ಸಿಯಾಚಿನ್‌ನ ರಕ್ಷಣೆಗೆ ತುಮಕೂರಿನ ಪ್ರಚಂಡರು: ಸೇನೆಗೆ ಸೇರ್ಪಡೆಯಾಗಲಿವೆ 156 ಎಚ್ಎಎಲ್ ಪ್ರಚಂಡ್ ಹೆಲಿಕಾಪ್ಟರ್‌ಗಳು

156 ಹೆಲಿಕಾಪ್ಟರ್‌ಗಳನ್ನು ಭಾರತೀಯ ಸೇನೆ (90 ಹೆಲಿಕಾಪ್ಟರ್‌ಗಳು) ಮತ್ತು ಭಾರತೀಯ ವಾಯು ಸೇನೆಯ (66 ಹೆಲಿಕಾಪ್ಟರ್‌ಗಳು) ನಡುವೆ ಹಂಚಿಕೆ ಮಾಡಲಾಗುತ್ತದೆ. ಈ ಹೆಲಿಕಾಪ್ಟರ್‌ಗಳನ್ನು ಕರ್ನಾಟಕದ ತುಮಕೂರಿನಲ್ಲಿರುವ ಎಚ್ಎಎಲ್ ಘಟಕದಲ್ಲಿ ನಿರ್ಮಿಸಲಾಗುತ್ತದೆ.
 

Indias biggest defense deal 156 prachand helicopters for the armed forces

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಶುಕ್ರವಾರ, ಮಾರ್ಚ್ 28ರಂದು ಭಾರತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಜೊತೆ 156 ಪ್ರಚಂಡ್ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದ ನಡೆಸಿತು. ಇದು ಇಲ್ಲಿಯ ತನಕ ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದವಾಗಿದೆ. 62,700 ಕೋಟಿ ರೂಪಾಯಿಗಳ ಬೃಹತ್ ಮೌಲ್ಯದ ಈ ಐತಿಹಾಸಿಕ ಒಪ್ಪಂದಕ್ಕೆ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ ಒಪ್ಪಿಗೆ ಸೂಚಿಸಿದ್ದು, ಇದು ಭಾರತೀಯ ಭೂ ಸೇನೆ ಮತ್ತು ಭಾರತೀಯ ವಾಯು ಸೇನೆಗಳ ಸಾಮರ್ಥ್ಯ ವರ್ಧನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಲಿವೆ. ಪ್ರಚಂಡ್ ಹೆಲಿಕಾಪ್ಟರ್‌ ಜಗತ್ತಿನ ಅತ್ಯಂತ ಲಘು ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ತನ್ನ ಕುಶಲ ಚಲನೆ ಮತ್ತು ಸಾಮರ್ಥ್ಯದಿಂದ ಜಗತ್ತಿನಲ್ಲಿ ಹೆಸರುವಾಸಿಯಾಗಿದೆ.

