ಗಡಿಯಲ್ಲಿ ಭಾರತ, ಚೀನಾ ಯೋಧರ ಭಾರಿ ಜಮಾವಣೆ| ಲಡಾಖ್ ಗಡಿಗೆ ಯೋಧರು| ಸೈನಿಕರ ಹೊಡೆದಾಟದ ಬಳಿಕ ಉದ್ವಿಗ್ನ ಸ್ಥಿತಿ
ನವದೆಹಲಿ(ಮೇ.18): ಗಡಿಯಲ್ಲಿ ಉಭಯ ದೇಶಗಳ ಯೋಧರು ಕೈಕೈ ಮಿಲಾಯಿಸಿದ ಘಟನೆ ನಡೆದ ಬಳಿಕ ಕಳೆದೊಂದು ವಾರದಿಂದ ಚೀನಾ ಲಡಾಖ್‌ನ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನಿಯೋಜನೆ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಭಾರತ, ತಾನು ಕೂಡ ಸೇನಾ ಯೋಧರ ಜಮಾವಣೆ ಆರಂಭಿಸಿದ್ದು, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ.
‘ಒಂದೆಡೆ ಚೀನಾ ಲಡಾಖ್‌ನ ‘ವಾಸ್ತವ ಗಡಿರೇಖೆ’ (ಎಲ್‌ಎಸಿ)ಯಲ್ಲಿ ತನ್ನ ಸೇನಾಬಲವನ್ನು ಹೆಚ್ಚಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ತನ್ನ ಬಲ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಒಂದು ವಾರದಿಂದ ಚೀನಾ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿರುವುದು ಆತಂಕದ ಸಂಗತಿ’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಭಾರತ- ಚೀನಾ ಸೈನಿಕರ ನಡುವೆ ಗಡಿಯಲ್ಲಿ ಘರ್ಷಣೆ!
ಇನ್ನು ಗಡಿಯಲ್ಲಿ ತನ್ನ ಕಡೆ ಇರುವ ಗಲ್ವಾನ್ ನದಿ ಬಳಿ ಚೀನಾ ಟೆಂಟ್‌ಗಳನ್ನು ಹಾಕಿದೆ ಎಂದು ಕೇಂದ್ರ ಸರ್ಕಾರಕ್ಕೆ ಮಾಹಿತಿ ಲಭ್ಯವಾಗಿದೆ. ಇನ್ನೊಂದೆಡೆ ಪೂರ್ವ ಲಡಾಖ್‌ನ ಡೆಮ್‌ಚೋಕ್ ಎಂಬಲ್ಲಿ ಚೀನಾ ನಿರ್ಮಾಣ ಕಾಮಗಾರಿ ಆರಂಭಿಸಿದೆ. ಇದು ತ್ವೇಷ ಸ್ಥಿತಿಗೆ ನೀರೆರೆದಿದೆ ಎಂದು ಹೇಳಲಾಗಿದೆ.
ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, Apple ಕಂಪನಿ ಭಾರತಕ್ಕೆ ಶಿಫ್ಟ್!
ಭಾರತವು ಅಮೆರಿಕದ ಜತೆ ಕೈಜೋಡಿಸುತ್ತಿರುವುದು ಚೀನಾಗೆ ಕೋಪ ತರಿಸಿದೆ. ಜತೆಗೆ ಚೀನಾದಲ್ಲಿ ನೆಲೆಯೂರಿರುವ ವಿದೇಶಿ ಕಂಪನಿಗಳನ್ನು ಸೆಳೆಯಲು ಭಾರತ ಪ್ರಯತ್ನಿಸುತ್ತಿದೆ. ಇದರಿಂದ ಸಿಟ್ಟಾಗಿ ಇಂತಹ ಕ್ರಮಗಳನ್ನು ಚೀನಾ ಕೈಗೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ, ಇಂತಹ ವಿಷಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಕಾರ್ಯತಂತ್ರ ನಮ್ಮ ಬಳಿ ಇದೆ ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ.