
ಈಶಾನ್ಯ ಭಾರತದ ಸಿಕ್ಕಿಂ ಗಡಿಯಲ್ಲಿ ಚೀನಾ ಆರ್ಭಟಕ್ಕೆ ಸೆಡ್ಡು ಹೊಡೆಯಲು ಸೇನಾ ಪಡೆಗಳ ನಿಯೋಜನೆ, ಗಡಿ ಪ್ರದೇಶಗಳ ಮೂಲಸೌಕರ್ಯ ಸುಧಾರಣೆ, ಪ್ರವಾಸೋದ್ಯಮ, ಸ್ಥಳೀಯ ಆರ್ಥಿಕತೆಗೆ ಹೊಸ ಅವಕಾಶ ಸೃಷ್ಟಿಸುವ ಮಹತ್ವಾಕಾಂಕ್ಷಿ ‘ಸಿವಾಕ್ ರಾಂಗ್ಪೋ ರೈಲು ಮಾರ್ಗ’ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದ್ದು, 2027ರ ಡಿಸೆಂಬರ್‌ಗೆ ಲೋಕಾರ್ಪಣೆಗೆ ಸಜ್ಜಾಗಲಿದೆ.
ಹಿಮಾಲಯದ ದುರ್ಗಮ ಬೆಟ್ಟ-ಕಣಿವೆಗಳ ನಡುವೆ ನಿರ್ಮಾಣವಾಗುತ್ತಿರುವ 44.96 ಕಿ.ಮೀ. ಉದ್ದದ ಈ ಸವಾಲಿನ ರೈಲು ಮಾರ್ಗ ಮೂಲಕ ಸಿಕ್ಕಿಂಗೆ ಮೊದಲ ಬಾರಿಗೆ ರೈಲು ಸಂಪರ್ಕ ದೊರೆಯಲಿದೆ. ತನ್ಮೂಲಕ ಹಿಮಾಲಯ ಮಡಿಲಲ್ಲಿ ಹೊಸ ರೈಲ್ವೆ ಕ್ರಾಂತಿ ನಡೆಯಲಿದ್ದು, ದೇಶದ ಇತರ ರಾಜ್ಯಗಳು ಹಾಗೂ ಸಿಕ್ಕಿಂ ನಡುವಿನ ಸಂಪರ್ಕದಲ್ಲಿ ಐತಿಹಾಸಿಕ ಬದಲಾವಣೆಗೆ ರೈಲ್ವೆ ಇಲಾಖೆ ನಾಂದಿ ಹಾಡಲಿದೆ.
ಹಿಮಾಲಯದಲ್ಲಿರುವ ಸಿಕ್ಕಿಂಗೆ ಸಂಪರ್ಕ ಅವಕಾಶಗಳ ಕೊರತೆಯಿಂದಾಗಿ ಗಡಿಯಲ್ಲಿ ಸೇನಾಪಡೆಗಳ ನಿಯೋಜನೆ, ಗಡಿ ಭಾಗದ ಮೂಲಸೌಕರ್ಯ ಸುಧಾರಣೆ, ದೇಶದ ಭದ್ರತೆಗೆ ಒತ್ತು ನೀಡುವಂಥ ಚಟುವಟಿಕೆಗೆ ಹಿನ್ನಡೆ ಆಗುತ್ತಿತ್ತು. ಜತೆಗೆ ಭೂಲೋಕದ ಸ್ವರ್ಗದಂತಿರುವ ಸಿಕ್ಕಿಂ ರಾಜ್ಯದ ಪ್ರವಾಸೋದ್ಯಮ, ವ್ಯಾಪಾರ, ಕೈಗಾರಿಕೆ ಹಾಗೂ ಸ್ಥಳೀಯ ಆರ್ಥಿಕತೆಗೆ ಹೊಸ ಅವಕಾಶ ಸೃಷ್ಟಿಸಲು ಸಹ ಸಂಪರ್ಕದ ಕೊರತೆ ಕಾಡುತ್ತಿತ್ತು.
ಇದೀಗ ಡಿಸೆಂಬರ್ 2027ರ ವೇಳೆಗೆ ಭಾರತದ ಮೊದಲ ಸುರಂಗ ರೈಲು ನಿಲ್ದಾಣ ''ತೀಸ್ತಾ ಬಜಾರ್'' ಸೇರಿ ಸಿವಾಕ್-ರಾಂಗ್ಪೋ ರೈಲು ಮಾರ್ಗ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಕರ್ನಾಟಕದಿಂದ ಯೋಜನೆ ಪ್ರಗತಿ ವೀಕ್ಷಣೆಗೆ ತೆರಳಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಯೋಜನೆ ಸಲಹೆಗಾರ ಮೋಹಿಂದರ್ ಸಿಂಗ್ ಅವರು, ಸಿವಾಕ್ ರಾಂಗ್ಪೋ ರೈಲು ಮಾರ್ಗದ ಮೂಲಕ ಸಿಕ್ಕಿಂನ ಮಂಜಿನಿಂದ ಆವೃತವಾದ ಬೆಟ್ಟಗಳು ಮತ್ತು ಆಳವಾದ ಕಣಿವೆಗಳಲ್ಲಿ ಉಕ್ಕಿನ ಹಳಿಗಳ ಮೇಲೆ ಒಂದು ಹೊಸ ರೈಲು ಕ್ರಾಂತಿ ಶುರುವಾಗಿದೆ ಎಂದು ಮಾಹಿತಿ ನೀಡಿದರು.
