ಮಹಿಳಾ ದಿನದ ಸ್ಮರಣೆ: ಮುಂದುವರಿದಿದೆ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಅನ್ವೇಷಣೆ!

Published : Mar 08, 2025, 11:05 AM ISTUpdated : Mar 08, 2025, 11:07 AM IST
ಮಹಿಳಾ ದಿನದ ಸ್ಮರಣೆ: ಮುಂದುವರಿದಿದೆ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಅನ್ವೇಷಣೆ!

ಸಾರಾಂಶ

ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಸಾಧನೆಗಳನ್ನು ಸ್ಮರಿಸೋಣ. ಅವರ ಅನಿರೀಕ್ಷಿತ ಬಾಹ್ಯಾಕಾಶ ವಾಸ ಮತ್ತು ಧೈರ್ಯ ಎಲ್ಲರಿಗೂ ಸ್ಫೂರ್ತಿ.

- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಸಮಸ್ತ ಜಗತ್ತು ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಾ, ಅಡೆತಡೆಗಳನ್ನು ಭೇದಿಸಿ, ಮಿತಿಗಳನ್ನು ದಾಟಿ, ಅಸಾಧಾರಣ ಸಾಧನೆಗೈದ ಅಸಂಖ್ಯಾತ ಮಹಿಳೆಯರನ್ನು ಗೌರವಿಸುತ್ತದೆ. ಅಂತಹ ಸಾಧಕ ಮಹಿಳೆಯರ ಪೈಕಿ, ಸುನಿತಾ ವಿಲಿಯಮ್ಸ್ ಅವರು ದೃಢ ಸಂಕಲ್ಪ ಮತ್ತು ಬಾಹ್ಯಾಕಾಶದ ಎಲ್ಲ ಮಿತಿಗಳನ್ನೂ ಮೀರಿ, ನಮಗೆ ತಿಳಿಯದ ಬಾಹ್ಯಾಕಾಶವನ್ನು ಅನ್ವೇಷಿಸುವ ಮೂಲಕ ಶ್ರೇಷ್ಠ ಸಾಧಕಿಯಾಗಿ ಹೊರಹೊಮ್ಮಿದ್ದಾರೆ. ಬಾಹ್ಯಾಕಾಶದ ಮಿತಿಗಳು ಮಾತ್ರವಲ್ಲದೆ, 'ಸಮಯ'ವನ್ನೂ ಅವರು ಮೀರಿದ್ದಾರೆ! ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ (ಐಎಸ್ಎಸ್) ಅವರ ಇತ್ತೀಚಿನ ಯೋಜನೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡು, ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳ ಸಾಧನೆ ಮತ್ತು ಸವಾಲುಗಳಿಗೆ ಸಾಕ್ಷಿ ನುಡಿದಿದೆ.

ಬಾಹ್ಯಾಕಾಶದಲ್ಲಿ ಸಾಧನೆ; ಅನಿರೀಕ್ಷಿತ ವಿಳಂಬ

59 ವರ್ಷ ವಯಸ್ಸಿನ, ಭಾರತೀಯ ಅಮೆರಿಕನ್ ಆಗಿರುವ ಸುನಿತಾ ವಿಲಿಯಮ್ಸ್ ಅವರು ತನ್ನ ವೃತ್ತಿಜೀವನದಲ್ಲಿ ಹಲವು ಅಸಾಧಾರಣ ಸಾಧನೆಗಳನ್ನು ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ನೇತೃತ್ವ ವಹಿಸಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಕೀರ್ತಿ ಸಂಪಾದಿಸಿರುವ ಸುನಿತಾ, ಎರಡು ದೀರ್ಘಾವಧಿಯ ಬಾಹ್ಯಾಕಾಶ ಯಾನಗಳನ್ನು ಪೂರ್ಣಗೊಳಿಸಿದ್ದಾರೆ. ನಕ್ಷತ್ರಗಳತ್ತ ಅವರ ಪಯಣ ಮಹಿಳಾ ದಿನದ ಸಾರವಾದ ಲಿಂಗ ಸಮಾನತೆಯ ಹೋರಾಟ, ಮತ್ತು ಅಡೆತಡೆಗಳನ್ನು ಮುರಿಯಲು ಅಚಲ ಚೈತನ್ಯವನ್ನು ಪ್ರತಿನಿಧಿಸಿದೆ.  ಪ್ರತಿಭೆ ಮತ್ತು ದೃಢ ನಿಶ್ಚಯಗಳು ಲಿಂಗ ತಾರತಮ್ಯವನ್ನು ಮೀರಲು ನೆರವಾಗುತ್ತವೆ ಎಂದು ಸುನಿತಾ ವಿಲಿಯಮ್ಸ್ ನಿರಂತರವಾಗಿ ಸಾಬೀತುಪಡಿಸಿದ್ದು, ಜಗತ್ತಿನಾದ್ಯಂತ ಯುವತಿಯರಿಗೆ ಸ್ಫೂರ್ತಿಯ ಉದಾಹರಣೆಯಾಗಿದ್ದಾರೆ.

