2 ತಿಂಗಳ ಬಳಿಕ ರೈಲ್ವೆ ಬೋಗಿ ಆಸ್ಪತ್ರೆ ಕೊರೋನಾ ಚಿಕಿತ್ಸೆಗೆ| ದೆಹಲಿ ಸರ್ಕಾರದಿಂದ ಬಳಕೆ
ನವದೆಹಲಿ(ಜೂ.02): ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ರೈಲ್ವೆ ಇಲಾಖೆ ಪರಿವರ್ತಿಸಿದ್ದ ಐಸೋಲೇಷನ್ ಬೋಗಿಗಳು ಎರಡು ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬಳಕೆಯಾಗುತ್ತಿವೆ. ಕೊರೋನಾ ಸೋಂಕಿತರ ಸಂಖ್ಯೆ 20 ಸಾವಿರಕ್ಕೆ ಏರಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯ ಪರಿವರ್ತಿತ ಬೋಗಿಗಳನ್ನು ಬಳಸಿಕೊಳ್ಳುವ ಸಂಬಂಧ ದೆಹಲಿ ಸರ್ಕಾರ ಕೋರಿಕೆ ಇಟ್ಟಿದೆ. ಹೀಗಾಗಿ 160 ಹಾಸಿಗೆಗಳನ್ನು ಹೊಂದಿರುವ 10 ಕೋಚ್‌ಗಳನ್ನು ದೆಹಲಿಯಲ್ಲಿ ರೈಲ್ವೆ ಇಲಾಖೆ ಸಜ್ಜುಗೊಳಿಸಿದೆ.
ನವದೆಹಲಿ ಅಥವಾ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ ಈ ಬೋಗಿಗಳನ್ನು ನಿಯೋಜನೆ ಮಾಡಬೇಕು ಎಂದು ದೆಹಲಿ ಸರ್ಕಾರ ಕೋರಿಕೆ ಇಟ್ಟಿತ್ತು. ಆದರೆ ಆ ನಿಲ್ದಾಣಗಳಿಂದ ವಿಶೇಷ ರೈಲುಗಳ ಸಂಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಕುರ್ ಬಸ್ತಿಯ ರೈಲು ನಿಲ್ದಾಣದಲ್ಲಿರುವ ನಿರ್ವಹಣಾ ಡಿಪೋದಲ್ಲಿ ಇರುವ ಐಸೋಲೇಷನ್ ಬೋಗಿಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ. ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ 5321 ಬೋಗಿಗಳನ್ನು ತಲಾ 2 ಲಕ್ಷ ರು. ವೆಚ್ಚದಲ್ಲಿ ವಾರ್ಡ್ ರೂಪವಾಗಿ ಪರಿವರ್ತಿಸಲಾಗಿತ್ತು. ಇವುಗಳನ್ನು ನಿಲುಗಡೆ ಮಾಡಲು 215 ನಿಲ್ದಾಣಗಳನ್ನು ಗುರುತಿಸಲಾಗಿತ್ತು. ಆಮ್ಲಜನಕ ಸಿಲಿಂಡರ್, ಹೊದಿಕೆ, ವೈದ್ಯಕೀಯ ಸಾಮಗ್ರಿ ಎಲ್ಲ ಕೂಡ ಇತ್ತು. ಆದರೆ ಯಾವ ರಾಜ್ಯ ಸರ್ಕಾರದಿಂದಲೂ ಬಳಕೆಗೆ ಕೋರಿಕೆಗೆ ಬಂದಿರಲಿಲ್ಲ.