3 ದಶಕಗಳ ಹಿಂದೆ ಮಾಡಿದ ಕೇವಲ 7000 ರೂ ಹೂಡಿಕೆ: ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ ನಾಯ್ಡು

Published : Aug 24, 2025, 01:38 PM IST
Nara Chandrababu Naidu

ಸಾರಾಂಶ

ಆಂಧ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದುವ ಮೂಲಕ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅವರನ್ನು ಮೊದಲ ಸ್ಥಾನದಲ್ಲಿ ಇರಿಸಿದೆ.  ಇವರ ಶ್ರೀಮಂತಿಕೆಗೆ ಕಾರಣಾಗಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ನವದೆಹಲಿ: ಆಗಾಗ ಸಾರ್ವಜನಿಕ ಸೇವೆಯಲ್ಲಿರುವ ಅದರಲ್ಲೂ ರಾಜಕಾರಣಿಗಳ ಆಸ್ತಿ ಶಿಕ್ಷಣ, ಶ್ರೀಮಂತಿಕೆ ಅವರ ಕ್ರಿಮಿನಲ್ ಹಿನ್ನೆಲೆ, ಅತೀ ಹೆಚ್ಚು ಶ್ರೀಮಂತ ಸಿಎಂ ಇತ್ಯಾದಿಯ ಬಗ್ಗೆ ಸಮೀಕ್ಷೆ ನಡೆಸಿ ಜನರಿಗೆ ತಿಳಿಸುವ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇತ್ತೀಚೆಗೊಂದು ವರದಿ ಮಾಡಿದ್ದು, ಅದರಲ್ಲಿ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1,600 ಕೋಟಿ ರೂ.ಗಳಿಗೂ ಹೆಚ್ಚು ಎಂಬ ಮಾಹಿತಿ ನೀಡಿದೆ. ಇವರ ಈ ವರದಿಯಲ್ಲಿ ಆಂಧ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದುವ ಮೂಲಕ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅವರನ್ನು ಮೊದಲ ಸ್ಥಾನದಲ್ಲಿ ಇರಿಸಿದೆ.

ಹೀಗಿರುವಾಗ ಚಂದ್ರಬಾಬು ನಾಯ್ಡು ಅವರು ಇಷ್ಟೊಂದು ಶ್ರೀಮಂತಿಕೆ ಗಳಿಸಲು ಕಾರಣವಾಗಿದ್ದು ಏನು ಅವರ ವ್ಯವಹಾರಗಳು ಹೂಡಿಕೆಗಳು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಚಂದ್ರಬಾಬು ನಾಯ್ಡು ಅವರು ಇಷ್ಟೊಂದು ಶ್ರೀಮಂತಿಕೆ ಗಳಿಸುವುದಕ್ಕೆ ಕಾರಣವಾಗಿದ್ದು ಯಾವುದೇ ಪಿತ್ರಾರ್ಜಿತವಾಗಿ ಬಂದ ಆಸ್ತಿ ಅಲ್ಲ, ಬದಲಾಗಿ ಅವರು ಮೂರು ದಶಕಗಳ ಹಿಂದೆ ಮಾಡಿದ ಹೂಡಿಕೆ. ಅವರು ಸ್ಥಾಪಿಸಿದ ವ್ಯಾಪಾರ ಉದ್ಯಮವಾದ 'ಹೆರಿಟೇಜ್ ಫುಡ್ಸ್ ಲಿಮಿಟೆಡ್‌' ಭರ್ಜರಿ ಯಶಸ್ಸೇ ಇದಕ್ಕೆ ಕಾರಣ.

1994ರಲ್ಲಿ ಕೇವಲ 7 ಸಾವಿರ ಹೂಡಿಕೆ ಮಾಡಿದ ನಾಯ್ಡು:

