ಭಾರತೀಯ ರೈಲ್ವೆ ಲೋಕಲ್ ಪ್ಯಾಸೆಂಜರ್ ರೈಲುಗಳನ್ನು ಹಂತಹಂತವಾಗಿ ನಿಲ್ಲಿಸಿ, ವಂದೇ ಮೆಟ್ರೋ ರೈಲುಗಳನ್ನು ಪರಿಚಯಿಸಲು ಯೋಜಿಸಿದೆ. ಈ ಬದಲಾವಣೆಯು ವೇಗ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಮುಂಬೈ: ಭಾರತೀಯ ರೈಲ್ವೆ ಲೋಕಲ್ ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ತಯಾರಿಯಲ್ಲಿದೆ. ಇವುಗಳ ಬದಲಾಗಿ ವಂದೇ ಮೆಟ್ರೋ ರೈಲುಗಳು ಹಳಿಗೆ ಇಳಿಯಲಿವೆ. ಮಾಧ್ಯಮಗಳ ವರದಿ ಪ್ರಕಾರ, ಭಾರತೀಯ ರೈಲ್ವೆಯಲ್ಲಿ ಸುಮಾರು 3500 ಪ್ಯಾಸೆಂಜರ್ ಟ್ರೈನ್‌ಗಳು 200-350 ಕಿಲೋ ಮೀಟರ್ ನಡುವೆ ಸಂಚರಿಸುತ್ತಿವೆ. ಇದೀಗ ಈ ಪ್ಯಾಸೆಂಜರ್ ರೈಲುಗಳನ್ನು ಹಂತ ಹಂತವಾಗಿ ಬಂದ್ ಮಾಡಲು ಚಿಂತನೆ ನಡೆಸಿದೆ.
ಲೋಕಲ್ ಪ್ಯಾಸೆಂಜರ್ ಟ್ರೈನ್ ನಿಲ್ಲಿಸುವ ಪ್ರಕ್ರಿಯೆ ನಗರಗಳಿಂದಲೇ ಶುರುವಾಗಲಿದೆ. ಸೋಮವಾರವಷ್ಟೇ ಅಹಮದಾಬಾದ್-ಭುಜ್ ನಡುವೆ ಮೊದಲ ವಂದೇ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ ಎಂದು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 16ರಂದು ವಂದೇ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. ವಾರದಲ್ಲಿ ಆರು ದಿನ ಮಾತ್ರ ಚಲಿಸುವ ಟ್ರೈನ್, ಭುಜ್‌ನಿಂದ ಬೆಳಗ್ಗೆ 5.05ಕ್ಕೆ ಹೊರಟು ಬೆಳಗ್ಗೆ 10.50ಕ್ಕೆ ಅಹಮದಾಬಾದ್ ತಲುಪಲಿದೆ. ನಂತರ ಸಂಜೆ 5.30ಕ್ಕೆ ಅಹಮದಾಬಾದ್ ನಿಂದ ಹೊರಟು ರಾತ್ರಿ 11.10ಕ್ಕೆ ಭುಜ್ ತಲುಪಲಿದೆ.
ಮೋದಿ ತವರಲ್ಲಿ ಮೊದಲ 'ವಂದೇ ಮೆಟ್ರೋ' ಚಾಲನೆಗೆ ಕ್ಷಣಗಣನೆ; ಎಷ್ಟು ವೇಗದಲ್ಲಿ ಚಲಿಸುತ್ತೆ ಈ ಟ್ರೈನ್?
3500 ಪ್ಯಾಸೆಂಜರ್ ಟ್ರೈನ್ ಬದಲಾಗಿ 1700 ವಂದೇ ಮೆಟ್ರೋ
ರೈಲ್ವೆ ಅಧಿಕಾರಿಗಳ ಪ್ರಕಾರ, ಸದ್ಯ ಸುಮಾರು 56 ಲಕ್ಷ ಪ್ರಯಾಣಿಕರು ಪ್ರತಿದಿನ ಲೋಕಲ್ ಅಥವಾ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. 3500 ಪ್ಯಾಸೆಂಜರ್ ರೈಲುಗಳ ಬದಲಾಗಿ 1600-1700 ವಂದೇ ಮೆಟ್ರೋಗಳು ಚಲಿಸಲಿವೆ. ಪ್ಯಾಸೆಂಜರ್ ರೈಲುಗಳಿಗಿಂತ ವಂದೇ ಮೆಟ್ರೊ ಟ್ರೈನ್ ವೇಗವಾಗಿ ಚಲಿಸುತ್ತವೆ. ಆದ್ದರಿಂದ ಕೇವಲ 1600-1700 ಟ್ರೈನ್‌ಗಳು ಪ್ಯಾಸೆಂಜರ್ ರೈಲುಗಳ ಬೇಡಿಕೆಯನ್ನು ಪೂರೈಸಬಲ್ಲದು ಎಂಬುವುದ ಭಾರತೀಯ ರೈಲ್ವೆಯ ಲೆಕ್ಕಾಚಾರವಾಗಿದೆ.
ವರದಿಗಳ ಪ್ರಕಾರ, ವಂದೇ ಮೆಟ್ರೋ ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತವೆ. ಆದ್ರೆ ಸದ್ಯಕ್ಕೆ 90 ಕಿಮೀ ವೇಗದಲ್ಲಿ ಚಲಿಸಲಿದ್ದು, 16 ಕೋಚ್‌ಗಳನ್ನು ಹೊಂದಿರಲಿದ್ದು, 1,150 ಜನರು ಕುಳಿತು ಪ್ರಯಾಣಿಸಬಹುದು. ನಿಂತುಕೊಂಡು 2058 ಮಂದಿ ಪ್ರಯಾಣಿಸಬಹುದು. ಒಟ್ಟು 3200 ಜನರು ಪ್ರಯಾಣಿಸಬಹುದಾಗಿದೆ. ವಂದೇ ಮೆಟ್ರೋ ರೈಲಿನಲ್ಲಿ ಸಾಮಾನ್ಯ ಪ್ರಯಾಣಿಕನು ಸಹ ಆರಾಮವಾಗಿ ಕುಳಿತು ಪ್ರಯಾಣಿಸಬಹುದು. ರೈಲ್ವೆಯ ಎರಡೂ ಬದಿಯಲ್ಲಿಯೂ ಲೋಕೊಪೈಲಟ್‌ಗಳ ಕ್ಯಾಬಿನ್ ಇರಲಿದೆ. ಜೊತೆಗೆ ದೊಡ್ಡ ದೊಡ್ಡ ಕಿಟಕಿಯ ವ್ಯವಸ್ಥೆಯೂ ಇರಲಿದೆ.