ಆದರೆ, ಐಎಸ್ಎಸ್‌ಗೆ ತೆರಳಿರುವ ಅವರ ಇತ್ತೀಚಿನ ಯೋಜನೆ ಹಲವಾರು ಅನಿರೀಕ್ಷಿತ ಸವಾಲುಗಳನ್ನು ಎದುರಿಸಿತು. ಜೂನ್ 5, 2024ರಂದು ಸುನಿತಾ ವಿಲಿಯಮ್ಸ್ ಮತ್ತು ನಾಸಾದ ಇನ್ನೋರ್ವ ಗಗನಯಾತ್ರಿ, ಅಮೆರಿಕನ್ ನೌಕಾಪಡೆಯ ಪರೀಕ್ಷಾ ಪೈಲಟ್ ಬ್ಯಾರಿ ಯುಜೀನ್ ಬುಚ್ ವಿಲ್ಮೋರ್ ಅವರು ಏಳು ದಿನಗಳ ಯೋಜನೆಯ ಭಾಗವಾಗಿ, ಬೋಯಿಂಗ್ ಸಂಸ್ಥೆಯ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿದರು. ಈ ಬಾಹ್ಯಾಕಾಶ ನೌಕೆ, ಐಎಸ್ಎಸ್ ಮತ್ತು ಇತರ ಭೂಮಿಯ ಕೆಳ ಕಕ್ಷೆಯ (ಎಲ್ಇಒ) ಗುರಿಗಳಿಗೆ ಗಗನಯಾತ್ರಿಗಳನ್ನು ಕರೆದೊಯ್ಯುವ ಮತ್ತು ಮರಳಿ ಕರೆತರುವ ಸಲುವಾಗಿ, ಬೋಯಿಂಗ್ ಮತ್ತು ನಾಸಾದ ಸಹಯೋಗದಲ್ಲಿ ನಿರ್ಮಾಣಗೊಂಡಿತ್ತು.

ಇದನ್ನೂ ಓದಿ: Karnataka Budget 2025 highlights | ಮಹಿಳಾ ದಿನಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್‌ ಕೊಡುಗೆಗಳೇನು?