Latest Videos

ಈ ಹೆಲಿಕಾಪ್ಟರ್‌ಗಳ ಪೂರೈಕೆಗಾಗಿ ಎಚ್ಎಎಲ್‌ಗೆ ಜೂನ್ 2024ರಲ್ಲಿ ಖರೀದಿ ಆದೇಶ ನೀಡಲಾಗಿತ್ತು. 156 ಹೆಲಿಕಾಪ್ಟರ್‌ಗಳನ್ನು ಭಾರತೀಯ ಸೇನೆ (90 ಹೆಲಿಕಾಪ್ಟರ್‌ಗಳು) ಮತ್ತು ಭಾರತೀಯ ವಾಯು ಸೇನೆಯ (66 ಹೆಲಿಕಾಪ್ಟರ್‌ಗಳು) ನಡುವೆ ಹಂಚಿಕೆ ಮಾಡಲಾಗುತ್ತದೆ. ಈ ಹೆಲಿಕಾಪ್ಟರ್‌ಗಳನ್ನು ಕರ್ನಾಟಕದ ತುಮಕೂರಿನಲ್ಲಿರುವ ಎಚ್ಎಎಲ್ ಘಟಕದಲ್ಲಿ ನಿರ್ಮಿಸಲಾಗುತ್ತದೆ. ಬಳಿಕ ಈ ಹೆಲಿಕಾಪ್ಟರ್‌ಗಳನ್ನು ಚೀನಾ ಮತ್ತು ಪಾಕಿಸ್ತಾನಗಳ ಜೊತೆಗಿನ ಭಾರತದ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತದೆ. ರಕ್ಷಣಾ ತಜ್ಞರು ಈ ಒಪ್ಪಂದ ಕೇವಲ ಮಿಲಿಟರಿ ಅಭಿವೃದ್ಧಿ ಮಾತ್ರವಲ್ಲದೆ, ಭಾರತದ ಏರೋಸ್ಪೇಸ್ ಉದ್ಯಮ ಮತ್ತು ಉದ್ಯೋಗ ಸೃಷ್ಟಿಗೂ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಸಾಧ್ಯವನ್ನೂ ಸಾಧ್ಯವಾಗಿಸುವ ಸಾಂಘಿಕ ಪ್ರಯತ್ನ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಯಶಸ್ಸಿನ ಕಥೆ!

ಪ್ರಚಂಡ್ ಹೆಲಿಕಾಪ್ಟರ್ ವೈಶಿಷ್ಟ್ಯಗಳೇನು?: 5,000 ಅಡಿಗಳಿಂದ (1,524 ಮೀಟರ್) 16,400 ಅಡಿಗಳ ತನಕದ (ಅಂದಾಜು 5,000 ಮೀಟರ್) ಎತ್ತರದ ಪ್ರದೇಶಗಳಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ ನಡೆಸುವ ಸಾಮರ್ಥ್ಯವಿರುವ ಜಗತ್ತಿನ ಏಕೈಕ ಹೆಲಿಕಾಪ್ಟರ್ ಎಂಬ ಕೀರ್ತಿಗೆ ಪ್ರಚಂಡ್ ಪಾತ್ರವಾಗಿದೆ. ಇಂತಹ ವಿಶಿಷ್ಟ ಸಾಮರ್ಥ್ಯ ಪ್ರಚಂಡ್ ಹೆಲಿಕಾಪ್ಟರ್ ಅನ್ನು ಸಿಯಾಚಿನ್ ನೀರ್ಗಲ್ಲು ಮತ್ತು ಪೂರ್ವ ಲಡಾಖ್‌ನಂತಹ ಅತ್ಯಂತ ಎತ್ತರದ, ದುರ್ಗಮ ಮತ್ತು ಸವಾಲಿನ ಪ್ರದೇಶಗಳ ಕಾರ್ಯಾಚರಣೆಗಳಿಗೆ ಅತ್ಯಂತ ಮಹತ್ವದ್ದಾಗಿಸಿದೆ. ಗಡಿ ರಕ್ಷಣೆ ಮತ್ತು ರಕ್ಷಣಾ ಪಡೆಗಳ ಕಾರ್ಯಾಚರಣೆಗಳಿಗೆ ಪೂರಕವಾಗಿರುವಂತೆ ನಿರ್ಮಾಣಗೊಂಡಿರುವ ಪ್ರಚಂಡ್, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಪ್ರಯತ್ನದ ಭಾಗವಾಗಿದೆ.

