ಟಿದ್ದು, ದೇಶದ ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಈ ಬಾರಿ ಬಜೆಟ್‌ನಲ್ಲಿಯೂ ರಾಜ್ಯಕ್ಕೆ ಹಲವಾರು ರೈಲ್ವೆ ಯೋಜನೆಗಳನ್ನು ಘೋಷಿಸಿದೆ. ಅಲ್ಲದೆ, ನೆನೆಗುದಿಗೆ ಬಿದ್ದಿರುವ ಹಳೆಯ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಸಂಕಲ್ಪ ಮಾಡಿರುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿಕೊಂಡಿದ್ದಾರೆ. ಮೋದಿ ಸರ್ಕಾರ 2.0 ಅಸ್ತಿತ್ವಕ್ಕೆ ಬಂದು ಮೇ 30ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಡೆಸಿದ ಸಂದರ್ಶನದಲ್ಲಿ ಮಾತು.
ಸಂದರ್ಶನ: ಶ್ರೀಶೈಲ ಮಠದ ಬೆಳಗಾವಿ
* ಬೆಳಗಾವಿಗೆ ನಿಮ್ಮ ಕೊಡುಗೆ ಏನು?
undefined
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಮೊದಲ ಹಂತದಲ್ಲೇ ದೇಶದ 20 ಮಹಾನಗರಗಳಲ್ಲಿ ಬೆಳಗಾವಿ ನಗರವೂ ಆಯ್ಕೆಯಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಳಗಾವಿ ನಗರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ನಗರದ ಎಲ್ಲೆಡೆ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಭರದಿಂದ ಸಾಗಿವೆ. ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ನಗರದ ಸಂಚಾರ ದಟ್ಟಣೆ ನಿಯಂತ್ರಿಸುವುದು, ರಸ್ತೆಗಳ ಅಭಿವೃದ್ಧಿ, ಯೋಜನಾ ಬದ್ಧ ನಗರ ರಚನೆ ಹೀಗೆ ಬೆಳಗಾವಿ ಚಿತ್ರಣವೇ ಸಂಪೂರ್ಣವಾಗಿ ಬದಲಾಗಲಿದೆ. ನಗರದ ಸಂಚಾರ ದಟ್ಟಣೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ನಗರದ ಕಪಿಲೇಶ್ವರ ರಸ್ತೆ, ಹಳೆಯ ಪಿಬಿ ರಸ್ತೆ, ಖಾನಾಪುರ ರಸ್ತೆಯ ರೇಲ್ವೆ ನಿಲ್ದಾಣದ ಬಳಿ ಈಗಾಗಲೇ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಟಿಳಕವಾಡಿಯ ನಾಲ್ಕನೇ ಗೇಟ್ ಬಳಿಯೂ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ಉಡಾನ್ ಯೋಜನೆಯಡಿ ಹೊಸ ವಿಮಾನ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಉತ್ತರ ಕರ್ನಾಟಕದ ಪರ್ಯಾಯ ಶಕ್ತಿ ಕೇಂದ್ರ ಸುವರ್ಣವಿಧಾನಸೌಧ ಕಟ್ಟಡ ನಿರ್ಮಿಸುವಲ್ಲಿಯೂ ನನ್ನ ಪ್ರಯತ್ನ ಕೂಡ ಇದೆ. ಈ ಮೂಲಕ ಬೆಳಗಾವಿ ನಗರಕ್ಕೆ ಎರಡನೇ ರಾಜಧಾನಿ ಸ್ಥಾನಮಾನ ನೀಡಿದ ಹೆಮ್ಮೆಯೂ ನನಗಿದೆ.
* ನಿಮ್ಮ ಅವಧಿಯಲ್ಲಿನ ಹೊಸ ಯೋಜನೆಗಳೇನು?
.988 ಕೋಟಿ ಅಂದಾಜು ಮೊತ್ತದ ಧಾರವಾಡ- ಚನ್ನಮ್ಮನ ಕಿತ್ತೂರು ಮೂಲಕ ಹಾದು ಬೆಳಗಾವಿಗೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡಲು ಈಗಾಗಲೇ ಒಪ್ಪಿಗೆ ನೀಡಲಾಗಿದೆ. ಕಿತ್ತೂರು ಕೈಗಾರಿಕೆ ಪ್ರದೇಶದಲ್ಲಿ ರೈಲ್ವೆ ಇಲಾಖೆಯ ಉತ್ಪನ್ನಗಳ ತಯಾರಿಕೆ ಮತ್ತು ರಪ್ತು ಮಾಡುವ ರೈಲ್ವೆ ಕಾರ್ಖಾನೆ ಸ್ಥಾಪನೆಗೂ ಈಗಾಗಲೇ ಯೋಜಿಸಲಾಗಿದೆ. ಕೈಗಾರಿಕೆ ಸ್ಥಾಪನೆಗೆ 300ರಿಂದ 400 ಎಕರೆ ಜಮೀನು ಅಗತ್ಯವಿದೆ. ಹೀಗಾಗಿ ಒಂದು ವೇಳೆ ರಾಜ್ಯ ಸರ್ಕಾರ ಜಮೀನು ಒದಗಿಸಿದರೆ ಹೂಡಿಕೆ ಮಾಡಲು ವಿದೇಶಿ ಕಂಪನಿಗಳು ಮುಂದೆ ಬರಲಿವೆ. ಇದರಿಂದಾಗಿ ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗಾವಕಾಶ ಹೆಚ್ಚುತ್ತದೆ. ನಗರದ ಗೂಡ್‌ಶೆಡ್ ಅನ್ನು ಸಾಂಬ್ರಾಕ್ಕೆ ಸ್ಥಳಾಂತರಿಸಲಾಗಿದೆ. ಬೆಳಗಾವಿ- ಬೆಂಗಳೂರು ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ. ಇದರಿಂದ ಸಾಕಷ್ಟುಜನರಿಗೆ ಅನುಕೂಲವಾಗಿದೆ. ಅದೇ ರೀತಿ ಬೆಳಗಾವಿ ರೈಲ್ವೆ ನಿಲ್ದಾಣವನ್ನು ಎ ದರ್ಜೆ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಹುಬ್ಬಳ್ಳಿ- ಹೊಸಪೇಟೆ- ಬಳ್ಳಾರಿ ರೈಲು ಸೇವೆಯನ್ನೂ ಆರಂಭಿಸಲಾಗಿದೆ. ಅಂದಾಜು .360 ಕೋಟಿ ವೆಚ್ಚದಲ್ಲಿ ಮೀರಜ್- ಬೆಂಗಳೂರು ರೈಲ್ವೆ ಮಾರ್ಗದ ಡಬ್ಲಿಂಗ್ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಯ ರೈಲ್ವೆ ನಿಲ್ದಾಣವನ್ನಾಗಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಸಬ್ ಅರ್ಬನ್ ಯೋಜನೆ ಜಾರಿಗೆ ಅನುಮತಿ ನೀಡಲಾಗಿದೆ. ಒಟ್ಟು .18,600 ಕೋಟಿ ವೆಚ್ಚದಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.
* ನಿಮ್ಮ ಇಲಾಖೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?
ರೈಲ್ವೆ ಇಲಾಖೆಯಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೈಲು ನಿಲ್ದಾಣಗಳಿಗೆ ವಿದೇಶಿಯರು ಮತ್ತು ವಿವಿಧ ರಾಜ್ಯಗಳ ಜನರು ಆಗಮಿಸುತ್ತಾರೆ. ಅವರಿಗೆ ಹಿಂದಿ, ಇಂಗ್ಲಿಷ್ ಹಾಗೂ ಕನ್ನಡದಲ್ಲಿಯೂ ಮಾಹಿತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯಾಗಿ ರೈಲ್ವೆ ಇಲಾಖೆಯಲ್ಲಿ ಕನ್ನಡ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ರೈಲು ನಿಲ್ದಾಣಗಳಲ್ಲಿ ಈಗಾಗಲೇ ಕನ್ನಡ ಭಾಷೆಯಲ್ಲಿ ಘೋಷಣೆಗಳನ್ನು ಮಾಡಲಾಗುತ್ತಿದೆ. ಪ್ರಯಾಣದ ಮಾಹಿತಿಯೂ ಕನ್ನಡದಲ್ಲಿ ದೊರೆಯುತ್ತಿದೆ. ರಾಜ್ಯದ ರೈಲು ಯೋಜನೆ ಮತ್ತು ಕಾರ್ಯಕ್ರಮಗಳ ಮಾಹಿತಿಯನ್ನು ಕನ್ನಡದಲ್ಲೆ ನೀಡಲಾಗುತ್ತಿದೆ. ಕನ್ನಡ ಭಾಷೆ ಬಲ್ಲ ಅಧಿಕಾರಿಗಳು ಸಾಕಷ್ಟುಜನರಿದ್ದಾರೆ. ಬರುವ ದಿನಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಇನ್ನಷ್ಟುಒತ್ತು ನೀಡಲಾಗುತ್ತದೆ. ಇದಕ್ಕಾಗಿ ಅಗತ್ಯ ಅಧಿಕಾರಿ, ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗುವುದು. ರೈಲ್ವೆ ಇಲಾಖೆ ರಾಷ್ಟ್ರೀಯ ಭಾಷೆ ಹಿಂದಿ, ಇದಕ್ಕೆ ಪೂರಕವಾಗಿ ಇಂಗ್ಲಿಷ್ ಮತ್ತು ಆಯಾ ಪ್ರಾದೇಶಿಕ ಭಾಷೆಗಳನ್ನು ಬಳಕೆ ಮಾಡುತ್ತಿದೆ. ಸಂವಿಧಾನದಲ್ಲೂ ಇದಕ್ಕೆ ಅವಕಾಶವಿದೆ. ಹೀಗಾಗಿ ಕನ್ನಡ ಭಾಷೆಯ ವಿಷಯವಾಗಿ ಇಲಾಖೆಯಲ್ಲಿ ನನ್ನಿಂದ ಏನು ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಮಾಡುತ್ತೇನೆ.
* ಮಹದಾಯಿ ವಿಚಾರ ಎಲ್ಲಿಗೆ ಬಂತು?
ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನೀರಿನ ಹಂಚಿಕೆ ಕುರಿತಂತೆ ಐತೀರ್ಪು ಪ್ರಕಟವಾಗಿತ್ತು. ಈ ತೀರ್ಪಿನನ್ವಯ ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಬೇಕಿತ್ತು. ಮಹದಾಯಿ ಜಲ ಯೋಜನೆಗೆ ಚಾಲನೆ ನೀಡಲು ಕೇಂದ್ರದ ಗೆಜೆಟ್ ಪ್ರಕಟಣೆ ಅತ್ಯಗತ್ಯವಾಗಿತ್ತು. ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಿರೋದು ಉತ್ತರ ಕರ್ನಾಟಕ ಭಾಗಕ್ಕೆ ಅದರಲ್ಲೂ ಮಹದಾಯಿ ಅಚ್ಚುಕಟ್ಟು ವ್ಯಾಪ್ತಿಯ ಜನಕ್ಕೆ ಸಿಹಿ ಸುದ್ದಿ ಕೊಟ್ಟಂತಾಗಿದೆ. ಕಳಸಾ ಬಂಡೂರಿನ ನೀರಾವರಿ ಯೋಜನೆ ಜಾರಿಗೆ ಇದ್ದ ಅಡೆತಡೆಗಳು ಕೂಡ ದೂರವಾಗಿವೆ.
ಕಳಸಾ-ಬಂಡೂರಿ ಯೋಜನೆಗೆ ನೀರು ಹರಿಸಲು ಗೆಜೆಟ್ ಅಧಿಸೂಚನೆ ಮೂಲಕ ಸಮ್ಮತಿ ಸಿಕ್ಕಿದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಕೇಂದ್ರ ಸರ್ಕಾರವು ಈ ಅಧಿಸೂಚನೆಯನ್ನು ಹೊರಡಿಸಿದೆ. 13.42 ಟಿಎಂಸಿ ನೀರು ಬಳಕೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಜಲವಿದ್ಯುತ್ ಯೋಜನೆಗೂ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ… ನೀಡಿದೆ. ಕಳಸಾ ಯೋಜನೆಗೆ 1.72 ಟಿಎಂಸಿ, ಬಂಡೂರಿಗೆ 2.18 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಕುಡಿಯುವ ನೀರಿಗಾಗಿ 3.98 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಎಲ್ಲ ಅಗತ್ಯ ನೆರವು ನೀಡಲಿದೆ.