ಭಾರತದ ಡೈರಿ ವಲಯವು ಆರ್ಥಿಕ ಸುಧಾರಣೆಗಳ ಅಡಿಯಲ್ಲಿ ಖಾಸಗಿ ಹೂಡಿಕೆಗೆ ತೆರೆದುಕೊಳ್ಳುತ್ತಿದ್ದ ಕಾಲಘಟದಲ್ಲಿ 1992 ರಲ್ಲಿ ಚಂದ್ರಬಾಬು ನಾಯ್ಡು ಅವರು ಹೆರಿಟೇಜ್ ಫುಡ್ಸ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಅಂದು ಕೇವಲ 7,000 ರೂ.ಗಳ ಬಂಡವಾಳದೊಂದಿಗೆ ಪ್ರಾರಂಭವಾದ ಈ ಕಂಪನಿಯು 1994 ರಲ್ಲಿ ಸಾರ್ವಜನಿಕರಿಗೂ ಹೂಡಿಕೆಗೆ ಲಭ್ಯವಾಯಿತು. 54 ಬಾರಿ ಐಪಿಒ ಓವರ್‌ಸಬ್‌ಸ್ಕ್ರೈಬ್ ಆಗಿ, 6.5 ಕೋಟಿ ರೂ.ಗಳನ್ನು ಸಂಗ್ರಹಿಸಿತು.(ಆರಂಭಿಕ ಸಾರ್ವಜನಿಕ ಕೊಡುಗೆ (IPO)ಯು ಮಾರಾಟಕ್ಕೆ ಲಭ್ಯವಿರುವ ಒಟ್ಟು ಷೇರುಗಳ ಸಂಖ್ಯೆಗಿಂತ ಹೆಚ್ಚಿನ ಹೂಡಿಕೆದಾರರ ಅರ್ಜಿಗಳನ್ನು ಷೇರುಗಳಿಗೆ ಸ್ವೀಕರಿಸಿದಾಗ ಅದನ್ನು ಓವರ್‌ಸಬ್‌ಸ್ಕ್ರೈಬ್ ಮಾಡಿದ IPO ಎಂದು ಕರೆಯಲಾಗುತ್ತದೆ. ಇದು ಹೆಚ್ಚಿನ ಹೂಡಿಕೆದಾರರ ಬೇಡಿಕೆ ಮತ್ತು ಕಂಪನಿಯ ಭವಿಷ್ಯದ ನಿರೀಕ್ಷೆಗಳಲ್ಲಿ ವಿಶ್ವಾಸವನ್ನು ಸೂಚಿಸುತ್ತದೆ)

ಪ್ಯಾನ್-ಇಂಡಿಯಾ ಬ್ರ್ಯಾಂಡ್ ಆಗಿ ಬೆಳೆದ ಹೆರಿಟೇಜ್ ಫುಡ್:

ಮೂರು ದಶಕಗಳಲ್ಲಿ, ಹೆರಿಟೇಜ್ 17 ರಾಜ್ಯಗಳಿಗೆ ವಿಸ್ತರಿಸಿದ್ದು, ಸುಮಾರು 3 ಲಕ್ಷ ಡೈರಿ ರೈತರ ಸಹಭಾಗಿತ್ವದೊಂದಿಗೆ ಪ್ಯಾನ್-ಇಂಡಿಯಾ ಬ್ರ್ಯಾಂಡ್ ಆಗಿ ಬೆಳೆದಿದೆ. 2000ನೇ ಇಸವಿಯ ವೇಳೆಗೆ ಕಂಪನಿಯ ಒಟ್ಟು ವಹಿವಾಟು 100 ಕೋಟಿ ರೂ.ಗೆ ತಲುಪಿತು. ಹಾಗೆಯೇ ಹಣಕಾಶು ವರ್ಷ 2025 ರ ವೇಳೆಗೆ ಇದು ಸುಮಾರು 4,000 ಕೋಟಿ ರೂ.ಗಳಿಗೆ ಏರಿದೆ. ಇದರಲ್ಲಿ ಚಂದ್ರಬಾಬು ನಾಯ್ಡು ಕುಟುಂಬದವರು ಶೇಕಡಾ 41.3 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಹೆರಿಟೇಜ್‌ನ ಮಾರುಕಟ್ಟೆ ಬಂಡವಾಳೀಕರಣವು 1995 ರಲ್ಲಿ 25 ಕೋಟಿ ರೂ.ಗಳಿಂದ ಆರಂಭವಾಗಿ 2025 ರಲ್ಲಿ 4,500 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು ಇವುಗಳ ಮಧ್ಯೆ 2024 ರ ಮಧ್ಯದಲ್ಲಿ 6,755 ಕೋಟಿ ರೂ.ಗಳಿಗೆ ತಲುಪಿತ್ತು.

ನಾಲ್ಕು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರ ಜೀವನವು ಹಲವು ಬಾರಿ ಏರಿಳಿತಗಳನ್ನು ಕಂಡಿದೆ.

