
ಲಡಾಖ್ (ಆ.24) ಪೂರ್ವ ಲಡಾಖ್‌ನ ನ್ಯೋಮಾದಲ್ಲಿ ಮಡ್ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ ಏರ್‌ಫೀಲ್ಡ್ ನಿರ್ಮಾಣಗೊಂಡಿದೆ.ಇದೇ ವರ್ಷದ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಹೊಚ್ಚ ಹೊಸ ಏರ್‌ಫೀಲ್ಡ್ ಉದ್ಘಾಟಿಸಲಿದ್ದಾರೆ. ಚೀನಾ ಗಡಿಯಿಂದ (ಎಲ್‌ಎಸಿ) 30 ಕಿ.ಮೀ ಮತ್ತು ಲೇಹ್‌ನಿಂದ 200 ಕಿ.ಮೀ ದೂರದಲ್ಲಿ ಸಮುದ್ರ ಮಟ್ಟದಿಂದ 13,700 ಅಡಿ ಎತ್ತರದಲ್ಲಿ ನ್ಯೋಮಾ ವಾಯುನೆಲೆ ಇದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ನಿರ್ಮಿಸಿದ ಈ ನೆಲೆಯು ಉದ್ಘಾಟನೆಯಾದ ನಂತರ, ವಿಶ್ವದ ಐದನೇ ಅತಿ ಎತ್ತರದ ವಾಯುನೆಲೆಯಾಗಲಿದೆ.
ಈ ಪ್ರದೇಶದಲ್ಲಿ ಭಾರತದ ಸೇನಾ ನೆಲೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ಎಲ್ಲಾ ರೀತಿಯ ಯುದ್ಧ ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಲು ಸಾಧ್ಯವಾಗುವಂತೆ ವಿಮಾನ ನಿಲ್ದಾಣವನ್ನು ವಿನ್ಯಾಸಗೊಳಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಈ ಪ್ರದೇಶಕ್ಕೆ ಸೈನಿಕರನ್ನು ಮತ್ತು ಸೇನಾ ಸಾಮಗ್ರಿಗಳನ್ನು ತ್ವರಿತವಾಗಿ ಸಾಗಿಸಲು ಈ ನೆಲೆ ಸಹಾಯ ಮಾಡುತ್ತದೆ.
ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡಿದೆ. 2023 ರ ಸೆಪ್ಟೆಂಬರ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ 218 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಹಿಂದೆ ಇಲ್ಲಿ ವಿಮಾನಗಳು ಇಳಿಯುತ್ತಿದ್ದವು. ಆದರೆ 1962 ರ ಭಾರತ-ಚೀನಾ ಯುದ್ಧದ ನಂತರ ಇಲ್ಲಿ ವಾಯುನೆಲೆ ಕಾರ್ಯನಿರ್ವಹಿಸುತ್ತಿರಲಿಲ್ಲ. 2009 ರಲ್ಲಿ ಭಾರತೀಯ ವಾಯುಪಡೆಯ ಸಾರಿಗೆ ವಿಮಾನ AN-32 ಇಲ್ಲಿ ಇಳಿದ ನಂತರ ಈ ಯೋಜನೆಗೆ ಮತ್ತೆ ಚಾಲನೆ ದೊರಕಿತು.
ಚೀನಾ ಮತ್ತು ಪಾಕಿಸ್ತಾನದೊಂದಿಗೆ ಭಾರತ ಗಡಿ ಹಂಚಿಕೊಳ್ಳುವ ಪ್ರದೇಶ ಇದಾಗಿದೆ. ಭಾರತೀಯ ಸೇನೆಯ ಲೇಹ್ ಮೂಲದ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಈ ಪ್ರದೇಶದ ಭದ್ರತೆಯ ಜವಾಬ್ದಾರಿ ಹೊಂದಿದೆ. ಸಿಯಾಚಿನ್, ದ್ರಾಸ್, ಕಾರ್ಗಿಲ್ ಮುಂತಾದ ಪ್ರದೇಶಗಳು ಸಹ ಇದೇ ಸೇನಾ ವಿಭಾಗದ ನಿಯಂತ್ರಣದಲ್ಲಿವೆ. ವಾಯುನೆಲೆ ಕಾರ್ಯಾರಂಭ ಮಾಡಿದ ನಂತರ ಡೆಮ್ಚೋಕ್ ಪ್ರದೇಶದ ಸಾಮಾನ್ಯ ಜನರಿಗೂ ಇದು ಪ್ರಯೋಜನಕಾರಿಯಾಗಲಿದೆ.
1962 ರ ಭಾರತ-ಚೀನಾ ಯುದ್ಧದ ನಂತರ, ನ್ಯೋಮಾ ವಾಯುನೆಲೆ ಬಳಕೆಯಾಗದೇ ಉಳಿದಿತ್ತು. 2009ರಲ್ಲಿ AN-32 ವಿಮಾನ ಇಳಿಯುುವ ಮೂಲಕ ಮತ್ತೆ ವಾಯುನೆಲೆ ಸಕ್ರಿಯಗೊಂಡಿತ್ತು. 2020ರ ಭಾರತ ಚೀನಾ ಗಡಿ ಸಂಘರ್ಷದ ವೇಳೆ ನ್ಯೋಮಾ ವಾಯುನೆಲೆಯನ್ನು ಬಳಸಿಕೊಂಡಿತ್ತು. ಭೌಗೋಳಿಕವಾಗಿ ಮಹತ್ವದ ಲಡಾಖ್ ಪ್ರದೇಶವು ಪಾಕಿಸ್ತಾನದೊಂದಿಗೆ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಚೀನಾದೊಂದಿಗೆ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಹೊಂದಿದೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