ಕೋವಿಡ್‌ಗೆ ಬಲಿಯಾದ 756 ವೈದ್ಯರ ಪೈಕಿ 168 ಜನರಿಗೆ ಮಾತ್ರ ವಿಮೆ ಲಭ್ಯ!

By Suvarna NewsFirst Published Apr 20, 2021, 12:52 PM IST
Highlights

ಕೋವಿಡ್‌ಗೆ ಬಲಿಯಾದ 756 ವೈದ್ಯರ ಪೈಕಿ 168 ಜನರಿಗೆ ಮಾತ್ರ ವಿಮೆ ಲಭ್ಯ!| ಕೊರೋನಾ ಯೋಧರಿಗೆ ಘೋಷಿಸಿದ್ದ 50 ಲಕ್ಷ ರು. ವಿಮೆ ಸೌಲಭ್ಯ

ನವದೆಹಲಿ(ಏ.20): ಕೊರೋನಾ ಯೋಧರಿಗಾಗಿ ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿದ್ದ ವಿಮಾ ಸೌಲಭ್ಯವು, ವೈದ್ಯಕೀಯ ಸಮುದಾಯಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಕರ್ತವ್ಯದ ವೇಳೆ ಸಾವನ್ನಪ್ಪಿದ 756 ವೈದ್ಯರ ಪೈಕಿ ಕೇವಲ 168 ವೈದ್ಯರಿಗೆ ಮಾತ್ರ ಅಂದರೆ 5ರಲ್ಲಿ ಕೇವಲ ಒಬ್ಬರಿಗೆ ಮಾತ್ರ ತಲಾ 50 ಲಕ್ಷ ರು. ವಿಮಾ ಸೌಲಭ್ಯ ಸಿಕ್ಕಿದೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯ ಅಂಕಿಸಂಖ್ಯೆಗಳು ಹೇಳಿವೆ.

ಕಳೆದ ವರ್ಷ ಕೇಂದ್ರ ಸರ್ಕಾರ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 22 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಸೌಲಭ್ಯ ಘೋಷಿಸಿತ್ತು. ಒಂದು ವೇಳೆ ಕರ್ತವ್ಯದ ವೇಳೆ ಸಾವನ್ನಪ್ಪಿದವರಿಗೆ ಅವರಿಗೆ ತಲಾ 50 ಲಕ್ಷ ರು. ವಿಮಾ ಪರಿಹಾರ ಸಿಗಲಿದೆ ಎಂದು ಹೇಳಿತ್ತು. ಆದರೆ ಇದೀಗ ಭಾರತೀಯ ವೈದ್ಯಕೀಯ ಮಂಡಳಿಯ ಲೆಕ್ಕದ ಅನ್ವಯ ಸೋಂಕಿಗೆ ಬಲಿಯಾದ 756 ವೈದ್ಯರ ಪೈಕಿ 168 ವೈದ್ಯರ ಕುಟುಂಬಕ್ಕೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದಂತೆ 119 ಇತರೆ ಆರೋಗ್ಯ ಸಿಬ್ಬಂದಿಗೆ ಮಾತ್ರವೇ ಯೋಜನೆ ಲಾಭ ಪಡೆದುಕೊಂಡಿದ್ದಾರೆ.

ಯೋಜನೆಯ ಲಾಭ ಪಡೆಯಲು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಠಿಣ ಮಾನದಂಡ ಮತ್ತು ವಿವಿಧ ಆಡಳಿತಾತ್ಮಕ ಅಡ್ಡಿಗಳಿಂದಾಗಿ ಹೆಚ್ಚಿನ ವೈದ್ಯರಿಗೆ ಇದರ ಲಾಭ ಸಿಕ್ಕಿಲ್ಲ ಎಂದು ವೈದ್ಯಕೀಯ ಮಂಡಳಿ ದೂರಿದೆ.

ಈ ನಡುವೆ ಕೊರೋನಾ ಯೋಧರಿಗೆ ನೀಡಲಾಗುತ್ತಿದ್ದ ವಿಮಾ ಸೌಲಭ್ಯವನ್ನು ಏ.24ರವರೆಗೂ ವಿಸ್ತರಿಸಲಾಗಿದೆ. ಬಳಿಕ ಹೊಸದಾಗಿ ವಿಮಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

click me!