ಆದರೆ, ಸ್ಟಾರ್ ಲೈನರ್ ಹೊಂದಿದ್ದ ತಾಂತ್ರಿಕ ದೋಷಗಳ ಪರಿಣಾಮವಾಗಿ, ಈ ಯೋಜನೆ ಸಾಕಷ್ಟು ವಿಳಂಬ ಎದುರಿಸಿತು. ಬಹಳಷ್ಟು ಮಹಿಳೆಯರಿಗೆ ಬಾಹ್ಯಾಕಾಶ ಅನ್ವೇಷಣೆಯನ್ನು ವೃತ್ತಿಯಾಗಿಸಲು ಸ್ಫೂರ್ತಿ ನೀಡಿರುವ ಸುನಿತಾ ವಿಲಿಯಮ್ಸ್ ಅವರನ್ನು ಹೊತ್ತುಕೊಂಡು ಬೋಯಿಂಗ್ ಸ್ಟಾರ್ ಲೈನರ್ ಮೇ 7, 2024ರಂದು ಭಾರತೀಯ ಕಾಲಮಾನದ ಬೆಳಗಿನ 8:04ಕ್ಕೆ ಫ್ಲೋರಿಡಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೆ ಸಜ್ಜಾಗಿತ್ತು. ಆದರೆ, ಉಡಾವಣೆಗೆ ಕೇವಲ 90 ನಿಮಿಷಗಳು ಉಳಿದಿದ್ದಾಗ, ಅಟ್ಲಾಸ್ 5 ರಾಕೆಟ್ ಉಡಾವಣೆಯನ್ನು ರದ್ದುಪಡಿಸಲಾಯಿತು. ರಾಕೆಟ್‌ನ ಸೆಂಟಾರ್ ಅಪ್ಪರ್ ಸ್ಟೇಜ್‌ಗಳಲ್ಲಿ ಆಮ್ಲಜನಕ ಬಿಡುಗಡೆಯ ಕವಾಟದಲ್ಲಿ ದೋಷ ಇದೆಯೆಂದು ನಾಸಾ ಪತ್ತಹಚ್ಚಿದ್ದರಿಂದ ಯೋಜನೆಯನ್ನು ಮುಂದೂಡಲಾಯಿತು.

ಜೂನ್ ತಿಂಗಳ ಆರಂಭದಲ್ಲಿ, ಸುನಿತಾ ವಿಲಿಯಮ್ಸ್ ಐಎಸ್ಎಸ್‌ನಿಂದ ವೀಡಿಯೋ ಕರೆಯ ಮೂಲಕ ತನ್ನ ಊರಾದ ಮಸಾಚುಸೆಟ್ಸ್‌ನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳೊಡನೆ ಮಾತುಕತೆ ನಡೆಸಿದರು. ಬಾಹ್ಯಾಕಾಶಕ್ಕೆ ತೆರಳುವ ಪ್ರಯಾಣವನ್ನು ರೋಲರ್ ಕೋಸ್ಟರ್ ಸವಾರಿಗೆ ಹೋಲಿಸಿದ ಸುನಿತಾ ವಿಲಿಯಮ್ಸ್, ಭೂಮಿಯಿಂದ ನೂರಾರು ಮೈಲಿ ಎತ್ತರದಲ್ಲಿ ಜೀವಿಸುವುದು ಹೇಗೆ ಅನಿಸುತ್ತದೆ ಎಂದು ವಿವರಿಸಿದರು. 'ಬಾಹ್ಯಾಕಾಶದಲ್ಲಿ ಇರುವುದು ನಿಜಕ್ಕೂ ಮೋಜಿನ ಸಂಗತಿ' ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಅಲ್ಲಿನ ಶೂನ್ಯ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಸುನಿತಾ ವಿಲಿಯಮ್ಸ್ ಕೂದಲು ತಲೆಯ ಸುತ್ತಲೂ ತೇಲುವಂತೆ ಕಾಣುತ್ತಿತ್ತು. ಅವರು ಶೂನ್ಯ ಗುರುತ್ವಾಕರ್ಷಣೆಯಲ್ಲಿ ತಿರುಗುವುದನ್ನು ಪ್ರದರ್ಶಿಸಿ, ಬಾಹ್ಯಾಕಾಶದ ತೂಕಾರಾಹಿತ್ಯ ವಾತಾವರಣದಲ್ಲಿ ಸಮಯ ಕಳೆಯುವ ಕುರಿತು ವಿವರಿಸಿದರು. "ಕೆಲವೊಂದು ಬಾರಿ ನಾವು ಕಣ್ಣಾಮುಚ್ಚಾಲೆ ಆಡುತ್ತೇವೆ" ಎಂದು ಸುನಿತಾ ವಿಲಿಯಮ್ಸ್ ಹೇಳಿದಾಗ ಶಾಲಾ ಮಕ್ಕಳು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದರು!