ನಂಬಿಕಾರ್ಹ ವಿನ್ಯಾಸ: ಪ್ರಚಂಡ್ ಎಲ್‌ಸಿಎಚ್ ಅನ್ನು ಎಚ್ಎಎಲ್ ಧ್ರುವ್ ಹೆಲಿಕಾಪ್ಟರ್‌ನ ನಂಬಿಕಾರ್ಹ, ಆಧುನಿಕ ವಿನ್ಯಾಸದ ಆಧಾರದಲ್ಲಿ ನಿರ್ಮಿಸಲಾಗಿದೆ. ಪ್ರಚಂಡ್ ಒಂದಷ್ಟು ಬಿಡಿಭಾಗಗಳು ಧ್ರುವ್ ಹೆಲಿಕಾಪ್ಟರ್ ಅನ್ನು ಹೋಲುತ್ತವಾದರೂ, ಇದನ್ನು ವಿಶೇಷವಾಗಿ ಯುದ್ಧದ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಇದು ಇನ್ನಷ್ಟು ಉತ್ತಮ ಹಾರಾಟ ನಿಯಂತ್ರಣ ಮತ್ತು ಹೈಡ್ರಾಲಿಕ್‌ಗಳನ್ನು ಹೊಂದಿದ್ದು, ದಾಳಿ ಹೆಲಿಕಾಪ್ಟರ್ ಎಂಬ ಪಾತ್ರವನ್ನು ನಿರ್ವಹಿಸಲು ಅವುಗಳು ನೆರವಾಗುತ್ತವೆ. ರಚನಾತ್ಮಕ ಮಾರ್ಪಾಡುಗಳು ಮತ್ತು ಇನ್ನಷ್ಟು ಬಲವಾದ ಏರ್ ಫ್ರೇಮ್‌ನಿಂದಾಗಿ ಪ್ರಚಂಡ್ ಹೆಚ್ಚಿನ ಬಾಳಿಕೆ ಮತ್ತು ಹೆಚ್ಚು ಕುಶಲ ಚಲನೆಗಳನ್ನು ಹೊಂದಿದೆ. ಇದು ಪ್ರತಿಕೂಲ ವಾತಾವರಣದಲ್ಲಿ, ಮತ್ತು ಅತ್ಯಂತ ಎತ್ತರದ ಪ್ರದೇಶದಲ್ಲಿ ಯುದ್ಧ ನಡೆಸಲು ನೆರವಾಗುತ್ತದೆ.

ಬಹುಮುಖಿ ಯುದ್ಧ ಯಂತ್ರ: ಪ್ರಚಂಡ್ ಎಲ್‌ಸಿಎಚ್ ಅನ್ನು ಎಚ್ಎಎಲ್ ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ ನಿರ್ಮಿಸುತ್ತಿದ್ದು, ಇದು ಭಾರತದ ಪ್ರಥಮ ದೇಶೀಯ ನಿರ್ಮಾಣದ ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಭೂಮಿಯಲ್ಲಿನ ಗುರಿಗಳ ಮೇಲೆ ದಾಳಿ ನಡೆಸಬಲ್ಲದು, ಮತ್ತು ಹಾರಾಡುವ ಅಪಾಯಗಳ ಮೇಲೂ ದಾಳಿ ನಡೆಸಬಲ್ಲದು. ಈ ವಿಶೇಷ ಸಾಮರ್ಥ್ಯದಿಂದಾಗಿ ಪ್ರಚಂಡ್ ಭಾರತೀಯ ಸೇನೆ ಮತ್ತು ವಾಯು ಸೇನೆ ಎರಡಕ್ಕೂ ಮಹತ್ವದ ಆಸ್ತಿಯಾಗಿದೆ. ಪ್ರಚಂಡ್ ಹೆಲಿಕಾಪ್ಟರ್ ನಿಧಾನವಾಗಿ ಚಲಿಸುವ ವೈಮಾನಿಕ ಅಪಾಯಗಳನ್ನು ಎದುರಿಸುವ ಸಾಮರ್ಥ್ಯ, ದಂಗೆ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯ, ಶತ್ರುಗಳ ರಕ್ಷಣೆಯನ್ನು ನಾಶಪಡಿಸುವ ಸಾಮರ್ಥ್ಯ, ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವ ಸಾಮರ್ಥ್ಯ ಹೊಂದಿದ್ದು, ಇವು ಪ್ರಚಂಡ್‌ನ ಬಹುಮುಖಿ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ತನ್ನ ನಿಖರ ದಾಳಿ ಸಾಮರ್ಥ್ಯದಿಂದಾಗಿ ಪ್ರಚಂಡ್ ನಗರ ಮತ್ತು ಅರಣ್ಯದಂತಹ ಪ್ರದೇಶಗಳಲ್ಲೂ ಸಮಾನವಾಗಿ ಪರಿಣಾಮಕಾರಿಯಾಗಿದೆ.

