
2025ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿ ತಮಗೇ ಸಿಗಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಟ ಹಿಡಿದದ್ದು ಗೊತ್ತಿರುವ ವಿಷಯವೇ. ಆದರೆ ಈ ಬಾರಿಯೂ ಅವರಿಗೆ ಸಿಗಲಿಲ್ಲ. 2026ರ ನೋಬೆಲ್ ಪ್ರಶಸ್ತಿ ಭಾರತೀಯ ಮೂಲಕ ತಮಿಳು ಮೂಲದ ಮಹಿಳೆ ನವನೀಥಂ ನವಿ ಪಿಳ್ಳೈ ಅವರಿಗೆ ಒದಗಿದೆ. ಜಗತ್ತಿನ ಅತ್ಯುನ್ನತ ಗೌರವವಾದ ಈ ಪ್ರಶಸ್ತಿಯು ಈ ಬಾರಿ ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ನವನೀಥಂ ನವಿ ಪಿಳ್ಳೈ ಅವರಿಗೆ ಒದಗಿದೆ. ನಾನು ಬೇಕಿದ್ದರೆ ಟ್ರಂಪ್ ಜೊತೆ ಈ ಪ್ರಶಸ್ತಿ ಶೇರ್ ಮಾಡುವೆ ಎಂದು ನವನೀತಂ ನವಿ ಪಿಳ್ಳೈ ಚಟಾಕಿಯನ್ನೂ ಹಾರಿಸಿದ್ದಾರೆ.
ನಾರ್ವೆಯ ಓಸ್ಲೋದಲ್ಲಿ ಇಂದು ನಡೆದ ನಾರ್ವೇಜಿಯನ್ ನೊಬೆಲ್ ಸಮಿತಿಯು ಪ್ರಶಸ್ತಿಯನ್ನು ಪ್ರಕಟಿಸಿದೆ. "ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನವನೀಥಂ ನವಿ ಪಿಳ್ಳೈ ಅವರು ಕೈಗೊಂಡ ದೃಢ ನಿರ್ಧಾರಗಳು, ಅವರ ನೈತಿಕ ನಿಲುವು ಮತ್ತು ದಶಕಗಳ ಕಾಲದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ" ಎಂದು ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ. ನವನೀತಂ ನವಿ ಪಿಳ್ಳೈ ಅವರ ವೃತ್ತಿಜೀವನವು ಕೇವಲ ಕಾನೂನಿನ ಚೌಕಟ್ಟಿಗೆ ಸೀಮಿತವಾಗಿರದೆ, ಅನ್ಯಾಯಕ್ಕೊಳಗಾದವರ ಪಾಲಿನ ಆಶಾಕಿರಣವಾಗಿತ್ತು ಎಂಬುದನ್ನು ಸಮಿತಿ ಕೊಂಡಾಡಿದೆ.
ನವನೀಥಂ ನವಿ ಪಿಳ್ಳೈ ಅವರು ತಮಿಳು ಮೂಲದವರಾಗಿದ್ದಾರೆ. ವರ್ಣಭೇದ ನೀತಿಯ ಕರಾಳ ದಿನಗಳಲ್ಲಿ, ತಾರತಮ್ಯ ಮತ್ತು ಅಮಾನವೀಯತೆಗೆ ಬಾಲ್ಯದಲ್ಲಿ ಇವರು ಸಾಕ್ಷಿಯಾಗಿದ್ದರು. ಈ ಅನ್ಯಾಯವನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಅವರು ಕಾನೂನು ವ್ಯಾಸಂಗ ಮಾಡಿದರು. ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ನೆಲ್ಸನ್ ಮಂಡೇಲಾರಂತಹ ಧುರೀಣರ ಪರವಾಗಿ ವಾದಿಸಲು ಧೈರ್ಯ ತೋರಿದ ಕೆಲವೇ ಕೆಲವು ವಕೀಲರಲ್ಲಿ ಇವರು ಕೂಡ ಒಬ್ಬರು.
