
ವಿಶಾಖಪಟ್ಟಣಂ (ಏ.3): ಭಾರತದ ಕಡಲ ಶಕ್ತಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ ಸನಿಹವಾಗಿದೆ. ಶತ್ರು ರಾಷ್ಟ್ರಗಳ ನಿದ್ದೆಗೆಡಿಸಲು ಭಾರತೀಯ ನೌಕಾಪಡೆಗೆ ಬ್ರಹ್ಮಾಸ್ತ್ರದಂತಹ ಬಲ ಸಿಗಲಿದೆ. ಸ್ವದೇಶಿ ನಿರ್ಮಿತ ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿ ಐಎನ್‌ಎಸ್ ಅರಿಧಮನ್ (INS Aridaman) ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೀಘ್ರದಲ್ಲೇ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಿದ್ದಾರೆ. ಈ ಕುರಿತಾದ ಸಣ್ಣ ಝಲಕ್‌ಅನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಾಕಿದ್ದಾರೆ.
ಈ ಐತಿಹಾಸಿಕ ಕ್ಷಣಕ್ಕೂ ಮುನ್ನ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್,'ಅರಿಧಮನ್' ಎನ್ನುವುದು ಕೇವಲ ಶಬ್ದವಲ್ಲ, ಅದು ಭಾರತದ ಮಹಾಶಕ್ತಿ" ಎಂದು ಬಣ್ಣಿಸಿದ್ದಾರೆ. ಭಾರತದ ಕಡಲ ತೀರದ ಭದ್ರತೆಯನ್ನು ಇದು ಹತ್ತಾರು ಪಟ್ಟು ಹೆಚ್ಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ಭಾರತದ ಮೂರನೇ ಸ್ವದೇಶಿ ನಿರ್ಮಿತ ಪರಮಾಣು ಬ್ಯಾಲಿಸ್ಟಿಕ್ ಜಲಾಂತರ್ಗಾಮಿ (SSBN) ಆಗಿದೆ. ಖಾಸಗಿ ವಲಯದ ದೈತ್ಯ ಕಂಪನಿ ಎಲ್‌ಆಂಡ್‌ಟಿ (L&T) ಸಹಯೋಗದೊಂದಿಗೆ ವಿಶಾಖಪಟ್ಟಣಂನ ಸೀಕ್ರೆಟ್ ಶಿಪ್ ಬಿಲ್ಡಿಂಗ್ ಸೆಂಟರ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ. ಸಮುದ್ರದ ಆಳದಲ್ಲಿ ತಿಂಗಳುಗಟ್ಟಲೆ ನಿರಂತರವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಇದರಲ್ಲಿದ್ದು, ಈಗಾಗಲೇ ಕಠಿಣ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಹಿಂದೆ ಐಎನ್‌ಎಸ್ ಅರಿಹಂತ್ (2016) ಮತ್ತು ಐಎನ್‌ಎಸ್ ಅರಿಘಾತ್ (2024) ನೌಕಾಪಡೆಗೆ ಸೇರಿದ್ದವು. ಈಗ ಅರಿಧಮನ್ ಸೇರ್ಪಡೆಯೊಂದಿಗೆ ಭಾರತದ ನ್ಯೂಕ್ಲಿಯರ್ ಟ್ರೈಡ್ (ಜಲ, ನೆಲ, ಆಕಾಶದಿಂದ ಅಣ್ವಸ್ತ್ರ ದಾಳಿ ನಡೆಸುವ ಶಕ್ತಿ) ಮತ್ತಷ್ಟು ಭದ್ರವಾಗಿದೆ.
ಜಲಾಂತರ್ಗಾಮಿ ಜೊತೆಗೆ ರಕ್ಷಣಾ ಸಚಿವರು ಇಂದು ಅತ್ಯಾಧುನಿಕ ಯುದ್ಧನೌಕೆ 'ತಾರಾಗಿರಿ' (INS Taragiri) ಅನ್ನು ಸಹ ನೌಕಾಪಡೆಗೆ ಅರ್ಪಿಸಲಿದ್ದಾರೆ. ಪ್ರಾಜೆಕ್ಟ್ 17ಎ' ಅಡಿಯಲ್ಲಿ ನಿರ್ಮಿಸಲಾದ ಈ ನೌಕೆಯು ರೇಡಾರ್‌ಗಳ ಕಣ್ಣಿಗೆ ಮಣ್ಣೆರಚುವ ವಿಶೇಷ ವಿನ್ಯಾಸವನ್ನು ಹೊಂದಿದೆ. ಇದು ಸೂಪರ್ ಸೋನಿಕ್ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಗಳು, ಮಧ್ಯಮ ವ್ಯಾಪ್ತಿಯ ವಾಯು ರಕ್ಷಣಾ ಕ್ಷಿಪಣಿಗಳು ಮತ್ತು ಜಲಾಂತರ್ಗಾಮಿ ವಿರೋಧಿ ವ್ಯವಸ್ಥೆಗಳನ್ನು ಹೊಂದಿದೆ.
ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿರುವ ಈ 6,670 ಟನ್ ತೂಕದ ಹಡಗಿನಲ್ಲಿ ಶೇ. 75ಕ್ಕಿಂತ ಹೆಚ್ಚು ಸ್ವದೇಶಿ ಬಿಡಿಭಾಗಗಳನ್ನು ಬಳಸಲಾಗಿದೆ. ಈ ಎರಡು ಬೃಹತ್ ಶಕ್ತಿಗಳ ಸೇರ್ಪಡೆಯಿಂದಾಗಿ ಹಿಂದೂ ಮಹಾಸಾಗರದಲ್ಲಿ ಚೀನಾ ಮತ್ತು ಪಾಕಿಸ್ತಾನದ ಉಪಟಳಕ್ಕೆ ಬ್ರೇಕ್ ಬೀಳಲಿದ್ದು, ಭಾರತವು ಸಮುದ್ರದ ಅಧಿಪತಿಯಾಗಿ ಹೊರಹೊಮ್ಮಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