ದೀರ್ಘ ಬಾಳಿಕೆ ಮತ್ತು ಪ್ರದರ್ಶನದ ವಿನ್ಯಾಸ: ಎಚ್ಎಎಲ್ ಪ್ರಚಂಡ್ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಎಚ್) 15.8 ಮೀಟರ್ (51 ಅಡಿ, 10 ಇಂಚು) ಉದ್ದವಿದ್ದು, 4.6 ಮೀಟರ್ (15 ಅಡಿ 1 ಇಂಚು) ರೆಕ್ಕೆಯನ್ನು ಹೊಂದಿದೆ. ಈ ಹೆಲಿಕಾಪ್ಟರ್ 4.7 ಮೀಟರ್ (15 ಅಡಿ 5 ಇಂಚು) ಎತ್ತರವಿದೆ. ಖಾಲಿಯಾಗಿದ್ದಾಗ ಹೆಲಿಕಾಪ್ಟರ್ ಅಂದಾಜು 2,250 ಕೆಜಿ ತೂಕ ಹೊಂದಿರುತ್ತದೆ. ಇದು 1,750 ಕೆಜಿ ತನಕ ಆಯುಧಗಳು ಮತ್ತು ಉಪಕರಣಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣವಾಗಿ ಸಾಮಗ್ರಿಗಳನ್ನು ಹೇರಿಕೊಂಡಾಗ ಹೆಲಿಕಾಪ್ಟರ್ ತೂಕ 5,800 ಕೆಜಿ ಆಗಿರಲಿದೆ. ಪ್ರಚಂಡ್ ಹೆಲಿಕಾಪ್ಟರ್ ಇಂಧನ ಮರುಪೂರಣದ ಅಗತ್ಯವಿಲ್ಲದೆ 550 ಕಿಲೋಮೀಟರ್ ತನಕ ಪ್ರಯಾಣಿಸಬಲ್ಲದು. ಇದು ಸಾಮಾನ್ಯವಾಗಿ ಪ್ರತಿ ಗಂಟೆಗೆ 260 ಕಿಲೋಮೀಟರ್ ವೇಗದಲ್ಲಿ ಸಾಗುತ್ತದಾದರೂ, ಗರಿಷ್ಠ ಪ್ರತಿ ಗಂಟೆಗೆ 268 ಕಿಲೋಮೀಟರ್ ವೇಗವನ್ನೂ ತಲುಪಬಲ್ಲದು. ಪ್ರಚಂಡ್ ಪ್ರತಿ ಸೆಕೆಂಡಿಗೆ 12 ಮೀಟರ್‌ಗಳಷ್ಟು ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 6,500 ಮೀಟರ್ ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದೆ.

ಪ್ರಚಂಡ್ ಎರಡು ಎಚ್ಎಎಲ್ / ಟರ್ಬೋಮೆಕಾ ಶಕ್ತಿ ಇಂಜಿನ್‌ಗಳನ್ನು ಹೊಂದಿದ್ದು, ಅವುಗಳು ತಲಾ 871 ಕಿಲೋವ್ಯಾಟ್ ಶಕ್ತಿ ಒದಗಿಸಬಲ್ಲವು. ಪ್ರಚಂಡ್ ಹೆಲಿಕಾಪ್ಟರ್ ದೀರ್ಘ ಕಾರ್ಯಾಚರಣೆಗಳಲ್ಲೂ ನಂಬಿಕಾರ್ಹ ಪ್ರದರ್ಶನ ನೀಡಬಲ್ಲದು. ಈ ಇಂಜಿನ್‌ಗಳನ್ನು ವಿಶೇಷವಾಗಿ ಎತ್ತರ ಪ್ರದೇಶಗಳ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಿದ್ದು, ಅತ್ಯುತ್ತಮ ಪವರ್ ಟು ವೆಯ್ಟ್ ಅನುಪಾತ ಮತ್ತು ದೀರ್ಘ ಕಾರ್ಯಾಚರಣಾ ಆಯುಷ್ಯವನ್ನು ಹೊಂದಿದೆ. ಈ ಇಂಜಿನ್‌ಗಳು ತಲಾ 205 ಕೆಜಿ ತೂಕ ಹೊಂದಿದ್ದು, ಯಾವುದೇ ಗಂಭೀರ ನಿರ್ವಹಣೆಯ ಅಗತ್ಯವಿಲ್ಲದೆ, ಸುಗಮವಾಗಿ 3,000 ಗಂಟೆಗಳಷ್ಟು ಕಾರ್ಯಾಚರಣೆ ನಡೆಸಬಲ್ಲವು.