ವೀಡಿಯೋ ಕರೆ ಮುಕ್ತಾಯಗೊಳ್ಳುವ ಸಮಯ ಬಂದಾಗ, ಒಬ್ಬ ವಿದ್ಯಾರ್ಥಿ ಮುಗ್ದವಾಗಿ "ನೀವು ಬಾಹ್ಯಾಕಾಶದಲ್ಲಿ ಇನ್ನೂ ಎಷ್ಟು ದಿನ ಇರುತ್ತೀರಿ?" ಎಂದು ಪ್ರಶ್ನಿಸಿದ. ಆಗ ಸುನಿತಾ ವಿಲಿಯಮ್ಸ್ ಉದ್ದೇಶಿತ ಎಂಟು ದಿನಗಳ ಬಾಹ್ಯಾಕಾಶ ಯೋಜನೆಯಲ್ಲಿ ನಾಲ್ಕು ದಿನಗಳನ್ನು ಪೂರ್ಣಗೊಳಿಸಿದ್ದರು. ಈ ಪ್ರಶ್ನೆಗೆ ನೇರವಾಗಿ ಉತ್ತರಿಸುವುದನ್ನು ತಪ್ಪಿಸಿದ ಸುನಿತಾ, "ನಾವು ಯಾವಾಗ ಭೂಮಿಗೆ ಮರಳುತ್ತೇವೆ ಎನ್ನುವುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ" ಎಂದಿದ್ದರು.

ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅಂದಿನಿಂದಲೂ ಐಎಸ್ಎಸ್‌ನಲ್ಲೇ ಉಳಿದುಕೊಂಡಿದ್ದಾರೆ. ಅವರು ಸಾಕಷ್ಟು ವಿಳಂಬ, ಬಾಹ್ಯಾಕಾಶ ತ್ಯಾಜ್ಯದ ಭೀತಿ, ಹೀಲಿಯಂ ಸೋರಿಕೆ ಮತ್ತು ಅವರು ಪ್ರಯಾಣಿಸಿದ ಬೋಯಿಂಗ್ ಸ್ಟಾರ್ ಲೈನರ್‌ನಲ್ಲಿ ತಾಂತ್ರಿಕ ದೋಷಗಳಂತಹ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಇವೆಲ್ಲ ಕಾರಣಗಳಿಂದ ಅವರ ಬಾಹ್ಯಾಕಾಶ ವಾಸ ಈಗ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಾಗಿದೆ.

ರಕ್ಷಣಾ ಯೋಜನೆಯ ಸಿದ್ಧತೆ!

ನಿರೀಕ್ಷೆಗೂ ಮೀರಿದ ಅವಧಿಯನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದರೂ, ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರು ಐಎಸ್ಎಸ್‌ನಲ್ಲಿ ಪ್ರಮುಖ ಸಂಶೋಧನೆಗಳು ಮತ್ತು ಕಾರ್ಯಾಚರಣೆಗಳಿಗೆ ಕೊಡುಗೆ ನೀಡಿದ್ದಾರೆ. ಅವರಿಬ್ಬರೂ ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಮಾರ್ಚ್ 25, 2025ರಂದು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಖಚಿತಪಡಿಸಿದೆ. ಮೂಲ ಯೋಜನೆಯಲ್ಲಿನ ಬದಲಾವಣೆಗಳು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಂದಿಕೊಳ್ಳುವಿಕೆ ಮತ್ತು ಸಹಕಾರಕ್ಕೆ ಇರುವ ಮಹತ್ವವನ್ನು ಪ್ರದರ್ಶಿಸಿವೆ.

