ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣದ Inside Story: ಸಿಸಿಟಿವಿ ಕಣ್ಣು ತಪ್ಪಿಸಿ ಕೋಟ್ಯಂತರ ಹಣ ಲೂಟಿ ಮಾಡಿದ ಕಿರಾತಕರು!

Published : Jun 26, 2026, 08:04 PM IST
ram mandir

ಸಾರಾಂಶ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ್ದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ಮತ್ತು ಚಿನ್ನಾಭರಣಗಳನ್ನು ನೌಕರರೇ ಕಳ್ಳತನ ಮಾಡಿರುವ ಹಗರಣ ಬಯಲಾಗಿದೆ. ಹಿಡನ್ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಬ್ಯಾಂಕ್ ಠೇವಣಿಯಲ್ಲಾದ ವ್ಯತ್ಯಾಸಗಳಿಂದ ಈ ಕೃತ್ಯ ಬೆಳಕಿಗೆ ಬಂದಿದೆ.

ಅಯೋಧ್ಯೆ (ಜೂ.26): ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ್ದ ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಆರೋಪದ ತನಿಖೆ ತೀವ್ರಗೊಂಡಿದ್ದು, ಅತ್ಯಂತ ರೋಚಕ ಮತ್ತು ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ವರದಿಯ ಪ್ರಕಾರ, ಮೇ ತಿಂಗಳ ಕೊನೆಯ ವಾರದಲ್ಲಿ ಬ್ಯಾಂಕ್‌ಗೆ ಜಮಾ ಮಾಡಲಾಗುತ್ತಿದ್ದ ದೇಣಿಗೆ ಹಣದ ಮೊತ್ತದಲ್ಲಿ ಭಾರಿ ವ್ಯತ್ಯಾಸಗಳು ಕಂಡುಬಂದಾಗ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳಿಗೆ ಮೊದಲ ಬಾರಿಗೆ ಈ ಹಗರಣದ ಶಂಕೆ ಮೂಡಿತ್ತು ಎನ್ನಲಾಗಿದೆ.

ಬ್ಯಾಂಕ್ ಖಾತೆಯಲ್ಲಿದ್ದ ಹಣದ ವ್ಯತ್ಯಾಸ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ, ಅವರು ಪ್ರತಿದಿನ ದೇಣಿಗೆ ಪೆಟ್ಟಿಗೆಗಳನ್ನು ತೆರೆಯುವ ಮತ್ತು ಹಣವನ್ನು ಎಣಿಸುವ ಪ್ರಕ್ರಿಯೆಯನ್ನು ತೀವ್ರ ನಿಗಾದಲ್ಲಿ ಪರಿಶೀಲಿಸಲು ಆರಂಭಿಸಿದರು. ಸಾಮಾನ್ಯವಾಗಿ ಪ್ರತಿ ದೇಣಿಗೆ ಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿ ₹6 ರಿಂದ ₹7 ಲಕ್ಷ ನಗದು ಇರುತ್ತಿತ್ತು. ಆದರೆ, ಕಳೆದ ಕೆಲವು ವಾರಗಳಿಂದ ₹500 ಮುಖಬೆಲೆಯ ನೋಟುಗಳ ಕಟ್ಟುಗಳಲ್ಲಿ ನಿರಂತರವಾಗಿ ಹಣ ಕಡಿಮೆ ಇರುತ್ತಿರುವುದನ್ನು ಟ್ರಸ್ಟ್ ಅಧಿಕಾರಿಗಳು ಪತ್ತೆಹಚ್ಚಿದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಹಣ ಎಣಿಸುವ ಕೊಠಡಿಯಲ್ಲಿ ಯಾರಿಗೂ ತಿಳಿಯದಂತೆ ಹಿಡನ್‌ ಕ್ಯಾಮೆರಾ ಅಳವಡಿಸಿದರು. ಒಂದು ವಾರದ ವಿಡಿಯೋ ತುಣುಕುಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳು ದಂಗಾಗಿದ್ದಾರೆ. ಅಲ್ಲಿನ ಕೆಲವು ಉದ್ಯೋಗಿಗಳು ಕಳ್ಳತನ ಮಾಡುವಾಗ ಕಚೇರಿಯ ಪ್ರಮುಖ ಸಿಸಿಟಿವಿ ಕ್ಯಾಮೆರಾಗಳಿಗೆ ಕಾಣಿಸದಂತೆ ಉದ್ದೇಶಪೂರ್ವಕವಾಗಿಯೇ ಅವುಗಳ ಮುಂದೆ ಅಡ್ಡಲಾಗಿ ನಿಲ್ಲುತ್ತಿದ್ದರು! ಇದೇ ಸಮಯವನ್ನು ಬಳಸಿಕೊಳ್ಳುತ್ತಿದ್ದ ಮತ್ತೊಬ್ಬ ಉದ್ಯೋಗಿ, ಈಗಾಗಲೇ ಎಣಿಸಿ ಸಿದ್ಧಪಡಿಸಿಟ್ಟಿದ್ದ ನೋಟಿನ ಕಟ್ಟುಗಳಿಂದ ಹಣವನ್ನು ಸದ್ದಿಲ್ಲದೆ ತೆಗೆದು ತನ್ನ ಬಟ್ಟೆಯೊಳಗೆ ಅಡಗಿಸಿಟ್ಟುಕೊಳ್ಳುತ್ತಿದ್ದ ದೃಶ್ಯಗಳು ಹಿಡನ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದವು.