ಪೈಲಟ್ ದಕ್ಷತೆ ಮತ್ತು ಸುರಕ್ಷತೆ: ಪ್ರಚಂಡ್ ಹೆಲಿಕಾಪ್ಟರ್ ಒಂದು ಸಾಲಿನ ಆಸನ ವ್ಯವಸ್ಥೆಯನ್ನು ಹೊಂದಿದ್ದು, ಪೈಲಟ್ ಮತ್ತು ಕೋ ಪೈಲಟ್ ಒಬ್ಬರ ಹಿಂದೆ ಒಬ್ಬರಾಗಿ ಕುಳಿತುಕೊಳ್ಳುತ್ತಾರೆ. ಈ ವಿನ್ಯಾಸ ಹೆಚ್ಚಿನ ವೀಕ್ಷಣಾ ಸಾಮರ್ಥ್ಯ ಮತ್ತು ಕಾರ್ಯಾಚರಣಾ ಸಮನ್ವಯವನ್ನು ಒದಗಿಸುತ್ತದೆ. ಇದು ಹೊಂದಿರುವ ಆಧುನಿಕ ಏವಿಯಾನಿಕ್ಸ್‌ನಲ್ಲಿ ಡಿಜಿಟಲ್ ಫ್ಲೈಟ್ ಕಂಟ್ರೋಲ್ ವ್ಯವಸ್ಥೆಯೂ ಸೇರಿದ್ದು, ಪೈಲಟ್ ಕೆಲಸವನ್ನು ಕಡಿಮೆಗೊಳಿಸಿ, ಅವರಿಗೆ ಕದನ ಮತ್ತು ಕಾರ್ಯಾಚರಣಾ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಲು ಅನುಕೂಲ ಕಲ್ಪಿಸುತ್ತದೆ. ಇದು ಹೊಂದಿರುವ ಆಂತರಿಕ ಆರೋಗ್ಯ ವೀಕ್ಷಣಾ ವ್ಯವಸ್ಥೆ ಇಂಜಿನ್ ಪ್ರದರ್ಶನವನ್ನು ನಿರಂತರವಾಗಿ ಗಮನಿಸುತ್ತಾ, ಸುರಕ್ಷಿತ ಹಾರಾಟ ಮತ್ತು ಇಂಜಿನ್ ದಕ್ಷತೆಯನ್ನು ಖಾತ್ರಿಪಡಿಸಲು ನೈಜ ಸಮಯದ ಮಾಹಿತಿಗಳನ್ನು ಒದಗಿಸುತ್ತದೆ.

ಆಧುನಿಕ ವೈಶಿಷ್ಟ್ಯಗಳು ಮತ್ತು ಆಯುಧಗಳು: ಎಲ್‌ಸಿಎಚ್‌ನ ಆಧುನಿಕ ಗಾಜಿನ ಕಾಕ್‌ಪಿಟ್ ಬಹುಕ್ರಿಯಾತ್ಮಕ ಡಿಸ್‌ಪ್ಲೇಗಳು, ಟಾರ್ಗೆಟ್ ವ್ಯವಸ್ಥೆ, ಮತ್ತು ಯುದ್ಧದ ದಾಖಲೀಕರಣಕ್ಕಾಗಿ ಡಿಜಿಟಲ್ ವೀಡಿಯೋ ರೆಕಾರ್ಡರ್‌ಗಳನ್ನು ಹೊಂದಿದೆ. ಹೆಲ್ಮೆಟ್‌ಗೆ ಅಳವಡಿಸಿದ ಸೈಟ್ ಮತ್ತು ಆಧುನಿಕ ಮಾಹಿತಿ ಲಿಂಕ್ ವ್ಯವಸ್ಥೆಗಳು ಯೋಜನಾ ನಿರ್ವಹಣೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ.

