'ಸಿಗರೇಟ್ ಕಸದಿಂದ ಮಕ್ಕಳ ಆಟಿಕೆ ಮಾಡ್ತಾರಾ?' ದಿಂಬು, ಕುಶನ್, ಜೀನ್ಸ್ ತಯಾರಿಸುವ ಭಾರತೀಯ ಸ್ಟಾರ್ಟ್‌ಅಪ್

Published : Nov 19, 2026, 02:23 PM IST
indian startup turns cigarette waste into toys pillows jeans

ಸಾರಾಂಶ

ರಸ್ತೆ ಬದಿ, ಟೀ ಅಂಗಡಿಗಳ ಮುಂದೆ ಬಿದ್ದಿರುವ ಸಿಗರೇಟ್ ತುಂಡುಗಳನ್ನು ಕಂಡರೆ ಹೆಚ್ಚಿನವರು ಅಸಹ್ಯಪಟ್ಟು ಕಾಲಿನಲ್ಲಿ ತುಳಿದು ಮುಂದೆ ಸಾಗುತ್ತಾರೆ. ಆದರೆ ಅದೇ ಸಿಗರೇಟ್ ತ್ಯಾಜ್ಯದಿಂದ ಇಬ್ಬರು ಸಹೋದರರು ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಕಟ್ಟಿದ್ದಾರೆ.

ರಸ್ತೆ ಬದಿ, ಟೀ ಅಂಗಡಿಗಳ ಮುಂದೆ ಬಿದ್ದಿರುವ ಸಿಗರೇಟ್ ತುಂಡುಗಳನ್ನು ಕಂಡರೆ ಹೆಚ್ಚಿನವರು ಅಸಹ್ಯಪಟ್ಟು ಕಾಲಿನಲ್ಲಿ ತುಳಿದು ಮುಂದೆ ಸಾಗುತ್ತಾರೆ. ಆದರೆ ಅದೇ ಸಿಗರೇಟ್ ತ್ಯಾಜ್ಯದಿಂದ ಇಬ್ಬರು ಸಹೋದರರು ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಕಟ್ಟಿದ್ದಾರೆ. ನೋಯ್ಡಾದ ನಮನ್ ಗುಪ್ತಾ ಮತ್ತು ವಿಪುಲ್ ಗುಪ್ತಾ ಎಂಬ ಸಹೋದರರು ಆರಂಭಿಸಿದ ಈ ಉದ್ಯಮ ಇಂದು ಪರಿಸರ ಸಂರಕ್ಷಣೆಯ ಜೊತೆಗೆ ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ.

ಸಿಗರೇಟ್ ತ್ಯಾಜ್ಯದಿಂದ ಹೊಸ ಉದ್ಯಮ

ಸಾಮಾನ್ಯವಾಗಿ ಸಿಗರೇಟ್ ಫಿಲ್ಟರ್‌ಗಳನ್ನು ಹತ್ತಿಯಿಂದ ತಯಾರಿಸಲಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಅವು ಸೆಲ್ಯುಲೋಸ್ ಅಸಿಟೇಟ್ ಎಂಬ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿರುತ್ತವೆ. ಇವು ಸುಲಭವಾಗಿ ಕೊಳೆಯುವುದಿಲ್ಲ. ಸಿಗರೇಟ್ ತುಂಡುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಅವುಗಳಲ್ಲಿರುವ ನಿಕೋಟಿನ್ ಸೇರಿದಂತೆ ಹಾನಿಕಾರಕ ರಾಸಾಯನಿಕಗಳು ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುವ ಅಪಾಯವಿದೆ.