ಬ್ಯಾಂಕ್ ನಂಬಿಸಿ ಕೊಳ್ಳೆ ಹೊಡೆಯುತ್ತಿದ್ದ ಮತ್ತೊಂದು ತಂತ್ರ!

ತನಿಖಾಧಿಕಾರಿಗಳ ಪ್ರಕಾರ, ಉದ್ಯೋಗಿಗಳು ಹಣ ಲೂಟಿ ಮಾಡಲು ಮತ್ತೊಂದು ವ್ಯವಸ್ಥಿತ ಮಾರ್ಗವನ್ನು ಕಂಡುಕೊಂಡಿದ್ದರು. ಬ್ಯಾಂಕ್‌ಗೆ ಜಮಾ ಮಾಡಲು ನಗದಿನ ಕಟ್ಟುಗಳನ್ನು (Bundles) ಸಿದ್ಧಪಡಿಸುವಾಗ, ಉದ್ಯೋಗಿಗಳು ಉದ್ದೇಶಪೂರ್ವಕವಾಗಿಯೇ ಆ ಕಟ್ಟುಗಳ ಒಳಗೆ ನಿಗದಿತ ಸಂಖ್ಯೆಗಿಂತ ಹೆಚ್ಚಿನ ನೋಟುಗಳನ್ನು ಇಡುತ್ತಿದ್ದರು. ಬ್ಯಾಂಕ್ ಸಿಬ್ಬಂದಿ ಠೇವಣಿ ವೋಚರ್ ಸಿದ್ಧಪಡಿಸುವ ಮುನ್ನ ಕೇವಲ ನೋಟಿನ ಕಟ್ಟುಗಳ (ಬಂಡಲ್‌ಗಳ) ಸಂಖ್ಯೆಯನ್ನು ಮಾತ್ರ ಎಣಿಸುತ್ತಿದ್ದರೇ ಹೊರತು, ಪ್ರತಿ ಕಟ್ಟಿನ ಒಳಗಿರುವ ನೋಟುಗಳನ್ನು ಪ್ರತ್ಯೇಕವಾಗಿ ಎಣಿಸುತ್ತಿರಲಿಲ್ಲ. ಇದನ್ನು ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು, ಮಂದಿರದಿಂದ ಬ್ಯಾಂಕ್‌ಗೆ ಹಣವನ್ನು ಸಾಗಿಸುವ ದಾರಿಯ ಮಧ್ಯದಲ್ಲಿ ಆ ಹೆಚ್ಚುವರಿ ನೋಟುಗಳನ್ನು ಸುಲಭವಾಗಿ ಎಗರಿಸುತ್ತಿದ್ದರು. ಇದರಿಂದ ಬ್ಯಾಂಕ್ ರೆಕಾರ್ಡ್‌ನಲ್ಲಿ ಯಾವುದೇ ವ್ಯತ್ಯಾಸ ಕಾಣಿಸುತ್ತಿರಲಿಲ್ಲ!

ರೆಫರೆನ್ಸ್ ಕೆಲಸಗಾರರು ಮತ್ತು ₹10 ಲಕ್ಷ ನಗದು ವಶ!