ಪ್ರಚಂಡ್ ಹೆಲಿಕಾಪ್ಟರ್ ಆಯುಧಗಳು:
* 20 ಎಂಎಂ ನೋಸ್ ಗನ್:

-ಹೆಲಿಕಾಪ್ಟರ್ ಮುಂಭಾಗದಲ್ಲಿ ಅಳವಡಿಸಲಾಗಿರುತ್ತದೆ.
-ಪ್ರತಿ ನಿಮಿಷಕ್ಕೆ 800 ಸುತ್ತು ಗುಂಡು ಹಾರಿಸುತ್ತದೆ.
-2 ಕಿಲೋಮೀಟರ್ ತನಕ ಪರಿಣಾಮಕಾರಿ ವ್ಯಾಪ್ತಿ ಹೊಂದಿದೆ.

* 70 ಎಂಎಂ ರಾಕೆಟ್ ಪಾಡ್ಸ್:
-ಸ್ಟಬ್ ರೆಕ್ಕೆಗಳಿಗೆ ಅಳವಡಿಸಲಾಗುತ್ತದೆ.
-ನೇರವಾಗಿ 4 ಕಿಲೋಮೀಟರ್ ತನಕ ದಾಳಿ ನಡೆಸುವ ವ್ಯಾಪ್ತಿ ಹೊಂದಿದೆ.
-8 ಕಿಲೋಮೀಟರ್ ತನಕ ಪರೋಕ್ಷ ದಾಳಿ ನಡೆಸುವ ವ್ಯಾಪ್ತಿ ಹೊಂದಿದೆ.

ಇಲೆಕ್ಟ್ರೋ - ಆಪ್ಟಿಕಲ್ ಪಾಡ್:
-ನೋಸ್ ಗನ್ನಿನ ಮೇಲ್ಭಾಗದಲ್ಲಿ ಅಳವಡಿಸಲಾಗುತ್ತದೆ.
-ಹಗಲು ಮತ್ತು ರಾತ್ರಿಯ ವೇಳೆ ದೀರ್ಘ ವ್ಯಾಪ್ತಿಯ ಕಣ್ಗಾವಲು ಮತ್ತು ಗುರಿ ಬೆನ್ನತ್ತುವ ಸಾಮರ್ಥ್ಯ ಹೊಂದಿದೆ.

ಕ್ಷಿಪಣಿ ವ್ಯವಸ್ಥೆಗಳು:
* ಧ್ರುವಾಸ್ತ್ರ: ಆ್ಯಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿ
* ಮಿಸ್ತ್ರಾಲ್ 2: ಗಾಳಿಯಿಂದ ಗಾಳಿಗೆ ದಾಳಿ ನಡೆಸುವ, 6.5 ಕಿಲೋಮೀಟರ್ ಗರಿಷ್ಠ ವ್ಯಾಪ್ತಿ ಹೊಂದಿರುವ ಕ್ಷಿಪಣಿ
ಇವುಗಳೊಡನೆ, ಪ್ರಚಂಡ್ ವಿವಿಧ ಬಗೆಯ ಅಪಾಯಗಳನ್ನು ನಿವಾರಿಸುವ ಸಲುವಾಗಿ ಐರನ್ ಬಾಂಬ್‌ಗಳು, ಕ್ಲಸ್ಟರ್ ಬಾಂಬ್‌ಗಳು ಮತ್ತು ಗ್ರೆನೇಡ್‌ಗಳನ್ನು ಪ್ರಯೋಗಿಸಬಲ್ಲದು.