2016ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಕಾಂ ಓದುತ್ತಿದ್ದ ನಮನ್ ಗುಪ್ತಾ ಅವರು ಸ್ನೇಹಿತರೊಂದಿಗೆ ಪಾರ್ಟಿ ಮುಗಿದ ಬಳಿಕ ಎಲ್ಲೆಡೆ ಬಿದ್ದಿರುತ್ತಿದ್ದ ಸಿಗರೇಟ್ ತುಂಡುಗಳನ್ನು ಗಮನಿಸಿದ್ದರು. ಈ ತ್ಯಾಜ್ಯವನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಅವರಲ್ಲಿ ಮೂಡಿತು. ತಮ್ಮ ಅಣ್ಣ ವಿಪುಲ್ ಗುಪ್ತಾ ಅವರೊಂದಿಗೆ ಈ ವಿಚಾರ ಚರ್ಚಿಸಿ 'ಕೋಡ್ ಎಫರ್ಟ್ಸ್' (Code Efforts) ಕಂಪನಿಯನ್ನು ಆರಂಭಿಸಿದರು.

ಕಸ ಸಂಗ್ರಹಕ್ಕೆ ವಿಶೇಷ ವ್ಯವಸ್ಥೆ

ಸಿಗರೇಟ್ ತುಂಡುಗಳನ್ನು ಸಂಗ್ರಹಿಸಲು ಟೀ ಅಂಗಡಿಗಳು, ಪಾನ್ ಶಾಪ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕಚೇರಿಗಳ ಬಳಿ 'ವ್ಯಾಲ್ಯೂ ಬಿನ್' ಎಂಬ ವಿಶೇಷ ಡಬ್ಬಿಗಳನ್ನು ಇರಿಸಿದರು. ಸಿಗರೇಟ್ ತುಂಡುಗಳನ್ನು ಸಂಗ್ರಹಿಸಿ ನೀಡುವವರಿಗೆ ಪ್ರತಿ ಕೆ.ಜಿ.ಗೆ ₹500ರಿಂದ ₹800ರವರೆಗೆ ಹಣ ನೀಡುವ ವ್ಯವಸ್ಥೆ ಮಾಡಿದರು. ಸಾವಿರಾರು ತ್ಯಾಜ್ಯ ಸಂಗ್ರಹಿಸುವವರನ್ನೂ ತಮ್ಮ ಜಾಲಕ್ಕೆ ಸೇರಿಸಿಕೊಂಡರು.

ಸಿಗರೇಟ್ ತ್ಯಾಜ್ಯದಿಂದ ಟೆಡ್ಡಿ ಬೇರ್, ಜೀನ್ಸ್

ಸಂಗ್ರಹಿಸಿದ ಸಿಗರೇಟ್ ತುಂಡುಗಳನ್ನು ಫ್ಯಾಕ್ಟರಿಗೆ ತಂದು ತಂಬಾಕು, ಕಾಗದ ಮತ್ತು ಪ್ಲಾಸ್ಟಿಕ್ ಫಿಲ್ಟರ್‌ಗಳಾಗಿ ವಿಂಗಡಿಸಲಾಗುತ್ತದೆ. ನಂತರ ವಿಶೇಷ ಶುದ್ಧೀಕರಣ ಪ್ರಕ್ರಿಯೆಯ ಮೂಲಕ ಫಿಲ್ಟರ್‌ನಲ್ಲಿರುವ ಕೊಳಕು ಮತ್ತು ಹಾನಿಕಾರಕ ಅಂಶಗಳನ್ನು ತೆಗೆದು ಫೈಬರ್ ತಯಾರಿಸಲಾಗುತ್ತದೆ. ಈ ಫೈಬರ್‌ಗಳನ್ನು ಸಾಫ್ಟ್ ಟಾಯ್ಸ್, ಟೆಡ್ಡಿ ಬೇರ್, ದಿಂಬು ಮತ್ತು ಕುಶನ್‌ಗಳ ತಯಾರಿಕೆಗೆ ಬಳಸಲಾಗುತ್ತದೆ. ಕಾಗದದ ಭಾಗದಿಂದ ಮರುಬಳಕೆಯ ಡೈರಿಗಳನ್ನು ಕೂಡ ತಯಾರಿಸಲಾಗುತ್ತದೆ.