ಆದರೆ ಇದೆಲ್ಲದರ ನಡುವೆ ಅವರ ಈ ಹೆರಿಟೇಜ್ ಸಂಸ್ಥೆಯನ್ನು ಬೆಳೆಸಿದ್ದು ನಾಯ್ಡು ಪತ್ನಿ ನಾರಾ ಭುವನೇಶ್ವರಿ. 1994 ರಲ್ಲಿ ನಾಯ್ಡು ರಾಜಕೀಯದಲ್ಲಿ ಬ್ಯುಸಿಯಾದಾಗ ಅವರ ಪತ್ನಿ ನಾರಾ ಭುವನೇಶ್ವರಿ ಅವರ ನೇತೃತ್ವದಲ್ಲಿ ಹೆರಿಟೇಜ್ ಬೆಳೆಯಿತು. ಕಂಪನಿಯು ಸ್ಥಿರವಾಗಿ ವಿಸ್ತರಿಸಿದ್ದಲ್ಲೇ ರಾಜ್ಯ ರಿಯಾಯಿತಿಗಳು ಅಥವಾ ಆದ್ಯತೆಯ ಒಪ್ಪಂದಗಳಿಲ್ಲದೆ ನೈತಿಕ ಬೆಳವಣಿಗೆ ಮತ್ತು ರೈತ ಕೇಂದ್ರಿತ ಕಾರ್ಯಾಚರಣೆಗಳಿಂದ ಖ್ಯಾತಿಯನ್ನು ಉಳಿಸಿಕೊಂಡಿದೆ. ಇದರ ನಿವ್ವಳ ಮೌಲ್ಯವು 972 ಕೋಟಿಗೆ ಏರಿದೆ.

ಎಡಿಆರ್‌ನ ಈ ವರದಿಯಲ್ಲಿ ದೇಶದ ಇತರ ರಾಜ್ಯಗಳ ಸಿಎಂಗಳು ಕೂಡ ಇದ್ದಾರೆ. ಚಂದ್ರಬಾಬು ನಾಯ್ಡು ಅವರ ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು 163 ಕೋಟಿ ರೂ. ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ನಂತರದ ಸ್ಥಾನದಲ್ಲಿ 63 ಕೋಟಿ ರೂ. ಆಸ್ತಿಯೊಂದಿಗೆ ಒಡಿಶಾದ ನವೀನ್ ಪಟ್ನಾಯಕ್ ಇದ್ದಾರೆ.ಆದರೆ ನವೀನ್ ಪಟ್ನಾಯಕ್ ಅವರು ಪ್ರಸ್ತುತ ಮುಖ್ಯಮಂತ್ರಿಯಾಗಿಲ್ಲ. ಈ ಎಡಿಆರ್ ವರದಿಯ ಪ್ರಕಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇವಲ 40 ಲಕ್ಷ ರೂ. ಆಸ್ತಿಯನ್ನು ಹೊಂದಿದ್ದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 3 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿ ಆಗಿದೆ. ಕೇವಲ ಇಬ್ಬರನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಮುಖ್ಯಮಂತ್ರಿಗಳನ್ನು ಈಗ ಕೋಟ್ಯಾಧಿಪತಿಗಳಾಗಿದ್ದಾರೆ.

ಇತ್ತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೇವಲ 15.38 ಲಕ್ಷ ರೂ. ಘೋಷಿತ ಆಸ್ತಿ ಹೊಂದಿದ್ದು, ಅವರು ದೇಶದಲ್ಲೇ ಅತೀ ಕಡಿಮೆ ಆದಾಯ ಹೊಂದಿರುವ ಮುಖ್ಯಮಂತ್ರಿ ಎನಿಸಿದ್ದು, ಅವರ ಬಳಿ ಯಾವುದೇ ಸ್ಥಿರ ಆಸ್ತಿ ಇಲ್ಲ. ಹಾಗೆಯೇ

ಕಡಿಮೆ ಘೋಷಿತ ಆಸ್ತಿ ಹೊಂದಿರುವ ಇತರ ಮುಖ್ಯಮಂತ್ರಿಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಸೇರಿದ್ದಾರೆ, ಅವರು 55.24 ಲಕ್ಷ ರೂ. ಸಂಪೂರ್ಣವಾಗಿ ಚರ ರೂಪದಲ್ಲಿ ಆಸ್ತಿ ಹೊಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?