ಸ್ಮಾರ್ಟ್ ಮತ್ತು ಸ್ಟೆಲ್ತ್ ವಿನ್ಯಾಸ: ಮುಖ್ಯ ರೋಟಾರ್ 13.3 ಮೀಟರ್ ವ್ಯಾಸ ಹೊಂದಿದ್ದು, ಹಿಂಭಾಗದ ರೋಟಾರ್ 2.05 ಮೀಟರ್ ವ್ಯಾಸವನ್ನು ಹೊಂದಿದೆ. ಹೆಲಿಕಾಪ್ಟರ್ ವಿನ್ಯಾಸ ಸ್ಥಿರತೆ ಮತ್ತು ಚುರುಕಾದ ಚಲನೆಗೆ ಸೂಕ್ತವಾಗಿದೆ. ಪ್ರಚಂಡ್ ಹೊಂದಿರುವ ಸ್ಟೆಲ್ತ್ ವಿನ್ಯಾಸ ಅದರ ರೇಡಾರ್ ಸಿಗ್ನೇಚರ್ ಅನ್ನು ಕಡಿಮೆಗೊಳಿಸುತ್ತದೆ. ಕೆನಡಾದ ಡಬ್ಲ್ಯೂ ಆರ್ ಡೇವಿಸ್ ಇಂಜಿನಿಯರಿಂಗ್ ಸಂಸ್ಥೆಯೊಡನೆ ಅಭಿವೃದ್ಧಿ ಪಡಿಸಿರುವ ಇದರ ಇನ್‌ಫ್ರಾರೆಡ್ ಸಪ್ರೆಶನ್ ವ್ಯವಸ್ಥೆ ಉಷ್ಣವನ್ನು ಗುರುತಿಸಿ ದಾಳಿ ನಡೆಸುವ ಕ್ಷಿಪಣಿಗಳಿಂದ ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿಸುತ್ತದೆ.

ಆಧುನಿಕ ಸೆನ್ಸರ್ ಸೂಟ್: ಪ್ರಚಂಡ್ ಎಲ್‌ಸಿಎಚ್ ಅತ್ಯಾಧುನಿಕ ಸೆನ್ಸರ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಮುಂಭಾಗದ ಇನ್‌ಫ್ರಾರೆಡ್ ಕ್ಯಾಮರಾ, ಚಾರ್ಜ್ ಕಪಲ್ಡ್ ಡಿವೈಸ್ ಕ್ಯಾಮರಾಗಳು ಸೇರಿವೆ. ಇವುಗಳು ಪ್ರತಿಕೂಲ ಹವಾಮಾನ ಸನ್ನಿವೇಶದಲ್ಲೂ ಗುರಿಗಳನ್ನು ಗುರುತಿಸಲು ನೆರವಾಗುತ್ತವೆ. ಪ್ರಚಂಡ್ ರಕ್ಷಣಾ ವ್ಯವಸ್ಥೆಗಳಲ್ಲಿ ರೇಡಾರ್ ವಾರ್ನಿಂಗ್ ರಿಸೀವರ್‌ಗಳು, ಲೇಸರ್ ಮುನ್ನೆಚ್ಚರಿಕಾ ವ್ಯವಸ್ಥೆಗಳು, ಕ್ಷಿಪಣಿ ಎಚ್ಚರಿಕೆ ವ್ಯವಸ್ಥೆಗಳು, ಮತ್ತು ಇಲೆಕ್ಟ್ರಾನಿಕ್ ಕೌಂಟರ್ ಮೆಷರ್‌ಗಳು ಸೇರಿದ್ದು, ಶತ್ರುಗಳ ದಾಳಿಯಿಂದ ಹೆಲಿಕಾಪ್ಟರ್ ಅನ್ನು ರಕ್ಷಿಸುತ್ತವೆ.

