ಜಲಿಯನ್‌ವಾಲಾ ಬಾಗ್: ರಾಜಕೀಯ ತಂದ ರಾಹುಲ್, 2010ರ ಕತೆ ಬಿಚ್ಚಿಟ್ಟ ನೆಟ್ಟಿಗರು!

By Suvarna NewsFirst Published Aug 31, 2021, 5:10 PM IST
Highlights

* ಕೆಲ ದಿನಗಳ ಹಿಂದಷ್ಟೇ ಜಲಿಯನ್‌ವಾಲಾ ಬಾಗ್‌ ನವೀಕೃತ ಸ್ಮಾರಕ ಉದ್ಘಾಟನೆ'

* ಉದ್ಘಾಟನೆ ಬೆನ್ನಲ್ಲೇ ರಾಹುಲ್ ರಾಜಕೀಯ

* ರಾಜಕೀಯ ಮಾಡಿದ ರಾಹುಲ್‌ಗೆ ನೆಟ್ಟಿಗರ ತಿರುಗೇಟು

ನವದೆಹಲಿ(ಆ.31): ಜಲಿಯನ್ ವಾಲಾಬಾಗ್ ಸ್ಮಾರಕದ ನವೀಕರಣ ಕಾಂಗ್ರೆಸ್‌ಗೆ ಸಮಾಧಾನ ಕೊಟ್ಟಿಲ್ಲ. ಹೀಗಾಗೇ ರಾಹುಲ್ ಗಾಂಧಿ ಇದು ಹುತಾತ್ಮರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ- ಜಲಿಯನ್‌ವಾಲಾ ಬಾಗ್ ಹುತಾತ್ಮರಿಗೆ ಇಂತಹ ಅವಮಾನವನ್ನು, ಹುತಾತ್ಮತೆಯ ಅರ್ಥ ತಿಳಿಯದವರು ಮಾತ್ರ ಮಾಡಲು ಸಾಧ್ಯ. ನಾನು ಹುತಾತ್ಮರ ಮಗ. ಹುತಾತ್ಮರ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಅಸಭ್ಯ ಕ್ರೌರ್ಯವನ್ನು ನಾವು ವಿರೋಧಿಸುತ್ತೇನೆ ಎಂದಿದ್ದಾರೆ.

ಇದು ಹೊಸ ಬಗೆಯ ಪ್ರಚಾರ: ರಾಹುಲ್‌ಗೆ ತಿರುಗೇಟು 

ಹೀಗಿರುವಾಗ ಟ್ವಿಟರ್‌ನಲ್ಲಿ ಮೋದಿಭರೋಸಾ( modibharosa) ಹೆಸರಿನ ಖಾತೆಯಲ್ಲಿ ಸದ್ಯ ತಲೆ ಎತ್ತಿರುವ ಜಲಿಯನ್‌ವಾಲಾ ಬಾಗ್‌ ರಾಜಕೀಯದ ಬಗ್ಗೆ ಉಲ್ಲೇಖಿಸಿ, ಈ ನವೀಕರಣದ ಕುರಿತು ಹೊಸ ಬಗೆಯ ಪ್ರಚಾರ ಮಾಡಲಾಗುತ್ತಿದೆ ಬರೆಯಲಾಗಿದೆ. ಲಘು ಸೌಂಡ್ ಶೋ (ಲೈಟ್ ಅಂಡ್ ಸೌಂಡ್ ಶೋ) ಮೊದಲ ಬಾರಿಗೆ 2010 ರಲ್ಲಿ ಆರಂಭವಾಯಿತು. ಇದನ್ನು ಎಕೆ ಆಂಟನಿ (ಅಂದಿನ ರಕ್ಷಣಾ ಮಂತ್ರಿ) ಉದ್ಘಾಟಿಸಿದ್ದರು. ಆದರೆ ಅದನ್ನು ಕೆಲವು ವರ್ಷಗಳ ನಂತರ ಮುಚ್ಚಲಾಯಿತು. ಜಲಿಯನ್ ವಾಲಾಬಾಗ್‌ನ ಕಳಪೆ ನಿರ್ವಹಣೆ ಅದರ ಪ್ರಾಮುಖ್ಯತೆಯನ್ನು ಕುಗ್ಗಿಸುತ್ತಿತ್ತು ಎಂದಿದ್ದಾರೆ.