 ಸುನಿತಾ ವಿಲಿಯಮ್ಸ್ ಸಾಧನೆಗಳ ಮಹತ್ವ

ಸುನಿತಾ ವಿಲಿಯಮ್ಸ್ ಸಾಧನೆಗಳು ಕೇವಲ ಅವರ ವೈಯಕ್ತಿಕ ಸಾಧನೆಗಳಲ್ಲ. ಅವು ಎಲ್ಲಾ ಕಡೆಯ ಮಹಿಳೆಯರ ಗೆಲುವೂ ಹೌದು. ನಾಸಾದ ಪ್ರಮುಖ ಬಾಹ್ಯಾಕಾಶ ಯೋಜನೆಯಲ್ಲಿ ಸುನಿತಾ ವಿಲಿಯಮ್ಸ್ ಅವರು ಭಾಗವಾಗಿರುವುದು ಮಹಿಳೆಯರ ಕುರಿತ ಹಳೆಯ ಕಾಲದ ಗ್ರಹಿಕೆಗಳನ್ನು ತೊಡೆದುಹಾಕಿ, ಹೊಸ ತಲೆಮಾರಿನ ಹೆಣ್ಣುಮಕ್ಕಳು ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್, ಮ್ಯಾತಮ್ಯಾಟಿಕ್ಸ್) ಕ್ಷೇತ್ರಗಳಲ್ಲಿ ವೃತ್ತಿಯನ್ನು ಆರಿಸಿಕೊಳ್ಳಲು ಸ್ಫೂರ್ತಿ ನೀಡಿದೆ. ಬಾಹ್ಯಾಕಾಶ ವಾಸ ಅನಿರೀಕ್ಷಿತವಾಗಿ ವಿಳಂಬಗೊಳ್ಳುತ್ತಾ ಹೋದರೂ, ಸುನಿತಾ ಅದನ್ನು ಧೈರ್ಯದಿಂದ ಎದುರಿಸಿದ್ದು ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಸಮರ್ಥ ಉದಾಹರಣೆಯಾಗಿದೆ.

ಸುನಿತಾ ವಿಲಿಯಮ್ಸ್ ವೃತ್ತಿಜೀವನ ಯುವತಿಯರಿಗೆ ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲೆಸೆಯಲು ಮತ್ತು ಸ್ಪೆಮ್ ಕ್ಷೇತ್ರದಲ್ಲಿ ಸಾಧನೆ ನಿರ್ಮಿಸಲು ಸ್ಫೂರ್ತಿ ತುಂಬುತ್ತಿದೆ. ಅವರ ಯಶೋಗಾಥೆ ಸಮಾನ ಅವಕಾಶದ ಮಹತ್ವವನ್ನು ಸಾರುತ್ತಿದ್ದು, ವಿವಿಧ ಸಂಸ್ಥೆಗಳಿಗೆ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹಿಳೆಯರು ಪ್ರವೃತ್ತರಾಗುವುದನ್ನು ಉತ್ತೇಜಿಸುವಂತೆ ಮಾಡಿದೆ.

ಬಾಹ್ಯಾಕಾಶ ಅನ್ವೇಷಣೆಯನ್ನೂ ಮೀರಿದ ಮಾದರಿ ವ್ಯಕ್ತಿತ್ವ

ಬಾಹ್ಯಾಕಾಶ ಅನ್ವೇಷಣೆಯಲ್ಲಿ ಸುನಿತಾ ವಿಲಿಯಮ್ಸ್ ಸಾಧನೆಗಳು ಗಮನಾರ್ಹವಾದರೂ, ಅವರ ಪರಿಣಾಮ ವಿಜ್ಞಾನ ಮತ್ತು ತಂತ್ರಜ್ಞಾನವನ್ನೂ ಮೀರಿವೆ. ಸುನಿತಾ ವಿಲಿಯಮ್ಸ್ ಅವರು ಕಠಿಣ ಪರಿಶ್ರಮ, ದೃಢ ನಿಶ್ಚಯ ಮತ್ತು ದೊಡ್ಡ ಕನಸು ಕಾಣುವುದು ಮುಖ್ಯ ಎಂದು ಹೇಳುತ್ತಲೇ ಬಂದಿದ್ದಾರೆ. ಅವರ ಸಂದೇಶಗಳು ಲಕ್ಷಾಂತರ ಜನರನ್ನು ತಲುಪಿದ್ದು, ಅಡೆತಡೆಗಳು ಇರುವುದೇ ಅವುಗಳನ್ನು ಮುರಿಯಲು ಎಂಬ ಭಾವನೆ ಮೂಡಿಸಿವೆ.