ಪರಿಕಲ್ಪನೆಯಿಂದ ನನಸಿನತ್ತ ಸಾಗಿದ ಹಾದಿ: ಎಚ್ಎಎಲ್ ಮೊದಲ ಬಾರಿಗೆ ಎಲ್‌ಸಿಎಚ್ ಅನ್ನು 2006ರಲ್ಲಿ ಪ್ರಸ್ತಾಪಿಸಿತು. ಈ ಹೆಲಿಕಾಪ್ಟರ್‌ಗೆ ಆ ವರ್ಷವೇ ಸರ್ಕಾರದ ಅನುಮತಿ ದೊರೆತು, ಆರಂಭಿಕ ಅಭಿವೃದ್ಧಿಗಾಗಿ 376 ಕೋಟಿ ರೂಪಾಯಿಗಳ ಬಜೆಟ್ ಒದಗಿಸಲಾಯಿತು. ಇದರ ಮೂಲ ವಿನ್ಯಾಸ ಏರೋ ಇಂಡಿಯಾ 2007ರಲ್ಲಿ ತನ್ನ ಪಾದಾರ್ಪಣೆ ಮಾಡಿತು. ಆ ಬಳಿಕ, 2010ರಲ್ಲಿ ಹೆಲಿಕಾಪ್ಟರ್‌ನ ಯಶಸ್ವಿ ಪರೀಕ್ಷಾ ಹಾರಾಟಗಳು ನಡೆದವು. ವ್ಯಾಪಕ ಪರೀಕ್ಷೆಗಳು ಮತ್ತು ಅವಶ್ಯಕ ಬದಲಾವಣೆಗಳ ಬಳಿಕ, ಸರ್ಕಾರ ಮಾರ್ಚ್ 2022ರಲ್ಲಿ 3,887 ಕೋಟಿ ರೂಪಾಯಿ ವೆಚ್ಚದಲ್ಲಿ 15 ಹೆಲಿಕಾಪ್ಟರ್‌ಗಳ ಖರೀದಿಗೆ ಆದೇಶ ನೀಡಿತು. ಅದರೊಡನೆ, ಮೂಲಭೂತ ಅಭಿವೃದ್ಧಿಗಾಗಿ ಹೆಚ್ಚುವರಿ 308 ಕೋಟಿ ರೂಪಾಯಿಗಳನ್ನು ಒದಗಿಸಲಾಯಿತು.

ಭಾರತದ ಭದ್ರತೆಗೆ ಮಹತ್ವದ ಸೇರ್ಪಡೆ: ಪ್ರಚಂಡ್ ಹೆಲಿಕಾಪ್ಟರ್‌ನ ಅಸಾಧಾರಣ ಕಾರ್ಯಾಚರಣಾ ಸಾಮರ್ಥ್ಯ ಮತ್ತು ವಿವಿಧ ರೀತಿಯ ಯುದ್ಧ ಸಂದರ್ಭಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಅದನ್ನು ಭಾರತೀಯ ಸೇನೆಗೆ ಮಹತ್ವದ ಆಸ್ತಿಯನ್ನಾಗಿಸಿದೆ. ಇದರ ದೇಶೀಯ ಅಭಿವೃದ್ಧಿ ಭಾರತದ ಹೆಚ್ಚುತ್ತಿರುವ ರಕ್ಷಣಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದು, ಪ್ರಚಂಡ್ ಅತ್ಯಂತ ಎತ್ತರದ ಪ್ರದೇಶಗಳ ಕಾರ್ಯಾಚರಣೆಗೆ ಮತ್ತು ಯುದ್ಧ ರಂಗದ ಬೆಂಬಲದ ಉದ್ದೇಶಗಳಿಗೆ ನಂಬಿಕಾರ್ಹ ಯಂತ್ರವಾಗಿದೆ.

ಸುನಿತಾ ವಿಲಿಯಮ್ಸ್ ದೀರ್ಘ ಬಾಹ್ಯಾಕಾಶ ಯೋಜನೆಯ ಪಾಠ: ಭವಿಷ್ಯದ ಅನ್ವೇಷಣೆಗಳಿಗೆ ಹೊಸರೂಪ

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

vuukle one pixel image
click me!