ಹಣ ಎಣಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಉದ್ಯೋಗಿಗಳನ್ನು ಯಾವುದೇ ಅಧಿಕೃತ ನಿಯಮಾವಳಿಗಳಿಲ್ಲದೆ ಕೇವಲ ವೈಯಕ್ತಿಕ ಸಂಪರ್ಕಗಳು ಅಥವಾ ಶಿಫಾರಸುಗಳ (Recommendations) ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಈಗ ರಾಜೀನಾಮೆ ನೀಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಕಾರು ಚಾಲಕನಾಗಿದ್ದ ಟಿನ್ನು ಯಾದವ್, ಈ ವಿಭಾಗದಲ್ಲಿ ಮೇಲ್ವಿಚಾರಕನಾಗಿ (Supervisor) ಕೆಲಸ ಮಾಡುತ್ತಿದ್ದ. ಆತ ತನ್ನ ಸೋದರಸಂಬಂಧಿ ಮನೀಶ್ ಯಾದವ್‌ನನ್ನು ಹಣ ಎಣಿಸುವ ತಂಡಕ್ಕೆ ಸೇರಿಸಿದ್ದ. ಮತ್ತೊಂದೆಡೆ, ದೀರ್ಘಕಾಲದ ಉದ್ಯೋಗಿಯಾಗಿದ್ದ ಅನುಕಲ್ಪ್ ಮಿಶ್ರಾ ಎಂಬಾತ ದೇಣಿಗೆ ವೋಚರ್‌ಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಹೊಂದಿದ್ದು, ಆತ ತನ್ನ ಮೈದುನ ಲವ್ ಕುಶ್ ಮಿಶ್ರಾ ಎಂಬಾತನನ್ನು ಅದೇ ಯುನಿಟ್‌ಗೆ ಸೇರಿಸಿಕೊಂಡು ಈ ಇಡೀ ಜಾಲವನ್ನು ನಡೆಸುತ್ತಿದ್ದ. ಪೊಲೀಸರು ತನಿಖೆಯ ಭಾಗವಾಗಿ ಲವ್ ಕುಶ್ ಮಿಶ್ರಾ ಅವರ ನಿವಾಸದ ಮೇಲೆ ದಾಳಿ ನಡೆಸಿ ಸುಮಾರು ₹10 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.

ಜೇಬಿಗೆ ಕತ್ತರಿ ಹಾಕಿದ ಭದ್ರತಾ ಲೋಪ!

ದೇಣಿಗೆ ಎಣಿಕೆ ಕೇಂದ್ರದಲ್ಲಿದ್ದ ಅತ್ಯಂತ ಕಳಪೆ ಭದ್ರತಾ ವ್ಯವಸ್ಥೆಯೇ ಈ ಬೃಹತ್ ಕಳ್ಳತನಕ್ಕೆ ಪ್ರಮುಖ ಕಾರಣವಾಗಿತ್ತು. ಹಣ ಎಣಿಸುವ ಕೊಠಡಿಯಿಂದ ಹೊರಹೋಗುವ ಉದ್ಯೋಗಿಗಳನ್ನು ಯಾವುದೇ ರೀತಿಯ ದೈಹಿಕ ತಪಾಸಣೆ (Frisking) ಅಥವಾ ಸೆಕ್ಯೂರಿಟಿ ಚೆಕ್ಕಿಂಗ್‌ಗೆ ಒಳಪಡಿಸುತ್ತಿರಲಿಲ್ಲ. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ಕಳ್ಳರು, ದೇಣಿಗೆ ಪೆಟ್ಟಿಗೆಗಳನ್ನು ತೆರೆದು, ವರ್ಗೀಕರಿಸಿ, ಕಟ್ಟುಗಳನ್ನು ಮಾಡುವಾಗ ಸಿಕ್ಕ ಸಿಕ್ಕ ಹಣವನ್ನು ಪ್ರತಿದಿನ ಯಾರಿಗೂ ತಿಳಿಯದಂತೆ ತಮ್ಮ ಬಟ್ಟೆಗಳಲ್ಲಿ ಅಡಗಿಸಿಟ್ಟುಕೊಂಡು ಆಚೆ ಸಾಗಿಸುತ್ತಿದ್ದರು.

