ಭಾರತದ ಮಾನವಸಹಿತ ಗಗನಯಾತ್ರೆಗೆ ನಾಲ್ವರ ಆಯ್ಕೆ ಆಗಿದ್ದು ಹೇಗೆ? ತರಬೇತಿ ಎಲ್ಲಿ?

By Kannadaprabha NewsFirst Published Feb 28, 2024, 6:58 AM IST
Highlights

2025ರಲ್ಲಿ ನಡೆಯಲಿರುವ ಭಾರತದ ಚೊಚ್ಚಲ ಮಾನವ ಸಹಿತ ಗಗನಯಾನ ಯೋಜನೆಗೆ ನಾಲ್ವರು ಆಯ್ಕೆಯಾಗಿದ್ದು ಹೇಗೆ ಗೊತ್ತಾ? ಅತ್ಯಂತ ಕಠಿಣ ಮತ್ತು ಸಾಹಸಮಯವಾದ ಈ ಯೋಜನೆಗೆ ನಾಲ್ವರನ್ನು ಆಯ್ಕೆ ಮಾಡಲು ಸಾಕಷ್ಟು ಸುದೀರ್ಘ ಪ್ರಕ್ರಿಯೆಯನ್ನೇ ನಡೆಸಲಾಗಿತ್ತು. ಈ ಬಗ್ಗೆ ಇಲ್ಲಿದೆ ಡಿಟೇಲ್‌ ಸ್ಟೋರಿ.
 

ನವದೆಹಲಿ: 2025ರಲ್ಲಿ ನಡೆಯಲಿರುವ ಭಾರತದ ಚೊಚ್ಚಲ ಮಾನವ ಸಹಿತ ಗಗನಯಾನ ಯೋಜನೆಗೆ ಆಯ್ಕೆಯಾದ ನಾಲ್ವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅನಾವರಣ ಮಾಡಿದ್ದಾರೆ. ಆದರೆ ಇವರ ಆಯ್ಕೆಯಾಗಿ ಹೆಚ್ಚು ಕಡಿಮೆ 4 ವರ್ಷಗಳೇ ಆಗಿದೆ. ಹೆಸರು ಮಾತ್ರ ಈಗ ಬಹಿರಂಗವಾಗಿದೆ. ಅತ್ಯಂತ ಕಠಿಣ ಮತ್ತು ಸಾಹಸಮಯವಾದ ಈ ಯೋಜನೆಗೆ ನಾಲ್ವರನ್ನು ಆಯ್ಕೆ ಮಾಡಲು ಸಾಕಷ್ಟು ಸುದೀರ್ಘ ಪ್ರಕ್ರಿಯೆಯನ್ನೇ ನಡೆಸಲಾಗಿತ್ತು.

ಗಗನಯಾನ ಯೋಜನೆ ಕೈಗೊಳ್ಳುವುದು ಇಸ್ರೋ ಆದರೂ, ಇಸ್ರೋ ಬಳಿ ಗಗನಯಾನಿಗಳಿಲ್ಲ. ಹೀಗಾಗಿ ಅದು ಭಾರತೀಯ ವಾಯುಪಡೆಯ ಸಹಯೋಗದಲ್ಲಿ ಕುಶಲ ಟೆಸ್ಟ್‌ ಪೈಲಟ್‌ಗಳ ಪಟ್ಟಿಯೊಂದನ್ನು ಸಿದ್ಧಪಡಿಸಿತು. ಬಳಿಕ ಇವರನ್ನೆಲ್ಲಾ ಬಾಹ್ಯಾಕಾಶ ಯಾನದ ವೇಳೆ ಎದುರಾಗಬಹುದಾದ ದೈಹಿಕ ಮತ್ತು ಮಾನಸಿಕ ವ್ಯತ್ಯಯಗಳನ್ನು, ಅದನ್ನು ಎದುರಿಸುವ ಸಾಮರ್ಥ್ಯ ಪರೀಕ್ಷೆಗಾಗಿ ವಿವಿಧ ದೈಹಿಕ ಮತ್ತು ಮಾನಸಿಕ ಪರೀಕ್ಷೆಗೆ ಒಳಪಡಿಸಲಾಯಿತು.

ಅಂತಿಮವಾಗಿ ಈ ಪೈಕಿ ನಾಲ್ವರ ಹೆಸರನ್ನು ನ್ಯಾಷನಲ್‌ ಕ್ರೂ ಸೆಲೆಕ್ಷನ್‌ ಬೋರ್ಡ್‌ ಅಂತಿಮಗೊಳಿಸಿತು. ಹೀಗೆ ಆಯ್ಕೆಯಾದವರೇ ಪ್ರಶಾಂತ್‌ ನಾಯರ್‌, ಅಂಗದ್‌ ಪ್ರತಾಪ್‌, ಅಜಿತ್‌ ಕೃಷ್ಣನ್‌ ಮತ್ತು ಸುಭಾನ್ಷು ಶುಕ್ಲಾ.

ಗಗನ್ಯಾನ್‌ ಸಂಬಂಧಿತ 1800 ಕೋಟಿಯ ಇಸ್ರೋ ವ್ಯವಸ್ಥೆ ಲೋಕಾರ್ಪಣೆ ಮಾಡಿದ ಮೋದಿ!

ತರಬೇತಿ ಎಲ್ಲಿ? ಹೇಗೆ?

ಹೀಗೆ ಆಯ್ಕೆಯಾದ ನಾಲ್ವರ ಹೆಸರನ್ನೂ ಆರಂಭದಿಂದಲೂ ರಹಸ್ಯವಾಗಿಯೇ ಇಡಲಾಗಿತ್ತು. ಮೊದಲಿಗೆ ಈ ನಾಲ್ವರಿಗೂ ಬಾಹ್ಯಾಕಾಶ ಉಡ್ಡಯನದ ಕುರಿತ ಆರಂಭದಿಂದ ಅಂತ್ಯದವರೆಗಿನ ವಿವಿಧ ಹಂತಗಳ ಕುರಿತು ರಷ್ಯಾದ ಗಗಾರಿನ್‌ ಕಾಸ್ಮೋನಾಟ್‌ ತರಬೇತಿ ಕೇಂದ್ರದಲ್ಲಿ 13 ತಿಂಗಳ ಕಾಲ ಸುದೀರ್ಘ ತರಬೇತಿ ನೀಡಲಾಯಿತು. ಬಳಿಕ ಅವರಿಗೆ ಬೆಂಗಳೂರಿನ ಗಗನಯಾನ ತರಬೇತಿ ಕೇಂದ್ರದಲ್ಲೂ ವಿವಿಧ ರೀತಿಯ ತರಬೇತಿ ನೀಡುವ ಮೂಲಕ ಉಡ್ಡಯನಕ್ಕೆ ಸಿದ್ಧಗೊಳಿಸಲಾಗಿದೆ.

ನಾಲ್ವರ ಪೈಕಿ ಮೂವರಿಗೆ ಮಾತ್ರ ಅವಕಾಶ

ಹಾಲಿ ನಾಲ್ವರನ್ನು ಇಸ್ರೋ ಆಯ್ಕೆ ಮಾಡಿದ್ದರೂ, ಇಸ್ರೋದ ಗಗನಯಾನ ಯೋಜನೆಯಲ್ಲಿ ಉದ್ದೇಶಿಸಿರುವುದು ಮೂವರು ಗಗನಯಾತ್ರಿಗಳನ್ನು ಮಾತ್ರ. ಆದರೆ ಒಂದು ವೇಳೆ ಯಾವುದೋ ಕಾರಣದಿಂದ ಓರ್ವ ಗಗನಯಾತ್ರಿ ಉಡ್ಡಯನಕ್ಕೆ ಲಭ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಇರಲಿ ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ ಓರ್ವ ಟೆಸ್ಟ್‌ ಪೈಲಟ್‌ ಅನ್ನು ಯೋಜನೆಗೆ ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ.

ಭಾರತದ ಚೊಚ್ಚಲ ಗಗನಯಾತ್ರೆಗೆ ಸಿದ್ಧತೆ: ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಪ್ರಧಾನಿ

click me!