
ವಸಾಯಿ (ಸೆ.21): 4ನೇ ಮಹಡಿಯಿಂದ ಬಿದ್ದು ಬದುಕಿದ್ದ 16 ತಿಂಗಳ ಮಗುವೊಂದು ಟ್ರಾಫಿಕ್ ಜಾಂನಲ್ಲಿ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ 1.30ರ ವೇಳೆಗೆ ವಸಾಯಿಯ ಫಾತಿಮಾ ಮಂಜಿಲ್ ಎಂಬಲ್ಲಿ ಮಗುವೊಂದು 4ನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಹೊಟ್ಟೆ ಮತ್ತು ಕಿಬ್ಬೊಟ್ಟೆಗೆ ತೀವ್ರವಾಗಿ ಪೆಟ್ಟಾಗಿತ್ತು. ತಕ್ಷಣ ಪೋಷಕರು ಕಂದನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಮಗುವಿಗೆ ಆಂತರಿಕ ರಕ್ತಸ್ರಾವವಾಗಿರುವುದನ್ನು ಕಂಡು, ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಯುರೋಪಿಯನ್ ವಿಮಾನ ನಿಲ್ದಾಣಗಳ ಮೇಲೆ ಸೈಬರ್ ದಾಳಿ, ಪ್ರಯಾಣಿಕರಿಗೆ ಏರ್ ಇಂಡಿಯಾ ಸಲಹೆ
ಅದರಂತೆಯೆ ಪೋಷಕರು ಮಗುವಿನೊಂದಿಗೆ ಮುಂಬೈನ ಆಸ್ಪತ್ರೆಗೆ ಕಾರಿನಲ್ಲಿ ಹೊರಟಿದ್ದಾರೆ. ಆದರೆ ಅಹ್ಮದಾಬಾದ್-ಮುಂಬೈ ಹೆದ್ದಾರಿಯಲ್ಲಿದ್ದ ಭಾರೀ ಟ್ರಾಫಿಕ್ ಉಂಟಾಗಿ, ಅವರೆಲ್ಲ 4 ತಾಸು ಕಾರಿನಲ್ಲೇ ಕಳೆಯುವಂತಾಗಿದೆ. ಈ ವೇಳೆ ಮಗುವಿನ ಮೈ ತಣ್ಣಗಾಗಿದ್ದನ್ನು ಕಂಡ ಪೋಷಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು.
ಜು.31ರಂದು ಸಹ ಪುಣೆಯ ಮಹಿಳೆಯೊಬ್ಬರು ಮರ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮುಂಬೈಗೆ ಕರೆದೊಯ್ಯುವಾಗ ಟ್ರಾಫಿಕ್‌ನಲ್ಲಿ 3 ತಾಸು ಸಿಲುಕಿ ಮೃತಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