
ಬಾಲ್ಯದ ಗೆಳೆಯನಿಗೆ ಸಹಾಯ ಮಾಡಲು ಹೋಗಿ, ಭಾರತೀಯ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ಈಗ ಸಾಲದ ಸುಳಿಯಲ್ಲಿ ಸಿಲುಕಿ, ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ರೆಡ್ಡಿಟ್‌ನಲ್ಲಿ ಇವರು ತಮ್ಮ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ. ವಾರ್ಷಿಕ 12 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ ಈ ಐಟಿ ಉದ್ಯೋಗಿ, ತನ್ನ ಆತ್ಮೀಯ ಸ್ನೇಹಿತನಿಗೆ ನ್ಯೂಜಿಲೆಂಡ್‌ನಲ್ಲಿ ಮಾಸ್ಟರ್ಸ್ ಪದವಿ ಮಾಡಲು ಸಹಾಯ ಮಾಡಿದ್ದಾರೆ.
ಹಲವು ಕಂತುಗಳಲ್ಲಿ ಒಟ್ಟು 8 ಲಕ್ಷ ರೂಪಾಯಿ ಹಣವನ್ನು ಸ್ನೇಹಿತನಿಗೆ ಕೊಟ್ಟಿದ್ದಾರೆ. ಆದರೆ, ನ್ಯೂಜಿಲೆಂಡ್‌ಗೆ ಹೋದ ತಕ್ಷಣ ಆ ಸ್ನೇಹಿತ ಇವರ ಜೊತೆಗಿನ ಸಂಪರ್ಕವನ್ನು ಕಡಿಮೆ ಮಾಡಲು ಶುರುಮಾಡಿದ್ದಾನೆ. ಈಗಂತೂ ಫೋನ್ ಕರೆ, ಮೆಸೇಜ್ ಯಾವುದಕ್ಕೂ ಉತ್ತರ ಕೊಡದೆ ಸಂಪೂರ್ಣವಾಗಿ ಮಾಯವಾಗಿದ್ದಾನೆ.
ಸ್ನೇಹಿತನಿಗೆ ಹಣ ಹೊಂದಿಸಲು ಇವರು ಹಲವು ಲೋನ್ ಆ್ಯಪ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಸುಮಾರು 5 ಲಕ್ಷ ರೂಪಾಯಿ ಸಾಲ ಮಾಡಿದ್ದರು. ದುರದೃಷ್ಟವಶಾತ್, ಮೂರು ತಿಂಗಳ ಹಿಂದೆ ಇವರ ಕೆಲಸವೂ ಹೋಯಿತು. ಇದರಿಂದಾಗಿ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ಬಡ್ಡಿ ಬೆಳೆಯುತ್ತಾ ಹೋಯಿತು, ಜೊತೆಗೆ ಲೋನ್ ಏಜೆಂಟರ ಕಾಟವೂ ಹೆಚ್ಚಾಯಿತು. ಈ ಎಲ್ಲದರಿಂದ ಅವರ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಕುಟುಂಬದವರೂ ತನ್ನ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹತ್ತಿರದ ಸ್ನೇಹಿತರೇ ಹೀಗೆ ಮೋಸ ಮಾಡಲು ಹೇಗೆ ಸಾಧ್ಯ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಇನ್ನು ಕೆಲವರು, ಭಾರತದಲ್ಲಿ ವಕೀಲರ ಮೂಲಕ ಲೀಗಲ್ ನೋಟಿಸ್ ಕಳುಹಿಸಿ, ಎಫ್‌ಐಆರ್ ದಾಖಲಿಸುವಂತೆ ಹೇಳಿದ್ದಾರೆ. ಮೊದಲು ನಿಮ್ಮ ಮಾನಸಿಕ ಆರೋಗ್ಯ ಸರಿಪಡಿಸಿಕೊಳ್ಳಿ, ಸಂಬಂಧಿಕರಿಂದ ಕಡಿಮೆ ಬಡ್ಡಿಗೆ ಹಣ ಪಡೆದು ಲೋನ್ ಆ್ಯಪ್‌ಗಳ ಕಾಟದಿಂದ ಪಾರಾಗಿ ಎಂದು ಹಲವರು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