* ಕಾಮಗಾರಿಗಳು ವಿಳಂಬವಾಗುತ್ತಿದೆ ಎಂಬ ಮಾತಿದೆಯಲ್ಲ?
ರೈಲ್ವೆ ಇಲಾಖೆಯಲ್ಲಿ ಹೊಸ ಯೋಜನೆಗಳ ಅನುಷ್ಠಾನ ಮತ್ತು ದಶಕಕ್ಕೂ ಪೂರ್ವದಿಂದಲೂ ಬಾಕಿ ಉಳಿದಿರುವ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗುವುದು. ಇಲಾಖೆಯಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಹೆಚ್ಚಿವೆ. ಆದ್ದರಿಂದ 2000ನೇ ಇಸವಿಯ ಹಿಂದಕ್ಕೂ ವಿವಿಧ ಕಾರಣಗಳಿಂದ ಅರ್ಧಕ್ಕೆ ನಿಂತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಆಸಕ್ತಿ ವಹಿಸಲಾಗುವುದು. ಇದರಿಂದ ಕರ್ನಾಟಕಕ್ಕೂ ಹೆಚ್ಚಿನ ರೈಲ್ವೆ ಸೌಲಭ್ಯಗಳು ಸಿಗುತ್ತವೆ. ಕೋಲಾರದಲ್ಲಿ ರೈಲು ಬೋಗಿಗಳ ನಿರ್ಮಾಣ ಕಾರ್ಖಾನೆ ತೆರೆಯಲು ತೀರ್ಮಾನ ಮಾಡಲಾಗಿದ್ದು, ಶಿವಮೊಗ್ಗ, ಶಿಕಾರಿಪುರ ಮತ್ತು ರಾಣೆಬೆನ್ನೂರು ಹೊಸ ರೈಲ್ವೆ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ ಸರ್ವೆ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ಶೃಂಗೇರಿ ಮತ್ತು ಮಂಗಳೂರಿನ 227.60 ಕಿಲೋ ಮೀಟರ್ ಉದ್ದದ ಹೊಸ ರೈಲ್ವೆ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.
ಒಟ್ಟು 20 ರೈಲ್ವೆ ನಿಲ್ದಾಣಗಳನ್ನು ಎ ದರ್ಜೆಗೇರಿಸಲು ತೀರ್ಮಾನ ಮಾಡಲಾಗಿದೆ. ಬೆಂಗಳೂರು ಸಿಟಿ ಎ-1, ಯಶವಂತಪುರ ಎ-1, ಕಲಬುರಗಿ-ಎ, ರಾಯಚೂರು, ಯಾದಗಿರಿ, ಮಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಬಂಗಾರಪೇಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಹೊಸಪೇಟೆ, ಹುಬ್ಬಳ್ಳಿ, ಕೆಂಗೇರಿ, ಕೃಷ್ಣಾರಾಜಪುರ, ಮೈಸೂರು, ಶಿವಮೊಗ್ಗ ಟೌನ್ ನಿಲ್ದಾಣಗಳನ್ನು ಎ ದರ್ಜೆಗೆ ಏರಿಸಲಾಗಿದೆ.
* ಲಾಕ್‌ಡೌನ್‌ನಿಂದ ಜನ ಸಂಕಷ್ಟದಲ್ಲಿದ್ದಾರಲ್ಲ. ಮುಂದೇನು?