2021ರಲ್ಲಿ ಫ್ಯಾಷನ್ ವಿದ್ಯಾರ್ಥಿಗಳು ಈ ಫೈಬರ್ ಬಳಸಿ ನೂಲು ತಯಾರಿಸುವ ಪ್ರಯೋಗ ನಡೆಸಿದರು. ಬಳಿಕ 2024ರಲ್ಲಿ ರಿಲಯನ್ಸ್ ರಿಟೇಲ್ ಮತ್ತು ಲೀ ಕೂಪರ್ ಜೊತೆ ಸಹಯೋಗ ಮಾಡಿಕೊಂಡು ಮರುಬಳಕೆಯ ಫೈಬರ್ ಬಳಸಿ ಡೆನಿಮ್ ಉತ್ಪನ್ನಗಳನ್ನು ಪರಿಚಯಿಸಲಾಯಿತು.

ಆರಂಭದಲ್ಲಿ ಸಿಗರೇಟ್ ತ್ಯಾಜ್ಯದಿಂದ ಆಟಿಕೆಗಳನ್ನು ತಯಾರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಮಾರಾಟವೂ ಕುಸಿದಿತ್ತು. ಆದರೆ ಪ್ರಯೋಗಾಲಯ ಪರೀಕ್ಷೆ ಮತ್ತು ಗುಣಮಟ್ಟದ ಪರಿಶೀಲನೆಗೆ ಮುಂದಾಗಿ ಗ್ರಾಹಕರ ವಿಶ್ವಾಸ ಗಳಿಸಲು ಕಂಪನಿ ಪ್ರಯತ್ನಿಸಿತು.

250 ಕೋಟಿಗೂ ಹೆಚ್ಚು ಸಿಗರೇಟ್ ತುಂಡುಗಳ ಮರುಬಳಕೆ

ಕಂಪನಿಯ ಅಂಕಿಅಂಶಗಳ ಪ್ರಕಾರ, ಇಲ್ಲಿಯವರೆಗೆ 250 ಕೋಟಿಗೂ ಹೆಚ್ಚು ಸಿಗರೇಟ್ ತುಂಡುಗಳನ್ನು ಮರುಬಳಕೆ ಮಾಡಲಾಗಿದೆ. ಈ ಉದ್ಯಮದಿಂದ 100ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ಮತ್ತು 2,800ಕ್ಕೂ ಹೆಚ್ಚು ತ್ಯಾಜ್ಯ ಸಂಗ್ರಹಿಸುವವರಿಗೆ ಉದ್ಯೋಗಾವಕಾಶ ಸಿಕ್ಕಿದೆ. ತಿಂಗಳಿಗೆ ಸುಮಾರು ₹30 ಲಕ್ಷ ಆದಾಯ ಗಳಿಸುವ ಉದ್ಯಮವಾಗಿ ಇದು ಬೆಳೆದಿದೆ ಎಂಬ ಮಾಹಿತಿ ಇದೆ.

ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದ ಸಿಗರೇಟ್ ತುಂಡುಗಳನ್ನೇ ಉದ್ಯಮದ ಕಚ್ಚಾ ವಸ್ತುವನ್ನಾಗಿ ಬದಲಾಯಿಸಿರುವ ಈ ಸಹೋದರರ ಪ್ರಯತ್ನ, ಕಸದಲ್ಲೂ ಉದ್ಯಮದ ಅವಕಾಶಗಳಿವೆ ಎಂಬುದನ್ನು ತೋರಿಸಿಕೊಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಂದೇ ಒಂದು ಚಾಟ್‌ಜಿಪಿಟಿ ಪ್ರಾಂಪ್ಟ್.. ಬ್ರೇಕಪ್ ಎಂದ ಗೆಳೆಯನಿಗೆ ಹೆದರಿಸಲು ಹೋಗಿ ಪೊಲೀಸ್ ಬಲೆಗೆ ಬಿದ್ದ ವಿದ್ಯಾರ್ಥಿನಿ!
ಬಡ ಭಾರತೀಯ ಕಲಾವಿದನ ಪ್ರೀತಿಗಾಗಿ ಸ್ವೀಡನ್ ಬಿಟ್ಟ ಸುಂದರಿ; ಪತ್ನಿಗಾಗಿ 7,000 ಕಿ.ಮೀ ಸೈಕಲ್ ತುಳಿದ ಪ್ರೇಮಿ