
ಹೆಣ್ಣು ಮಕ್ಕಳಾದರೂ ಅಷ್ಟೇ, ಗಂಡು ಮಕ್ಕಳಾದರೂ ಅಷ್ಟೇ. ಅಷ್ಟು ಈಜಿಯಾಗಿ ಯಾರನ್ನೂ ನಂಬಿ ಮೋಸ ಹೋಗಬೇಡಿ ಅಂತಾ ಅನುಭವಿಗಳು ಆಗಾಗ ಹೇಳುತ್ತಲೇ ಇರುತ್ತಾರೆ. ಅದನ್ನ ನಾವು ಹಾಗೇ ಕೇಳಿಸಿಕೊಂಡು ಹೀಗೆ ಬಿಟ್ಟು ಬಿಡುತ್ತೇವೆ. ನನ್ನ ಹತ್ರ ಬೇಕಾದಷ್ಟು ಹಣ ಇದೆ ಅಂದ್ಕೊಂಡ ಭಾರತೀಯ ಮೂಲದ ಸಿಇಓ ಒಬ್ಬ ತನ್ನ ಗೆಳತಿಗೆ ಬರೋಬ್ಬರಿ 3.5 ಕೋಟಿ ರೂಪಾಯಿ ಖರ್ಚು ಮಾಡಿ ಮೋಸ ಹೋಗಿದ್ದಾರೆ. ಅಸಲಿ ಸತ್ಯ ಗೊತ್ತಾದ್ಮೇಲೆ ಕೋರ್ಟ್ ಮೇಟ್ಟಿಲೇರಿದ್ದ ಪುಣ್ಯಾತ್ಮನಿಗೆ ಅಲ್ಲೂ ಹಿನ್ನಡೆ ಆಗಿದೆ ಅನ್ನೋದು ಆತನ ವಾದ. ಆದರೆ ಕೋರ್ಟ್ ಎಲ್ಲವನ್ನೂ ವಿಚಾರಣೆ ನಡೆಸಿಯೇ ತೀರ್ಪು ನೀಡಿದೆ.
ಪ್ರೀತಿಯೂ ಸಿಗಲಿಲ್ಲ. ಹಣವೂ ಸಿಗಲಿಲ್ಲ. ಕೋರ್ಟ್ ಕೂಡ ನನ್ನ ಮಾತನ್ನ ಕೇಳಲಿಲ್ಲ ಅನ್ನೋ ಸ್ಥಿತಿಗೆ ಆ ಯುವಕ ಸಿಲುಕಿದ್ದಾನೆ. ಹೌದು, ಭಾರತೀಯ ಲಾಜಿಸ್ಟಿಕ್ಸ್ ಕಂಪನಿ ಟಿಸಿಐ ಎಕ್ಸ್‌ಪ್ರೆಸ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಚಂದರ್ ಅಗರ್ವಾಲ್, ತಮ್ಮ ಮಾಜಿ ಗೆಳತಿ ಫೆಲಿಷಿಯಾ ಲೀ ವಿರುದ್ಧ ಸಿಂಗಾಪುರದ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಆಕೆಗಾಗಿ ಖರ್ಚು ಮಾಡಿದ ಹಣವನ್ನು ಬಡ್ಡಿರಹಿತ ಸಾಲವಾಗಿ ನೀಡಲಾಗಿದೆ ಮತ್ತು ಅದನ್ನು ಮರುಪಾವತಿಸಬೇಕಾಗಿತ್ತು ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಹಣವನ್ನು ಹೆಚ್ಚಾಗಿ ಉಡುಗೊರೆ ರೂಪದಲ್ಲಿ ನೀಡಲಾಗಿದೆ ಎಂಬುದನ್ನ ಕಂಡುಕೊಂಡಿದೆ. ವಿಚಾರಣೆ ಬಳಿಕ ಅಗರ್ವಾಲ್ ಅರ್ಜಿಯನ್ನು ವಜಾಗೊಳಿಸಿದೆ.
ಅಗರ್ವಾಲ್ ಮತ್ತು ಲೀ ಮೊದಲ ಬಾರಿಗೆ 2019 ರಲ್ಲಿ ಭೇಟಿಯಾದರು. ಅವರು ಸೆಪ್ಟೆಂಬರ್ 2022 ರಲ್ಲಿ ಪ್ರಣಯ ಸಂಬಂಧ ಹೊಂದಿದ್ದರು ಮತ್ತು ಅಗರ್ವಾಲ್ ಲೀ ಅವರನ್ನು ವಿಶ್ವಾಸದ್ರೋಹಿ ಎಂದು ಅನುಮಾನಿಸಿದರು. ಡಿಸೆಂಬರ್ 2023 ರಲ್ಲಿ ಇಬ್ಬರು ಬೇರ್ಪಟ್ಟರು. ಅವರು ಒಟ್ಟಿಗೆ ಇದ್ದಾಗ ಅಗರ್ವಾಲ್, ಲೀ ಅವರ ಮೇಲೆ ದೊಡ್ಡ ಮೊತ್ತವನ್ನು ಖರ್ಚು ಮಾಡಿದರು. ವೆಚ್ಚಗಳಲ್ಲಿ ಹರ್ಮ್ಸ್, ಡಿಯರ್ ಮತ್ತು ಪ್ರಾಡಾದಂತಹ ಬ್ರ್ಯಾಂಡ್‌ಗಳ ಐಷಾರಾಮಿ ವಸ್ತುಗಳು, ಪ್ರಥಮ ದರ್ಜೆ ವಿಮಾನಗಳು, ವಿದೇಶ ಪ್ರವಾಸಗಳು, ಜೀವ ವಿಮಾ ಕಂತುಗಳು ಅವರ ಕ್ರೆಡಿಟ್ ಕಾರ್ಡ್‌ಗಳ ವೈಯಕ್ತಿಕ ವೆಚ್ಚಗಳು ಮತ್ತು ಸ್ಟ್ಯಾನ್‌ಫೋರ್ಡ್-ಎನ್‌ಯುಎಸ್ ಕಾರ್ಯನಿರ್ವಾಹಕ ಕಾರ್ಯಕ್ರಮ ಸೇರಿವೆ.
ಲೀ ಅವರ ಫ್ಲಾಟ್‌ಗಾಗಿ ಅವರು ಫೆಂಗ್ ಶೂಯಿ ಮಾಸ್ಟರ್‌ಗಾಗಿ ಸುಮಾರು 17,000 ಡಾಲರ್ ಹಣ ಖರ್ಚು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಭಾರತೀಯರಾಗಿ ಫೆಂಗ್ ಶೂಯಿಯಲ್ಲಿ ನಂಬಿಕೆ ಇಲ್ಲದ ಕಾರಣ ಪಾವತಿ ಸಾಲವಾಗಿರಬೇಕು ಎಂದು ಅಗರ್ವಾಲ್ ವಾದಿಸಿದರು. ನ್ಯಾಯಾಧೀಶರು ವಾದವನ್ನು ತಿರಸ್ಕರಿಸಿದರು, ಅಗರ್ವಾಲ್ ಅವರೇ ಈ ಸೇವೆಯನ್ನು ಏರ್ಪಡಿಸಿದ್ದರು ಎಂಬುದುನ್ನ ಕೋರ್ಟ್ ಕಂಡುಕೊಂಡಿದೆ. ಲೀ ಹಣವನ್ನು ಸಾಲವಾಗಿ ವಿನಂತಿಸಿದ್ದರು ಮತ್ತು ಮರುಪಾವತಿಸಲು ಒಪ್ಪಿಕೊಂಡಿದ್ದರು ಎಂದು ಅಗರ್ವಾಲ್ ಹೇಳಿದ್ದಾರೆ. ಆದರೆ ಅದನ್ನು ಕೋರ್ಟ್‌ನಲ್ಲಿ ಸಾಬೀತುಪಡಿಸಲು ಅಗರ್ವಾಲ್ ವಿಫಲರಾಗಿದ್ದಾರೆ.
ಅರ್ಜಿಯನ್ನು ವಜಾ ಮಾಡಿರುವ ಕೋರ್ಟ್, ಲೀ ಅವರ ಕಾನೂನು ವೆಚ್ಚವನ್ನೂ ಪಾವತಿಸುವಂತೆ ಆದೇಶ ನೀಡಿದೆ. ವಿವಾದಿತ ಪಾವತಿಗಳು ಸಾಲಗಳಲ್ಲ, ಉಡುಗೊರೆಗಳಾಗಿದ್ದು, ಲೀ ಹಣವನ್ನು ಮರುಪಾವತಿಸಲು ಬಾಧ್ಯಸ್ಥರಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