ಮೋದಿಯಿಂದ ಉದ್ಘಾಟನೆ

ನವೀಕರಣಗೊಂಡ ಜಲಿಯನ್ ವಾಲಾಬಾಗ್ ಪಾರ್ಕ್‌ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದರು. ಈ ಸ್ಮಾರಕದಲ್ಲಿ ನಿರ್ಮಿಸಲಾದ ಮ್ಯೂಸಿಯಂ ಗ್ಯಾಲರಿಗಳನ್ನು ಉದ್ಘಾಟಿಸಿದ್ದ ಮೋದಿ, ಪಂಜಾಬಿನ ಕೆಚ್ಚೆದೆಯ ಭೂಮಿ ಮತ್ತು ಪಂಜಾಬಿನ ಮಣ್ಣಿಗೆ ನನ್ನ ಸಲಾಂ ಎಂದು ಹೇಳಿದ್ದರು. ಅಲ್ಲದೇ ಜಲಿಯನ್‌ವಾಲಾ ಬಾಗ್‌ ದೇಶದ ಅನೇಕ ಕ್ರಾಂತಿಕಾರಿಗಳನ್ನು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಧೈರ್ಯ ತುಂಬಿದ, ಪ್ರೇರೇಪಿಸಿದ ಸ್ಥಳವಾಗಿದೆ ಎಂದೂ ಹೇಳಿದ್ದರು.

ನವೀಕೃತ ಕಟ್ಟಡ ಸಂಕೀರ್ಣದಲ್ಲಿ ಏನಿದೆ?:

* ಖಾಲಿ ಇರುವ ಕಟ್ಟಡಗಳನ್ನು ಮರುಬಳಕೆ ಮಾಡಿಕೊಂಡು ಅವುಗಳನ್ನು ನಾಲ್ಕು ಮ್ಯೂಸಿಯಂ ಅನ್ನಾಗಿ ಪರಿವರ್ತಿಸಲಾಗಿದೆ.

* ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ನಡೆದ ಘಟನೆಗಳ ಐತಿಹಾಸಿಕ ಮೌಲ್ಯವನ್ನು ಪ್ರದರ್ಶಿಸುವ ಗ್ಯಾಲರಿಗಳನ್ನು ಇಲ್ಲಿ ಕಾಣಬಹುದಾಗಿದೆ.

* ಜೊತೆಗೆ ಧ್ವನಿ- ದೃಶ್ಯ ತಂತ್ರಜ್ಞಾನ ಸಮ್ಮಿಲನ, ಪ್ರೊಜೆಕ್ಷನ್‌ ಮ್ಯಾಪಿಂಗ್‌, 3 ಡಿ ಪ್ರದರ್ಶನ, ಶಿಲ್ಪಕಲಾ ಕಲಾಕೃತಿಗಳು ಗಮನ ಸೆಳೆಯಲಿವೆ.

* 1919 ಏ.13ರಂದು ನಡೆದ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡದ ಘಟನೆಯನ್ನು ಶಬ್ದ ಮತ್ತು ಬೆಳಕಿನ ಮೂಲಕ ತೋರಿಸುವುದಕ್ಕೂ ವ್ಯವಸ್ಥೆಯನ್ನು ಮಾಡಲಾಗಿದೆ. ಪಂಜಾಬಿನ ಸ್ಥಳೀಯ ವಸ್ತುಶಿಲ್ಪಕಾರರನ್ನೇ ಬಳಸಿಕೊಂಡು ನವೀಕರಣ ಕಾರ್ಯಗಳನ್ನು ಕೈಗೊಂಡಿರುವುದು ಇನ್ನೊಂದು ವಿಶೇಷ.

* ಜಲಿಯನ್‌ ವಾಲಾಬಾಗ್‌ ಪಾರ್ಕ್ನಲ್ಲಿದ್ದ ಶಹೀದಿ ಬಾವಿ ಹಾಗೂ ಹೃದಯಭಾಗದಲ್ಲಿರುವ ಅಮರಜ್ಯೋತಿ ಸ್ಮಾರಕವನ್ನು ಪುನರ್‌ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಹಲವಾರು ಹೊಸ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಜಲಿಯನ್‌ವಾಲಾ ಬಾಗ್‌ ಉದ್ಯಾನವನಕ್ಕೆ ಹೊಸ ರೂಪವನ್ನು ನೀಡಲಾಗಿದೆ.

ಜಲಿಯನ್‌ವಾಲಾ ಬಾಗ್‌ ದುರಂತ:

ಸ್ವಾತಂತ್ರ್ಯ ಹೋರಾಟಗಾರರ ಬಂಧನದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಲು ಜಲಿಯನ್‌ವಾಲಾಬಾಗ್‌ ಉದ್ಯಾನವನದಲ್ಲಿ ನರೆದಿದ್ದ ಸಹಸ್ರಾರು ಜನರ ಮೇಲೆ ಬ್ರಿಟಿಷರು 1919 ಏ.13ರಂದು ಮನಬಂದಂತೆ ಗುಂಡು ಹಾರಿಸಿ ಕ್ರೌರ್ಯವನ್ನು ಮರೆದಿದ್ದರು. ಈ ಘಟನೆಯಲ್ಲಿ 1000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು.

click me!