ಗಣೇಶ ಹಬ್ಬ ಆಚರಣೆಗೆ ದೇಶವೆ ಸಜ್ಜಾಗಿದೆ. ಅದ್ಧೂರಿ ಆಚರಣೆಗಾಗಿ ಬೇರೆ ಬೇರೆ ನಗರಗಳಿಂದ ತಮ್ಮ ಊರುಗಳಿಗೆ ಮರಳುವ ಧಾವಂತದಲ್ಲಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ರೈಲ್ವೇ ಗುಡ್ ನ್ಯೂಸ್ ನೀಡಿದೆ.
ನವದೆಹಲಿ(ಆ.31) ಗಣೇಶ ಹಬ್ಬದ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಸೆಪ್ಟೆಂಬರ್ 7 ರಂದು ಭಾರತದ ಗಲ್ಲಿ ಗಲ್ಲಿಯಲ್ಲಿ ಗಣೇಶನ ಕೂರಿಸಿ ಪೂಜೆಗಳು ನಡೆಯಲಿದೆ. ಸೆಪ್ಟೆಂಬರ್ ಮೊದಲ ಹಾಗೂ ಎರಡನೇ ವಾರದ ಗಣೇಶನ ಪೂಜೆ, ವಿಸರ್ಜನೆ ಕಾರ್ಯಗಳು ನಡೆಯಲಿದೆ. ಇದಕ್ಕಾಗಿ ದೂರದ ನಗರದಲ್ಲಿರುವ ಬಹುತೇಕರು ತಮ್ಮ ಊರುಗಳಿಗೆ ಮರಳುವ ಧಾವಂತದಲ್ಲಿದ್ದಾರೆ. ಹಬ್ಬದ ಸಂದರ್ಬಗಳಲ್ಲಿ ಸಂಚಾರ ದಟ್ಟಣೆ, ಟಿಕೆಟ್ ಸಿಗದೆ ನಿರಾಶೆಯಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಭಾರತೀಯ ರೈಲ್ವೇ ಇಲಾಖೆ ಗಣೇಶ ಹಬ್ಬಕ್ಕೆ ಗುಡ್ ನ್ಯೂಸ್ ನೀಡಿದೆ. 342 ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 7ರಂದು ಈ ವಿಶೇಷ ರೈಲುಗಳು ಸಂಚಾರ ಆರಂಭಿಸಲಿದೆ.
ಮೊದಲ ಹಂತದಲ್ಲಿ ಭಾರತೀಯ ರೈಲ್ವೇ ಮುಂಬೈ ಹಾಗೂ ಕೊಂಕಣ ಮಾರ್ಗದಲ್ಲಿ ಈ 342 ವಿಶೇಷ ರೈಲು ಸಂಚಾರ ನಡೆಸಲಿದೆ. ಇದರ ಜೊತೆಗೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಂದ ವಿಶೇಷ ರೈಲು ವ್ಯವಸ್ಥೆಯನ್ನೂ ಶೀಘ್ರದಲ್ಲೇ ಘೋಷಿಸಲಿದೆ. ಮುಂಬೈನಿಂದ ಕೊಂಕಣ ಮಾರ್ಗದಲ್ಲಿ 10 ದಿನಗಳ ಕಾಲ ಈ ವಿಶೇಷ ರೈಲುಗಳು ಸಂಚಾರ ನಡೆಸಲಿದೆ.
ಡಿಜಿ ಲಾಕರ್ ಆ್ಯಪ್ ಬಳಸುವವರಿಗೆ ಗುಡ್ ನ್ಯೂಸ್, ರೈಲ್ವೇ ಉದ್ಯೋಗ ಪಡೆಯುವುದು ಸುಲಭ!
ಮುಂಬೈ-ಕೊಂಕಣ(ಗೋವಾ) ಮಾರ್ಗದಲ್ಲಿ ಗಣೇಶ ಹಬ್ಬಕ್ಕೆ 300 ವಿಶೇಷ ರೈಲು ಬೇಡಿಕೆ ಇಡಲಾಗಿತ್ತು. ಆದರೆ ಸಂಚಾರ ದಟ್ಟಣೆ ಗಮನಿಸಿರುವ ರೈಲ್ವೇ ಇಲಾಖೆ 342 ವಿಶೇಷ ರೈಲು ಜಾರಿ ಮಾಡಿದೆ. ಪ್ರತಿ ವರ್ಷ ಮುಂಬೈನಿಂದ ಕೊಂಕಣ ಮಾರ್ಗದಲ್ಲಿ ಗಣೇಶ ಹಬ್ಬಕ್ಕೆ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ಹಬ್ಬದ ಆಚರಣೆಗೆ ತಮ್ಮ ಮನೆಗಳಿಗೆ ತೆರಳುತ್ತಾರೆ. ಹೀಗಾಗಿ ಈ ಬಾರಿ ಹೆಚ್ಚುವರಿ ವಿಶೇಷ ರೈಲುಗಳನ್ನು ನೀಡಲಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಶೀಘ್ರದಲ್ಲೇ ಇತರ ಭಾಗಗಳಿಂದಲೂ ವಿಶೇಷ ರೈಲು ಸಂಚಾರ ಘೋಷಣೆಯಾಗಲಿದೆ. ಗಣೇಶ ಹಬ್ಬ, ದೀಪಾವಳಿ ಸೇರಿದಂತೆ ಸಾಲು ಸಾಲುಗಳು ಹಬ್ಬಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ವಿಶೇಷ ರೈಲು ಸಂಚಾರಕ್ಕೆ ಭಾರತೀಯ ರೈಲ್ವೇ ಸಜ್ಜಾಗಿದೆ.ದಕ್ಷಿಣ, ನೈರುತ್ಯ ಸೇರಿದಂತೆ ಇತರ ರೈಲ್ವೇ ವಿಭಾಗಗಳು ಶೀಘ್ರದಲ್ಲೇ ವಿಶೇಷ ರೈಲು ಸಂಚಾರ ಘೋಷಣೆ ಮಾಡಲಿದೆ.
ರೈಲು ಟಿಕೆಟ್ ಬುಕಿಂಗ್ ಇನ್ನು ಸುಲಭ; ವೈಟಿಂಗ್ ಪಿರಿಯೆಡ್ ಎಂದು ಕಾಯಬೇಕಿಲ್ಲ!
ಇದೀಗ ಬೆಂಗಳೂರಿನಿಂದ ಮದುರೈಗೆ ವಂದೇ ಭಾರತ್ ರೈಲು ಸಂಚಾರ ಇಂದಿನಿಂದ(ಆಗಸ್ಟ್ 31) ಆರಂಭಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ವಾರದ 6 ದಿನ ಬೆಂಗಳೂರಿನಿಂದ ಮಧುರೈ ಹಾಗೂ ಮದುರೈನಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಸಂಚಾರ ನಡಸಲಿದೆ. 8 ಗಂಟೆಯಲ್ಲಿ ನಿಗದಿತ ನಿಲ್ದಾಣ ತಲುಪಲಿದೆ.