ಅನ್ವೇಷಣಾ ಯಶಸ್ಸಿನ ಸಂಭ್ರಮ

ಮಹಿಳಾ ದಿನಾಚರಣೆ ದೊಡ್ಡ ಕನಸು ಕಾಣುವ ಎಲ್ಲ ಮಹಿಳೆಯರನ್ನು ಗೌರವಿಸುವ ದಿನವಾಗಿದ್ದು, ಸುನಿತಾ ವಿಲಿಯಮ್ಸ್ ದೊಡ್ಡ ಕನಸನ್ನು ಕಂಡು, ಅದನ್ನು ನನಸಾಗಿಸಿದ್ದಾರೆ. ಅವರ ವೃತ್ತಿಜೀವನ, ಬಾಹ್ಯಾಕಾಶದ ಅನಿರೀಕ್ಷಿತ ಸುದೀರ್ಘ ವಾಸ ಮಹಿಳೆಯರೂ ಸಹ ಬೃಹತ್ ಕಾರ್ಯಗಳನ್ನು ನಡೆಸಲು ಸಮರ್ಥರು ಎಂಬುದನ್ನು ಸಾಬೀತುಪಡಿಸಿದೆ.

ಬಾಹ್ಯಾಕಾಶ ಯಾನಕ್ಕೆ ಸುನಿತಾ ಸಿದ್ಧತೆ

  • ಗಗನಯಾತ್ರಿ ತರಬೇತಿ ಆರಂಭ (1998)
  •  ರಷ್ಯಾದಲ್ಲಿ ರೊಬಾಟಿಕ್ಸ್ ಮತ್ತು ಇತರ ತಂತ್ರಜ್ಞಾನ ತರಬೇತಿ
  •  ಎಕ್ಸ್ಪೆಡಿಷನ್ 14/15ರಲ್ಲಿ ಭಾಗಿ (ಡಿಸೆಂಬರ್ 9, 2006 - ಜೂನ್ 22, 2007)
  •  ಎಕ್ಸ್ಪೆಡಿಷನ್ 32/33ರಲ್ಲಿ ಭಾಗಿ (ಜುಲೈ 14, 2012 - ನವೆಂಬರ್ 18, 2022)

ಸುನಿತಾ ವಿಲಿಯಮ್ಸ್ ಜೀವನವನ್ನು ರೂಪಿಸಿದ ವಿಚಾರಗಳು:

  •  ನೀಧಮ್ ಮಸಾಚುಸೆಟ್ಸ್ ನಲ್ಲಿ ಆರಂಭಿಕ ಜೀವನ
  •  ನೇವಲ್ ಅಕಾಡೆಮೆಯಲ್ಲಿ ಪತಿ ಮೈಕೆಲ್ ಭೇಟಿ
  •  2007ರಲ್ಲಿ ಮೊದಲ ಸ್ಪೇಸ್ ಮ್ಯಾರಥಾನ್ ಆದ ಬಾಸ್ಟನ್ ಮ್ಯಾರಥಾನ್‌ನಲ್ಲಿ‌ ಭಾಗಿ (4 ಗಂಟೆ, 24 ನಿಮಿಷ)

ಈ ಮಹಿಳಾ ದಿನದಂದು ನಾವು ಸುನಿತಾ ವಿಲಿಯಮ್ಸ್ ಅವರ ಜೀವನದಿಂದ ಸ್ಫೂರ್ತಿ ಹೊಂದೋಣ. ಅವರ ಧೈರ್ಯ, ಮತ್ತು ಬದ್ಧತೆಯನ್ನು ಸಂಭ್ರಮಿಸೋಣ. ಪ್ರತಿಯೊಬ್ಬ ಮಹಿಳೆಗೂ ನಕ್ಷತ್ರಗಳನ್ನು ತಲುಪಲು ಅವಕಾಶ ಲಭಿಸುವಂತಹ ಜಗತ್ತನ್ನು ನಿರ್ಮಿಸಲು ಪಣ ತೊಡೋಣ.

ಇದನ್ನೂ ಓದಿ: Karnataka Budget 2025: ಬೆಟ್ಟದಷ್ಟು ನಿರೀಕ್ಷೆಯಲ್ಲಿ ಹಲ್ಲುಕಡ್ಡಿಯಷ್ಟೂ ಈಡೇರಲಿಲ್ಲ!

ಮಹಿಳಾ ದಿನಾಚರಣೆಯ ಶುಭಾಶಯಗಳು!

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!