ಅತ್ಯಂತ ದುರ್ಗಮ ಭೂಪ್ರದೇಶವಾದ ಈ ಕಣಿವೆ ಪ್ರದೇಶದಲ್ಲಿ 44.96 ಕಿ.ಮೀ. ಉದ್ದದ ರೈಲ್ವೆ ಯೋಜನೆ ಮೂಲಕ ಸಿಕ್ಕಿಂ ಅನ್ನು ರೈಲ್ವೆ ಸಂಪರ್ಕ ಇಡೀ ದೇಶದ ಜತೆಗೆ ಬೆಸೆಯಲಿದೆ. ಇದು ಭಾರತದ ಈಶಾನ್ಯ ಗಡಿ ಭಾಗಕ್ಕೆ ಕೇವಲ ಸಂಪರ್ಕ ಸಾಧನೆಗೆ ಮಾತ್ರವಲ್ಲದೆ ವಾಣಿಜ್ಯ, ಸಾರಿಗೆ, ಪ್ರವಾಸೋದ್ಯಮ ಸೇರಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
ರೈಲ್ವೆ ಇಲಾಖೆಯು ₹17,146 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಯೋಜನೆ ದೇಶದ ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯಂತ ಸವಾಲಿನ ಹಾದಿಯಲ್ಲಿ ಯೋಜನೆ ಕಾಮಗಾರಿ ನಡೆಯತ್ತಿದ್ದು, ಪ್ರಾಕೃತಿಕ ಹಾಗೂ ಭೌಗೋಳಿಕ ಸವಾಲುಗಳನ್ನು ಮೆಟ್ಟಿ ನಿಂತು ಎಂಜಿನಿಯರ್‌ಗಳು ಹಾಗೂ ಕಾರ್ಮಿಕರು ಹಗಲಿರುಳು ಯೋಜನೆ ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ ಎಂದು ಯೋಜನೆ ಹಿಂದಿನ ಶ್ರಮದ ಬಗ್ಗೆ ಮೋಹಿಂದರ್ ಸಿಂಗ್ ವಿವರಿಸಿದರು. ಯೋಜನೆಯ ಶೇ.80 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಯೋಜನೆಯಡಿ ಒಟ್ಟು 14 ಸುರಂಗ, 23 ಸೇತುವೆ ಮತ್ತು 5 ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಮೋಹಿಂದರ್‌ಸಿಂಗ್ ಮಾಹಿತಿ ನೀಡಿದರು.
ಮುಖ್ಯವಾಗಿ ಭಾರತದ ಮೊದಲ ಸುರಂಗ ರೈಲು ನಿಲ್ದಾಣವಾದ ರಂಗ್ಪೂ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಯೋಜನೆಯಲ್ಲಿ 5.3 ಕಿ.ಮೀ.ಉದ್ದದ ಅತಿ ಉದ್ದದ ಸುರಂಗವೂ ಸೇರಿದ್ದು, ಅತ್ಯಂತ ಕಿರಿದಾದ ಸುರಂಗದ ಉದ್ದ 542 ಮೀಟರ್ ಆಗಿದೆ. ಯೋಜನೆಗೆ ಈಗ ವೇಗ ದೊರೆತಿದ್ದು, ಈ ಪ್ರಮುಖ ರೈಲು ಮಾರ್ಗ ಪೂರ್ಣಗೊಳ್ಳುವ ಮೂಲಕ ಸಿಕ್ಕಿಂ ರಾಜ್ಯ ದೇಶದ ಇತರ ಭಾಗಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅತ್ಯುತ್ತಮ ಮತ್ತು ಸುರಕ್ಷಿತ ಮಾರ್ಗ ತೆರೆದುಕೊಳ್ಳಲಿದೆ.
ಈ ವೇಳೆ ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕ ಎಂ.ಮಧು, ಪಿಐಬಿ ಸಿಕ್ಕಿಂನ ಮೋಹಿನಾಕ್ ಚಟರ್ಜಿ, ಸತ್ಯೇಂದ್ರ ಕುಮಾರ್, ಯೋಜನೆಯ ಮುಖ್ಯ ವ್ಯವಸ್ಥಾಪಕರಾದ ರೆನಿಯಾ ಎಟೆ ಸೇರಿ ಹಲವರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