ಅಷ್ಟೇ ಅಲ್ಲದೆ, ತನಿಖಾಧಿಕಾರಿಗಳು ಮತ್ತೊಬ್ಬ ಆರೋಪಿ ಅವಿನಾಶ್ ಪಾಂಡೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳತನ ನಡೆದ ದಿನಾಂಕಗಳು ಮತ್ತು ದೇವಸ್ಥಾನದ ಹಣ ಬ್ಯಾಂಕ್‌ಗೆ ಜಮಾ ಆದ ದಿನಾಂಕಗಳನ್ನು ಹೋಲಿಕೆ ಮಾಡಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ಅವಿನಾಶ್ ಪಾಂಡೆ ತಾನು ದೇವಸ್ಥಾನದಿಂದ ಕದ್ದ ಹಣದ ಒಂದು ಭಾಗವನ್ನು ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಿಕೊಂಡಿರುವುದನ್ನು ಟ್ರಸ್ಟ್ ಅಧಿಕಾರಿಗಳು ಪತ್ತೆಹಚ್ಚಿ ಪೊಲೀಸರಿಗೆ ತಿಳಿಸಿದ್ದಾರೆ.

ದೇವರ ಒಡವೆಗಳಿಗೂ ಬಿಡದ ಕಳ್ಳರು!

ದುರಂತವೆಂದರೆ, ಈ ಭ್ರಷ್ಟ ಉದ್ಯೋಗಿಗಳು ಶ್ರೀರಾಮನಿಗೆ ಭಕ್ತರು ಅರ್ಪಿಸಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನೂ ಬಿಟ್ಟಿಲ್ಲ. ಭಕ್ತರು ಕಾಣಿಕೆಯಾಗಿ ನೀಡಿದ್ದ ಕಿವಿಯೋಲೆಗಳು, ಜುಮುಕಿಗಳು, ಮೂಗುತಿಗಳು, ರಾಮ್ ಲಲ್ಲಾನಿಗೆ ಅರ್ಪಿಸಿದ್ದ ಬಳೆಗಳು ಹಾಗೂ ಕಾಲುಗೆಜ್ಜೆಗಳನ್ನು ಅಧಿಕೃತವಾಗಿ ಟ್ರಸ್ಟ್‌ನ ದಾಖಲೆ ಪುಸ್ತಕಕ್ಕೆ ಸೇರಿಸುವ ಮುನ್ನವೇ ಲೂಟಿ ಮಾಡಿದ್ದಾರೆ. ದೇಣಿಗೆ ಪೆಟ್ಟಿಗೆಯಿಂದ ಆಭರಣಗಳನ್ನು ತೆಗೆದು ರಸೀದಿ ಪುಸ್ತಕದಲ್ಲಿ ದಾಖಲಿಸುವ ಮುನ್ನವೇ ಅವುಗಳನ್ನು ಮಾಯ ಮಾಡಲಾಗುತ್ತಿತ್ತು. ವರದಿಯ ಪ್ರಕಾರ, ರಾಮ್ ಶಂಕರ್ ಯಾದವ್ (ಟಿನ್ನು ಯಾದವ್) ಮತ್ತು ಸುಭಾಷ್ ಚಂದ್ರ ಎಂಬುವವರಿಗೆ ದೇಣಿಗೆ ಪೆಟ್ಟಿಗೆಗಳನ್ನು ತೆರೆಯುವ ಮತ್ತು ಅವುಗಳ ಒಳಗಿನ ವಸ್ತುಗಳನ್ನು ಎಣಿಸುವ ಕೊಠಡಿಗೆ ನಿರಂತರ ಪ್ರವೇಶವಿತ್ತು, ಇವರೇ ಈ ಕೃತ್ಯದ ಹಿಂದಿದ್ದಾರೆ ಎಂದು ಶಂಕಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಅಂಗಳದಲ್ಲಿ ಸಿಕ್ಕ ಕಾಂಡೋಮ್‌: ವಿದೇಶದಲ್ಲಿರೋ ಪತ್ನಿಗೆ ವಿಷಯ ತಿಳಿಸಿದ್ದಕ್ಕೆ ಅತ್ತೆಯನ್ನೇ ರೇ* ಮಾಡಿದ ಅಳಿಯ
Operation Sindoor ಹುತಾತ್ಮ 6 ಸೈನಿಕರ ಹೆಸರನ್ನು ಮೊದಲ ಬಾರಿಗೆ ಪ್ರಕಟಿಸಿದ ಕೇಂದ್ರ ಸರ್ಕಾರ