ನಾರ್ವೆ ನೊಬೆಲ್ ಸಮಿತಿಯು, "287 ನಾಮನಿರ್ದೇಶನಗಳಿಂದ - 208 ವ್ಯಕ್ತಿಗಳು ಮತ್ತು 79 ಸಂಸ್ಥೆಗಳು - ಅಂತಿಮವಾಗಿ ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ಹೋರಾಟಗಾರ್ತಿ ನವನೇತಮ್ ನವಿ ಪಿಳ್ಳೈ ಅವರನ್ನು ಆಯ್ಕೆ ಮಾಡಲಾಗಿದೆ" ಎಂದು ಘೋಷಿಸಿದೆ. ಈ ಕುರಿತು ಮಾತನಾಡಿದ ನೊಬೆಲ್ ಸಮಿತಿಯ ಅಧ್ಯಕ್ಷರಾದ ಜೋರ್ಗನ್ ವಾಟ್ನೆ ಫ್ರೈಡ್ನೆಸ್ ಅವರು, "ನವಿ ಪಿಳ್ಳೈ ಅವರನ್ನು ಅಸಾಧಾರಣ ಧೈರ್ಯ ಮತ್ತು ಸಮಗ್ರತೆಯೊಂದಿಗೆ ಜಾಗತಿಕ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ದಾರಿ ತೋರಿಸಿದ ಮಹಾನ್ ವ್ಯಕ್ತಿ" ಎಂದು ಶ್ಲಾಘಿಸಿದ್ದಾರೆ. ಏತನ್ಮಧ್ಯೆ, ಈ ಪ್ರಶಸ್ತಿಯು 12 ಮಿಲಿಯನ್ ಸ್ವೀಡಿಷ್ ಕ್ರೋನರ್ (ಅಂದಾಜು $1.2 ಮಿಲಿಯನ್ ಡಾಲರ್ ಅಥವಾ ಸುಮಾರು 10 ಕೋಟಿ ರೂಪಾಯಿ) ನಗದು ಬಹುಮಾನವನ್ನು ಒಳಗೊಂಡಿದೆ
1941ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ತಮಿಳು ಮೂಲದ ಭಾರತೀಯ ಕುಟುಂಬದಲ್ಲಿ ಜನಿಸಿದ ನವನೇತಮ್ ನವಿ ಪಿಳ್ಳೈ ಅವರು ದಕ್ಷಿಣ ಆಫ್ರಿಕಾದ ಪ್ರಸಿದ್ಧ ಮಾನವ ಹಕ್ಕುಗಳ ವಕೀಲರು ಮತ್ತು ಅಂತರರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರಾಗಿದ್ದು, ಇಲ್ಲಿನ ವರ್ಣಭೇದ ನೀತಿಯ ವಿರುದ್ಧ ಸುದೀರ್ಘ ಹೋರಾಟ ನಡೆಸಿದ್ದರು. ನೆಲ್ಸನ್ ಮಂಡೇಲಾ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು.
ದಕ್ಷಿಣ ಆಫ್ರಿಕಾದ ಹೈಕೋರ್ಟ್‌ನ ಮೊದಲ ಬಿಳಿಯರಲ್ಲದ ಮಹಿಳಾ ನ್ಯಾಯಾಧೀಶರಾಗಿರುವ ಪಿಳ್ಳೈ, 2008 ರಿಂದ 2014 ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ರ್ವಾಂಡಾದ ಅಂತರರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್‌ನ ನ್ಯಾಯಾಧೀಶರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಅವರು "ಲೈಂಗಿಕ ಅತ್ಯಾಚಾರವನ್ನು ಜನಾಂಗೀಯ ಹತ್ಯೆಯ ಒಂದು ರೂಪ" ಎಂದು ವ್ಯಾಖ್ಯಾನಿಸುವ ಐತಿಹಾಸಿಕ ತೀರ್ಪನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿರುವ ನವನೀತಂ ಪಿಳ್ಳೈ, ಇತ್ತೀಚಿನ ವರ್ಷಗಳಲ್ಲಿ ಅವರು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಪ್ರದೇಶಗಳಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ತನಿಖೆ ನಡೆಸಿದ ವಿಶ್ವಸಂಸ್ಥೆಯ ಸ್ವತಂತ್ರ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್‌ನಲ್ಲಿ ಆಡ್ಹಾಕ್ ನ್ಯಾಯಾಧೀಶರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