ಮಹಾಮಾರಿ ಕೊರೋನಾ ತಡೆಗಟ್ಟಲು ಭಾರತ ಸರ್ಕಾರ ತೆಗೆದುಕೊಂಡ ಮುನ್ನೆಚ್ಚರಿಕೆ ಮತ್ತು ದಿಟ್ಟಕ್ರಮದಿಂದ ಇಡಿ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದೆ. ಕೊರೋನಾ ಹರಡುವುದನ್ನು ಪ್ರಾಥಮಿಕ ಹಂತದಲ್ಲಿ ತಡೆಗಟ್ಟಲು ಸರ್ಕಾರ ತೆಗೆದುಕೊಂಡ ನಿಲುವುಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಶ್ವಕ್ಕೆ ಭಾರತ ಮಾದರಿ ಎಂದಿದೆ. ಕೊರೋನಾ ಸೋಂಕು ತಡೆಯಲು ಪ್ರಧಾನಿ ಕಚೇರಿ ಸೇರಿದಂತೆ ದೇಶವೇ ಒಂದಾಗಿ ನಿಂತಿರುವುದು ಅತ್ಯಂತ ಶ್ಲಾಘನೀಯ. ದೇಶದ ಜನರು ಲಾಕ್‌ಡೌನ್ ಅನ್ನು ಪಾಲನೆ ಮಾಡಿರುವುದರಿಂದ ಸೋಂಕನ್ನು ತಡೆಯಲು ಸಾಧ್ಯವಾಗಿದೆ. ಲಾಕ್‌ಡೌನ್ ಸಂಕಷ್ಟದಲ್ಲಿರುವ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು .20 ಲಕ್ಷ ಕೋಟಿ ಘೋಷಣೆ ಮಾಡುವ ಮೂಲಕ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಕೊರೋನಾ ಸೋಂಕಿನ ವಿರುದ್ಧ ನಾವೂ ಇನ್ನು ಹೋರಾಡಬೇಕಿದೆ. ಕೊರೋನಾ ಕುರಿತು ಭಯ ಬೇಡ. ಜಾಗೃತಿ ಬೇಕಿದೆ.
* ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆಗಿನ ಒಡನಾಟ ಹೇಗಿದೆ?
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನನ್ನ ಜೊತೆಗೆ ಸಂಬಂಧ ಅನ್ಯೋನ್ಯವಾಗಿದೆ. ಅನೇಕ ಸಂದರ್ಭಗಳಲ್ಲಿ ನನಗೆ ಸಲಹೆ, ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ನನ್ನಿಂದಲೂ ಅನೇಕ ಸಲಹೆಗಳನ್ನು ಕೇಳಿದ್ದಾರೆ. ಪ್ರಮುಖವಾಗಿ ದೇಶದ ಅನ್ನದಾತರಿಗೆ ಗೌರವ ಸಿಗುತ್ತಿಲ್ಲ ಎಂಬ ವಿಚಾರವನ್ನು ನಾನೇ ಮೊದಲಬಾರಿಗೆ ಪ್ರಧಾನಮಂತ್ರಿಗಳ ಗಮನ ಸೆಳೆದಿದ್ದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು. ಕಿಸಾನ್ ರೈಲನ್ನು ಕೊಡುವ ಮೂಲಕ ರೈತರಿಗೆ ಗೌರವ ಸಲ್ಲಿಸಿದ ಶ್ರೇಯಸ್ಸು ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ಜಗತ್ತಿನ ಅಗ್ರಗಣ್ಯ ನಾಯಕರು. ಅತ್ಯಂತ ಬಡತನ ಹಿನ್ನೆಲೆಯಿಂದ ಬಂದು, ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿದ ಹುಡುಗ ಮೋದಿ ಅವರು, ಇಂದು ಪ್ರಧಾನಮಂತ್ರಿ ಪಟ್ಟಅಲಂಕರಿಸಿದ್ದಾರೆ. ಅವರಿಗೆ ಶ್ರಮಿಕರ ಬಗ್ಗೆ ಅತ್ಯಂತ ಕಾಳಜಿ ಅಷ್ಟೇ ಕಳಕಳಿಯೂ ಇದೆ. ಮಹಾಮಾನವತಾವಾದಿ ಬಸವಣ್ಣವರ ಕಾಯಕ ಪರಿಕಲ್ಪನೆಯನ್ನು ಮೋದಿ ಅವರು ಇಂದು ಸಾಕಾರಗೊಳಿಸುತ್ತಿದ್ದಾರೆ. ಮಹಾಮಾರಿ ಕೊರೋನಾ ವೈರಸ್ ಸೋಂಕು ತಡೆಯುವಿಕೆಗೆ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಸಂಕಷ್ಟಕ್ಕೀಡಾಗಿರುವ ದೇಶದ ಜನತೆಗೆ ಅನುಕೂಲವಾಗುವಂತೆ .20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಮೂಲಕ ದೇಶದ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ನರೇಂದ್ರ ಮೋದಿ ಅವರು ಆಧುನಿಕ ಭಕ್ತ ಭಂಡಾರಿ ಬಸವಣ್ಣನವರಾಗಿದ್ದಾರೆ.